Monday, August 6, 2018

ಮಿಂಚುಳ್ಳಿ




ಮಳ್ಳಿ ಮಳ್ಳಿ ಮಿಂಚುಳ್ಳಿ..... ಜಾಣ ಜಾಣ ಕಾಜಾಣ.... ನಾವು ಚಿಕ್ಕವರಿದ್ದ ಕಾಲದ ಪ್ರಸಿದ್ಧ ಹಾಡು ಇದು. ಗೆಜ್ಜೆನಾದ ಚಿತ್ರದ ಹಾಡು. ಆಗ ಇವೆರಡೂ ಹಕ್ಕಿಗಳ ಹೆಸರು ಎಂದು ನನಗಂತೂ ಗೊತ್ತಿರಲಿಲ್ಲ. ಆದರೆ ಏಳನೇ ತರಗತಿಯಲ್ಲಿ ಹಕ್ಕಿಗಳ ಬಗೆಗಿನ ಒಂದು ಪ್ರಬಂಧ, ಪಠ್ಯವಾಗಿತ್ತು. ಅಲ್ಲಿ ತಿಳಿದದ್ದು ಮಿಂಚುಳ್ಳೀ ಮತ್ತು ಕಾಜಾಣ ಎನ್ನುವುದು ಎರಡು ಹಕ್ಕಿಗಳು ಅಂತ ಅಷ್ಟೇ. ಮಿಂಚುಳ್ಳಿ ಮೀನು ಹಿಡಿಯುತ್ತದೆ ಎಂದಷ್ಟೇ.



ಆಮೇಲೆ ನಮ್ಮ ಶಾಲೆಯಿಂದ ಹೊಳೆಬಾಗಿಲು ಮತ್ತು ಸಿಗಂಧೂರಿಗೆ ಪ್ರವಾಸ ಇಟ್ಟಿದ್ದರು. ಆಗ ಅಲ್ಲಿ ಶರಾವತಿಯ ಹಿನ್ನೀರಿನಲ್ಲಿ ಇದ್ದ ಮೀನುಗಳನ್ನು ಹಿಡಿಯಲು ಹಕ್ಕಿಗಳು ಹಾರಿ ಬಂದು, ಕೊಕ್ಕಿನಲ್ಲಿ ಹಿಡಿದು ಕೊಂಡೊಯ್ಯುತ್ತಿದ್ದವು. ಆ ದೃಷ್ಯ ಬಲು ಸೊಗಸಾಗಿತ್ತು ಬಲು ಇಷ್ಟವೂ ಆಗಿತ್ತು. ೧೯೯೬ ರ ವಿಶ್ವಕಪ್ ಕ್ರಿಕೆಟ್ ನಮ್ಮ ನೆಲದಲ್ಲಾಗಿದ್ದೇ ಆಗಿದ್ದು. ಅದೆಷ್ಟೋ ಹೊಸ ಬಗೆಯ ವಿಚಾರಗಳ್ ಜಾಹೀರಾತಿನ ಮೂಲಕ ನಮ್ಮ ತಲೆಯನ್ನು ಪ್ರವೇಶಿಸಿದವು. ಕ್ರಿಕೆಟ್ ಎನ್ನುವುದು ಜೀವನದ ಅವಿಭಾಜ್ಯ ಅಂಗವಾಗಿದ್ದು ಇಲ್ಲಿಂದಲೇ. ಈ ಜಾಹೀರಾತುಗಳಲ್ಲಿ ಮುಖ್ಯವಾಗಿದ್ದು ಕಿಂಗ್ ಫಿಷರ್ ಮಿನರಲ್ ವಾಟರ್ ಮತ್ತು ಕೋಕ ಕೋಲ. ಕಿಂಗ್ ಫ಼ಿಷರ್ ಕಂಪನಿ, ವೆಸ್ಟ್ ಇಂಡೀಸ್ ಕ್ರಿಕೆಟ್ ತಂಡದ ಪ್ರಾಯೋಜಕತ್ವವನ್ನು ವಹಿಸಿಕೊಂಡಿತ್ತು. ಅಲ್ಲಿನ ಸ್ಥಳೀಯ ಸಂಗೀತದ ಹಿನ್ನೆಲೆಯಲ್ಲಿ ಉಲೇಲುಲೆಲುಲ ಲೋಲೆಓ ಎನ್ನುವ ಆ ಆಲಾಪವೇ ಅದನ್ನು ಆ ಹೆಸರಿನೆಡೆಗೆ ಸೆಳೆದಿದ್ದು. ಮುಂದೆ ಹೈಸ್ಕೂಲು ಕೂಡಾ ಹೆಗ್ಗೋಡಿನಲ್ಲಿ ಆಯಿತು. ದಾರಿಯ ಪಕ್ಕದಲ್ಲೇ ಕೆರೆಗಳಿರದ ಹಾದಿಯಲ್ಲಿ ಪಯಣ. ಮೀಂಚುಳ್ಳಿಯ ದರ್ಶನಭಾಗ್ಯ ಸಿಗಲಿಲ್ಲ. ಮತ್ತೆ ನಮಗೆ ಬೇಕಾಗಿದ್ದ ಹಕ್ಕಿಗಳೂ ಬೇರೆಯವೇ ಆಗಿತ್ತು ಬಿಡಿ. ರೆಕ್ಕೆಗಳೊ ಕೊಕ್ಕುಗಳೋ ಇಲ್ಲದ ಹಕ್ಕಿಗಳ ಹುಡುಕಾಟದ ವಯಸ್ಸು ಅದು. ನಾವೂ ವಯಸ್ಸಿಗೆ ತಕ್ಕಂತೆ ಇದ್ದೆವು.



ಕಾಲೇಜು ಓದಲೆಂದು ಸಾಗರಕ್ಕೆ ಸೇರಿದ್ದಾಯಿತು. ವರದಾ ಮೂಲ ದಾಟಿ ಉತ್ಸವ ಕಟ್ಟೆಯ ನೇರ ಇಳಿಜಾರು, ನಂತರ ಬಿಸಿಲು ಬಸಪ್ಪನ ಅಂಕು ಡೊಂಕಾದ ಇಳಿಜಾರು ಆಮೆಲೆ ಸಿಗುವ ತೊಟ್ಟಿಲು ಭೂತನ ತಿರುವಿನ ಇಳಿಜಾರು ದಾಟುತ್ತಿದ್ದಂತೆ ಕಣ್ಣಿಗೆ ಬೀಳುವುದು ಚಿಪ್ಪಳಿ ಕೆರೆ. ಆ ಕೆರೆಯ ಮೇಲಿನ ಹೊಂಡದಲ್ಲೆಲ್ಲೋ ಹೆಬ್ಬಾವು ಇತ್ತು ಎಂದು ಸುದ್ದಿಯಿತ್ತು. ಒಮ್ಮೊಮ್ಮೆ ಅದು ರಸ್ತೆಯ ಮೇಲೆ ಮಲಗಿದ್ದನ್ನು ನೋಡಿದ್ದೇವೆ ಎನ್ನುವವರೂ ಇದ್ದರು. ಆ ಕೆರೆಯಲ್ಲಿ ಇಳಿದು ಆಡುತ್ತಿದ್ದ ಎಮ್ಮೆಗಳು, ಬಟ್ಟೆ ತೊಳೆಯುತ್ತಿದ್ದ ಹೆಂಗಸರು, ಗಾಳ ಬಿಟ್ಟು ಮೀನು ಹಿಡಿಯುತ್ತಿದ್ದ ಹುಡುಗರು, ಕೆರೆಯನ್ನು ಸಂಪೂರ್ಣವಾಗಿ ತನ್ನ ಒಡಲೊಲಗೆ ಸೆಳೆಯಲು ಅದರ ಒಳಗೇ ಬೆಳೆದ ಭಸ್ಮಾಸುರನ ಜಂಡು ಇವೆಲ್ಲದರ ಜೊತೆ ದಿನವೂ ಕಾಣುತ್ತಿದ್ದದ್ದು ಈ ಮಿಂಚುಳ್ಳಿ. ನಾಲ್ಕೈದು ವರ್ಷಗಳಲ್ಲಿ ಓದಿದ ಪಾಠ, ತಿಳಿದ ವಿಚಾರಗಳು ಬೇರೆ ಜಾತಿಯ ಹಕ್ಕಿಯ ಹುಡುಕಾಟದಲ್ಲಿ ಎತ್ತಲೋ ರೆಕ್ಕೆ ಪುಕ್ಕ ಕಟ್ಟಿಕೊಂಡು ಹಾರಿದ್ದವು ಬಿಡಿ. ಹಾಗಾಗಿ ಈ ಹಕ್ಕಿ ಅಷ್ತೇನೂ ಆಕರ್ಷಣೀಯವೆನ್ನಿಸಲಿಲ್ಲ. ಜೊತೆಗೆ ಕಿಂಗ್ ಫಿಶರ್ ಎಂದರೆ ಹಕ್ಕಿ ಎನ್ನುವುದಕ್ಕಿಂತ ಮಲ್ಯ ಸಾಹೇಬರ ಎಣ್ಣೆಯಾಗಿಯೇ ಹೆಚ್ಚು ಪ್ರಸಿದ್ಧಿ ಪಡೆದದ್ದು ಅದರ ಹೆಸರು ಹೇಳಲು ಇನ್ನೊಂದು ರೀತಿಯ ಮುಜುಗರ ಮಾಡುತ್ತಿತ್ತು.



ಹಳ್ಳಿ ಬಿಟ್ಟು ಬೆಂಗಳೂರು ಎನ್ನುವ ಹೈ ಕೆಟ್ ಸಿಟಿ ಸೇರಿದ್ದೇ ಸೇರಿದ್ದು. ಊರಿನ ಪ್ರತಿಯೊಂದೂ ಆಕರ್ಷಣೀಯವಾಗಿ ಮತ್ತು ಆನಂದದಾಯಕವಾಗಿ ಕಾಣತೊಡಗಿತ್ತು. ಹಾಗೆ ಮತ್ತೆ ಆಕರ್ಷಣೆ ಹುಟ್ಟಿಸಿದ್ದು ಮೀಂಚುಳ್ಳಿ. ಅದರ ಫೋಟೋ ತೆಗೆಯಲು ನಾನು ಇನ್ನೂ ಹತ್ತು ವರ್ಷ ಕಾಯಬೇಕಾಯಿತು. ಯಾಕೆಂದರೆ ಕ್ಯಾಮರಾ ಇರಲಿಲ್ಲ. ಆಮೇಲೆ ತೆಗೆದುಕೊಮ್ದ ಮೇಲೆ ಹೊಟ್ಟೆ ತುಂಬಾ ಫೋಟೊ ತೆಗೆದೆ ಈ ಮಿಂಚುಳ್ಳಿಯದ್ದು. ಕೆಲವು ನನ್ನ ಗೋಡೆಯಲ್ಲಿವೆ. ಒಟ್ರಾಸಿ ತೆಗೆದ ಆ ಫೋಟೋಗಳನ್ನು ಇಲ್ಲಿ ಹಾಕುತ್ತಿಲ್ಲ.



ಮೀಂಚುಳ್ಳಿಯ ಬಗೆಗೆ ನಾನು ತಿಳಿದುಕೊಂಡಿದ್ದು ಇಷ್ಟೇ. ಆದರೆ ಕ್ಯಾಮರಾ ಹೆಗಲಿಗೆ ಬಿದ್ದಿದ್ದೇ ತಡ. ಮಿಂಚುಳ್ಳಿ ಒಂದು ರೀತಿಯ ಮಿಂಚಂತೆ ನನ್ನನ್ನು ಸೆಳೆಯಿತು. ಊರಿಗೆ ಹೋದಾಗ ನನ್ನನ್ನು ಸಾಗರದಿಂದ ಮನೆಗೆ ಕರೆದುಕೊಂಡು ಹೋಗಲು ಬರುತ್ತಿದ್ದ ಅಪ್ಪನಿಗೆ ಚಿಪ್ಪಳಿ ಕೆರೆ ಒಮ್ದು ರೀತಿಯ ಅಘೋಷಿತ ಸ್ಟಾಪ್ ಆಗಿ ಬಿಟ್ಟಿತು. ನನಗೂ ಬೈಕ್ ಏರಿ ಹೊರೆಟೆನೆಂದರೆ ಚಿಪ್ಪಳಿ ಕೆರೆಯ ಮೇಲೆ ನಿಲ್ಲಿಸಲೇ ಬೇಕಿತ್ತು. ಮತ್ಯಾವುದಕ್ಕೂ ಅಲ್ಲದಿದ್ದರೂ ಮೀಂಚುಳ್ಳಿಯ ಫೊಟೋ ತೆಗೆಯಲು. ಮಿಂಚುಳ್ಳಿಯ ಪ್ರಭೇಧಗಳಾದ ಪಟ್ಟೆ ಮಿಂಚುಳ್ಳಿ, ಬಿಳಿ ಕುತ್ತಿಗೆ ಮಿಂಚುಳ್ಳಿ, ಜುಟ್ಟಿನ ಮಿಂಚುಳ್ಳಿ ಕೂಡಾ ಅಲ್ಲಿ ಇರುತ್ತಿದ್ದವು. ಇವುಗಳ ಫೋಟೋ ಚೆನ್ನಾಗಿಲ್ಲದ ಕಾರಣ ಅವನ್ನು ಇಲ್ಲಿ ಹಾಕಿಲ್ಲ.



ಕಿರೀಟದ ಮಿಂಚುಳ್ಳಿ ಬಿಟ್ಟರೆ ಎಲ್ಲಾ ಮಿಂಚುಳ್ಳಿಗಳ ರೆಕ್ಕೆಯಲ್ಲೂ ಅದೇನೋ ಹೊಳಪು-ಥಳುಕು-ಬಳುಕು. ನೋಡುವುದಕ್ಕೆ ಬಲು ಚಂದ ಈ ಪಕ್ಷಿ. ಮೀನು ಹಿಡಿಯುವಲ್ಲಿ ಇದರ ಪ್ರಾವೀಣ್ಯವೇ ಇದಕ್ಕೆ ಕಿಂಗ್ ಫ಼ಿಷರ್ ಎನ್ನುವ ಹೆಸರು ತಂದಿದೆ. ಮೀನುಗಳು ನೀರಿನ ಮೇಲ್ಭಾಗಕ್ಕೆ ಬರುವುದನ್ನೇ ಕಾಯುತ್ತಾ ಕೆರೆಯ ಸಮೀಪದಲ್ಲಿ ತುಸುವೇ ಎತ್ತರದ ಜಾಗದಲ್ಲಿ ಕುಳಿತಿರುತ್ತವೆ. ಮೀನುಗಳು ಮೇಲ್ಭಾಗಕ್ಕೆ ಬಂದೊಡನೆ ಚಂಗನೆ ಹಾರಿ ಅದನ್ನು ಹಿಡಿದು ತರುತ್ತದೆ. ಅಷ್ಟರಲ್ಲಿ ಅದೇ ಮೀನನ್ನು ನೋಡಿದ ಮತ್ತೊಂದು ಮಿಂಚುಳ್ಳಿ ಆಕಾಶದಲ್ಲೇ ಅದನ್ನು ಎದುರಿಸುತ್ತದೆ. ತಾಕತ್ತಿದ್ದರೆ, ಚಾಕಚಕ್ಯತೆಯಿಂದ ಧಾಳಿ ಮಾಡಿದ ಮಿಂಚುಳ್ಳಿಯಿಂದ ತನ್ನ ಬೇಟೆಯನ್ನು ರಕ್ಷಿಸಿಕೊಂಡು ಓಡುತ್ತದೆ. ನಂತರ ಕುಳಿತು, ತಾನು ಕುಳಿತ ಕಂಬಿಯ ಮೇಲೋ ಅಥವಾ ಕೊಂಬೆಯ ಮೇಲೋ ಇಟ್ಟುಕೊಂಡು ಮೀನಿನ ಮಾಂಸ ಮೂಳೆಗಳನ್ನು ಬೇರ್ಪಡಿಸಿ ತಿನ್ನುತ್ತದೆ.



ಕಿಂಗ್ ಫಿಶರ್ ಎನ್ನುವ ಹೆಸರಿನ ಕಾರಣದಿಂದ ಮೀನೊಂದೇ ಇದರ ಆಹಾರ ಅಂತ ಭಾವಿಸಬೇಕಿಲ್ಲ. ಕಪ್ಪೆ, ಸಹಸ್ರಪದಿ, ಓತಿಕೇತ ಕೂಡಾ ಇದರ ಆಹಾರಗಳು. ಇದು ಕಳ್ಳಿಪೀರದ ಹತ್ತಿರದ ಸಂಬಂಧಿ. ಇದರ ಉದ್ದನೆಯ ಚೂರಿಯಂಥಾ ಕೊಕ್ಕು ಮತ್ತು ಅತಿ ಸೂಕ್ಷ್ಮ ದೃಷ್ಟಿ ಇದರ ಚುರುಕುತನಕ್ಕೆ ಸಹಕಾರಿಯಾಗಿ ಮೀನು ಹಿಡಿಯಲು ಅನುಕೂಲವಾಗಿವೆ. ಇದರ ದೃಷ್ಟಿ ಎಷ್ಟು ಸೂಕ್ಷ್ಮ ಎಂದರೆ, ನೀರಿನಲ್ಲಿ ಆಗುವ ಬೆಳಕಿನ ವಕ್ರೀಭವನವನ್ನು ಗುರುತಿಸುವ ಮತ್ತು ಸಮದೂಗಿಸುವ ಸಾಮರ್ಥ್ಯವಿದೆ.



ಮೀಂಚುಳ್ಳಿಗಳು ಕೂಡಾ ಕಳ್ಳಿಪೀರದಂತೆಯೇ ಬಿಲದಲ್ಲಿ ಗೂಡು ಕಟ್ಟುತ್ತವೆ. ಮರದ ಪೂಟರೆಗಳು, ಬಿದ್ದ ಮರದ ತೂತುಗಳು, ಮನುಷ್ಯರು ಮಾಡಿದ ಕುಳಿಗಳು ಕೂಡಾ ಇವುಗಳ ಗೂಡುಗಳಾಗುತ್ತವೆ. ಗೂಡಿಗಾಗಿ ತಾವೇ ಬಿಲ ತೋಡುವುದು ಕೂಡಾ ಇವುಗಳ ವಿಶೇಷತೆಗಳಲ್ಲೊಂದು. ಮನುಷ್ಯರಂತೆಯೇ, ಗಂಡು ಹೆಣ್ಣು ಎರಡೂ ಸೇರಿ ಗೂಡು ಕಟ್ಟುವುದು ಇವುಗಳಲ್ಲೂ ಇದೆ. ಬಿಲ ತೋಡುವಾಗ ಜೋರಾಗಿ ಹಾರಿ ಬಂದು ಗೂಡು ಕಟ್ಟಲು ಆರಿಸಿಕೊಂಡ ಜಾಗಕ್ಕೆ ಹಾರಿ ಬಂದು ಕೊಕ್ಕಿನಿಂದ ಗುದ್ದುತ್ತವೆ. ಆದರೆ, ಈ ಕೆಲಸ ಮಾಡುವಾಗ ಮರಣಾಂತಿಕವಾಗಿ ಗಾಯಗೊಳ್ಳುವುದೂ ಇದೆ. ಏಕ ಸಂಗಾತಿ ವ್ರತ ಇವುಗಳ ಇನ್ನೊಂದು ವಿಶೇಷತೆ.



ಆದರೆ ಆಹಾರಕ್ಕಾಗಿ, ಹಣಕ್ಕಾಗಿ ಮಲೆನಾಡ ಕೆರೆಗಳಲ್ಲಿ ಮೀನುಗಳನ್ನು ದೋಚುತ್ತಿರುವ ಜನ ಮತ್ತು ಅದಕ್ಕೆ ಸರಕಾರದ ಉತ್ತೇಜನ ಮಿಂಚುಳ್ಳಿಗಳ ಮುಖ್ಯ ಆಹಾರದಿಂದ ವಂಚಿಸುತ್ತಿದೆ. ಪರಿಣಾಮ ಊರ ಕೆರೆ ಕಟ್ಟೆಗಳ ಬಳಿಯಲ್ಲಿ ಇವುಗಳು ಕಾಣ ಸಿಗುವುದಿಲ್ಲ. ಇದರ ಬಗ್ಗೆ ಗಮನ ಕೊಟ್ಟಲ್ಲಿ ಮಲೆನಾಡಿನಲ್ಲಿ ಇವುಗಳ ಮಿಂಚು ಮತ್ತೆ ಕಾಣಬಹುದು. ಇದರ ಸಿಳ್ಳೆಯ ಶಬ್ದ ಆನಂದಿಸಬಹುದು. ಇದಕ್ಕೆ ಸಂಸ್ಕೃತದಲ್ಲಿ ಮೀನರಂಕ ಎಂದು ಕರೆಯುತ್ತಾರೆ. ಹಿಂದಿಯಲ್ಲಿ ರಾಮ್ ಚಿರೈಯಾ, ಛೋಟಾ ಕಿಲಾಕಿಲಾ, ಶರೀಫನ್ ಎನ್ನುತ್ತಾರೆ.



#ಪಕ್ಷಿ_ವಾಚನ






No comments:

Post a Comment