Tuesday, July 31, 2018

ಕೋಳಿ_ಪಡೆ-1


ವಿಶಾರದ ಎಂಬ ತನ್ನ ಬಗ್ಗೆ ತಾನೇ ಇಟ್ಟುಕೊಂಡ ನಂಬುಗೆಗೆ ಇಂಬಾಗಲೋ ಎನ್ನುವಂತೆ ಬೆಂಗಳೂರಿನಲ್ಲಿದ್ದ ಭಾವನಿಗೆ ಕಾಡಿ ಬೇಡಿ ಲ್ಯಾಪ್ ಟಾಪ್ ತರಿಸಿಕೊಂಡ ವಿಶ್ವನಾಥ ಕಷ್ಟ ಪಟ್ಟು ಅಲ್ಲದಿದ್ದರೂ ರಜೆ ಕಳೆಯಲೆಂದು ಮನೆಗೆ ಬಂದ ಮಗಳಿಗೆ ಊರಲ್ಲಿಲ್ಲದ ಕಾಟ ಕೊಟ್ಟು ಕಂಪ್ಯೂಟರ್ ಬೂಟ್ ಮಾಡುವುದು, ಫ಼ೇಸ್ ಬುಕ್ ನೋಡುವುದು ಮತ್ತು ಮೇಲ್ ಕಳಿಸುವುದು ಎಲ್ಲವನ್ನೂ ಸ್ವಲ್ಪ ಮಟ್ಟಿಗೆ ಕಲಿತ. ಕಲಿತ ಎನ್ನುವುದಕ್ಕಿಂತ ತಿಳಿದ ಎನ್ನುವುದು ಸೂಕ್ತವಾದೀತು.



ಈತ ಕಲಿತದ್ದೋ ತಿಳಿದದ್ದೋ ಒತ್ತಟ್ಟಿಗಿರಲಿ. ಊರವರು ಇವನು ಕಂಪ್ಯೂಟರ್ ಕಲಿತದ್ದನ್ನು ತಿಳಿಯಲೇ ಬೇಕು. ಅರ್ಜುನ ಕೌರವರನ್ನು ಸೋಲಿಸಲು ಪಾಶುಪತ ಪಡೆದಂತೆ, ಈತ ನಾಣುವನ್ನು ಹಿಂದಿಕ್ಕಿ ಫೇಸ್ ಬುಕ್ಕಿನಲ್ಲಿ ಹೆಸರು ಮಾಡಲು ಬರೆಯಲು ಕಂಪ್ಯೂಟರ್ ತೆಗೆದುಕೊಂಡಿದ್ದು ದಂಡವಾಗಿಬಿಡುತ್ತದೆ. ತಾನು ಫೇಸ್ ಬುಕ್ಕಿನಲ್ಲಿ ಬರೆದಿದ್ದು ಯಾರದ್ದೋ ಹತ್ತಿರ ಬರೆಸಿದ್ದು ಎಂದು ಸದಾ ಕಾಲ ತನ್ನ ವಿರುದ್ಧವೇ ಮಸಲತ್ತು ಮಾಡುವ ಊರ ಜನ ಮಾತಾಡಿಕೊಳ್ಳಲಿಕ್ಕಿಲ್ಲವೇ? ಅದು ತಪ್ಪ ಬೇಕಿದ್ದರೆ ತನ್ನ ಕೈನಲ್ಲೊಂದು ಕಂಪ್ಯೂಟರ್ ಇರುವುದು, ತಾನು ಅದನ್ನು ಉಪಯೋಗಿಸಲು ಕಲಿತದ್ದು ಎರಡೂ ಊರೆಲ್ಲ ಜಾಹೀರಾಗಬೇಕು. ತಾನೇ ಹೇಳಿಕೊಂಡರೆ ಅದು ಸ್ವಪ್ರಶಂಸೆಯ ಮಾತಾಗಿಬಿಡುತ್ತದೆ. ಯೋಗ್ಯತಾವಂತನಿಗೆ ಅದು ತರವಲ್ಲ. ಬೇರೆ ಯಾರಾದರೂ ಹೇಳಬೇಕು. ಹೇಳಲು ಯಾರೂ ಸಿದ್ಧರಿರದಾಗ ತಾನೇ ಹೇಳಿಸಬೇಕು. ಅದಕ್ಕೆ ಯಾರಾದರೂ ಒಂದು ಲೌಡ್ ಸ್ಪೀಕರ್ ಬೇಕು. ಹೀಗೆಲ್ಲಾ ಯೋಚಿಸಿದ ವಿಶ್ವಣ್ಣ ಯೋಚನೆಗಳ ಕಾರಕ, ದಾಯಕ, ನಿಯಂತ್ರಕ, ಹಂತಕ ಎಲ್ಲವೂ ಆದ ಕವಳ ಕಟ್ಟಿ ಬಾಯಲ್ಲಿಟ್ಟು ಈ ಕೆಲಸಕ್ಕೆ ಯಾರಾದೀತು ಎಂದು ಯೋಚಿಸುತ್ತ ಮನೆಯ ಚಾವಡಿಯಲ್ಲಿ ಅತ್ತಿಂದಿತ್ತ ಸುಳಿದಾಡತೊಡಗಿದ.



ದೂರದಲ್ಲಿ ಯಾವುದೋ ಒಂದು ಆಕೃತಿ ಬರುತ್ತಿರುವುದು ಕಂಡಿತು. ಬಹಳ ಬೇಗ ಅದು ಶುಕ್ರನೇ ಸರಿ ಎನ್ನುವುದು ಸ್ಪಷ್ಟವಾಯಿತು. ತತ್ ಕ್ಷಣದಲ್ಲಿ ಒಳಗೋಡಿ ತನ್ನ ತೊಡೆಗಣಕವನ್ನು ತಂದಿಟ್ಟುಕೊಂಡು ಕುರ್ಚಿಯ ಮೇಲೆ ಕುಳಿತ. ಚಿತ್ತೈಸಿತು ಶುಕ್ರನ ಸವಾರಿ. ಅವ ಬಂದಿದ್ದು ಯಾಕೆ ಎನ್ನುವುದು ವಿಶ್ವನಿಗೆ ಬೇಡವಾಗಿತ್ತು. ಕಂಪ್ಯೂಟರ್ ಕಂಡ ಕೂಡಲೇ ಶುಕ್ರನಿಗೆ ಬಂದ ವಿಚಾರ ಮರೆತೇ ಹೋಗಿತ್ತು. ಮತ್ತೆ ಅವನಿಗೆ ಒಂದು ವಿಚಾರ ಬಹಳ ಚೆನ್ನಾಗಿ ಗೊತ್ತಿತ್ತು. ವಿಶ್ವಣ್ಣನನ್ನು ಹೊಗಳಿದರೆ ಏನೂ ಆದೀತು ಎನ್ನುವುದು.



"ಹ್ವಾ ಭಟ್ರೇ... ಅದೆಂತ... ತೊಡೆ ಮೇಲೆ ಇಟ್ಕಂಡ್ ಕಾಂಬೂ ಟೀವಿಯಾ?!"



"ಅಲ್ಲ"



"ಮತ್ತೆಂತ ಭಟ್ರೇ..... ತಲಿ ನೋವ್ ಅಥವಾ ತೊಡೀ ನೋವ್. ತೆಗೂ ಮಿಷನ್ನಾ... ಅಥವಾ ಕಣ್ ಪರೀಕ್ಷಿ ಮಾಡೂ ಮಿಷನ್ನಾ?! ಎಂತಕ್ಕೆ ಕೇಂಬುದ್ ಅಂದ್ರೆ ನಾ ಇದ್ನ ಬೊಂಬಾಯಂಗೂ ಕಾಣ್ಲ ಕಾಣಿ"



ಮತ್ಯಾರಾದರೂ ಈ ಮಾತಾಡಿದ್ದರೆ ತನ್ನನ್ನು ಕಿಚಾಯಿಸುತ್ತಿದ್ದಾರೆ ಎಂದು ಭಾವಿಸಿ ಸಿಟ್ಟಾಗುತ್ತಿದ್ದನೋ ಏನೋ ವಿಶ್ವಣ್ಣ. ಬೆಂಗಳೂರಿನ ಭಾವನ ಮನ ಒಲಿಸಿ ತಂದ, ಮಗಳ ತಲೆ ಕೆಡಿಸಿ ಕಲಿತ ಕಂಪ್ಯೂಟರ್ ಅನ್ನು ಕಾಲು ನೋವು ತೆಗೆಯುವ ಮಿಷನ್ ಅಂದರೆ ಯಾರಿಗೆ ಸಿಟ್ಟು ಬರುವುದಿಲ್ಲ ಹೇಳಿ. ಆದರೆ ಶುಕ್ರ ಏನೂ ತಿಳಿಯದವ ಎನ್ನುವುದು ಶತಃಸಿದ್ಧ. ಅವನಿಗಿಂತ ತಾನು ತಿಳಿದವ ಅಂತಾಯಿತಲ್ಲ. ಭಲೇ!! ತನ್ನ ಬೆನ್ನನ್ನೊಮ್ಮೆ ತಟ್ಟಿಕೊಳ್ಳಬೇಕೆನ್ನಿಸಿತು ವಿಶ್ವನಿಗೆ. ಆದರೆ ಹಾಗೆ ಮಾಡಲಿಲ್ಲ. ಅದು ಮುಖ್ಯವೂ ಅಲ್ಲ.



"ಇದು ಕಂಪ್ಯೂಟರ್ ಮಾರಾಯ" ಎಂದ ವಿಶ್ವ, ಗರ್ವ ಭರಿತ ಸಂತಸದ ಧ್ವನಿಯಲ್ಲಿ.



"ಹಂಗಂದ್ರೆ ಎಂತ ಹೆಗಡೇರೆ?!"



"ಇದು ಭಾರಿ ಯಂತ್ರ. ಇದಕ್ಕೆ ಎಲ್ಲಾ ಗೊತ್ತಿರ್ತದೆ. ಮಂತ್ರ-ತಂತ್ರ ಎಲ್ಲದೂವ. ಇದಿಟ್ಗಂಡವ ಏನೂ ಕಲಿಯಬಲ್ಲ. ಗೊತ್ತಾಗ್ಲ ಅಂದ್ರೆ ಈ ಮಿಷನ್ ಎಲ್ಲಾ ಹೇಳ್ತದೆ. ಎಂತ ಬೇಕು ಹೇಳು ನಿಂಗೆ. ಹೇಳನ" ಎಂದು ಮತ್ತೆ ತನ್ನ ಸಾತ್ವಿಕ ಅಹಂಕಾರ ಪ್ರದರ್ಶಿಸಿದ ವಿಶ್ವ.



ಶುಕ್ರ ಈಗ ತನ್ನ ಮಾತು ಶುರು ಮಾಡಿದ. "ಭಟ್ರೇ ಅದೆಂತ ಕೇಂತ್ರಿ.... ನಾ ಮೊದ್ಲ್ ಬಾಂಬಿಯಾಂಗಿದ್ದದ್ದ್ ನಿಮಗ್ಗೊತ್ತೀತಲೆ. ಅಲ್ಲಿರ್ತ ಎಲ್ಲ ಕೋಳಿಪಡೆ ಆಡ್ಲ. ಈಗ ಆಡದೆ ಭಾರಿ ವರ್ಸ ಕಳ್ದೀತ್ ಕಾಣಿ....ಮತ್ತೆ ಅದೆಲ್ಲ ಯಾವಾಗ್ಲೂ ಆಡೂದಲ್ದೆ... ಜೂಜಪ. ಆಡ್ರೆ ಮನಿ ಹಾಳಾಪುಕಿತ್ ಮತ್ತೆ.....ಆದ್ರೆ ಮನ್ನೆ ಯಾಸು ಮಾಡದ್ ಕಂಡ್ ಕುಸಿ ಆಯಿ ಗಣೇಸಯ್ಯ ಹೊರ ದೇಸಕ್ಕೆ ಹ್ವಾಪವ್ರ್ ಒಂದ್ ಐನೂರ್ ಕೊಟ್ಟೀರೆ... ಎಂತ ಮಾಡುದ್ ಅಂತ ಕಂಡ್ರೆ ಕೋಳಿಪಡೆ ಆಡುವ ಅಂತ ಅನ್ಸೂಕೆ ಹಿಡಿದೀತೆ. ಆರೆ, ಅವ್ರ್ ಕುಸಿಗೆ ಕೊಟ್ ದುಡ್ ತೆಕ ಹ್ವಾಯಿ ಕೋಳಿ ಪಡೆಯಂಗೆ ಕಂತ್ಸೂದ್ ಸರಿ ಅಲ್ದೆ. ಹಂಗಂತ ಕೋಳಿ ಪಡೆ ಪೂರ್ತಿ ಬಿಡೂಕಾತ್ತ?! ಊರಿನ್ ಗತ್ತ್ ಅಲ್ದೆ ಅದು... ಬಿಟ್ರೆ ಶುಕ್ರ ಕೋಳಿಪಡೆ ಅಂದ್ರೆ ಹೆದರ್ತ ಅಂತೆಲ್ಲ ಆಡ್ಕ್ಂತ್ರ್ ಈ ಹಪ್ ಹಿಡ್ದರ್.. ಅವ್ರ್ ವಾಲಿ ಕಳೂಕೆ..... ಈಗ ಈ ಮಿಸನ್ನಂಗೆ ಕಂಡ್ ಎಲ್ಲಿ ಕೋಳಿ ಪಡಿ ಇತ್ತ್..ಯಾರ್ ಯಾರ್ ಕೋಳಿ ಕಟ್ತ್ರ್... ಯಾವ ಕೋಳಿಗೆ ಎಷ್ಟ್ ಕಟ್ರೆ ಗೆಲ್ಲೂಕಾತ್ತ್ ಅಂತೆಲ್ಲ ಕಂಡ್ ನಂಗೆ ಹೇಳಿನಿ. ಮೇಲೆ ಒಂದ್ ಐನೂರ್ ರುಪಾಯಿ ಕೊಡೀನಿ. ಹೆಂಗೂ ಗೆಲ್ಲೂದ್ ಮಿಸನ್ ಹೇಳಿದ ಕೋಳಿಯೇ ಅಲ್ದೆ... ಗೆದ್ಕ ಬಂದ್ರ್ ಗತಿಗೆ ವಾಪಾಸ್ ಕೊಡ್ತೆ. ಅಸಲೂ ಕೊಡ್ತೆ. ಲಾಭದಂಗೂ ಸ್ವಲ್ಪ ಕೊಡ್ತೆ..." ಎಂದ.



ಬೇರೆ ಸಮಯದಲ್ಲಾಗಿದ್ದರೆ ವಿಶ್ವಣ್ಣ ಕೃದ್ಧನಾಗುತ್ತಿದ್ದ ಆದರೆ ತನಗೂ ಕಂಪ್ಯೂಟರ್ ಕೊಂಡು ಅದನ್ನು ಕಲಿತಿದ್ದೇನೆ ಎಂದು ತಿಳಿಸಲು ಸಿಕ್ಕ ಸುವರ್ಣವಕಾಶವನ್ನು ಕಳೆದುಕೊಳ್ಳಲು ಆತ ತಯಾರಿರಲಿಲ್ಲ. ಅದಕ್ಕೇ ಶುಕ್ರನಿಗೆ, ೧೦೦ ರೂಪಾಯಿ ಕೊಟ್ಟು, ಕಂಪ್ಯೂಟರಿನಲ್ಲಿ ಇಣುಕಿ "ಹೇಳ್ತೇನೆ ತಡಿ" ಎಂದು ಹುಡುಕುತ್ತಿರುವಂತೆ ನಾಟಕ ಮಾಡಿದ. ಆ ಕ್ಷಣದಲ್ಲಿ ಅವನಿಗೆ ಎಂದೋ ಒಂದು ದಿನ ಅವನ ಮನೆಯ ಕೆಲಸದಾಳು ಕನ್ನ ನಾಯ್ಕ ಹೇಳಿದ್ದು ನೆನಪಾಯಿತು, ಕೋರೆತ್ವಾಟದ ಭೂತನ ಕಟ್ಟೆಯ ಹಿಂಭಾಗದಲ್ಲಿನ ಬಯಲಲ್ಲಿ ಕೋಳಿ ಪಡೆ ಇದೆ ಅಂತ ಹೇಳಿದ್ದು. ಗಣಪು ಶೆಟ್ಟಿಗೆ ಆ ಭೂತದ ಕೃಪೆ ಇರುವುದರಿಂದ ಆತನ ಕೋಳಿಯೇ ಸದಾಕಾಲ ಗೆಲ್ಲುತ್ತದೆ ಎಂದಿದ್ದು ಎರಡೂ ನೆನಪಾಯಿತು. ಅದನ್ನೇ ಶುಕ್ರನಿಗೆ ಹೇಳಿದ. ಶುಕ್ರನೂ ನಂಬಿ ಹೋದ.



ಈಗ ವಿಶ್ವ ತನ್ನಲ್ಲೇ ತಾನು ಯೋಚಿಸಿದ. ಒಂದು ವೇಳೆ ಶುಕ್ರ ಗೆದ್ದರೆ, ಅವನ ಹರಕು ಬಾಯಿಯಲ್ಲಿ ಹೇಗೂ ತಾನು ಕಂಪ್ಯೂಟರ್ ನೋಡಿ ಹೇಳಿದ್ದು ಹೊರಬರುತ್ತದೆ. ಆತ ಸೋತರೂ ಕೂಡ ಈ ವಿಚಾರ ಹೊರಬೀಳಲೇ ಬೇಕು. ಸೋತ ಹೊಟ್ಟೆ ಉರಿ ಯಾರಪ್ಪನ ಮನೆಯದ್ದು?! ಹೇಗೂ ತಾನು ಕಂಪ್ಯೂಟರ್ ಕೊಂಡಿದ್ದು ಮತ್ತು ಅದನ್ನು ಉಪಯೋಗಿಸುತ್ತಿರುವುದು ಎರಡೂ ಜಾಹೀರಾಗುತ್ತದೆ. ವಿಶ್ವಣ್ಣನ ವಿಶಾರದತ್ವಕ್ಕೆ ಇದಕ್ಕಿಂತ ಮೀರಿದ ನಿದರ್ಶನ ಬೇಕೆ?



#ವಿಶಾರದ_ವಿಶ್ವಣ್ಣ



#ಶುಕ್ರ



#ಕೋಳಿ_ಪಡೆ

No comments:

Post a Comment