Monday, August 20, 2018

ಸಿಳ್ಳೆ ಬಾತು

ನೀರಿನಲ್ಲಿರುವ ಯಾವುದೇ ಪಕ್ಷಿ ಇರಲಿ, ಅದನ್ನು ಬಾತುಕೋಳಿ ಎನ್ನುವ ಸಾಮಾನ್ಯ ವರ್ಗಕ್ಕೆ ಸೇರಿಸಿ ಅದನ್ನು ಅದೇ ಹೆಸರಿನಿಂದ ಕರೆಯುವುದು ವಾಡಿಕೆ. ವಿಶೇಷ ಎಂದರೆ, ಹಂಸಗಳೂ ವಾಸಿಸುವುದು ನೀರಿನಲ್ಲೇ ಆಗಿದೆ. ಎಲ್ಲರಂತೆ ನಾನೂ ನೀರಿನಲ್ಲಿದ್ದ ಪಕ್ಷಿಗಳೆಲ್ಲವೂ ಬಾತುಕೋಳಿ ಎಂದೇ ಭಾವಿಸಿಕೊಂಡಿದ್ದವ. ಹಿಂದಿ ಕಲಿಯಲೆಂದು ಎಳವೆಯಲ್ಲಿ ಟಿವಿಯಲ್ಲಿ ಬರುತ್ತಿದ್ದ ಡಕ್ ಟೇಲ್ಸ್ ಎನ್ನುವ ಕಾರ್ಟೂನ್ ಧಾರಾವಾಹಿ ಈ ಬಾತುಕೋಳಿಗಳ ಸುತ್ತಲೇ ಸುತ್ತಿದ್ದು ಒಂದು ರೀತಿಯಲ್ಲಿ ಮಜಾ ಅನ್ನಿಸುತ್ತದೆ ಈಗ. ಡಕ್ ಬರ್ಗ್ ಎನ್ನುವ ಕಾಲ್ಪನಿಕ ನಗರದಲ್ಲಿ ಬಾತುಗಳೇ ನಾಗರೀಕರು. ಅಂಕಲ್ ಸ್ಕ್ರೂಜ಼್ ಎನ್ನುವ ಒಂದು ಧನಿಕ ಶ್ರೀಮಂತ ಬಾತುಕೋಳಿ, ಹ್ಯೂಯಿ ಡ್ಯೂಯಿ ಮತ್ತು ಲೂಯಿ ಎನ್ನುವ ಮೂರು ಬಾತು ಮರಿಗಳ ಕತೆ ಅದು. ತನ್ನ ಜಿಪುಣತನ ಮತ್ತು ಧನದಾಸೆಯಿಂದ ಅಂಕಲ್ ಸ್ಕ್ರೂಜ಼್ ಆಪತ್ತುಗಳನ್ನು ಮೈ ಮೇಲೆ ಎಳೆದುಕೊಂಡು ಒದ್ದಾಡುತ್ತಿದ್ದರೆ, ಮೂರು ಕಿಶೋರ ಬಾತುಗಳು ತಮ್ಮ ಬುದ್ಧಿಮತ್ತೆಯಿಂದ ಆ ಬಾತುವನ್ನು ಬಚಾವು ಮಾಡುತ್ತಿದ್ದವು. ಹಾಗೆ ಬಚಾವು ಮಾಡುವಾಗ ಆ ಬಾತುಗಳು ಒಮ್ಮೊಮ್ಮೆ ವಿಮಾನವೊಂದನ್ನು ಬಳಸುತ್ತಿದ್ದವು. ಆಗ ನನಗೆ, ಬಾತುಗಳು ನೀರಿನಲ್ಲೇ ಬದುಕುತ್ತವೆ. ಅವಕ್ಕೆ ರೆಕ್ಕೆ ಇದ್ದರೂ ಹಾರುವುದಿಲ್ಲ ಎನ್ನುವ ಹುಚ್ಚು ಕಲ್ಪನೆ ಬಂದಿತ್ತು. ಅದಕ್ಕೆ ಇಂಬಾಗಿ ಶಾಲೆಯಲ್ಲಿ ಅಂಗರಚನೆಗಳ ಬಗೆಗೆ ಕಲಿಸುವಾಗ, ಬಾತುಕೋಳಿಗಳ ಜಾಲಪಾದದ ವೈಶಿಷ್ಠ್ಯ ಅತಿಯಾಗಿ ಚಿತ್ರಿತವಾಗಿದ್ದು.

ಮುಂದೆ ಕ್ರಿಕೆಟ್ ನೋಡತೊಡಗಿದಮೇಲೆ, ಇ ಎಸ್ ಪಿ ಎನ್ ಅವರು ತೋರಿಸುವ ಸ್ಕೋರ್ ಬೋರ್ಡಿನಲ್ಲಿ ಯಾರದರೂ ಆಟಗಾರ ಸೊನ್ನೆಗೆ ಔಟ್ ಆದಾಗ ಸ್ಕೋರ್ ಜಾಗದಲ್ಲಿ ಒಂದು ಬಾತುಕೋಳಿಯನ್ನು ತೋರಿಸುತ್ತಿದ್ದರು. ಆಗ ತಿಳಿದದ್ದು ಸೊನ್ನೆಗೆ ಔಟ್ ಆದರೆ ಅದನ್ನು ಡಕ್ ಔಟ್ ಎನ್ನುತ್ತಾರೆ ಎಂದು. ಗೊತ್ತಾದ ಪರಿಣಾಮ, ಕ್ರಿಕೆಟ್ಟಿನಲ್ಲಿ ನನ್ನ ಸ್ಕೋರ್ ಆ ಸಂಖ್ಯೆಯೇ ಆಗುತ್ತಿತ್ತು ಹೆಚ್ಚಿನ ಸಲ. ಆದರೆ ಈ ಸಂಗತಿಯ ಹಿಂದೆ ಕೂಡಾ ಒಂದು ರಾಜ ಮನೆತನದ ಕೊಡುಗೆ ಇದೆ ಎಂದರೆ ನಂಬಲೇ ಬೇಕು. ಇಂಗ್ಲೆಂಡಿನ ರಾಜಕುಮಾರನೊಬ್ಬ ಮೈದಾನದಲ್ಲಿ ಶೂನ್ಯ ಸಂಪಾದನೆ ಮಾಇ ಹಿಂದಿರುಗಿದ್ದಕ್ಕೆ ಅಲ್ಲಿನ ಪತ್ರಿಕೆ " ಬಾತುಕೋಳಿಯೊಂದಿಗೆ ಪೆವಿಲಿಯನ್ನಿಗೆ ಬಂದ ರಾಜಕುಮಾರ" ಎನ್ನುವ ವಾಕ್ಯವನ್ನು ಬರೆದಿತ್ತಂತೆ. ಇದಕ್ಕೆ ಕಾರಣ ಬಾತುಕೋಳಿಯ ಮೊಟ್ಟೆಯಾಕಾರ. ಎಲ್ಲಾ ಮೊಟ್ಟೆಗಳೂ ಅದೇ ಆಕಾರದಲ್ಲಿದ್ದರೂ, ಬಾತಿನ ಮೊಟ್ಟೆ ಆಯ್ದಿದ್ದು ಯಾಕೋ? ಕೋಳಿ ಮೊದಲೋ ಮೊಟ್ಟೆ ಮೊದಲೋ ಎನ್ನುವಷ್ಟೇ ರಹಸ್ಯದ ವಿಚಾರ.

ಹೆಗಲ ಮೇಲೆ ಮೂರನೇ ಕಣ್ಣು-ಅದೇ ಕ್ಯಾಮರಾ.. ಬಂದ ಮೇಲೆ ನೀರಿನಲ್ಲಿ ಬಿಂಬಗಳ, ವಕ್ರೀಭವನದ ಚಿತ್ರಗಳನ್ನು ತೆಗೆಯುವ ತಲುಬು ಹತ್ತಿಕೊಂಡಿತು. ಅದಕ್ಕೆ ನಾನು ಓಡಿದ್ದು, ನಮ್ಮೂರ ಸಮೀಪದ ಚಿಪ್ಪಳಿ ಕೆರೆಗೆ. ಆದರೆ ಅಲ್ಲಿ ಇದ್ದ ಮೀಂಚುಳ್ಳಿ ಮತ್ತು ಬಾತುಗಳ್ ನನ್ನ ಈ ತಲುಬನ್ನು ತಮ್ಮೆಡೆಗೆ ಸೆಳೆದು, ತಲುಬನ್ನು ತಲುಬಾಗಿಯೇ ಇಟ್ಟುಬಿಟ್ಟವು. ಹಕ್ಕಿಗಳ ಚಿತ್ರಗಳತ್ತ ಒಲವು ಬಂದ ಮೇಲಂತೂ ಚಿಪ್ಪಳಿ ಕೆರೆ ನನ್ನ ಪಾಲಿಗೆ ಅಕ್ಷಯ ಪಾತ್ರೆಯಾಗಿ ಹೋಯಿತು. ಅದೇ ನನ್ನ ಪಾಲಿಗೆ ಮಾನಸ ಸರೋವರವೂ ಆಯಿತು. ಮನಿಸ್ಸಿನ ಆಸೆಯನ್ನು ಈಡೇರಿಸಿ ಅಲಿ ಪ್ರಫುಲ್ಲತೆ ಸಂತಸಗಳನ್ನು ಉಂಟು ಮಾಡುವುದು ಮಾನಸ ಸರೋವರವೇ ಅಲ್ಲವೇ? ಆ ಚಿತ್ರಗಳನ್ನು ನೋಡುತ್ತಾ ಹೋದಂತೆ ಒಂದು ಹೊಸ ಜಗತ್ತೇ ನನ್ನೆದುರಿಗೆ ತೆರೆದುಕೊಳ್ಳುತ್ತಾ ಹೋಯಿತು. ಒಂದೊಂದು ಬಾತುವೂ ಒಂದೊಂದು ರೀತಿ. ಒಂದರ ಕೊಕ್ಕು ವಿಶೇಷವಾಗಿದ್ದರೆ ಮತ್ತೊಂದರ ರೆಕ್ಕೆ ಚನ್ನ. ಇನ್ನೊಂದರ ಕುತ್ತಿಗೆ ಉದ್ದವಾದರೆ ಮತ್ತೊಂದರ ಕೂಗು ವಿಚಿತ್ರ. ಆಗ ಇವುಗಳೆಲ್ಲದರ ಹೆಸರು ತಿಳಿಯಲು ಫೋಟೋಗಳನ್ನು ಮುಖ ಪುಸ್ತಕದ ಹಕ್ಕಿಗಳ ಗುಂಪಿಗೆ ಹಾಕಿ ಪ್ರಶ್ನೆ ಕೇಳಿದ್ದೂ ಆಯಿತು. ಹಾಗೆ ನಾನು ತಿಳಿದುಕೊಂಡ ಒಂದು ಹಕ್ಕಿ, lesser whistling duck ಅಥವಾ ಸಿಳ್ಳೆ ಬಾತು.

ಹೆಸರೇ ಹೇಳುವಂತೆ, ಇವು ಸಿಳ್ಳೆ ಹೊಡೆಯುವ ಬಾತುಗಳು. ಆದರೆ ಮನುಷ್ಯರಂತೆ ಯಾವುದೋ ಟಪಾಂಗುಚ್ಚಿ ಡ್ಯಾನ್ಸ್ ಅಥವಾ ಯಾವುದೋ ಢಿಂಕ್ ಚಕ್ ಹಾಡಿಗಲ್ಲ. ಸಿಳ್ಳೆ ಇವುಗಳ ಭಾಷೆ. ಇನ್ನಿತರ ಬಾತುಗಳಂತೆ ಕ್ವಾಕ್ ಕ್ವಾಕ್ ಕ್ವಾಕ್ ಎಂದು ಕೂಗುವುದಿಲ್ಲ. ಮರದ ಪೊಟರೆಗಳೇ ಇವುಗಳ ಗೂಡುಗಳು. ಅದಕ್ಕಾಗಿ ಇವುಗಳನ್ನು ಮರದ ಬಾತುಗಳು ಎಂದೂ ಕರೆಯುತ್ತಾರೆ. ಇವು ರಾತ್ರಿಕಾಲ ಭಕ್ಷಕಗಳು. ಹಗಲು ಹೊತ್ತಿನಲ್ಲಿ ಗದ್ದೆಯ ಬದುವಿನಲ್ಲೋ ಕೆರೆಯಲ್ಲೋ ಕೆರೆಯ ದಡಗಳಲ್ಲೋ ಇರುವ ಈ ಬಾತುಗಳು ಹೊತ್ತು ಇಳಿಯುತ್ತಿದ್ದಂತೆ ನೀರಿಗಿಳಿದು ತಮ್ಮ ಹೊಟ್ಟೆಗೆ ಆಹಾರ ಇಳಿಸಲು ಸನ್ನದ್ಧವಾಗುತ್ತವೆ. ಕಪ್ಪೆ, ಹುಳುಗಳು, ಜಲಚರಗಳು ಮತ್ತು ಅಕಷೇರುಕಗಳು ಇವುಗಳ ಆಹಾರ.

ಲವ್ ಮಾಡಿ ಎಲ್ಲರೂ ಮುಳುಗಿದರೆ, ಅಥವಾ ಎಲ್ಲರೂ ಪ್ರೇಮ ಸಾಗರದಲ್ಲಿ ಈಜಾಡಿದರೆ, ಇವು ನೀರಿಗೆ ಹಾರಿ ತಮ್ಮ ಈಜುವ ಪ್ರತಿಭೆಯಿಮ್ದ ಸಂಗಾತಿಗಳನ್ನು ಸೆಳೆಯುತ್ತವೆ. ಬಿಡಿ. ಹುಡುಗಿಯರನ್ನು ಪಟಾಯಿಸುವುದು ಇವುಗಳಲ್ಲಿ ಮನುಷ್ಯರಿಗಿಮ್ತಲೂ ಕಷ್ಟ ಎಂದಾಯಿತಲ್ಲ. ಮಾನ್ಸೂನ್ ಕಾಲದಲ್ಲಿ ಇವುಗಳ ಸಂತಾನೋತ್ಪತ್ತಿ. ಬೇಸಿಗೆಯಲ್ಲೆಲ್ಲಾ ಭಾರತ್ದ ಉತ್ತರ ಭಾಗದಲ್ಲಿರುವ ಈ ಹಕ್ಕಿಗಳು ಚಳಿಗಾಲದಲ್ಲಿ ದಕ್ಷಿಣದ ಕಡೆ ವಲಸೆ ಪ್ರಾರಂಭಿಸುತ್ತವೆ. ಹಾಗೆ ಚಳಿಗಾಲದಲ್ಲಿಯೇ ನನಗೆ ಸಿಕ್ಕವು ಈ ಚಿತ್ರಗಳು.

ದುಃಖದ ಸಂಗತಿ ಎಂದರೆ ಇವುಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಇದು ಮುಂದುವರೆದರೆ ಈ ಡಕ್ ಗಳ ಸಂಖ್ಯೆಯೇ ಡಕ್ () ಆಗಿಬಿಡುತ್ತದೆ. ಕಾರಣ ಹಲವು. ಆಹಾರಕ್ಕಾಗಿ ಇವುಗಳ ಬೇಟೆ, ರಾಸಾಯನಿಕಗಳು, ಮುಚ್ಚುತ್ತಿರುವ ಕೆರೆಗಳು, ಕಡಿಮೆಯಾಗುತ್ತಿರುವ ಭತ್ತದ ಗದ್ದೆಗಳು, ನಾವು ನೀವೆಲ್ಲರೂ ಇದಕ್ಕೆ ಕಾರಣ. ಇವುಗಳ ಸಂತತಿ ಬೆಳೆಯಲು ನಾವು ಕೆರೆಗಳನ್ನು ಕಾಪಾಡಬೇಕಿದೆ. ಇಲ್ಲವಾದಲ್ಲಿ, ಡೊನಾಲ್ಡ್ ಡಕ್ ಮತ್ತು ಡೈಸಿ ಡಕ್ ಅಂತೆಯೇ ಇವು ಕೂಡಾ ಕಾಲ್ಪನಿಕ ಎನ್ನುವ ತೀರ್ಮಾನನ್ಕ್ಕೆ ನಮ್ಮ ಮುಂದಿನ ಪೀಳಿಗೆ ಬಂದೀತು. ಮತ್ತೆ ಇವೇನು ಮನುಷ್ಯರಲ್ಲವಲ್ಲ, ಡಕ್ ಬರ್ಗ್ ಎನ್ನುವ ನಗರಿ ಮಾಡಿಕೊಳ್ಳಲು. ಮನುಷ್ಯರಾದ ನಾವು ಇವುಗಳಿಗಾಗಿಯೇ ಬದುಕುವ ಅವಶ್ಯಕತೆ ಖಂಡಿತ ಇಲ್ಲ. ಆದರೆ ಇವುಗಳೊಂದಿಗೆ ಬದುಕುವುದು ಅಗತ್ಯ. ನಮ್ಮ ಒಳ್ಳೆಯದಕ್ಕೂ ಸಹ. ಹೆಚ್ಚುತ್ತಿರುವ ಕೀಟ ಬಾದ್ಧೆಗೆ ಈ ಹಕ್ಕಿಗಳು ಪರಿಹಾರ ಎಂದು ಯಾವುದೋ ವಿದೇಶೀ ವಿಜ್ಞಾನಿ ಹೇಳಿ ನಂತರ ನಾವು ಪಶ್ಚಾತ್ತಾಪ ಪಡುವ ಬದಲು ಈಗಲೇ ಎಚ್ಚೆತ್ತುಕೊಂಡರೆ, ಒಳ್ಳೆಯದಲ್ಲವೇ? ಇಲ್ಲವಾದಲ್ಲಿ ಕಾಲ ತಾನೇ ಸರಿ ಮಾಡುತ್ತದೆ- ಅತಿವೃಷ್ಟಿ ಮತ್ತು ಅನಾವೃಷ್ಟಿ ಮೊದಲಾದ ಪ್ರಾಕೃತಿಕ ವಿಕೋಪಗಳ ಚಿಕಿತ್ಸೆಯಿಂದ. ಅದಕ್ಕೂ ಮೊದಲು ಇವುಗಳೊಂದಿಗೆ ಬದುಕೋಣ. ಕೆರೆಗಳನ್ನು ಮಲಿನ ಮಾಡದೆಯೇ ಇರೋಣ.



#ಪಕ್ಷಿ_ವಾಚನ









No comments:

Post a Comment