Tuesday, August 28, 2018

ಆರ್ಯ ದೌರ್ಜನ್ಯ ಮತ್ತು ತೆಂಗಿನಕಾಯಿ ಎನ್ನುವ ವಿಷ- ಒಂದು ಸಂಶೋಧನಾತ್ಮಕ ಲೇಖನ

ಭಾರತ ಬೌದ್ಧರ ನೆಲೆವೀಡಾಗಿತ್ತು. ಇಲ್ಲೊಂದು ಸಹಬಾಳ್ವೆಯ ಸೌಹಾರ್ದ ಭರಿತ ಸಂಸ್ಕೃತಿ ಇತ್ತು. ಜಾತಿ ಪದ್ಧತಿ ಇರಲಿಲ್ಲ. ಯಜ್ಞ ಯಾಗಾದಿಗಳಿಗೆ ಬೇಕಾಗಿ ಪ್ರಾಣಿ ಬಲಿ ಕೊಡುವ ಪದ್ಧತಿ ಇರಲಿಲ್ಲ. ಹವಿಸ್ಸಿಗಾಗಿ ತುಪ್ಪ ಮತ್ತು ಆಹಾರಧಾನ್ಯಗಳನ್ನು ಸುಡುವ ಪದ್ಧತಿ ಇಲ್ಲಿ ಇರಲೇ ಇಲ್ಲ. ಬೌದ್ಧ ಮತಾನುಯಾಯಿಗಳಾಗಿದ್ದ ಬಲಶಾಲಿ ಜನಾಂಗವೊಂದು ಇಲ್ಲಿ ವಾಸವಾಗಿತ್ತು. ನೆಲದ ಸಂಸ್ಕೃತಿಗೆ ದೈತ್ಯರ ಸಾಂಸ್ಕೃತಿಕ ನಡೆಗೆ ಧಕ್ಕೆ ತರುವ ಜನರೇ ದೈತ್ಯರ ಪ್ರಮುಖ ಆಹಾರವಾಗಿದ್ದರು. ಮತ್ತೆ, ಪ್ರಾಣಿಗಳೂ ಕೂಡಾ ತಮ್ಮ ಸಂಖ್ಯೆ ಅತಿಯಾದಾಗ ತಾವಾಗಿ ಬಂದು ಮನುಷ್ಯರ ಜನವಸತಿ ಇದ್ದಲ್ಲಿ ಬಂದು ತಮ್ಮನ್ನು ಸಮರ್ಪಿಸಿಕೊಳ್ಳುತ್ತಿದ್ದವು. ಬೌದ್ಧಾನುಯಾಯಿಗಳಾದ ಕಾರಣ ಇಲ್ಲಿ ಬೇಟೆ ಎನ್ನುವುದು ಇರಲೇ ಇಲ್ಲ. ಪ್ರಾಣಿಗಳೂ ಮೋಕ್ಷವನ್ನು ಬಯಸಿ ದೇಹವನ್ನು ಇಲ್ಲಿನ ಸಾಂಸ್ಕೃತಿಕ ರಾಯಭಾರಿಗಳಾಗಿದ್ದ ಅಸುರ-ದೈತ್ಯ-ದಾನವ-ಕಾಲಕೇಯ ಮೊದಲಾದ ಬೌದ್ಧಾನುಯಾಯಿ ಪಂಗಡಗಳಿಗೆ ಸಮರ್ಪಿಸಿಕೊಳ್ಳುತ್ತಿದ್ದವು. ಶಾಂತತೆ ಪ್ರಶಾಂತತೆ ಇಲ್ಲಿನವರ ಬದುಕಿನ ಗುರುತಾಗಿತ್ತು.

ಈ ಬೌದ್ಧಾನುಯಾಯಿ ದೈತ್ಯಾದಿ ಬುಡಕಟ್ಟುಗಳಲ್ಲಿ ಕೂಡಾ ಆತ್ಮ ಸಮರ್ಪಣೆಯ ಪದ್ಧತಿ ಇತ್ತು. ದುರ್ಬಲ ದೈತ್ಯರು ತಮ್ಮನ್ನು ತಾವೇ ಆಹಾರವಾಗಿ ಬಲಶಾಲಿ ದೈತ್ಯರಿಗೆ ಸಮರ್ಪಿಸುತ್ತಿದ್ದರು. ದೈತ್ಯರು ದಿನವೆಲ್ಲ ಶ್ರಮದಿಂದ ದುಡಿಯುತ್ತಿದ್ದರು. ಮೊದಲೇ ಬಲಿಷ್ಠವಾಗಿದ್ದ ದೈತ್ಯರ ದೇಹ ಈ ದುಡಿಮೆಯಿಂದ ಇನ್ನಷ್ಟು ಬಲಶಾಲಿಯಾಗುತ್ತಿತ್ತು. ಆದರೆ ಈ ದೈತ್ಯರು ತಮ್ಮ ಬಲಬನ್ನು ಎಂದಿಗೂ ಹಾಳು ಮಾಡುತ್ತಿರಲಿಲ್ಲ. ಇವರು ದುಡಿದು ಉತ್ಪಾದಿಸುತ್ತಿದ್ದ ಸ್ವರ್ಣ-ರತ್ನ-ರಜತ ಮೊದಲಾದ ಲೋಹಗಳನ್ನು ಪಶ್ಚಿಮ ಸಮುದ್ರದಲ್ಲಿ ಎಸೆದು ಬಿಡುತ್ತಿದ್ದರು. ಬುದ್ಧನ ಬೋಧೆಯಾದ ಆಸೆಯೇ ದುಃಖಕ್ಕೆ ಮೂಲ ಎನ್ನುವ ಒಂದೇ ಮಾತಿನ ಪ್ರಭಾವ ಆ ಜನಾಂಗದ ಮೇಲೆ ಈ ಪರಿಯಲ್ಲಾಗಿತ್ತು ಎಂದರೆ ಇಲ್ಲಿ ಬೌದ್ಧ ಧರ್ಮ ಯಾವ ಪರಿಯಲ್ಲಿ ರಾರಾಜಿಸುತ್ತಿತ್ತು ಎನ್ನುವ ಊಹೆ ಸಾಧ್ಯವಾಗುತ್ತದೆ.

ಮತ್ತೆ ಈ ದೈತ್ಯರು ಸದಾಕಾಲ ವೈಜ್ಞಾನಿಕ ಚಿಂತನೆಯಲ್ಲಿ ತೊಡಗಿದ್ದರು. ಆದರೆ ಈ ದೈತ್ಯರು ತಮ್ಮ ಶ್ರಮವನ್ನೆಲ್ಲಾ ನೀರಿಗೆ ಎಸೆಯುತ್ತಿದ್ದ ಕಾರಣದಿಂದ ಇವರಿಗೆ ಸಂಶೋಧನೆಯಲ್ಲಿ ಮುಂದುವರೆಯಲಾಗಲಿಲ್ಲ. ಕೃತಕ ವಿಷವೊಂದನ್ನು ಕಂಡು ಹಿಡಿಯಬೇಕು ಎನ್ನುವ ಇವರ ಆಸೆ ಈಡೇರಲೇ ಇಲ್ಲ. ಮೊದಲೇ ಹೇಳಿದಂತೆ ಇವರು ಬುದ್ಧನ ವಾಕ್ಯವಾದ ಆಸೆಯೇ ದುಃಖಕ್ಕೆ ಮೂಲ ಎನ್ನುವುದನ್ನು ಚಾಚೂ ತಪ್ಪದೆಯೇ ಅನುಸರಿಸುತ್ತಿದ್ದರು. ಅದರೆ ಇವರಲ್ಲಿಯೂ ಜನಸಂಖ್ಯೆ ಬೆಳೆಯಿತು. ಪ್ರಕೃತಿ ವಿಕೋಪದ ಕಾರಣದಿಂದ ಇಲ್ಲಿಯೂ ಆಹಾರ ಸಮಸ್ಯೆ ಶುರುವಾಯಿತು. ಆಗ ಕೆಲವು ದೈತ್ಯರು ಚೀನಾದ ಕಡೆ ಮುಖ ಮಾಡಿ ಹೊರಟು ಅಲ್ಲಿಯೂ ತಮ್ಮ ಶ್ರಮ ಜೀವನವನ್ನು ಮುಂದುವರೆಸಿ ಬೌದ್ಧಾನುಯಾಯಿಯಾಗಿಯೇ ಉಳಿದರು. ಅಲ್ಲಿನ ಚಳಿಯ ವಾತಾವರಣದಲ್ಲಿ ಪ್ರಾಣಿಗಳು ಅಷ್ಟಾಗಿ ಸಿಗದ ಕಾರಣ ಸರೀಸೃಪ, ಕೀಟ ಮೊದಲಾದವು ಇವುಗಳ ಆಹಾರವಾಗಿ ಮುಂದುವರೆದವು.

ಕೆಲವು ದೈತ್ಯರು ಪಶ್ಚಿಮಾಭಿಮುಖವಾಗಿ ಹೊರಟರು. ಇನ್ನೂ ಕೆಲವು ದೈತ್ಯರು ನೆಲದ ಮೇಲಿನ ಅಭಿಮಾನದಿಂದ, ತಮ್ಮ ದೌರ್ಬಲ್ಯದ ಕಾರಣದಿಂದ ಇಲ್ಲಿಯೇ ನೆಲೆನಿಂತರು. ಮೊದಲೇ ಹೇಳಿದ ಹಾಗೆ ದೈತ್ಯರು ತಮ್ಮ ದುಡಿಮೆಯನ್ನೆಲ್ಲಾ ಸಮುದ್ರಕ್ಕೆ ಎಸೆದುಬಿಡುತ್ತಿದ್ದರು. ಅವುಗಳನ್ನು ಜಲಚರಗಳು ತಿಂದು ಉರಿ ತಾಳಲಾಗದೆ ದಡದ ಕಡೆ ಹೋಗಿ ಸಾಯುತ್ತಿದ್ದವು. ಆ ಜಲಚರಗಳನ್ನು ಸಮುದ್ರದ ಆಚೆ ತಡಿಯಲಿದ್ದ ಆರ್ಯರೆನ್ನುವ ಸೋಂಬೇರಿ ಜನಾಂಗವೊಂದರ ಬುಡಕಟ್ಟೊಂದು ಸೇವಿಸುತ್ತಿತ್ತು. ಆ ಜಲಚರಗಳಲ್ಲಿ ಸಿಗುತ್ತಿದ್ದ ರತ್ನ ಸ್ವರ್ಣಗಳನ್ನು ಆರ್ಯರಲ್ಲಿಯೇ ಒಂದು ಜಾತಿಯಾಗಿದ್ದ ಬ್ರಾಹ್ಮಣರು ಬೆದರಿಸಿ ತಮ್ಮದಾಗಿಸಿಕೊಂಡು ಅವುಗಳಿಂದ ಆಭರಣಗಳನ್ನು ಮಾಡಿಸಿಕೊಂಡು ತೊಡುತ್ತಿದ್ದರು. ಈ ಬ್ರಾಹ್ಮಣರು ಮಾಡುವ ಉದ್ಯೋಗಗಳ ಆಧಾರದ ಮೇಲೆ ಸಮಾಜವನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ಒಡೆದಿದ್ದರು. ಉಳಿದ ಜನಾಂಗಗಳಲ್ಲಿ ತಮ್ಮ ಕುರಿತಾದ ಭಯ ಸದಾಕಾಲ ಇರಬೇಕು ಎನ್ನುವ ಕಾರಣದಿಂದ ದೇವರು ಎನ್ನುವ ಅಶುದ್ಧ ಹಾಗೂ ಅನೇಕಾಂತವಾದದ ವಿರುದ್ಧದ ಕಲ್ಪನೆಯನ್ನು ಬಿತ್ತಿ ಭಯವನ್ನು ಹುಟ್ಟಿಸಿ ತಮ್ಮ ಉನ್ನತ ಸ್ಥಾನವನ್ನು ಕಾಪಿಟ್ಟುಕೊಂಡಿದ್ದರು. ಇವರು ಮತ್ತೊಬ್ಬರ ಮೇಲಿನ ದಬ್ಬಾಳಿಕೆಯಿಂದ ಸಂಪಾದಿಸಿದ್ದ ಧನಕನಕಗಳನ್ನು ರಕ್ಷಿಸಿಕೊಳ್ಳಲು ಇಡುತ್ತಿದ್ದ ಜಾಗಗಳೇ ಮುಂದೆ ದೇವಾಲಯಗಳಾಗಿದ್ದು. ಹಣಕ್ಕೆ ಸದಾಕಾಲ ಲಕ್ಷ್ಯ ಕೊಡುತ್ತಿದ್ದರು. ಸದಾ ಇವರ ಲಕ್ಷ್ಯವನ್ನು ಪಡೆಯುತ್ತಿದ್ದುದರಿಂದ ಧನಕ್ಕೆ ಲಕ್ಷ್ಮೀ ಎನ್ನುವ ಹೆಸರಿಟ್ಟು ಅದನ್ನು ದೇವರಾಗಿಸಿದರು.

ಇದೇ ಬ್ರಾಹ್ಮಣರು ತಮ್ಮ ಧನಕನಕಗಳನ್ನು ರಕ್ಷಿಸಿಕೊಳ್ಳಲೋಸುಗ ಬಲಶಾಲಿ ಜನರನ್ನು ಸಂಘಟಿಸಿ ಅವರನ್ನು ಕ್ಷತ್ರಿಯರೆಂದು ಕರೆದರು. ತಮ್ಮ ಧನಕನಕಗಳ ವಿಕ್ರಯಕ್ಕೆ ಬೇಕಾಗಿ ವ್ಯವಹಾರ ಚಾತುರ್ಯ ಹೊಂದಿದ್ದವರನ್ನು ಆರಿಸಿ ಇನ್ನೂ ಪಶ್ಚಿಮದತ್ತ ವ್ಯಾಪಾರಕ್ಕೆ ಕಳುಹಿಸುತ್ತಿದ್ದರು. ಆಹಾರಧಾನ್ಯಗಳು ಅವಶ್ಯಕತೆ ಮೀರಿ ಶೇಖರಿಸಲ್ಪಟ್ಟಾಗ ಎಲ್ಲರೂ ಸೇರಿ ಅದನ್ನು ದಹನ ಮಾಡುತ್ತಿದ್ದರು. ಈ ಕಾರ್ಯಕ್ಕೆ ಯಜ್ಞ ಎನ್ನುವ ಹೆಸರಿತ್ತು.

ಬ್ರಾಹ್ಮಣರು ಕ್ಷತ್ರಿಯರಿಗೆ ಯುದ್ಧದ ತರಬೇತಿಯನ್ನು ನೀಡುತ್ತಿದ್ದರು. ಬ್ರಾಹ್ಮಣರಿಗೆ ಇವರ ಕುತಂತ್ರದ ಭಾಗವಾದ ಮಂತ್ರ-ತಂತ್ರಗಳನ್ನು ಬೋಧಿಸುತ್ತಿದ್ದರು. ವೈಶ್ಯರಿಗೆ ವ್ಯಾಪಾರವನ್ನೂ ಶೂದ್ರರಿಗೆ ಶ್ರಮವನ್ನೂ ಬೋಧಿಸುತ್ತಿದ್ದರು. ಈ ಬೋಧನೆ ತರ್ಬೇತಿ ನಡೆಯುತ್ತಿದ್ದ ಸ್ಥಳಗಳನ್ನು ಗುರುಕುಲ ಎಂದು ಕರೆಯುತ್ತಿದ್ದರು. ಇಲ್ಲಿ ಒಬ್ಬರ ತರಬೇತಿಗೆ ಮತ್ತೊಬ್ಬ ಹೋಗುವಂತಿರಲಿಲ್ಲ. ಹೀಗೆ ವಿದ್ಯೆ ಕಲಿಸುವಲ್ಲೂ ಬ್ರಾಹ್ಮಣರು ಬೇಧ ಭಾವ ತೋರಿಸುತ್ತಿದ್ದರು. ಶೂದ್ರರನ್ನು ಸದಾಕಾಲ ದುಡಿಯುತ್ತಲೇ ಇರಬೇಕು ಎಂದು ದಂಡಿಸುತ್ತಿದ್ದರು. ಶೂದ್ರರು ಪ್ರತಿಭಟನೆಗೆ ಮುಂದಾಗುವುದನ್ನು ತಿಳಿದುಕೊಳ್ಳಲು ಗೂಢಚಾರರ ಪಡೆಯೇ ಇತ್ತು. ಈ ಗೂಢಚಾರರ ಪಡೆ ಅದೆಷ್ಟು ಗೂಢವಾಗಿತ್ತು ಎಂದರೆ ಅದನ್ನು ಯಾರೂ ನೋಡಿರಲಿಲ್ಲ. ಆ ಗೂಢಚಾರರ ಪಡೆಗೆ ದಿವ್ಯದೃಷ್ಟಿ ಎನ್ನುವ ಹೆಸರಿತ್ತು.

ಬ್ರಾಹ್ಮಣರಲ್ಲಿಯೂ ಎರಡು ವಿಧಗಳಿದ್ದವು. ಒಂದು ಲೌಕಿಕ ಬ್ರಾಹ್ಮಣರು ಮತ್ತೊಂದು ವೈದಿಕ ಬ್ರಾಹ್ಮಣರು. ಸ್ವಲ್ಪವೂ ದುಡಿಯಲಾಗದೇ, ಬುದ್ಧಿಯೂ ಕಡಿಮೆಯಿದ್ದ ಬ್ರಾಹ್ಮಣರನ್ನು ವೈದಿಕ ಬ್ರಾಹ್ಮಣರು ಎಂದು ಕರೆಯಲಾಗುತ್ತಿತ್ತು. ಈ ಬ್ರಾಹ್ಮಣರು ಕಾಡಿನಲ್ಲಿ ಸದಾಕಾಲ ಮಡಿವಸ್ತ್ರವುಟ್ಟು ಮಮ್ತ್ರಗಳನ್ನು ಪಠಿಸುತ್ತಾ ಕೂರುತ್ತಿದ್ದರು. ಇವರು ಹೇಳಿದ್ದ ಮಾತುಗಳನ್ನು ನಡೆಸುತ್ತಾ, ಇವರು ಕಂಡು ಹಿಡಿದ ಮಂತ್ರಗಳನ್ನು ಉಪಯೋಗಿಸಿ ಸಮಾಜದಲ್ಲಿ ಮೌಢ್ಯವನ್ನು ಬಿತ್ತುತ್ತ ವೈಜ್ಞಾನಿಕ ಚಿಂತನೆಗಳನ್ನು ಲೌಕಿಕ ಬ್ರಾಹ್ಮಣರು ಕೊಲ್ಲುತ್ತಿದ್ದರು. ವೈದಿಕ ಬ್ರಾಹ್ಮಣರನ್ನು ಋಷಿಗಳು ಎಂದೂ ಕರೆಯುತ್ತಿದ್ದರು. ಶ್ರಮಿಕ ಸಮಾಜದ ಮೇಲೆ ತಮ್ಮ ಹಿಡಿತವನ್ನು ಬಿಗಿಗೊಳಿಸಲು ಬ್ರಾಹ್ಮಣರು ಜ್ಯೋತಿಷ್ಯ ಎನ್ನುವ ತರ್ಕಹೀನ ವಿಚಾರದ ಮೂಲಕ ಬೆಳೆ ಮಳೆಗಳನ್ನು ನಿರ್ಧರಿಸುತ್ತಿದ್ದರು.

ಈ ಎಲ್ಲಾ ಕ್ರಿಯೆಗಳಿಂದ ಆರ್ಯರ ಮಧ್ಯೆ ಅಸಹನೆಯೊಂದು ಹೊಗೆಯಾಡುತ್ತಿತ್ತು. ಇಷ್ಟರಲ್ಲಿ ಆಹಾರ ಧಾನ್ಯಗಳನ್ನು ಬೆಂಕಿಗೆ ಎಸೆದ ಪರಿಣಾಮ ಆಹಾರದ ಕೊರತೆ ಉಂಟಾಯಿತು. ಇದನ್ನೆಲ್ಲಾ ನೋಡಿದ ಬೌದ್ಧ ದೈತ್ಯರ ಮನಸ್ಸು ಕರಗಿತು. ತಮ್ಮ ಸುಭಿಕ್ಷ ಭರಿತ ಭೂಮಿಯಾದ ಭಾರತಕ್ಕೆ ಆರ್ಯರನ್ನು ಕರೆತರಲು ಮುಂದಾದರು. ಆದರೆ ಆರ್ಯರು ಹೊರಗಿನಿಂದ ಬಂದಿದ್ದ ದೈತ್ಯರನ್ನು ನಂಬಲಿಲ್ಲ. ಅನೇಕ ಸುತ್ತಿನ ಮಾತುಕತೆಗಳಾಗಿ, ನಂತರದಲ್ಲಿ ಋಷಿ ಜೀವನವನ್ನು ನಡೆಸುತ್ತಿದ್ದ ಏಳು ವೈದಿಕ ಬ್ರಾಹ್ಮಣರನ್ನು ಆಯ್ದ ಕೆಲವು ದೈತ್ಯರೊಂದಿಗೆ ಭಾರತಕ್ಕೆ ಕಳುಹಿಸಲಾಯಿತು.

ಇಲ್ಲಿನ ಶಾಂತತೆ ಪ್ರಶಾಂತತೆಗಳು ಆ ಬ್ರಾಹ್ಮಣರಿಗೆ ಪಥ್ಯವಾಗಲಿಲ್ಲ. ಇದನ್ನು ಹದಗೆಡಿಸಲು ಮುಂದಾದರು. ಈ ಮಧ್ಯೆ ಆರ್ಯರ ಇನ್ನೊಂದು ಗುಂಪು ಭಾರತಕ್ಕೆ ಬಂತು. ನಂತರ ಅನೇಕ ಗುಂಪುಗಳೂ ಬಂದವು. ಅವರನ್ನು ಉಪಯೋಗಿಸಿಕೊಂಡು ಸ್ವಭಾವತಃ ಶಾಂತಿಪ್ರಿಯರಾಗಿದ್ದ ದೈತ್ಯ ಬೌದ್ಧರ ಸಂಸ್ಕೃತಿಯನ್ನು ಹಾಳುಮಾಡತೊಡಗಿದರು. ಶಾಂತಿ ಪ್ರಿಯರಾಗಿದ್ದ ದೈತ್ಯರಲ್ಲಿ ಕೆಲವರು ಆರ್ಯರ ಸಾರ್ವಭೌಮತ್ವವನ್ನೊಪ್ಪಿದರೆ ಇನ್ನು ಕೆಲವರು ನಿರ್ಲಿಪ್ತರಾಗಿ ಕುಳಿತರು. ಆದರೆ ಕೆಲವರು ಸಹಿಸಲಸಾಧ್ಯವಾದ ದಬ್ಬಾಳಿಕೆಯನ್ನು ಪ್ರತಿಭಟಿಸಿದರು. ಇದು ಅಸಹಿಷ್ಣುತೆಯಲ್ಲ. ಅದು ಏನಿದ್ದರೂ ಆರ್ಯರ ಮನೋಭಾವ. ದೈತ್ಯರು ಮಾಡಿದ್ದು ಅಸತ್ಯ-ಅಸಮಾನತೆ-ಅಪಮಾನಗಳ ವಿರುದ್ಧದ ಹೋರಾಟ. ಆದರೆ, ಯುದ್ಧ ಎಂದರೆ ಏನು ಎಂದೇ ತಿಳಿಯದ ದೈತ್ಯರು ಆರ್ಯರ ಎದುರು ಸೋಲಲೇ ಬೇಕಾಯಿತು. ಗೆದ್ದ ಆರ್ಯರು ತಮ್ಮ ಹೋಮ ಹವನ ಪೂಜೆ ಪುನಸ್ಕಾರ ಮೊದಲಾದ ಅರ್ಥಹೀನ ಆಚರಣೆಗಳನ್ನು ಇಲ್ಲಿಯೂ ಮುಂದುವರೆಸಿದರು.

ಅತಿ ಅಹಂಕಾರಿಗಳೂ ಅಭಿಮಾನಿಗಳೂ ಆಗಿದ್ದ ಆರ್ಯರು ಇಲ್ಲಿನ ಆಹಾರ ಪದ್ಧತಿಯನ್ನು ಒಪ್ಪಲಿಲ್ಲ. ಮೇಲಾಗಿ ಇಲ್ಲಿ ಆತ್ಮ ಸಮರ್ಪಣೆ ಮಾಡಿಕೊಳ್ಳುತ್ತಿದ್ದ ಪ್ರಾಣಿಗಳನ್ನು ಸೇವಿಸಿ ದೈತ್ಯರು ಬಲಾಢ್ಯರಾಗಿದ್ದನ್ನು ಆರ್ಯರು ತಿಳಿದರು. ಅದರಲ್ಲಿಯೂ ಗೋ ಮಾಂಸ ಭಕ್ಷಣೆ ಇವರ ಬಲವರ್ಧನೆಯಲ್ಲಿ ಮಹತ್ವದ ಪಾತ್ರ ವಹಿಸಿದ್ದನ್ನು ಅರಿತ ಬ್ರಾಹ್ಮಣರು ಸ್ಮೃತಿ ಎನ್ನುವ ಶಾಸನದಿಂದ ದೈತ್ಯರ ಆಹಾರ ಪದ್ಧತಿಯ ಮೇಲೆ ಸಾಂಸ್ಕೃತಿಕ ಪ್ರಹಾರವನ್ನು ಮಾಡಿದರು. ಗೋ ಮಾಂಸವನ್ನು ಸೇವಿಸುವುದು ಅಪರಾಧ ಎನ್ನುವ ಕಾನೂನು ಮಾಡಿದರು. ಹಿಂಸಾ ಪ್ರವೃತ್ತಿಯವರಾಗಿದ್ದ ಆರ್ಯರು ಗೋವನ್ನು ಹಿಂಸಿಸಲಾಗಿಯೇ ಅದರ ಹಾಲನ್ನು ದೇವರಿಗೆ ಅಭಿಷೇಕ ಮಾಡುವ ಮತ್ತು ಅದನ್ನು ಸೇವಿಸುವ ಪದ್ಧತಿಯನ್ನು ಅನುಸರಿಸಿದರು.

ಆರ್ಯರು ಇಲ್ಲಿಗೆ ಬರುವಾಗ, ತಮ್ಮ ನೆಲವಾದ ಪಾಶ್ಚಾತ್ಯ ಭೂ ಖಂಡದಲ್ಲಿ ಬೆಳೆಯುತ್ತಿದ್ದ ಖರ್ಜೂರದಂತಹ ಹಣ್ಣೊಂದರ ಬೀಜವನ್ನು ತಮ್ಮ ಜೊತೆಗೆ ತಂದಿದ್ದರು. ಆ ಬೀಜವನ್ನು ಉತ್ತರ ಭಾಗದಲ್ಲಿ ಬಿತ್ತಿದಾಗ ಅದು ಅಷ್ಟಾಗಿ ಬೆಳೆಯಲಿಲ್ಲ. ಆಗಾಗಲೇ ದಕ್ಷಿಣದ ಕಡೆ ಮುಖ ಮಾಡಿದ್ದ ಆರ್ಯರಿಗೆ ದಕ್ಷಿಣದ ಪ್ರಸ್ಥಭೂಮಿ ವರವಾಗಿ ಪರಿಣಮಿಸಿತು. ಬಂದಿದ್ದ ಸಪ್ತರ್ಷಿಗಳಲ್ಲಿ ಒಬ್ಬನಾಗಿದ್ದ ಜಮದಗ್ನಿ ಎನ್ನುವವನ ಮಗ ರಾಮ ಎನ್ನುವವ ಇಲ್ಲಿದ್ದ ಬೌದ್ಧರನ್ನೆಲ್ಲಾ ಹುಡುಕಿ ಹುಡುಕಿ ಕೊಂದು ಆ ಕ್ಷೇತ್ರವನ್ನು ತನ್ನದಾಗಿಸಿಕೊಂಡನು. ಆತನು ಮಹಾ ಜಾತಿಪ್ರೇಮಿ ಬ್ರಾಹ್ಮಣನಾಗಿದ್ದ. ಕೈನಲ್ಲಿ ಸದಾ ಕೊಡಲಿಯನ್ನು ಹಿಡಿದು ಬೌದ್ಧರನ್ನು ಕೊಲ್ಲುತ್ತಾ ಸಾಗುತ್ತಿದ್ದ. ಆತನ ಉಪಕಾರವನ್ನು ನೆನೆಸಿ ಆರ್ಯರು ಕಥೆಗಳನ್ನು ಕಟ್ಟಿ ಆ ಕ್ಷೇತ್ರವನ್ನು ಪರಶುರಾಮ ಕ್ಷೇತ್ರ ಎಂದು ಕರೆದರು.

ಆ ಪರಶುರಾಮ ಕ್ಷೇತ್ರದಲ್ಲಿ ತಂದಿದ್ದ ಆ ಕಾಯಿಗಳನ್ನು ನೆಟ್ಟರು. ಆದರೆ ಆ ಕಾಯಿಗಳು ಗಾತ್ರದಲ್ಲಿ ಬಹಳವಾಗಿ ಬೆಳೆದವು. ಸಸ್ಯಗಳೂ ಕೂಡ ಆರ್ಯರ ಕೈನಲ್ಲಿ ಸಿಕ್ಕಿ ನಲುಗಿದ್ದರ ಪರಿಣಾಮ ಇದು. ಅದರ ಅಗಾಧ ಗಾತ್ರದ ಬೆಳವಣಿಗೆಯನ್ನು ಕಂಡು ದಂಗಾದ ಆರ್ಯರು ಅದನ್ನು ದಂಗು ಫಲ ಎಂದು ಕರೆದರು. ಮುಂದೆ ಇದೇ ತಂಗಿನ ಫಲ ಎಂದಾಯಿತು. ಇಷ್ಟಕ್ಕೇ ಸುಮ್ಮನಾಗದ ಆರ್ಯರು ಆ ಸಸ್ಯದ ಮೇಲೆ ಜೈವಿಕ ಪ್ರಯೋಗಗಳನ್ನು ನಡೆಸಿದರು. ಜೊತೆಯಲ್ಲಿಯೇ ನಡೆಯುತ್ತಿದ್ದ ಹೋಮ ಹವನ ಮೊದಲಾದ ಅನಾಗರಿಕ ಆಚರಣೆಗಳಿಂದ ಈ ಕಾಯಿ ವಿಷವಾಗಿ ಪರಿಣಮಿಸಿತು. ಶಿವ ಎನ್ನುವ ಅಲೆಮಾರಿ ಆರ್ಯನೊಬ್ಬ ತನ್ನ ಹೊಟ್ಟೆಯ ಹಸಿವನ್ನು ನೀಗಿಸಿಕೊಳ್ಳುವುದಕ್ಕಾಗಿ ಒಮ್ಮೆ ಈ ಕಾಯಿಗಳನ್ನು ತಿಂದನು. ಆದರೆ ಅದರಲ್ಲಿದ್ದ ವಿಷದ ಪರಿಣಾಮ, ಆತ ಅತಿಯಾದ ವಿಷದ ಬಾಧೆಗೆ ಈಡಾದ. ಬಾಧೆಯನ್ನು ತಾಳಲಾಗದೆ ಹಿಮವತ್ಪರ್ವತದಲ್ಲಿ ವಾಸಿಸತೊಡಗಿದ.

ಆರ್ಯರು ತಮ್ಮ ಷಡ್ಯಂತ್ರ ಮತ್ತು ಕುತಂತ್ರಗಳನ್ನು ಸಾಧಿಸುವುದಕ್ಕಾಗಿ ಈ ಘಟನೆಯನ್ನು ಬಹಳ ಚೆನ್ನಾಗಿ ಉಪಯೋಗಿಸಿಕೊಂಡರು. ಹಿಮವತ್ಪರ್ವತವನ್ನು ಸೇರಿದ ಶಿವ ವಿಷ ಬಾಧೆಗೆ ಒಳಗಾಗಿದ್ದು ಎಲ್ಲ ಬೌದ್ಧ ಅಸುರರಿಗೂ ತಿಳಿದಿತ್ತು. ಆದರೆ ಅವರಿಗೆ ವಿಷದ ಮೂಲ ಗೊತ್ತಿರಲಿಲ್ಲ. ಬೌದ್ಧರ ಈ ಮುಗ್ಶತೆಯನ್ನು ಅನೇಕಾಂತವಾದದ ನೆಲೆಯಲ್ಲಿ ನೋಡದ ಆರ್ಯರು, ಸಮಾಜವಾದ ಮತ್ತು ಸಮತಾವಾದದ ನೆಲೆಯಲ್ಲಿ, ಕಾರ್ಲ್ ಮಾರ್ಕ್ಸ್, ಬುದ್ಧ ಬಸವಣ್ಣ, ಸರ್ವಜ್ಞ, ಗಾಂಧೀಜಿ, ಲೋಹಿಯಾ,ಅಂಬೇಡ್ಕರ್, ಕ್ರಿಸ್ತ, ಕ್ಯಾಸ್ಟ್ರೋ ಮೊದಲಾದ ಬುದ್ಧಿಜೀವಿಗಳ ಚಿಂತನೆಯನ್ನು ಹೊರಗಿಟ್ಟು ತಮ್ಮ ಬಂಡವಾಳಷಾಹಿ ಪ್ರವೃತ್ತಿಗೆ ಚೆನ್ನಾಗಿ ಬಳಸಿಕೊಂಡರು. ಶಿವನನ್ನು ನಂಜುಂಡ, ವಿಷ ಕಂಠ ಎಂದು ಕರೆದರು. ಅವನನ್ನು ದೇವರನ್ನಾಗಿಸಿದರು. ಆದರೆ ಸತ್ಯ ಹೊರ ಬಂದೀತು ಎನ್ನುವ ಹೆದರಿಕೆಯಿಂದ ಶಿವನ ಸುತ್ತ ತಮ್ಮ ನುಮಾಯಿಂದರನ್ನು ಇಟ್ಟರು. ಅವರನ್ನೇ ಹರಗಣ ಎಂದು ಕರೆದರು. ಭೂತ ಪ್ರೇತ ಮೊದಲಾದ ಮೌಢ್ಯವನ್ನು ಬೆಳೆಸಲು ಶಿವನು ಸ್ಮಶಾನವಾಸಿ ಎಂದೂ ಕರೆದರು. ಮಧ್ಯೆ ತಡೆಯಾಗಲು ಕೆಲವು ಋಷಿಗಳನ್ನೂ ಹಿಮವತ್ಪರ್ವತಕ್ಕೆ ಕಳಿಸಿಕೊಟ್ಟರು.

ಈ ಕಡೆಯಲ್ಲಿ ದೇವರಿಗೆ ತೆಂಗಿನ ಕಾಯಿ ಅರ್ಪಿಸುವುದು ಶ್ರೇಷ್ಠ ಎಂದು ಬಿಂಬಿಸಲು ಪುರಾಣದ ಕತೆ, ಶಾಸ್ತ್ರ ಸ್ಮೃತಿಗಳನ್ನು ರಚಿಸಿದರು. ತಾವು ಬೆಳೆದ ತೆಂಗಿನಕಾಯಿಯನ್ನು ಮಾರಾಟ ಮಾಡಲು ದೇವರನ್ನು ಬಳಸಿಕೊಂಡರು ಆರ್ಯರು. ಇಲ್ಲಿ ಆರ್ಯರ ಎರಡು ಷಡ್ಯಂತ್ರಗಳಿದ್ದವು. ಒಂದು ತಾವು ಬೆಳೆದ ತೆಂಗಿನಕಾಯಿಯನ್ನು ಮಾರುವುದು ಮತ್ತೊಂದು ಅದನ್ನು ಸೇವಿಸಿದ ಬೌದ್ಧ-ದೈತ್ಯ-ಅಸುರ-ರಕ್ಕಸ-ದಾನವ-ಕಾಲಕೇಯ ಸಮಾಜದವರು ಇಲ್ಲದಂತೆ ಮಾಡುವುದು. ವಿಷ ಸೇವಿಸಿದವರು ಮತ್ತೆ ಬದುಕುವುದಕ್ಕುಂಟೇ? ಇಲ್ಲವಲ್ಲ. ಆದರೆ ಅರೆಬೆಂದ ಆರ್ಯರಿಗೆ ಬೌದ್ಧರ ಆಹಾರ ಪದ್ಧತಿ ತೆಂಗಿನಕಾಯಿಯಲ್ಲಿದ್ದ ವಿಷವನ್ನು ಶಮಿಸುವ ಸಾಮರ್ಥ್ಯ ಹೊಂದಿರುವುದು ತಿಳಿದಿರಲಿಲ್ಲ. ಹಾಗಾಗಿ ಬೌದ್ಧರು ಉಳಿದುಕೊಂಡರು, ತಮ್ಮ ಜೀವನ ಶೈಲಿಯನ್ನು ಕಾಲಕ್ಕೆ ತಕ್ಕಂತೆ ಬದಲಾಯಿಸಿಕೊಂಡಿದ್ದರಿಂದ ಮತ್ತು ಆರ್ಯರ ಜೈವಿಕ ಪ್ರಯೋಗಗಳು, ಹೋಮ ಹವನಗಳಿಂದಾದ ವಾಯು ಮಾಲಿನ್ಯದಿಂದ ದೊಡ್ಡ ದೇಹವನ್ನು ಹೊಂದಿದ್ದ ದೈತ್ಯರು ಕುಬ್ಜರಾದರು. ಆರ್ಯರು ಅವರನ್ನು ತುಳಿದರು. ತುಳಿಯುತ್ತಲೇ ಇದ್ದಾರೆ.

ಆದರೆ ಬೌದ್ಧ ಬಾಂಧವರೇ, ಈಗ ಈ ಆರ್ಯರ ಷಡ್ಯಂತ್ರ ಬಯಲಾಗಿದೆ. ಅದೂ ಮತ್ತೊಂದು ಬಂಡವಾಳಷಾಹಿ ದೇಶವಾದ ಅಮೆರಿಕದ ಮೂಲಕ. ಭಾರತದ ಭಕ್ತರೆಲ್ಲರ ಪ್ರೀತಿಯ ಪ್ರಧಾನಿ ಈ ವಿಚಾರವನ್ನು ಗುಪ್ತವಾಗಿಡಲು ಅಮೆರಿಕಾದ ಜೊತೆ ಮಾತಾಡಲೆಂದೇ ಇಷ್ಟೆಲ್ಲಾ ವಿದೇಶ ಯಾತ್ರೆ ಮಾಡಿದ್ದು. ಅಮೆರಿಕಾದ ವಿಜ್ಞಾನಿ ಮಾಡಿದ್ದ ಈ ಸಂಶೋಧನೆ ನಿಜವಾಗಿ ರಷಿಯಾ ದೇಶದ್ದು. ಮಹಾಕಾಲಿ ಕೈಕಾಲ್ ನೋವ್ ಎನ್ನುವ ರಷಿಯಾದ ವಿಜ್ಞಾನಿ ಇದನ್ನು ಕಂಡು ಹಿಡಿದು ಕೊರಿಯಾ ಯುದ್ಧದಲ್ಲಿ ಅಮೆರಿಕಾ ವಿರುದ್ಧ ಜೈವಿಕ ಅಸ್ತ್ರವಾಗಿ ಬಳಸಲು ನೋಡಿದ್ದ, ಆದರೆ ಹೇಗೋ ಸುಳಿವು ಪಡೆದ ಅಮೆರಿಕಾ ಆತನನ್ನು ಗೂಢಚಾರಿಗಳ ಮೂಲಕ ಕೊಲ್ಲಿಸಿತ್ತು, ನಂತರ ರಷಿಯಾಕ್ಕೆ ಕೆರಳದಲ್ಲಿ ಇದನ್ನು ಬೆಳೆಯುತ್ತಿರುವುದು ಮತ್ತು ಕೇರಳ ಸಮಾಜವಾದದ ನೆಲೆಯಲ್ಲಿ ಸಮತಾವಾದವನ್ನು ಅನೇಕಾಂತವಾದದ ಹಿನ್ನೆಲೆಯಲ್ಲಿ ಆಚರಿಸುತ್ತಾ ಬಂಡವಾಳಶಾಹಿಗಳನ್ನು ದೂರ ಇಡುತ್ತಿರುವುದು ತಿಳಿದು, ಅಲ್ಲಿನ ಶ್ರಮ ಸಂಸ್ಕೃತಿಗೆ ಗೌರವ ಕೊಟ್ಟು ಈ ಸಂಗತಿಯನ್ನು ಅಲ್ಲಿದ್ದವರ ಬದುಕಿಗೆ ಅನುಕೂಲವಾಗಲಿ ಎಂದು ಮುಚ್ಚಿಟ್ಟಿದ್ದರು.

ಆದರೆ ಬೌದ್ಧ ಬಂಧುಗಳೆ ನಮಗೀಗ ಆ ಶುಭಕಾಲ ಬಂದಿದೆ. ತಲತಲಾಂತರದಿಂದ ನಮ್ಮನ್ನು ಶೋಷಿಸಿದ ಈ ತೆಂಗಿನಕಾಯಿ ವಿಷ ಎನ್ನುವುದು ಜಗಜ್ಜಾಹೀರಾಗಿದೆ. ನಾವೆಲ್ಲರೂ ದೇವಸ್ಥಾನಗಳಿಗೆ ಹೋಗುವುದನ್ನು ಬಿಟ್ಟಾಗಿದೆ. ಇನ್ನು ಈ ತೆಂಗಿನಕಾಯಿ ಎನ್ನುವ ಆರ್ಯ ನಿರ್ಮಿತ ವಿಷವನ್ನೂ ವರ್ಜಿಸೋಣ. ತೆಂಗಿನಕಾಯಿ ವಿಷ. ಅದನ್ನು ಬಳಸದೇ ಸಾವಿರಾರು ವರ್ಷಗಳಿಂದ ಆರ್ಯರು ನಮ್ಮ ಮೇಲೆ ನಡೆಸಿದ ದೌರ್ಜನ್ಯದ ವಿರುದ್ಧ ಸೇಡು ತೀರಿಸಿಕೊಳ್ಳೋಣ. ರಸ್ತೆಯಲ್ಲಿರುವ ತೆಂಗಿನ ಕಾಯಿಗಳನ್ನೆಲ್ಲ ಭಗವದ್ಗೀತೆ ಸುಟ್ಟಂತೆಯೇ ಸುಟ್ಟು ಆರ್ಯರಿಗೆ ಆಹಾರವಿಲ್ಲದಂತೆ ಮಾಡೋಣ. ನಮ್ಮನ್ನು ಶೋಷಿಸಿದ ಬ್ರಹ್ಮಣರು ಪೂಜೆಗೆ ತೆಂಗಿನ ಕಾಯಿ ಕೊಡುವವರಿಲ್ಲದೆ ಒದ್ದಾಡುವಂತೆ ಮಾಡೋಣ.

ಅಂದು ಇಕ್ರಲಾ ವದಿರ್ಲಾ
ಇಂದು ಎತ್ಕಳ್ರಲಾ ಬಿಸಾಡ್ರಲಾ

ನಾನು ಕೆಂಪಂಗಿ ಬಿಚ್ಚಿಟ್ಟು ಬಹಳ ಕಾಲವಾಗಿದೆ. ಅದನ್ನು ಮತ್ತೆ ತೊಡುವುದೂ ಇಲ್ಲ. ಆದರೆ ತೆಂಗಿನಕಾಯಿ ವಿಷ ಎನ್ನುವ ಮೂಢ ಸಂಶೋಧನೆಯನ್ನು ಸೈಟು ಅಥವಾ ಮತ್ತೇನಾದರೂ ಬೇಕಾದ ಗಂಜಿ ಪಾಷಂಡಿ ಹೇಗೆಲ್ಲಾ ಬಳಸಬಹುದು ಅಂತ ಯೋಚನೆ ಬಂದಾಗ ಮೂಡಿದ ಕಲ್ಪನೆಗಳು ಇವು.

No comments:

Post a Comment