Tuesday, August 21, 2018

ಶ್ವಾನ ಸಂಶೋಧನೆ

ಊರಿಗೆ ರಜೆ ಕಳೆಯಲೆಂದು ಗಣೇಶ ಬಂದ ಸುದ್ದಿ ಅದು ಹೇಗೋ ವಿಶ್ವಣ್ಣನ ಕಿವಿಗೆ ಬಿತ್ತು. ಅಮೆರಿಕಾದಿಂದ ಬಂದ ಗಣೇಶನೇ ತನ್ನನ್ನು ಹೊಗಳಿದರೆ ಬಲು ಸೊಗಸು ಎಂದುಕೊಂಡದ್ದೂ ಆಯಿತು. ಅವನ ಬಳಿ ಹೊಗಳಿಇಕೊಳ್ಳಲು ಸ್ಕೆಚ್ ಹಾಕತೊಡಗಿದ್ದ. ಆದರೆ, ಇವನ ಪ್ರಾರಬ್ಧ. ಏನು ಮಾಡಿದರೆ ಹೊಗಳಿಸಿಕೊಳ್ಳಬಹುದು ಎಂದು ಎಷ್ಟು ಯೋಚಿಸಿದರೂ ಉಪಾಯ ಹೊಳೆಯುತ್ತಿರಲಿಲ್ಲ. ಅದು ಅವನ ತಪ್ಪಲ್ಲ ಬಿಡಿ. ಉಳಿದವರು ಮಾಡಿದ್ದೆಲ್ಲಾ ತಪ್ಪು ಎಂದು ತಾನು ಆಡಿಯಾಗಿತ್ತು. ಈಗ ಅದನ್ನು ತಾನೇ ಮಾಡಿದರೆ.... ಮತ್ತೆ ಯಾರಾದರೂ ಅದನ್ನು ಮಾಡಿದಾಗ ತಾನು ಹೇಳ ಹೊರಟಾಗ ಅವರು "ನೀ ಮಾಡ್ಲ್ಯಾ" ಅಂದು ಬಿಟ್ಟರೆ... ಮರ್ಯಾದೆ ಪ್ರಶ್ನೆ. ಹೀಗೆ ಮರ್ಯಾದೆ ಪ್ರಶ್ನೆ ಅಡ್ಡ ಬಂದು ಆತನ ತಲೆಯೊಳಗೆ ಹೊಕ್ಕ ಪ್ರಶ್ನೆಗೆ ಉತ್ತರ ಹೊಳೆಯಲೇ ಇಲ್ಲ.

ಹೀಗೆ ಪ್ರಶ್ನೆಗೆ ಉತ್ತರ ಹುಡುಕುತ್ತಿರಬೇಕಾದರೆ, ಗಣೇಶನ ಸವಾರಿ ವಾಕಿಂಗಿಗೆಂದು ವಿಶ್ವಣ್ಣನ ಮನೆ ಕಡೆ ಚಿತ್ತೈಸಿತು. ಡೈರಿಗೆ ಹಾಲು ಕೊಡಲೆಂದು ಹೋದ ವಿಶ್ವಣ್ಣ ತಿರುಗಿ ಬರುತ್ತಿದ್ದ ಹೊತ್ತಿನಲ್ಲಿ. ವಿಶ್ವಣ್ಣನಿಗಾದ ಸಂಕಟ ಅವನಿಗೇ ಗೊತ್ತು. ಅಮೆರಿಕಾದಿಂದ ಬಂದ ತನ್ನೆದುರಿಗೇ ಚಡ್ಡಿ ಬಿಚ್ಚಿ ಚೊಣ್ಣ ತೊಟ್ಟ ಮಾಣಿ ಎದುರಿನಲ್ಲಿ ತಾನೊಂದು ಲುಂಗಿ ಉಟ್ಟು, ಕೈನಲ್ಲಿ ಕ್ಯಾನ್ ಹಿಡಿದು ಪಕ್ಕಾ ಹಳ್ಳಿ ಹೈಗನಂತೆ ಕಾಣಿಸಿಕೊಳ್ಳಬೇಕಾಯಿತಲ್ಲ. ತಲೆ ಕೆಡಿಸಿಕೊಂಡು ಬಿಟ್ಟ ವಿಶ್ವಣ್ಣ. ತನ್ನ ಮರ್ಯಾದೆ ಹೋದ ಸಂಕಟ ಒಂದು ಕಡೆಯಾದರೆ, ತನ್ನೆದುರೇ ಬೆಳೆದು ದೊಡ್ಡವನಾದವ ಬಹಳ ದೊಡ್ಡವನಾಗಿದ್ದು ಇನ್ನೊಂದು ರೀತಿಯ ಸಂಕಟ. ಹೀಗೆ ಸಂಕಟ ಪಡುತ್ತಿದ್ದಂತೆಯೇ, ಗಣೇಶ ವಿಶ್ವಣ್ಣನೆಡೆಗೆ, ಕೈ ಬೀಸಿ "ಹೋ ವಿಶ್ವಣ್ಣ.. ಅರಾಮಿದ್ಯಾ.. ಹಾಲು ಕೊಡಕ್ಕೆ ಹೋಗಿದ್ಯಾ..." ಎಂದು ವಿಶ್ವಾಸದ ಮಾತಾಡಿದ.

"ಮತ್ತೆ ಯಂಗ ಎಂತ ಅಮೇರಿಕಾದಾಗಿದ್ವನಾ, ಆಪೀಸಿಗೆ ಹೋಗಕ್ಕೆ...?!" ಎಂದ ವಿಶ್ವಣ್ಣ. ಒಳಗಿಂದೊಳಗೆ ಸಮಾಧಾನವಾಗಿತ್ತು., ಗಣೇಶ ತನ್ನನ್ನು ಗುರುತು ಹಿಡಿದು ಮಾತಾಡಿಸಿದ್ದಕ್ಕೆ.

"ಇಲ್ಲಿ ನಿಂಗ ಹಾಲು ಕೊಡದಕ್ಕೆ ಜನ ಒಳ್ಳೆ ಹಾಲಾದ್ರೂ ಕುಡಿತ. ನಮಗೆ ಅಲ್ಲಿ ಕುಚ್ಚಿ ಬತ್ತಿಸಿದ ಹಾಲು ಇಲ್ಲದೇ ಇದ್ರೆ ಪೌಡರೇ ಗತಿ. ನಿಂಗಳನ್ನೆಲ್ಲ ನೋಡಿರೆ ಗ್ರೇಟ್ ಅನ್ನಸ್ತು. ವಾಪಾಸ್ ಬಪ್ಪನ ಅನ್ನಸ್ತು. ಆದ್ರೆ, ಅಲ್ಲಿ ಕೆಲಸ ಬಿಡಕ್ಕೂ ಸ್ವಲ್ಪ ಸಮಸ್ಯೆ ಇದ್ದು. ಅಪ್ಪಿ ಹೈಸ್ಕೂಲಿಗೆ ಬಂದ ಕೂಡಲೇ ಆನೂ ಊರಿಗೆ ಬಪ್ಪವನೇಯ. ಇಲ್ಲಿ ತ್ವಾಟ-ಆಟ-ಡೈರಿ ಎಲ್ಲಾ ಮಾಡ್ಕಂಡು ಇದ್ಬುಡ್ತಿ.." ಎಂದ ಗಣೇಶ.

ಇಷ್ಟಾಗಿದ್ದೇ ತಡ ನೋಡಿ. ವಿಶ್ವಣ್ಣನ ತಲೆ ತುಂಬಾ ಕೂದಲಿನಷ್ಟೇ ಕೋಡಾಗಿ ಹೋಯ್ತು. ತಾನು ಮಾಡುತ್ತಿರುವ ಕೆಲಸವನ್ನೇ ಅಮೆರಿಕಕ್ಕೆ ಹೋಗಿರುವ ಗಣೇಶ ಹೊಗಳುತ್ತಿದ್ದಾನೆ. ಯಾವಾತನೆದುರಿಗೆ ತನ್ನ ಪರಿಸ್ಥಿತಿ ಮುಜುಗರ ತಂದಿತ್ತೋ ಆ ವ್ಯಕ್ತಿ ಅದೇ ಕೆಲಸವನ್ನು ಮಾಡಲು ಆಸೆ ಪಡುತ್ತಿದ್ದಾನೆ. ವಿಶೇಷ ಎಂದರೆ ತಲೆ ಮೇಲಷ್ಟೇ ಕೋಡು ಬಂದಿದ್ದು, ಬೇರೆ ಕಡೆ ಬಾರದೇ ಇದ್ದದ್ದು. ಈಗ ವಿಶ್ವಣ್ಣನ ಯೋಚನಾ ಲಹರಿಯೇ ಬೇರೆ ಕಡೆ ಹರಿಯಿತು. ಈ ಗಣೇಶನಿಗೆ ತಾನೊಬ್ಬ ಬುದ್ಧಿವಂತ ಅಂತ ತೋರಿಸಿ, ಊರೆಲ್ಲಾ ಅದು ಗೊತ್ತಾದರೆ ಸಾಕು. ಇನ್ನು ಹರಕು ಬಾಯಿ ಶುಕ್ರನಿಗೆ ನಿನ್ನೆಯೇ ಸುಪಾರಿ ಕೊಟ್ಟಾಗಿದೆ. ಸಾಕು. ಇಷ್ಟು ಸಾಕು. ತನ್ನ ಜೀವನ ಸಾರ್ಥಕವಾಗಲು ಎಂದು ಭಾವಿಸಿದ.

"ಅಲ್ದಾ ಗಣೂ ಈ ಬದಿಗೆಂತ ಇವತ್ತು ಅದೂ ಬೆಳ್ಗೆ ಮುಂಚೆ ಕಂಪ್ಯೂಟರ್ ಏನಾದ್ರೂ ಬೇಕಿತ್ತಾ?! ಯಂದಿದ್ದು. "

"ಕಂಪ್ಯೂಟರ್ ಈಗೆಂತಕ್ಕಾ?"

"ಅಲ್ದಾ.. ನೀ ಕೆಲಸ ಮಾಡಕ್ಕೆ ಬ್ಯಾಡದಾ?!"

"ನಾನು ರಜೆಲಿದ್ದಿ. ಅರ್ಜೆಂಟ್ ಇದ್ರೆ ಮನೆಲಿದ್ದು ಸಾಕು. ಮತ್ತೀಗ ಅಲ್ಲಿ ರಾತ್ರಿಯಲ. ತೊಂದ್ರೆ ಇಲ್ಲೆ."

ಪಿಚ್ಚೆನ್ನಿಸಿ ಹೋಯಿತು ವಿಶ್ವನಿಗೆ. ತಾನು ಹಾಕಿದ ಸ್ಕೆಚ್ ಎಲ್ಲಾ ನೀರಲ್ಲಿ ಹೋಮ ಮಾಡಿದಂತಾಯ್ತಲ್ಲಾ ಎಂದು. ಅಷ್ಟರಲ್ಲಿ ಗಣೇಶನೇ ಬಾಯ್ದೆಗೆದ.

"ಅದೂ ಇಷ್ಟು ದಿನ ಮೂಡು ಗುಡ್ಡೆ ಬದಿಗೆ ವಾಕಿಂಗ್ ಹೋಗ್ತಿದ್ದಿ. ಆದ್ರೆ, ಅಲ್ಲಿ ರೈತರ ಕೇರಿ ನಾಯಿ ಕಾಟ ಮಾರಾಯ. ಹಾಳು ಬಗ್ಗಿ ನಾಯಿ ಮೈ ಮೇಲೇ ಬತ್ತ. ಸಹವಾಸಲ್ಲ" ಎಂದ.

ಈಗ ವಿಶ್ವನಿಗೆ ಲೈಟ್ ಹತ್ತಿಯೇ ಬಿಟ್ಟಿತು. ರೈಲು ಓಡತೊಡಗಿತು.

"ಏ ಎಂತ ಗಣೂ ನೀನು. ಅದನ್ನ ಬಗ್ಗಿ ಕುನ್ನಿ ಅಂತ ತಾತ್ಸಾರ ಮಾಡದಲ್ಲ. ಎಂಥಾ ವಿಶೇಷ ನಾಯಿ ಗೊತ್ತಿದ್ದ ಅದೆಲ್ಲ. ನಿಂಗ ಬರೇ ಫಾರಿನ್ನಾಗಿ ಹೋಯ್ದಿ. ಇಲ್ಲಿಪ್ಪವ್ವೇ ಆಯ್ದ. ನೀ ಆಗದೆ ಎಂತ ಇನ್ನು. ನಮ್ಮ ವಿಜ್ಞಾನಿಗಳು ಬರೇ ಬ್ಯಾರೇದ್ರ ಮೇಲೆ ರಿಸರ್ಚ್ ಮಾಡದೇ ಆತು. ಈ ನಾಯಿಗಳ ಬಗ್ಗೆ ಮಾಡ್ಲೆ ಹಂಗಾಗಿ ನಿಂಗಕ್ಕೆ ಗೊತ್ತಿಲ್ಲೆ."

ಗಣೇಶ ಕಣ್ಣರಳಿಸಿ, ಅಚ್ಚರಿಭರಿತನಾಗಿ ನೋಡುತ್ತಾ ವಿಶ್ವಣ್ಣನ ವಿಲಾಪ ಪ್ರಲಾಪಗಳನ್ನು ಕೇಳುತ್ತಲೇ ಇದ್ದ. ವಿಶ್ವಣ್ಣ ಉಸಿರು ತೆಗೆದು ಮುಂದುವರೆಸಿದ.

"ಇಲ್ಲಿ ಸಾಗರದಾಗೆ ಒಬ್ಬವ ಬ್ರಿಟಿಷ್ ತಹಸೀಲ್ದಾರ್ ಇದ್ದಿದ್ನಡ. ಅವ ಈ ನಾಯಿಗೂ ಜಾತಿ ಇದ್ದು. ಅದು ನಾಯಿ ಜಾತಿಯಲ್ಲ, ಅದು ಬೀದಿ ನಾಯಿ ಹೇಳಿ ಕರೆಸ್ಕಳದಲ್ಲ. ಅದಕ್ಕೂ ಕ್ವಾಲಿಟಿ ಇದ್ದು ಅಂತೆಲ್ಲಾ ಬರೆದಿಟ್ಟಿದ್ದ. ನಿಮ್ಮನೆ ಶೇಷಜ್ಜನೇ ಹೆಳಿದ್ದು. ಅವ ಮೇಷ್ಟ್ರಾಗಿದ್ನಲ ಅವಾಗಲೇ ಅವಂಗೆ ಗೊತ್ತಿದ್ದು. ಆದ್ರೆ ಈಗ ಅವಂಗೆ ಕಿಮಿ ಕೇಳ್ತಲ್ಲೆ. ವಯಸ್ಸಿನ ಪ್ರಭಾವ ಬಿಡು. ಹಾಂ ಈ ನಾಯಿ ಸ್ಟ್ರೀಟ್ ಹೌಂಡ್ ಜಾತಿಗೆ ಸೇರಿದ್ದು" ಎಂದು ವಿಶ್ವಣ್ಣನ ಪ್ರಲಾಪ ಮುಗಿಯಿತು. ಗಣೇಶನೂ ಕಣ್ಣರಳಿಸಿ ಹುಬ್ಬೇರಿಸಿ "..." ಎನ್ನುವ ಉದ್ಗಾರ ತೆಗೆದ.

ಅತ್ತಲಿಂದ ಮೈ ಎಲ್ಲಾ ಮಣ್ಣು ಮಾಡಿಕೊಂಡ ನಾಯಿಯೊಂದು ಬರುತ್ತಿತ್ತು. ಅದನ್ನು ತೋರಿಸಿ ಗಣೇಶ ಎಂದ-"ಅಲ್ನೊಡು ವಿಶ್ವಣ್ಣ- ಮಡ್ ಹೌಂಡ್ ನಾಯಿ ಜಾತಿದು ಅಲ್ದ ಅದು?"

"ಹೌದೌದು ಹೌದೌದು" ಎಂದ ವಿಶ್ವಣ್ಣ, ತನಗೆ ಗಣು ಬುಲೆಟ್ ರೈಲು ಹತ್ತಿಸುತ್ತಿರುವುದು ಗೊತ್ತಾಗದೇ. ಅಷ್ಟರಲ್ಲಿ ಒಂದು ಹಂಡ ಹುಂಡ ನಾಯಿ ಬಂತು. ಅದನ್ನು ತೋರಿಸಿ ಎಂದ-"ಅದೇ ಹಂಡ್ ಡೇನ್" ನಾಯಿ ಜಾತಿದು ಎಂದು ಪೆಕ ಪೆಕನೆ ನಗತೊಡಗಿದ ಗಣೇಶ. ನಗುತ್ತಲೇ, ವಿಶ್ವಣ್ಣನ ಹೆಗಲ ಮೇಲೆ ವಿಶ್ವಾಸದಿಂದ ಕೈ ಹಾಕಿ "ವಿಶ್ವಣ್ಣ ಒಳ್ಳೇ ಜೋಕ್ ಮಾಡ್ತೆ ಮಾರಾಯ. ಯಂಗೆ ಎಂತ ಮರೆತ್ರೂ ಇವತ್ತಿನ ಜೋಕ್ ಮರಿತಲ್ಲೆ" ಎಂದು ನಗುತ್ತಲೇ ಮುಂದಾದ.

ವಿಶ್ವ, ಬದುಕಿದೆಯಾ ಬಡಜೀವವೇ ಎಂದುಕೊಂಡ. ತಾನಾಡಿದ ಸುಳ್ಳನ್ನು ಗಣು ತಮಾಷೆ ಎಂದು ಭಾವಿಸಿದ. ಏನಾದ್ರೂ ತಾನು ಬಿಲ್ಡ್ ಅಪ್ ತಗಳಕ್ಕೆ ಸುಳ್ಳು ಹೇಳಿದ್ದು ಗೊತ್ತಾಗಿದ್ದರೆ, ಕಂಪ್ಯೂಟರಿನಲ್ಲಿ ತಂದ ಮಾನ ನಾಯಿ ಕಾಲ್ದಲ್ಲಿ ಹೋಗ್ತಿತ್ತು. ದೇವರು ದೊಡ್ಡವ ಎಂದುಕೊಂಡು ಮನೆ ಕಡೆ ಬಂದ

#ವಿಶಾರದ_ವಿಶ್ವನಾಥ

No comments:

Post a Comment