Tuesday, July 17, 2018

ಆಸ್ನ

ಒಂದು ದಿನ ಆಪೀಸಿನಲ್ಲಿ ಹೊಸದಾಗಿ ಬಂದ ಪ್ಯಾಂಟ್ರಿ ಹುಡುಗನ ಹತ್ತಿರ ಕಾಫಿ ತರಲು ಹೇಳಿ ಕುಳಿತೆ. ಎಷ್ಟು ಹೊತ್ತಾದರೂ ಬರಲಿಲ್ಲ. ಕಾಯ್ದ್ಯ್ ಕಾಯ್ದು ಕಾಫಿ ಹೇಳಿದ್ದೇ ಮರೆತು ಹೋಗಿತ್ತು. ಅಷ್ಟರಲ್ಲಿ ಕಾಫಿಯವನ ಸವಾರಿ ಕಾಫಿ ಸಹಿತ ಚಿತ್ತೈಸಿತು. ನನ್ನ ಚಿತ್ತಕ್ಕೂ ಕಾಫಿಗೆ ಹೇಳಿದ್ದ ಸ್ಮರನೆಯಾಯಿತು. ಕಾಫಿ ತರುವ ಹುಡುಗನಲ್ಲವೇ? ನಾನು ಕಂಪ್ಯೂಟರ್ ಮುಂದೆ ಕೂರುವವನಾಗಿ ಸ್ವಲ್ಪ ಜಬರ್ದಸ್ತು ಮಾದದಿದ್ದರೆ ಸಾವಿರಗಟ್ಟಲೆ ಕೊಟ್ಟು ತಂದ ಕಂಪ್ಯೂಟರ್ ಮರ್ಯಾದೆ ಏನಾಗಬೇಡ? ಅದಕ್ಕೇ ಸ್ವಲ್ಪ ಗಡುಸಾಗಿ ಕೇಳಿದೆ.

"ಎಷ್ತು ಹೊತ್ತೋ ಮಹಾರಾಯ?!"

ಅವನಂದ "ಅಲ್ಲಿ ಬಿದ್ದುಬಿಟ್ಟಿತ್ತು ಸಾ...!"

"ಎಲ್ಲೋ"

"ಕಾಪಿ ಕಪ್ನಾಗೆ ಸಾ...."

"ಏನು ಬಿದ್ದಿತ್ತು?!"

"ಅಲ್ಲಿ ಸಾ...."

""ಎಲ್ಲೊ?!”

ಅವನಿಗೆ ನನ್ನ ಕನ್ಫ್ಯೂಶನ್ ತಲೆಗೆ ಹೊಕ್ಕಿತ್ತು ಎನಿಸುತ್ತದೆ. ಉತ್ತರ ಅರ್ಥವಾಗುವಂತೆ ಬಿಡಿಸಿ ಹೇಳಿದ. "ಕಾಪಿ ಮಾಡ್ಬುಟ್ಟು ಮಸೀನ್ ಕ್ಲೀನ್ ಮಾಡ್ತಿದ್ದೆ ಸಾ... ಅಷ್ಟ್ರಲ್ಲಿ ಮೇಲಿಂದ ಕಪ್ ಒಳಗೇ ಬಿದ್ಬುಡ್ತು ಸಾ.... ವಿಸ ಅಂತ ಕಾಪಿ ಚೆಲ್ಬುಟ್ಟು ಬೇರೆ ಕಾಪಿ ಮಾಡ್ಕಂಡು ತಂದೆ ಸಾ...." ನನಗಷ್ಟು ಹೊತ್ತಿಗೆ ಗೊತ್ತಾಯಿತು. ಅಲ್ಲಿ ಬಿದ್ದಿದ್ದು ಹಲ್ಲಿ ಅಂತ. ಈತ ನಾಮಪದವನ್ನು ಅಕ್ಷರವೊಂದರ ಅಪಭ್ರಂಶದ ಮುಖೇನ ಸ್ಥಾನವಾಚಕವಾಗಿಸಿದ್ದ. ಇರಲಿ ಬಿಡಿ. ಅದೂ ಒಂದು ಪ್ರತಿಭೆಯೇ ಸರಿ.

ಇತ್ತೀಚೆಗೆ ಒಮ್ಮೆ ರಜೆ ಹಾಕಿ ಊರಿಗೆ ಹೋಗಿ ಬಂದೆ. ಆ ಹುಡುಗ ನನ್ನ ಹತ್ತಿರ ಕೇಳಿದ.

"ಸಾ.. ಊರಿಗೆ ಓಗಿದ್ರಾ?!"

ನಾನೆಂದೆ "ಹೌದು ಕಣೋ."

"ಮಳೆನಾ ಸಾ ನಿಮ್ಮೂರ್ನಾಗೆ?!"

"ಹೌದು ಕಣೋ. ನಾಲ್ಕೈದು ವರ್ಷಗಳಿಂದ ಮಳೆನೇ ಇರಲಿಲ್ಲ. ಈ ವರ್ಷ ಸಿಕ್ಕಾಪಟ್ಟೆ ಮಳೆ. "

"ಊಂ ಸಾ.... ಮಳೆ ಇಲ್ಲ ಅಂದ್ರೆ ಕಸ್ಟ ಆಯ್ತದೆ. ಕುಡಿಯಕ್ಕಾದ್ರೂ ನೀರು ಬೇಕಲ್ಲ ಸಾ... ನಿಮ್ಮೂರು ಯಾವ್ದು ಸಾ..."

"ಸಾಗರ. ನಿಮ್ಮೂರು?!"

"ಆಸ್ನ ಸಾ...."

ನಾನು ಆತ ಕೊಟ್ಟ ಉತ್ತರಕ್ಕೆ ಒಮ್ಮೆ ಅವಾಕ್ಕಾಗಿ ಮುಖದಲ್ಲಿ ಆಶ್ಚರ್ಯ-ಸಂಶಯ ಎಲ್ಲಾ ಸೇರಿಸಿ ಎರಡೂ ಹುಬ್ಬುಗಳನ್ನು ಗಂಟಿಕ್ಕಿ ಕೇಳಿದೆ. "ಆಸ್ನ?!"

"ಊಂ ಸಾ... ಆಸ್ನ..."

"ಎಲ್ಲೋ ಬರುತ್ತೆ ಅದು?"

"ಆಸ್ನ ಸಾ... ನಿಮಗೆ ಆಸ್ನ ಗೂತ್ತಿಲ್ವಾ?"

ಮನಸ್ಸಿನಲ್ಲೇ ಅಂದುಕೊಂಡೆ. ನನಗೆ ಗೊತ್ತಿರುವ ಆಸನಗಳು ಕೆಲವಿದೆ. ಕೆಲವನ್ನು ಹೇಳಲಾರೆ. ಆದರೆ ಇವನ ಅರ್ಧಗನ್ನಡ ನನ್ನ ಆಸನಕ್ಕೆ ಇಡುತ್ತಿರುವ ಉರಿಯನ್ನೂ ತಡೆಯಲಾರೆ. ಆದರೂ ಸಹಿಸಿಕೊಳ್ಳುತ್ತಾ ಕೇಳಿದೆ.

"ಗೊತ್ತಿಲ್ಲ ಕಣೋ. ನೀನೇ ಹೇಳಿದರೆ ಒಳ್ಳೆಯದು,. ನಮಗೆ ಯೋಗದ ಆಸನ ಮಾತ್ರ ಗೊತ್ತು."

"... ಅಂಗಾಯ್ತಾ ಸಾ..... ಅದು ಆ ಆ ಅಲ್ಲ ಸಾ.... ಅ ಆ ಇ ಈ ನಲ್ಲಿ ಬತ್ತದಲ್ಲ ಆ ಆ ಅಲ್ಲ. ಯ ರ ಅ ವ ದಾಗೆ ಬತ್ತದಲ್ಲ ಆ ಆ ಸಾ...."

ನನಗೆ ಆಗ ಗೊತ್ತಾಯಿತು. ಇವನ ಊರು ಹಾಸನ ಎಂದು.

1 comment: