Monday, August 13, 2018

ಸಿಳ್ಳಾರ

ಊರು ಬಿಟ್ಟು ಬೆಂಗಳೂರಿಗೆ ಬಂದು ನೆಲೆಸಿ ನಂತರ ಊರಿನ ನೆನಪುಗಳನ್ನು ಪದೇ ಪದೇ ತಂದುಕೊಂಡು, ಅದನ್ನು ಕಳೆದುಕೊಂಡ ದುಃಖವನ್ನು ಅನುಭವಿಸುವುದರಲ್ಲಿಯೇ ಸಂತೋಷವನ್ನು ಕಾಣುವ ಮಲೆನಾಡಿಗರಲ್ಲಿ ನಾನೂ ಒಬ್ಬ. ಸವೆದ ನೆನಪುಗಳನ್ನು ಮತ್ತೆ ಸಾಣೆ ಹಿಡಿಯಲು ಆಗಾಗ ಊರಿಗೆ ಹೋಗುವುದೂ ಹೌದು. ಊರಿಗೆ ಹೋದ ಮೇಲೆ ಅಲ್ಲಿಯ ಕಟ್ಟೆ ಪಂಚಾಯ್ತಿ, ರಾಜಕೀಯ, ಹಬ್ಬ ಹರಿದಿನದ ಆಚರಣೆ, ತೋಟ ತುಡುಗೆಗಳ ತಿರುಗಾಟ ಇವೆಲ್ಲವೂ ಸೇರಿ ನೆನಪಿನ ಚೂರಿಯನ್ನು ಮತ್ತಷ್ಟು ಹರಿತ ಮಾಡುತ್ತವೆ. ಆದರೆ ಆ ನೆನಪಿನ ಚೂರಿ ಚುಚ್ಚಿದಾಗ ಆಗುವುದು ಯಾತನೆಯಲ್ಲ ಮಧುರ ಯಾತನೆ. ಜಯಂತ್ ಕಾಯ್ಕಿನಿಯವರು ಬರೆದ ಈ ಶಬ್ದದ ಮೂಲ ಸ್ರೋತ ಅವರ ನೆನಪುಗಳಲ್ಲಿಯೇ ಇತ್ತಾ? ಗೊತ್ತಿಲ್ಲ. ಆದರೆ ಈ ಮಧುರ ಯಾತನೆಯ ಉಪಶಮನ ಸ್ವಲ್ಪ ಕಷ್ಟವೇ ಸರಿ. ಆದರೆ "ಉಷ್ಣಮ್ ಉಷ್ಣೇನ ಶಾಮ್ಯತೆ" ಎನ್ನುವ ಮಾತಿನಂತೆ ನೆನಪುಗಳಿಗೆ ನೆನಪುಗಳೇ ಮದ್ದಾಗುವುದು.

ನಾನು ನನ್ನ ನೆನಪ ಯಾತನೆಗೆ ಕಂಡುಕೊಂಡ ಮದ್ದು, ಹಕ್ಕಿಗಳ ಚಿತ್ರ ತೆಗೆಯುವುದು. ಬೇಸರವಾದಾಗ ಅವುಗಳತ್ತ ಒಮ್ಮೆ ನೋಡಿ ಒಂದು ನಿಟ್ಟುಸಿರು ಬಿಟ್ಟರೆ ಅದೇನೋ ಒಂದು ರೀತಿಯ ಸಂತೋಷ. ನಿಟ್ಟುಸಿರು ಬಿಡುವ ಮುನ್ನದ ಶ್ವಾಸೋಚ್ಛಾಸ ಆಹ್ಲಾದವನ್ನು ತಂದರೆ, ದೀರ್ಘವಾದ ನಿಶ್ವಾಸ ಯಾತನೆಯನ್ನು ಹೊರಗೊಯ್ಯುತ್ತದೆ. ಮನಃಪಟಲದಲ್ಲಿ ಅಚ್ಚಾದ ಚಿತ್ರಗಳು ಸಾಲುವುದಿಲ್ಲವಲ್ಲ. ಅದಕ್ಕಾಗಿ ತೆಗೆದ ಛಾಯಾ ಚಿತ್ರಗಳು ಬೇಕಾಗುತ್ತವೆ.

ಹೀಗೆ ಒಮ್ಮೆ ತೋಟಕ್ಕೆ ಹೋದಾಗ ಒಂದು ಕೇಸರಿ ಬಣ್ಣದ ಕುತ್ತಿಗೆಯ ಮೇಲಿನ ಪಟ್ಟೆಯುಳ್ಳ ಒಂದು ಪಕ್ಷಿ ಕಂಡು ಬಂತು. ಒಂದು ರೀತಿಯ ಸಿಳ್ಳೆ ಹಾಕುತ್ತಿತ್ತು. ಆಗ ನನ್ನ ನೆನಪು ರಿವರ್ಸ್ ಗೇರಿನಲ್ಲಿ ಓಡಿತ್ತು. ನನಗೆ ಕಿವಿಯಲ್ಲಿ ಸೀಟಿ ಹೊಡೆಯುವ ಜೋಕ್ ನೆನಪಾಗಿತ್ತು. ಅದು ಸಿಳ್ಳೆ ಹಾಕಿದ್ದು ಬಹುಷಃ ತನ್ನ ಸಂಗಾತಿಯನ್ನು ಕರೆಯಲೆನ್ನಿಸುತ್ತದೆ. ಹಾಗಾದರೆ ಈ ಹಕ್ಕಿಯೇ ಹುಡುಗಿಯರನ್ನು ನೋಡಿ ಸೀಟಿ ಹೊಡೆಯುವವರಿಗೆ ಸ್ಫೂರ್ತಿಯಾಗಿದ್ದೀತೇ ಎಂದೂ ಎನ್ನಿಸಿತ್ತು. ನರೇಂದ್ರ ಮೋದಿ ಮತ್ತು ಅರುಣ್ ಜೈಟ್ಲೀ ಅವರ ಅಪ್ಪಟ ಅಭಿಮಾನಿಯಾದ ನನಗೆ ಈ ಪಕ್ಷಿಯನ್ನು ನೋಡಿ ಭಾಜಪದ ನೆನಪಾಗಬೇಕೇ.? ತಪ್ಪಲ್ಲ. ಅದು ೨೦೧೩ನೆಯ ಇಸವಿ. ಮತ್ತೆ, ಮೌನವನ್ನೇ ಮೋಹಕವಾಗಿಟ್ಟವರು ಪ್ರಧಾನರಾಗಿದ್ದಾಗ, ಸಿಳ್ಳೂ ಮಾತೆನಿಸಿ ಹಾಗಾಗುವುದು ಸಹಜ ಮತ್ತು ಸ್ವಾಭಾವಿಕ.

ಆದರೆ, ಈ ಹಕ್ಕಿಯ ಇಹ ಪರ ಮತ್ತಿತರ ಪ್ರವರಗಳು ತಿಳಿಯಲಿಲ್ಲ. ಫೋಟೋವನ್ನು ತಂದು ಮುಖಪುಸ್ತಿಕೆಯಲ್ಲಿ ಪಕ್ಷಿಗಳಿಗೆ ಸಂಬಂಧಿಸಿದ ಗುಂಪಿನಲ್ಲಿಟ್ಟು, "ID Please" ಎಂದು ಬರೆದದ್ದೂ ಆಯಿತು. ಆಗ ಯಾರೋ ಹೇಳಿದರು ಇದು "Orange headed thrush" ಎಂದು. ಉತ್ತರ ನೋಡಿ ನನ್ನ ಮೇಲೆ ನನಗೊಂದು ರೀತಿಯ ಕೀಳರಿಮೆ ಮತ್ತು ಬೇಸರ ಮೂಡಿತ್ತು. ಹತ್ತು ವರ್ಷಗಳ ಕಾಲ ಕನ್ನಡ ಮೀಡಿಯಮ್ಮಿನಲ್ಲಿ ಓದಿ ಅದರ ಎರಡರಷ್ಟು ಕಾಲ ಮಲೆನಾಡಿನಲ್ಲೇ ಇದ್ದರೂ ನಿತ್ಯವೂ ನೋಡುತ್ತಿದ್ದ ಹಕ್ಕಿಯ ಹೆಸರು ಅದೂ ಮಾತೃಭಾಷೆಯಲ್ಲಿ ನನಗೆ ಗೊತ್ತಿಲ್ಲ ಎಂದರೆ ಹೀಗಾಗಬೇಕಲ್ಲವೇ. ಆಮೇಲೆ ಅದಕ್ಕೆ ಕನ್ನಡದಲ್ಲಿ ಏನೆನ್ನುತ್ತಾರೆ ಎನ್ನುವ ಹುಡುಕಾಟ ಕೂಡಾ ನಡೆಸಿದೆ. ಪೂರ್ಣ ಚಂದ್ರ ತೇಜಸ್ವಿಯವರ ಯಾವುದೋ ಪುಸ್ತಕದಲ್ಲಿ ಅದರ ಹೆಸರು ಕಂದು ತಲೆಯ ಸಿಳ್ಳಾರ ಎಂದು ತಿಳಿಯಿತು.

ಈ ಜಾತಿಯ ಹಕ್ಕಿಗಳು ನಾಚಿಕೆ ಸ್ವಭಾವದ ಮತ್ತು ಪುಕ್ಕಲು ಸ್ವಭಾವದ ಹಕ್ಕಿಗಳಾಗಿದ್ದು, ಗುಂಪಾಗಿ ಕಂಡು ಬರುವುದು ಅತಿ ವಿರಳ. ಮಧ್ಯಮ ಗಾತ್ರದ ಮರ, ಕೋಕೋ ಗಿಡ ಜಾಯಿಕಾಯಿ ಗಿಡ, ದಾಲ್ಚಿನ್ನಿ ಗಿಡ ಕಾಫಿ ಗಿಡದಳಲ್ಲಿ ಇವುಗಳ ಗೂಡು. ಗಂಡು ಮತ್ತು ಹೆಣ್ಣು ಹಕ್ಕಿ ಎರಡೂ ಸೇರಿ ಗೂಡು ಕಟ್ಟುತ್ತವೆ. ಇವುಗಳು ಗೂಡು ಕಟ್ಟುವುದು ಮರದ ಹೆಣಿಕೆ, ಕಳೆಗಿಡ ಮತ್ತು ಎಲೆಗಳಿಂದ. ಮಳೆಗಾಗಿ ಕಾಯುವ ಚಾತಕ ಪಕ್ಷಿಗಳ (pied cuckoo) ಬಗೆಗೆ ಯಾರು ತಾನೇ ತಿಳಿದಿಲ್ಲ? ಈ ಚಾತಕ ಪಕ್ಷಿಗಳು ತಮ್ಮ ಮೊಟ್ಟೆಗಳನ್ನಿಡುವುದು ಸಿಳ್ಳಾರದ ಗೂಡಿನಲ್ಲಿ. ಸಿಳ್ಳಾರಗಳು ಅವುಗಳನ್ನು ಮರಿ ಮಾಡಿ ನಂತರ ಗುಟುಕಿತ್ತು ಪೋಷಿಸುತ್ತವೆ ಕೂಡಾ.

ಆಹಾರ ಸೇವನೆಯಲ್ಲಿ ಸಿಳ್ಳಾರದ ಮರಿಗಳು ಚಾತಕದ ಮರಿಗಳೊಡನೆ ಸ್ಪರ್ಧಿಸಲಾಗದೆ ಆಹಾರ ಕಡಿಮೆಯಾಗಿ ಸಾಯುತ್ತವೆ. ತನ್ನ ಮರಿಗಳು ಪರರ ಮರಿಗಳು ಎನ್ನುವ ಭೇದವಿಲ್ಲದೆ ಬೆಳೆಸುವ ಈ ಪಕ್ಷಿಗಳು, ತಮ್ಮ ಮರಿಗಳನ್ನು ಬಲಿಗೊಟ್ಟು ಚಾತಕದ ಮರಿಗಳನ್ನು ಪೋಷಿಸುವುದು ಪ್ರಕೃತಿಯ ಕ್ರೌರ್ಯವೋ ಅಥವಾ ವಿಪರ್ಯಾಸವೋ ಅಥವಾ ಪ್ರಕೃತಿಯ ನಿಯಮವೋ ಒಟ್ಟಿನಲ್ಲಿ ಸೋಜಿಗ. ಸಿಳ್ಳಾರಗಳು ಉಭಯಭಕ್ಷಕಗಳು.



ಮೆಜಾರಿಟಿ ಪ್ರಶ್ನೆಯಿಂದ ಕಾಗೆ ರಾಷ್ಟ್ರಪಕ್ಷಿಯಾಗಬೇಕು ಎನ್ನುವ ಬುದ್ಧಿಜೀವಿಗಳೇ, ಈ ಹಕ್ಕಿಗಳು ಕೇಸರಿ ಬಣ್ಣದಲ್ಲಿ ಇವೆ ಎಂದು ಗಾಬರಿಯಾಗಬೇಡಿ. ಅಥವಾ ಭಾಜಪ ಇಲ್ಲಿಯೂ ತನ್ನ ಕೇಸರೀಕರಣ ಮಾಡಿದೆ ಎನ್ನುವ ಬಾಲಿಶದ ಮಾತಾಡಬೇಡಿ. ಸಿಳ್ಳಾರ ಆ ಬಣ್ಣದಲ್ಲಿರುವುದು ಪ್ರಕೃತಿ ನಿಯಮ. ಮತ್ತೆ ಈ ಹಕ್ಕಿಗಳನ್ನೂ ನಿಮ್ಮ ಫೇವರಿಟ್ ಬಯ್ಗುಳವಾದ ಬಲಪಂಥೀಯ ಎನ್ನಬೇಡಿ. ಇನ್ನೂ ಸ್ಪಷ್ಟವಾಗಿ ಹೇಳುವುದಾದರೆ ನಿಮ್ಮ ಅಪಸವ್ಯಗಳನ್ನು ಪ್ರಕೃತಿಯ ಕಡೆ ತರಬೇಡಿ. ಇದು ಕೇಸರಿ ಬಣ್ಣದಲ್ಲಿರುವುದೇ ಇದರ ಧರ್ಮ. ಅದೇ ಪ್ರಕೃತಿ ನಿಯಮ.



#ಪಕ್ಷಿ_ವಾಚನ







No comments:

Post a Comment