Monday, August 27, 2018

ಬಿಳಿಬಾತು


ನಿತ್ಯವೂ ಎದುರಾಗುವ ಅದೆಷ್ಟೋ ಸಂಗತಿಗಳು ನಮಗರಿವಿಲ್ಲದೆಯೇ ನಮ್ಮ ಪಾಲಿಗೆ ಆಕರ್ಷಣೀಯವೂ ಅಪ್ಯಾಯಮಾನವೂ ಆಗುತ್ತವೆ. ನಮಗೇ ಅರಿವಿಲ್ಲದಂತೆ ಒಂದು ರೀತಿಯ ಅಬ್ಸೆಷನ್ ಒಂದು ರೀತಿಯ ಅಡಿಕ್ಷನ್ ಹುಟ್ಟಿಬಿಡುತ್ತದೆ. ನನಗೆ ಈ ರೀತಿಯ ಅಬ್ಸೆಷನ್ ಬೆಳೆದಿದ್ದು ಚಿಪ್ಪಳಿ ಕೆರೆಯ ಬಗ್ಗೆ. ಅದೇನು ಯಾಕೆ ಎನ್ನುವ ಪ್ರಷ್ನೆ ನನ್ನನ್ನು ಎಂದಿಗೂ ಕಾಡಲಿಲ್ಲ ಆದರೆ ಅದಕ್ಕೆ ಉತ್ತರ ಸಿಕ್ಕಿತು. ವಿಶೇಷದ ಸಂಗತಿ ಎಂದರೆ ಆ ಉತ್ತರ ನನಗೆ ಸಿಕ್ಕಿದೆ ಎನ್ನುವುದರ ಅರಿವು ನನ್ನ ಪಾಲಿಗಾಗಿದ್ದು ನಾನು ಹಕ್ಕಿಗಳ ಬಗ್ಗೆ ಬರೆಯಹೊರಟಾಗಿನಿಂದ. ಚಿಪ್ಪಳಿ ಜೆರೆ ನನಗೆ ಆಕರ್ಷಣೀಯವಾಗಿದ್ದು ಅದರಲ್ಲಿ ಆಶ್ರಯ ಪಡೆದ ಹಕ್ಕಿಗಳಿಂದ. ನನಗೆ ಹಕ್ಕಿಗಳ ಚಿತ್ರಗಳ ಕಡೆ ಇದ್ದ ಚಟದಿಂದ.



ಇದೇ ಕೆರೆಯಲ್ಲಿ ಮೀಂಚುಳ್ಳಿ, ಕಳ್ಳಿಪೀರ, ನೀಲಬಕ, ಸಿಳ್ಳೆಬಾತು ಮತ್ತಿತರ ಹಕ್ಕಿಗಳ ಚಿತ್ರವನ್ನು ನಾನು ತೆಗೆಯುತ್ತಲೇ ಛಾಯಾಗ್ರಹಣವನ್ನು ಕಲಿಯುತ್ತಿದ್ದೇನೆ. ಬೇರೆ ಕಡೆಗಳಲ್ಲಿ ತೆಗೆದಿಲ್ಲ ಎಂದಿಲ್ಲ. ಆದರೆ ಇಲ್ಲಿ ಸಿಕ್ಕಷ್ಟು ಹಕ್ಕಿಗಳು ನನಗೆ ಬೇರೆಡೆಯಲ್ಲಿ ಸಿಗಲಿಲ್ಲ. ಮತ್ತೆ ನೀರ ಹಕ್ಕಿಗಳು ಎಂದರೆ ಅದರ ಆಕರ್ಷಣೆಯೇ ಬೇರೆ. ಹಕ್ಕಿಗಳ ಅದೆಷ್ಟು ಚಿತ್ರಗಳನ್ನು ತೆಗೆದರೂ ಹಕ್ಕಿಗಳು ಹಾರುತ್ತಿರುವ ಚಿತ್ರವನ್ನು ತೆಗೆಯಲು ಸಾಧ್ಯವಾಗಿರಲಿಲ್ಲ. ಆದರೆ, ಹಕ್ಕಿಯ ಹಾರಾಟದೊಂದಿಗೆ ಅದರ ಪ್ರತಿಫಲನದ ಚಿತ್ರ ತೆಗೆಯಲು ಸಾಧ್ಯವಾದಾಗ ನನಗಾದ ಸಂತೋಷ ವರ್ಣಿಸಲಸದಳ.ಆ ಅವಕಾಶವನ್ನು ಕೊಟ್ಟಿದ್ದು ಬಿಳಿ ಪಟ್ಟೆ ಬಾತು. ಅದನ್ನೊಮ್ಮೆ ಮುಖಪುಸ್ತಕದಲ್ಲಿ ಹಾಕಿದ್ದೆ. ಆಮೇಲೆ ಹಕ್ಕಿಗಳ ಕುರಿತು ಬರೆಯಲೆಂದು ಮೊನ್ನೆ ಚಿತ್ರಗಳನ್ನು ತಡಕಾಡುತ್ತಿದ್ದಾಗ ಅದೇ ಚಿತ್ರ ಸಿಕ್ಕಿತು. ಕೊನೆಗೆ ಆ ಜಾತಿಯ ಎಲ್ಲಾ ಹಕ್ಕಿಗಳ ಎಲ್ಲಾ ಚಿತ್ರಗಳನ್ನು ಒಟ್ಟಾಗಿಸಿ ಆ ಹಕ್ಕಿಯ ಬಗೆಯೇ ಬರೆಯಲು ಮುಂದಾದೆ.



ಇಂಗ್ಲೀಷ್ ಭಾಷೆಯಲ್ಲಿ "Cotton Pigmy Goose" ಎನ್ನುವ ಈ ಹಕ್ಕಿಯನ್ನು ಕನ್ನಡದಲ್ಲಿ ಬಿಳಿಬಾತು, ಬಿಳಿ ಬಣ್ಣದ ಪಟ್ಟೆ ಬಾತು ಎಂದು ಕರೆಯುತ್ತಾರೆ. ಇದೊಂದು ಸಣ್ಣ ಹಕ್ಕಿ. ಇದರ ಉದ್ದ ಸುಮಾರು ೩೨ ಸೆಂಟಿ ಮೀಟರಿನಷ್ಟಿರುತ್ತದೆ. ಇದು ಭಾರತದಲ್ಲಿ ಕಂಡು ಬರುವ ಎಲ್ಲಾ ನೀರು ಹಕ್ಕಿಗಳಲ್ಲಿ ಅತೀ ಸಣ್ಣ ಹಕ್ಕಿ. ಇದರಲ್ಲಿ ಇರುವ ಎಲ್ಲಾ ಗಂಡು ಹಕ್ಕಿಗಳೂ ಸಂತಾನೋತ್ಪತ್ತಿ ಕ್ರಿಯೆಗೆ ಮುಂದಾಗುವುದಿಲ್ಲ. ಸಂತಾನೋತ್ಪತ್ತಿ ಕ್ರಿಯೆಗೆ ಮುಂದಾಗುವ ಗಂಡು ಹಕ್ಕಿಗೆ ಹಸಿರು-ಕಪ್ಪು ಬಣ್ಣದ ಬೆನ್ನಿರುತ್ತದೆ. ಒಳಭಾಗ ಬಿಳಿ ಇದ್ದು, ಎದೆ ಪಟ್ಟಿ ಮತ್ತು ತಿಳಿ ಬೂದು ಬಣ್ಣದ ಗರಿಗಳಿರುತ್ತವೆ. ಹೆಣ್ಣು ಹಕ್ಕಿಗಳು ಸಾಮಾನ್ಯವಾಗಿ ಕಪ್ಪು ಬೆನ್ನುಪಟ್ಟಿಗಳನ್ನು ಹೊಂದಿದ್ದು ರೆಕ್ಕೆಯ ಪಟ್ಟಿ ಹೊಂದಿರುವುದಿಲ್ಲ. ಗಂಡು ಹೆಣ್ಣು ಎರಡೂ ಹಕ್ಕಿಗಳ ಕೊಕ್ಕು ಬಹಳ ಸಣ್ಣ. ಈ ಗಂಡು ಹಕ್ಕಿಗಳು ಹಾರಾಡುವಾಗ ರೆಕ್ಕೆಯ ಬಿಳಿ ಪಟ್ಟೆಗಳನ್ನು ನೋಡಬಹುದು. ಅದೇ ರೀತಿ ಸಂತಾನೋತ್ಪತ್ತಿಗೆ ಮುಂದಾಗದ ಗಂಡು ಹಕ್ಕಿಗಳು ರೆಕ್ಕೆಯ ಮೇಲಿನ ಬಿಳಿ ಪಟ್ಟಿಯೊಂದನ್ನು ಬಿಟ್ಟು ಹೆಣ್ಣು ಹಕ್ಕಿಗಳನ್ನು ಹೋಲುತ್ತವೆ. ಗಂಡು ಹಕ್ಕಿಗಳು ಹೆಣ್ಣನ್ನು ಪಟಾಯಿಸಲು ಮನುಷ್ಯರಂತೆಯೇ ಸರ್ಕಸ್ ಮಾಡುತ್ತವೆ. ನಾವು ಪಿಜ್ಜಾ, ಮೊಬೈಲ್ ಬರ್ಗರ್ ಪಾರ್ಕು, ಸಿನಿಮಾ ಹೀಗೆಲ್ಲಾ ಸುತ್ತಾಡಿದರೆ, ಈ ಹಕ್ಕಿಗಳಲ್ಲಿ ಗಂಡು ಹಕ್ಕಿಗಳು ಗಲಾಟೆ ಮಾಡುತ್ತಾ, ಹಾರಾಡುತ್ತಾ ಹೆಣ್ಣುಗಳ ಬೆನ್ನತ್ತುತ್ತವೆ. ಹಾರಾಡುತ್ತಲೇ ಹೆಣ್ಣಿನ ಸುತ್ತ ಗುಂಪಿನಲ್ಲಿ ಸುತ್ತುತ್ತಲೇ ಇರುತ್ತವೆ, ಕೆಲವು ನಿಮಿಷಗಳ ಕಾಲ, ಯಕ್ಷಗಾನದಲ್ಲಿ ಶೃಂಗಾರ ಸನ್ನಿವೆಶದ ಪದ್ಯಗಳಲ್ಲಿ ಪಾತ್ರಧಾರಿಗಳೂ ಕೆಲವೊಮ್ಮೆ ಹೀಗೆಯೇ ನರ್ತಿಸುತ್ತಾರೆ, ಅಲ್ಲವೇ. ಒಟ್ಟಿನಲ್ಲಿ ಗಂಡುಗಳಿಗೆ ಹೆಣ್ಣುಗಳನ್ನು ಪಟಾಯಿಸಲು ಬಲು ಕಷ್ಟ-ಮನುಷ್ಯರೇ ಇರಲಿ ಹಕ್ಕಿಗಳೇ ಇರಲಿ. ಮತ್ತೆ ಮನುಷ್ಯ ಮತ್ತು ಹಕ್ಕಿಗಳಲ್ಲಿ ಬಹುಷಃ ಇದೊಂದೇ ಸಾಮ್ಯತೆ.



ಕೆಲವೊಮ್ಮೆ ಜೋಡಿಯಾಗಿ ಕೆಲವೊಮ್ಮೆ ಗುಂಪಿನಲ್ಲಿ ಈ ಹಕ್ಕಿಗಳು ನಿಧಾನವಾಗಿ ನೀರಿನಲ್ಲಿ ಈಜಾಡುತ್ತಾ, ತಲೆಯನ್ನು ನೀರಿನಲ್ಲಿ ಮುಳುಗಿಸಿ ಎತ್ತುತ್ತಾ ಸಾಗುತ್ತವೆ. ಇವು ವೇಗದಲ್ಲಿ ಹಾರಾಡಿದರೂ ಎತ್ತರದಲ್ಲಿ ಹಾರದೆಯೇ ಭೂಮಿಗೆ ಸ್ವಲ್ಪ ಸಮೀಪದಲ್ಲಿಯೇ ಹಾರಾಡುತ್ತವೆ. ಬೇರೆ ಹಕ್ಕಿಗಳೊಂದಿಗೆ ಗುಂಪಿನಲ್ಲಿ ಸೇರುವುದು ವಿರಳ. ಏರಿಳಿತಗಳಿಂದ ಕೂಡಿದ ಸಾಮೂಹಿಕ ಬೆನ್ನಟ್ಟುವಿಕೆ ಕೂಡಾ ಇವುಗಳ ವೈಶಿಷ್ಟ.



ಭಾರತೀಯ ಉಪಖಂಡದ ಸುತ್ತೆಲ್ಲ ಪಸರಿಸಿದೆ ಎಂದು ಇಂಟರ್ನೆಟ್ಟಿನ ಮಾಹಿತಿ ತಿಳಿಸುತ್ತದೆ. ಚಳಿಗಾಲದಲ್ಲಿ ಉತ್ತರಧ್ರುವದಿಂ ದಕ್ಷಿಣ ಧೃವಕೂ ಇವುಗಳ ಪಯಣ.ನಾನು ಕೂಡಾ ಚಿಪ್ಪಳಿ ಕೆರೆಯಲ್ಲಿ ಇವುಗಳನ್ನು ನೋಡಿದ್ದು ಅಕ್ಟೋಬರ್ ತಿಂಗಳಿನಿಂದ ಮೇ ಅಂತ್ಯದ ವರೆಗೆ ಮಾತ್ರ. ನಿಂತ ನೀರನ್ನೇ ತಮ್ಮ ವಾಸಕ್ಕೆ ಬಳಸುವುದು ಈ ಬಾತುಗಳ ಮತ್ತೊಂದು ಹಿರಿಮೆ. ಜಲ ಸಸ್ಯಗಳೇ ಇವುಗಳ ಮುಖ್ಯ ಆಹಾರ. ಆದರೆ ಆಗಾಗ ಜಲಚರಗಳನ್ನು ಕೂಡಾ ತಿನ್ನುತ್ತವೆ. ಇವು ಮರಗಳ ಪೊಟರೆಗಳಲ್ಲಿ ಗೂಡು ಕಟ್ಟುತ್ತವೆ. ಇವುಗಳ ತೂಕವೇ ಕಡಿಮೆ. ಇದು ಇವುಗಳಿಗೆ ಒಂದು ವರದಾನ ಕೂಡಾ. ಮೊಟ್ಟೆ ಬಿರಿದು ಹೊರಬರುವ ಮರಿಗಳು ಇದೇ ಕಾರಣದಿಂದ, ಮೇಲಿನಿಂದ ಬಿದ್ದರೂ ಸಾಯುವುದಿಲ್ಲ.



ಕೆರೆಗಳಿಗೆ ಸುರಿವ ಕಸ ಕೆರೆಗಳನ್ನು ಬರಡು ಮಾಡೀತು. ಈ ಸಂತತಿಯ ಹಕ್ಕಿಗಳ ಬದುಕೂ ಬರಡಾದೀತು. ಈಗ "least Concern" ವಿಭಾಗದಲ್ಲಿರುವ ಈ ಬಾತುಗಳು ಕೆರೆಗಳು ಬರಡಾದರೆ, ಅಪಾಯಕ್ಕೀಡಾದ ಹಕ್ಕಿಗಳ ಸಾಲಿನಲ್ಲಿ ಸೇರುತ್ತವೆ. ನಾವು ಇವುಗಳ ಉಳಿವಿಗೆ ಹೆಚ್ಚಿನದ್ದನ್ನು ಮಾಡಬೇಕಿಲ್ಲ. ನಮ್ಮ ಉಳಿವಿನ ಕಡೆ ಗಮನ ಕೊಟ್ಟರೆ ಸಾಕು. ನಮ್ಮ ಕೆರೆಗಳನ್ನು ಚೆನ್ನಾಗಿ ರಕ್ಷಿಸಿಕೊಂದರೆ ನೋಡಿಕೊಂಡರೆ ನಮಗೂ ನೀರ ನಿಶ್ಚಿಂತೆ, ನಮಗೂ ಒಳ್ಳೆಯದು- ಈ ಹಕ್ಕಿಗಳ ಬದುಕೂ ನಿರಾಳ. ನಮ್ಮ ಬದುಕು ಕಟ್ಟುತ್ತಾ ಇವುಗಳ ಬದುಕನ್ನೂ ಕಾಪಿಡುವ ಸಾಧ್ಯತೆ ಇದೆ. ಕೆರೆಗಳು ಸುಧಾರಿಸಿದಲ್ಲಿ ಇವು ಇನ್ನಿತರ ಕೆರೆಗಳಿಗೂ ವಲಸೆ ಬಂದಾವು. ಇವುಗಳ ಚಂದದ ಪ್ರಣಯದುಡ್ದಯನದಿಂದ ನಯನ ಮನಗಳು ತುಂಬಬಹುದು. ಧರ್ಮ ಎಂದರೆ ಇದೇ ಅಲ್ಲವೇ? ಸ್ವ-ಪರ ಹಿತಗಳ ಸಾಧನೆ.

#ಪಕ್ಷಿ_ವಾಚನ


















No comments:

Post a Comment