Sunday, August 26, 2018

ಎಲ್ ಎಸ್ ಅವರಿಗೆ ಎಪ್ಪತ್ತೈದು

ಅಮೃತ- ನಮ್ಮ ಪರಂಪರೆಯಲ್ಲಿ ಇದಕ್ಕೊಂದು ವಿಶಿಷ್ಠ ಸ್ಥಾನವಿದೆ. ಇದರ ಪಾನದ ನಂತರವಷ್ಟೇ ದೇವತೆಗಳು ಅಮರರು-ನಿರ್ಜರರು ಎನ್ನಿಸಿಕೊಂಡಿದ್ದು. ಇದಕಾಗಿ ನಡೆದದ್ದು ಸಮುದ್ರ ಮಂಥನ. ಒಂದು ಕಡೆಯಲ್ಲಿ ಮಹಾದಾನಿ ಮಹಾಬಲಿ ಮತ್ತವನ ದೈತ್ಯ ಸೈನ್ಯ. ಇನ್ನೊಂದೆಡೆಯಲ್ಲಿ ಮಹೇಂದ್ರನ ದೇವಸೇನೆ. ಮಧ್ಯದಲ್ಲಿ ವನಸ್ಪತಿ ಭರಿತ ಮಂದರಾಚಲ. ಆಧಾರವಾಗಿ ನಿಂತದ್ದು, ಮಹಾಕೂರ್ಮನ ಮೇಲೆ. ಅದಕ್ಕೆ ಸುತ್ತಿದ್ದ ವಾಸುಕಿ ಎನ್ನುವ ಸರ್ಪರಾಜ. ಸುತ್ತಲೂ ಹಾರಡುತ್ತಿದ್ದ ಗರುಡ. ವನಸ್ಪತಿಗಳೆಲ್ಲ ಕರಗಿ ನೀರನ್ನು ಸೇರಿ ಕಡಲು ಹಾಲ್ಗಡಲಾಯಿತು. ಮಂಥನ ಮುಂದುವರೆಯಿತು. ಹಾಲಾಹಲವನ್ನು ನಂಜುಂಡ ಸೇವಿಸಿದ. ನಂತರ ಕೌಸ್ತುಭ ಮಣಿ, ಕಾಮಧೇನು, ಕಲ್ಪವೃಕ್ಷ, ಐರಾವತ ಎನ್ನುವ ಆನೆ, ಉಚ್ಛೈಶ್ರವಸ್ ಎನ್ನುವ ಕುದುರೆ, ಹೀಗೆ ಅನೇಕ ಸುವಸ್ತುಗಳು ಬಂದವು ಕೂಡಾ. ಕೊನೆಯಲ್ಲಿ ಬಂದದ್ದು ಅಮೃತ. ಧನ್ವಂತರಿ ಅದನ್ನು ಕೈನಲ್ಲಿ ಹಿಡಿದು ತಂದನಂತೆ.
ಪೀಠಿಕೆ ಏತಕ್ಕೆ ಹೇಳಿದ್ದೆಂದರೆ ಅಮೃತ ಎನ್ನುವುದು ಕೇವಲ ಒಂದು ದ್ರವವಲ್ಲ. ಅದೊಂದು ತತ್ವ. ಅದೊಂದು ಸಾಧನೆ-ತ್ಯಾಗ-ಶ್ರಮ ಮತ್ತು ಸಂಭ್ರಮ.

ನಮ್ಮ ಪುರಾಣ ಮತ್ತು ಶಾಸ್ತ್ರಗಳಿಂದ ಕೂಡಿದ ಪರಂಪರೆಅಲ್ಲಿ ಅಮೃತ ಎನ್ನುವುದನ್ನು ತತ್ವವಾಗಿ ಪರಿಗಣಿಸಿ ಅದನ್ನು ಒಂದು ಸಾಧು-ಸಾಧ್ಯ ಮತ್ತು ಸಾಧನೀಯ ವಿಷಯವಾಗಿ ಪರಿಗಣಿಸಿದ್ದಾರೆ. ಲೌಕಿಕದಿಂದ ಪಾರಮಾರ್ಥಿಕದ ಪಯಣವನ್ನೂ ಅಮೃತ ಎಂದು ಕರೆದಿದ್ದಾರೆ. ಅಮೃತ ಎಂದರೆ ಮರಣ ಇಲ್ಲದ್ದು ಎಂದರೆ ಅದು ಕೇವಲ ಬಾಲಿಶ ವ್ಯಾಖ್ಯಾನವಾದೀತು. ಅಮೃತ ಎಂದರೆ ಶಾಶ್ವತತೆ. ಉಪನಿಷತ್ತು ಹೇಳುತ್ತದೆ. " ನ ಕರ್ಮಣಾ ನ ಪ್ರಜಾ ಧನೇನ ತ್ಯಾಗೇನೈಕೇನಮೃತತ್ವಮಾನಷುಃ". ಅಮೃತತ್ವ ಕೇವಲ ತ್ಯಾಗದಿಂದ ಮಾತ್ರ ಸಾಧ್ಯ. ಸೋಜಿಗವೆಂದರೆ ತ್ಯಾಗವನ್ನು ಮಾಡಿದವ ಅದರ ಲೆಕ್ಕವಿಡುವುದಿಲ್ಲ ಮಾಡದವ ಅದನ್ನು ಹೆಡ್ದತನವಾಗಿ ಪರಿಗಣಿಸುತ್ತಾನೆ. ಪಡೆದವ ಸಜ್ಜನನಾದರೆ ಕೃತಜ್ಞತೆ ಹೊಂದುತ್ತಾನೆ. ಆದರೆ ಇದನ್ನೆಲ್ಲ ನೋಡಿದವ ಕೇವಲ ಕೃತಾರ್ಥ- ಸಾರ್ಥಕ್ಯವನ್ನು ಅನುಭವಿಸುತ್ತಾನೆ. ನಾನೂ ಈಗ ಇಂಥದ್ದೇ ಕೃತಾರ್ಥತೆ ಮತ್ತು ಸಾರ್ಥಕ್ಯವನ್ನು ಅನುಭವಿಸುತ್ತಿದ್ದೇನೆ. ಕಾರಣ ಇಂದು ನನ್ನ ಪ್ರೀತಿಯ ಶಾಸ್ತ್ರಿ ಮಾವನ ಅಮೃತ ಮಹೋತ್ಸವ. ನನಗೆ ಬರಹಗಳಿಗೆ ಪ್ರೆರಣೆಯಾಗಿದ್ದು ಇದೇ ಶಾಸ್ತ್ರಿ ಮಾವನ ಬರಹಗಳು, ಮಾತುಗಳು ಮತ್ತವರ ಭಾಷೆ.

ನಮ್ಮಿಬ್ಬರ ಭೆಟಿ ಬಹಳ ಕಡಿಮೆ ಸಲ ಆಗಿದ್ದು. ಮಾತಾಡಿದ್ದು ಕೂಡಾ ಕಡಿಮೆಯೇ. ಅವರ ಸರಳತೆಯೇ ಅದೊಂದು ರೀತಿಯ ಆಕರ್ಷಣೆ. ಅವರ ಮಾತು ಇನ್ನೊಂದು ರೀತಿಯ ಸೆಳೆತ. ಅವರ ಬರಹ ಬೇರೊಂದು ರೀತಿಯ ಸೆಳೆತ. ಅವರು ಮಾತಾಡುವಾಗ ಅದೆಷ್ಟು ಪುಸ್ತಕಗಳ ಹೆಸರನ್ನು ಹೇಳುತ್ತಾರೆ! ಅವರ ಸಾಹಿತಿಗಳೊಂದಿಗಿನ ಒಡನಾಟದ ಮಾತುಗಳು ಆ ಅನುಭವಗಳನ್ನು ಕೇಳುವುದು ಬಹಳ ಸೊಗಸು. ಶಾಸ್ತ್ರಿ ಮಾವನವರೊಡನೆ ಮಾತಾಡಲು ಕುಳಿತರೆ ಅದೆಷ್ಟೋ ವಿಷಯಗಳು ತಿಳಿಯುತ್ತವೆ. ಅವರು ಓದಿದ ವಿಚಾರಗಳನ್ನು ಹಂಚಿಕೊಂಡಾಗ ನಾವು ಅದನ್ನೇ ಓದಿದ್ದರೂ ಕೂಡಾ ನಮ್ಮ ಪಾಲಿಗೆ ಬೇರೆಯದೇ ಒಮ್ದು ಲೋಕ ತೆರ್ದುಕೊಮ್ಡು ಬಿಡುತ್ತದೆ. ಯಕ್ಷಗಾನ, ಸಾಹಿತ್ಯ, ಸಂಗೀತ, ವಿಜ್ಞಾನ, ರಾಜಕೀಯ ಹೀಗೆ ಎಲ್ಲದರ ಮೇಲೂ ಅಧಿಕಾರಯುತವಾಗಿ ಮಾತಾಡಬಲ್ಲಬರು ಶಾಸ್ತ್ರಿಮಾವ.

ಬಹುಷಃ ಬ್ರಹ್ಮ ಇವರನ್ನು ಸೃಜಿಸಿದ್ದೇ ಶರಾವತಿ ತೀರದ ಸಾಂಸ್ಕೃತಿಕ ವಿಶ್ವಕೋಶವಾಗಲಿ ಎಂದೋ ಎನ್ನುವ ಅನುಮಾನ ಬರುತ್ತದೆ. ತಂದೆ "ಧರ್ಮ ಸಿಂಧು" ಗ್ರಂಥದ ಕರ್ತೃ ನಾಜಗಾರ ಶಂಭು ಶಾಸ್ತ್ರಿ. ತಾಯಿ ಮಂಜೇಶ್ವರಿ. ಕೆರೆಮನೆ ಶಿವರಾಮ ಹೆಗಡೆಯವರು ಇವರ ಸೋದರ ಮಾವ. ಶಂಭು ಹೆಗಡೆ-ಮಹಾಬಲ ಹೆಗಡೆ-ಗಜಾನನ ಹೆಗಡೆಯವರು ಸೋದರ ಭಾವಂದಿರು. ಇದೆಲ್ಲದರ ಪ್ರಭಾವದಲ್ಲಿ ಬೆಳೆದ ಲಕ್ಷ್ಮೀನಾರಾಯಣ ಶಂಭು ಶಾಸ್ತ್ರಿ, (ಎಲ್ಲರ ಪ್ರೀತಿಯ ಎಲ್.ಎಸ್) ಇದೆಲ್ಲದರ ಪ್ರಭಾವದಲ್ಲಿ ಮೀಯುತ್ತಾ ತೋಯುತ್ತಾ ಸಾಹಿತ್ಯ ಸಂಸ್ಕೃತಿಗಳನ್ನು ಜೀವನದ ಅವಿಭಾಜ್ಯ ಅಂಗವಾಗಿಸಿಕೊಂಡರು. ಅದರ ಜೊತೆಗೇ ಬೆಳೆದ ಓದುವ ಹವ್ಯಾಸ. ಬರೆಯುವ ಕಲೆ. ಇವೆಲ್ಲವೂ ಸೇರಿ ಶರಾವತಿಯ ತಟದ ಬಾಲಕ ಲಕ್ಷ್ಮೀನಾರಾಯಣ ಶಾಸ್ತ್ರಿ ಎಲ್ಲರ ಪಾಲಿನ ಎಲ್ ಎಸ್ ಆಗಿ ಬೆಳೆದು ನಿಂತರು.

ಪತ್ರಕರ್ತ ಮತ್ತು ಸಾಹಿತಿ ಇವರಿಬ್ಬರೂ ಬರೆಯುತ್ತಾರೆ ನಿಜ. ಆದರೆ ಎರಡೂ ಪ್ರಕಾರದಲ್ಲಿ ವಿಶಿಷ್ಠ ಛಾಪು ಮೂಡಿಸಿದವರು ವಿರಳಾತಿವಿರಳ. ಅದರಲ್ಲಿ ಮೊದಲ ಸಾಲಿನಲ್ಲಿ ನಿಲ್ಲುವವರು ಶಾಸ್ತ್ರಿ ಮಾವ. ಇವರ ಭಾಷೆ ತುಸು ತೀಕ್ಷ್ಣ. ಸಹಜವೇ ಅದು ಮಹಾಬಲ ಹೆಗಡೆಯವರ ಒಡನಾಟ-ಅವರ ಪ್ರಭಾವವಿದ್ದಮೇಲೆ ಆ ಭಾಷೆ ಬರಲೇ ಬೇಕು. ಆದರೂ ಆ ಭಾಷೆ ಯಾರಿಗೂ ಬೇಸರ ಉಂಟು ಮಾಡದೆ ವಿವಾದಕ್ಕೆ ಎಡೆ ಮಾಡದೆ ಎಲ್ಲರೂ ಒಪ್ಪುವಂತೆಯೇ ಇರುತ್ತದೆ. ಸತ್ಯವನ್ನು ಸಂಪೂರ್ಣ ಒಪ್ಪಿ ಬರೆದಾಗ ಮಾತ್ರ ಇದು ಸಾಧ್ಯ. ಸತ್ಯವನ್ನು ಒಪ್ಪುವುದಕ್ಕೂ ಒಂದು ಛಾತಿ ಬೇಕು. ಅದು ಇದ್ದುದರಿಂದಲೇ ಶಾಸ್ತ್ರಿ ಮಾವ ಈ ಪರಿ ಬೆಳೆದದ್ದು. ಸಂಗೀತದಲ್ಲೂ ಶಾಸ್ತ್ರಿ ಮಾವ ಕಡಿಮೆಯೇನಲ್ಲ.

ಎಲ್. ಎಸ್ ಅವರಿಗೆ ಎಪ್ಪತ್ತು ವರ್ಷ ತುಂಬಿದ್ದಾಗ ಶಂಭು ಹೆಗಡೆಯವರು ಹೇಳಿದ್ದರು. "ಗಜಾನನನ ಅರ್ಥಗಾರಿಕೆಯನ್ನು ಕೇಳಿದಾಗ ನನಗೆ ಅನುಮಾನ ಬರುತ್ತಿತ್ತು. ಲಕ್ಷ್ಮೀನಾರಾಯಣ ಅರ್ಥ ಬರೆದು ಕೊಡಿತ್ತಿದ್ದಾನೋ ಅಂತ. ಕೊನೆಗೊಂದು ದಿನ ಇಬ್ಬರೂ ಸಿಕ್ಕಿಬಿದ್ದರು." ಗಜಾನನ ಹೆಗಡೆಯವರು ಅಣ್ಣಮ್ದಿರನ್ನು ಬಿಟ್ಟು ಇವರಲ್ಲಿ ಮಾತುಗಾರಿಕೆಗೆ ಬೇಕಾದ ಬಂಡವಾಳ ಪಡೆಯುತ್ತಿದ್ದರು ಎಂದರೆ ತಿಳಿಯುತ್ತದೆ ಇವರ ಜ್ಞಾನದ ಅಗಾಧತೆ ಎಷ್ಟು ಎನ್ನುವುದು.

ಶಾಸ್ತ್ರಿಗಳು ಸಂಘತನಾ ಚತುರರೂ ಹೌದು. ಚುಟುಕು ಸಾಹಿತ್ಯ ಪರಿಷತ್ ಸ್ಥಾಪನೆಯಾಗುವಲ್ಲಿ ಇವರ ಶ್ರಮ ಅಪಾರ-ಅಗಾಧ. ಅದೆಷ್ಟೋ ನಾತಕ-ಯಕ್ಷಗಾನ ಸಂಗೀತ ಕಾರ್ಯಕ್ರಮಗಳನ್ನು ಆಯೋಜಿಸಿದ್ದಾರೆ ಶಾಸ್ತ್ರಿಗಳು. ಶಾಸ್ತ್ರಿಗಳು ಗದ್ಯ ಪದ್ಯ ಎರಡನ್ನೂ ಬರೆದ ಅಪರೂಪದ ಸಾಹಿತಿಗಳ ಸ್ಥಾನದಲ್ಲಿ ನಿಲ್ಲುತ್ತಾರೆ. ಐವತ್ತಕ್ಕೂ ಹೆಚ್ಚು ಪುತಕಗಳು, ಸಾವಿರಗಟ್ಟಲೇ ಲೇಖನಗಳು ಅದೆಷ್ಟು ಸಂಪಾದಕೀಯಗಳೋ ಲೆಕ್ಕವಿಲ್ಲ. ಇವರು ಬರೆದ ಮಹಾಬಲ ಹೆಗಡೆಯವರ ಜೀವನ ಚರಿತ್ರೆ ಉದಯೋನ್ಮುಖ ಕಲಾವಿದರಿಗೆ ಪಠ್ಯದಂತಿದೆ. ಹಿಂದೊಮ್ಮೆ ಕೆರೆಮನೆ ಮೇಳಕ್ಕೆ ಮಹಾಬಲ ಹೆಗಡೆಯವರ ಬಗ್ಗೆ ಬೇಕಾದ ಲೇಖವೊಂದನ್ನು ಬರೆದಿದ್ದರಂತೆ. ಅದೇ ಲೇಖಕ ಅದೇ ಕಲಾವಿದನ ಜೀವನದ ಚರಿತ್ರೆ ಬರೆದಿದ್ದು ಕೇವಲ ಯೋಗಾಯೋಗವಲ್ಲ. ಯಕ್ಷಗಾನದ ಮಹಾಬಲರ ಬಗ್ಗೆ ಬರೆಯುವುದು ಸುಲಭದ ಮಾತೂ ಅಲ್ಲ. ಅದನ್ನು ಬರೆಯುವುದು ಶಾಸ್ತ್ರಿಗಳಿಗೆ ಮಾತ್ರ ಸಾಧ್ಯವಿತ್ತು. ಓ ಸಿಯಾಂ ನಿನಗೆ ಸಲಾಂ ಎನ್ನುವ ಇವರ ಪ್ರವಾಸ ಕಥನ ಥಾಯ್ಲೆಂಡಿನ ಜಾಗಗಳನ್ನು ಮಾತ್ರವಲ್ಲ ಅಲ್ಲಿನ ಸಂಸ್ಕೃತಿಯನ್ನೂ ಪರಿಚಯಿಸುತ್ತದೆ. ಅನೇಕ ಪ್ರವಾಸಕಥನಗಳು ಇಲ್ಲಿ ಸೋಲುತ್ತಿರುವಾಗ ಈ ಕೃತಿ ವಿಭಿನ್ನವಾಗಿ ಕಾಣುತ್ತದೆ. ಪ್ರವಾಸ ಕಥನವನ್ನೋದಿದವ ಆ ಜಾಗವನ್ನು ನೋಡುವ ಆಸೆ ಹುಟ್ಟಿಸುವಂತೆ ಮಾಡುತ್ತದೆ.

ಢಂ ಢಂ ಡೀಗಾ ಡೀಗಾ ಶಾಸ್ತ್ರಿಗಳ ವಿಡಂಬನೆಯ ಅಂಕಣ. ಇದರಲ್ಲಿ ಶಾಸ್ತ್ರಿಗಳ ಹಾಸ್ಯಪ್ರಜ್ಞೆ ಎದ್ದು ಕಾಣುತ್ತದೆ. ಅಪಹಾಸ್ಯದ ಸೋಂಕಿಲ್ಲದೆಯೇ ಪ್ರಚಲಿತ ವಿದ್ಯಮಾನಗಳನ್ನು ವಿಡಂಬನಾತ್ಮಕವಾಗಿ ಬರೆಯುವ ಶಾಸ್ತ್ರಿಗಳ ಹೆಚ್ಚುಗಾರಿಕೆ ಎಲ್ಲರಿಗೆ ಸಿದ್ಧಿಸಲಿಲ್ಲ. ಸ್ದ್ಭಾವ ತುಂಬಿದ ಹಾಸ್ಯದಲ್ಲೇ ಕಿವಿ ಹಿಂಡುತ್ತಾರೆ ಶಾಸ್ತ್ರಿ ಮಾವ.

ಪಂಚ ಭೂತಗಳೊಂದಾಗಿಸುವ ತತ್ವಕ್ಕೆ ನಾರಾಯಣ ಎನ್ನುವ ಹೆಸರಂತೆ. ಲಕ್ಷ್ಮೀ ನಾರಾಯಣರು ಹೆಸರಿಗೆ ಲಕ್ಷ್ಮೀನಾರಾಯಣನಾದರೂ ಅವರು ವಾಸ್ತವದಲ್ಲಿ ಶಾರದಾ ನಾರಾಯಣ. ಯಾಕೆಂದರೆ ಇವರ ಭಾಷಾ ಸಂಪತ್ತು ಜ್ಞಾನ ಸಂಪತ್ತು ಆ ಮಟ್ಟದಲ್ಲಿದೆ. ಇವರ ಅರ್ಧಾಂಗಿಯ ಹೆಸರೂ ಶಾರದೆ. ಮೇಧಾವಿನಿ, ಪೂರ್ಣಿಮಾ, ಅಂಬಿಕಾ ರಾಧಿಕಾ ಇವರ ಮಕ್ಕಳು.

ಶಾಸ್ತ್ರಿ ಮಾವ ಇದ್ದದ್ದು ಬೆಳಗಾವಿಯಲ್ಲಿ. ಅವರ ಲೇಖನಗಳು ಬಂದಿದ್ದು ಲೋಕಧ್ವನಿ ಪತ್ರಿಕೆಯಲ್ಲಿ. ಆದರೆ ನಾನು ಇವರ ಅನೇಕ ಲೇಖನಗಳನ್ನು ಓದಿದ್ದು ಫೇಸ್ ಬುಕ್ಕಿನಲ್ಲಿ. ಅದಕ್ಕೆ ಶಾಸ್ತ್ರಿಮಾವ ಮತ್ತು ಫೇಸ್ ಬುಕ್ ಎರಡಕ್ಕೂ ನಾನು ಕೃತಜ್ಞ.

ಶಾಸ್ತ್ರಿ ಮಾವನವರ ಬಗ್ಗೆ ಬರೆಯುವಷ್ಟು ದೊಡ್ದವ ನಾನಲ್ಲ. ಇರುವೆಯೊಮ್ದು ಪರ್ವತಾನ್ನು ವರ್ಣಿಸಿದಂತಾದೀತು ನಾನು ಬರೆದರೆ. ಆದರೆ, ಅಮೃತ ಮಹೋತ್ಸ್ವದ ಸಂಭ್ರಮದಿಂದ ದೂರಾಗಲೂ ಮನಸ್ಸಿಲ್ಲ. ಶಾಸ್ತ್ರಿ ಮಾವನವರ ಅಮೃತ ಮಹೋತ್ಸವವೂ ಅವರ ಜೀವನ್ವೂ ಕೂಡಾ ಅಮೃತದಂತೆ ಅದೆಷ್ಟೋ ತ್ಯಾಗ-ಸಾಧನೆ-ಶ್ರಮ-ಸಂಭ್ರಮಗಳಿಂದ ಕೂಡಿದೆ.

No comments:

Post a Comment