Thursday, June 28, 2018

ಮೈಥಿಲ

ಭರತ ಭೂಮಿಯ ಇತಿಹಾಸ ಪೂರ್ವ ರಾಜವಂಶಗಳು ಎರಡು- ಸೂರ್ಯವಂಶ ಮತ್ತು ಚಂದ್ರವಂಶ. ಇವೆರಡೂ ಅವನಿದೇವಿಯ ಅಕ್ಷಿದ್ವಯಗಳು ಎಂದೇ ಖ್ಯಾತವಾದವು. ಈ ವಂಶಗಳು ಕಾಲಾಂತರದಲ್ಲಿ ಅನೇಕ ಕವಲುಗಳಾಗಿ ಒಡೆಯುತ್ತಾ ಮುಂದುವರೆದವು. ಇದರಲ್ಲೊಂದು ವಂಶ ಜನಕವಂಶ. ಆಶ್ಚರ್ಯದ ಮಾತೆಂದರೆ ಈ ವಂಶದಲ್ಲಿ ಹುಟ್ಟಿದ ಪ್ರತಿಯೊಬ್ಬ ರಾಜನೂ ಜನಕ ಎಂದೇ ಕರೆಸಿಕೊಂಡ. ಇಲ್ಲಿ ಜನಿಸಿದ ರಾಜರೆಲ್ಲರೂ ಧಾರ್ಮಿಕರು ಜ್ಞಾನಿಗಳೂ ಆಗಿದ್ದರು. ಭುವನ ಪಾವನೆ ಸೀತೆ ಕೂಡಾ ಇದೇ ವಂಶದಲ್ಲಿ ಬೆಳೆದಳು. ಅವಳ ಇನ್ನೆರಡು ಹೆಸರುಗಳು- ವೈದೇಹೀ ಮತ್ತು ಮೈಥಿಲೀ. ಅವಳಿಗೆ ಈ ಹೆಸರು ಹೇಗೆ ಬಂತು ಎಂದು ಕೇಳಿದರೆ ಯಾರೂ ಹೇಳಬಲ್ಲರು. ಮಿಥಿಲಾ ರಾಜ ಕುಮಾರಿಯಾಗಿದ್ದರಿಂದ ಮೈಥಿಲೀ ಮತ್ತು ವಿದೇಹ ರಾಜನ ಮಗಳಾಗಿದ್ದರಿಂದ ವೈದೇಹೀ ಎಂದು. ಆದರೆ ನನ್ನಂಥವರು ತಲೆಹರಟೆಗಳು. ಮುಂದಿನ ಪ್ರಶ್ನೆ ಯಾವತ್ತೂ ಇದ್ದಿದ್ದೇ, ಸಮೆಚೀನ ಉತ್ತರ ಬಯಸಿ. ಜಸ್ಟ್ ಆಸ್ಕಿಂಗ್ ಎನ್ನುವವರ ಅಪ್ಪನಾಣೆಗೂ ನಾನು ಸುಮ್ಮನೆ ಪ್ರಶ್ನೆ ಕೇಳುವುದಿಲ್ಲ. ಇಲ್ಲಿ ಕೇಳಿದ ಪ್ರಶ್ನೆ, ಜನಕವಂಶ ದೇಹ ಇಲ್ಲದ ವಿದೇಹ ರಾಜ್ಯವನ್ನು ಹೇಗೆ ಆಳಿತು?

ಉತ್ತರ ಸಿಕ್ಕಿತು. ವಿಷ್ಣುಪುರಾಣದಲ್ಲಿ, ಹೊಸ ಹೊಳಹಿನೊಂದಿಗೆ. ಇಕ್ಷ್ವಾಕುವಿನ ಮಗ ನಿಮಿ. ಈತ ಒಂದು ಮಹಾಯಾಗವನ್ನು ಮಾಡಲು ನಿಶ್ಚಯಿಸಿದ. ಆತನ ಗುರು ವಸಿಷ್ಠರನ್ನು ಯಾಗದ ನೇತೃತ್ವ ವಹಿಸುವಂತೆ ಕೇಳಿಕೊಂಡ. ವಸಿಷ್ಠರು "ಈ ಯಾಗವನ್ನು ಪೂರೈಸುವುದಕ್ಕೆ ಐದು ನೂರು ವರ್ಷಗಳು ಬೇಕು. ನಾನು ಈಗಾಗಲೇ ದೇವೇಂದ್ರನ ಇದೇ ಮಹಾಕ್ರತುವಿನ ನೇತೃತ್ವವನ್ನು ವಹಿಸಿಯಾಗಿದೆ. ಇದನ್ನು ಮುಗಿಸಿ ನಿನ್ನ ಯಾಗವನ್ನು ಮುಂದುವರೆಸೋಣ" ಎಂದರು. ನಿಮಿ ಧರ್ಮ ಸಂಕಟದಲ್ಲಿ ಸಿಲುಕಿದ. ಯಾಗ ಮಾಡದೇ ಬಿಟ್ಟಲ್ಲಿ ಸಂಕಲ್ಪ ದೋಷ. ಮಾಡಲು ಮುಂದಾದಲ್ಲಿ ಗುರುವಿನ ಅವಕೃಪೆ ಅಥವಾ ದೇವಕಾರ್ಯಕ್ಕೆ ಅಡ್ಡಿ ಬಂದ ದೋಷ. ಇದಕ್ಕೆ ಆತನೇ ಪರಿಹಾರವನ್ನೂ ಕಂಡುಕೊಂಡ. ಗೌತಮರನ್ನು ಗುರುವಾಗಿ ಪರಿಗ್ರಹಿಸಿ ಯಾಗವನ್ನು ಮುಂದುವರೆಸಿದ. ಯಾಗದ ಆಹುತಿಯನ್ನು ಸ್ವೀಕರಿಸಲು ಸ್ವಯಂ ದೇವತೆಗಳೇ ಬಂದಿದ್ದರು. ಒಂದು ದಿನ ಯಾಗವನ್ನು ಮುಗಿಸಿ ನಿಮಿ ನಿದ್ದೆಯಲ್ಲಿದ್ದ. ದೇವೇಂದ್ರನ ಯಾಗವನ್ನು ಮುಗಿಸಿ ವಸಿಷ್ಠರು ನಿಮಿಯಲ್ಲಿಗೆ ಬಂದರು.

ನಿಮಿ, ಗೌತಮರನ್ನು ಮುಂದಿಟ್ಟುಕೊಂಡು ಯಾಗ ಮಾಡಿದ್ದನ್ನು ವಸಿಷ್ಠರು ಸಹಿಸಲಿಲ್ಲ. ತಮಗಾದ ಅಪಮಾನ ಎಂದು ಭಾವಿಸಿದರು. ಸಿಟ್ಟಿನಿಂದ ನಿದ್ದೆಯಲ್ಲಿದ್ದ ನಿಮಿಯನ್ನು ಶಪಿಸಿದರು. "ಇವನೀಗಲೇ ದೇಹವನ್ನು ತೊರೆಯುವಂತಾಗಲಿ-ಅರ್ಥಾತ್ ವಿದೇಹನಾಗಲಿ" ಎಂದು. ನಿದ್ದೆಯಿಂದ ಎಚ್ಚರಗೊಂಡ ನಿಮಿ, ತನ್ನನ್ನು ಗುರುವು ಶಪಿಸಿದ್ದನ್ನು ಕೇಳಿ ನೊಂದ. ಯಜ್ಞ ಎನ್ನುವ ದೈವಪ್ರಿಯ ಕೈಂಕರ್ಯವನ್ನು ಮಾಡುವುದಕ್ಕಾಗಿ ತಾನು ಮುಂದಾಗಿ, ಗುರುವಿಗೆ ಅನಾನುಕೂಲತೆ ಇದ್ದುದರಿಂದಲಷ್ಟೇ ಗೌತಮರನ್ನು ಗುರುವಾಗಿ ಪರಿಗ್ರಹಿಸಿ ಯಾಗವನ್ನು ಮಾಡಿದ್ದು. ಇದನ್ನು ಅರಿಯದೇ, ಅವಮಾನವೆಂದು ಗ್ರಹಿಸಿ, ಅಹಂಕಾರಭಾವದಿಂದ ಶಪಿಸಿದ್ದು, ಅದೂ ನಿದ್ದೆಯಲ್ಲಿದ್ದವನನ್ನು-ಸರ್ವಥಾ ಸಲ್ಲ- ಹೀಗಾಗಿ, ವಾಸಿಷ್ಠರೂ ದೇಹವಿಲ್ಲದಂತಾಗಲಿ ಎಂದು ಶಪಿಸಿ, ತನ್ನ ದೇಹವನ್ನು ಬಿಟ್ಟ.

ವಸಿಷ್ಠರು ಮಿತ್ರಾವರುಣರ ದೇಹದಲ್ಲಿ ಸೇರಿದರು. ಅವರ ರೇತಸ್ಸಿನ ಮೂಲಕ ಮತ್ತೆ ಜನಿಸಲು. ಆದರೆ ನಿಮಿ, ಸತ್ಯಸಂಧ ಧಾರ್ಮಿಕನಾಗಿದ್ದರೂ ತಪಸ್ವಿಯಾಗಿರಲಿಲ್ಲ. ಹಾಗಾಗಿ ಆತನಿಗೆ ವಾಸಿಷ್ಠರಂತೆ ಮತ್ತೆ ದೇಹವನ್ನು ಪಡೆಯುವುದು ದುಃಸಾಧ್ಯವಾಗಿತ್ತು. ಆದರೆ, ರಾಜನಿಲ್ಲದೆ ಏನಾದೀತು ಎಂದು ಹಿಂದೆ ವೇನನ ಮರಣದ ಸಂದರ್ಭದಲ್ಲೇ ಅರಿತಿದ್ದರಲ್ಲ ಋಷಿಮುನಿಗಳು. ಅವರು ಹವಿರ್ಭಾಗ ಸ್ವೀಕರಿಸಲು ಬಂದ ದೇವತೆಗಳಲ್ಲಿ ನಿಮಿಗೆ ಪುನಃ ದೇಹಪ್ರದಾನ ಮಾಡುವಂತೆ ವಿನಂತಿಸಿದರು. ನಿಮಿ ಒಪ್ಪಲಿಲ್ಲ. ಗುರುವಾಕ್ಯೋಲ್ಲಂಘನದ ದೋಷ ಬಂದೀತು ಎನ್ನುವ ಕಾರಣದಿಂದ. ಆದರೆ ಜನ್ಮವನ್ನು ನಿರಾಕರಿಸಲೂ ಇಲ್ಲ. ಜನರ ಕಣ್ಣುಗಳಲ್ಲಿ ತನ್ನನ್ನು ಇರಿಸುವಂತೆ ಕೇಳಿಕೊಂಡ. ಅಂದಿನಿಂದಲೇ ಜನರು ನಿಮೇಷ ಉನ್ಮೇಷಗಳನ್ನು ಪ್ರಾರಂಭಿಸಿದ್ದಂತೆ. (ರೆಪ್ಪೆ ಮುಚ್ಚುವುದು-ತೆರೆಯುವುದು).

ವೇನನ ದೇಹವನ್ನು ಮಥಿಸಿದಂತೆಯೇ ನಿಮಿಯ ದೇಹವನ್ನೂ ಮಥಿಸಿದರು. ಧರ್ಮಜ್ನನೂ ಜ್ಞಾನಿಯೂ ಆದ ನಿಮಿಯ ದೇಹದಿಂದ ಅಂತೆಯೇ ಧರ್ಮಾತ್ಮನಾದ ಮಗ ಜನಿಸಿದ. ವೇನ ದುರಾತ್ಮನಾಗಿದ್ದರಿಂದ ನಿಷಿಯ ಜನನವಾಗಿತ್ತು. "ನನ್ನ ಜೀನ್ಸಿನಲ್ಲಿಯೇ ಆ ಗುಣ ಬಂದಿದೆ" ಎನ್ನುವ ಮಾತು ಸತ್ಯ ಎನ್ನುವುದಕ್ಕೆ ಇದು ಪುರಾವೆಯಲ್ಲವೇ? ಗುಣಗಳು ವಂಶವಾಹಿಯಿಂದ ಪ್ರವಹಿಸುತ್ತದೆ ಎನ್ನುವುದುಅನ್ನು ಋಷಿಮುನಿಗಳು ಅರಿತಿದ್ದರು ಎನ್ನುವುದಕ್ಕೆ ಇದು ಸಾಕಲ್ಲ.ನಿಮಿಯ ದೇಹವನ್ನು ಮಥಿಸಿದ್ದರಿಂದ ಹುಟ್ಟಿದ ಆತನ ಮಗನನ್ನು ಮಿಥಿಲ ಎಂದರು. ದೇಹವಿಲ್ಲದ ಅಂದರೆ ವಿದೇಹವಾದವನ ಮಗನಾದ್ದರಿಂದ ವೈದೇಹ ಎಂದು ಕರೆದರು. ಜನಕನ ದೇಹದಿಂದ ಜನಿಸಿದವನಾದ್ದರಿಂದ 'ಜನಕ' ಎಂದು ಕರೆದರು.ಕಾಲಗಣನೆಗೂ ಈ ನಿಮೇಷ ಉನ್ಮೇಷಗಳೇ ಆಧಾರವಾದವು ಕೂಡಾ.

ನಿಮಿ ಕಣ್ಣು ಸೇರುವ ಮೊದಲು ಜನ ಕಣ್ಣು ಮುಚ್ಚಿ ಬಿಟ್ಟು ಮಾಡುತ್ತಿರಲಿಲ್ಲವೇ ಎಂದು ಕೇಳಿದರೆ, ಇಲ್ಲ ಎಂದೇ ಹೇಳಬೇಕು. ಒಂಟೆಗಳು ಮರುಭೂಮಿಯಲ್ಲಿ ಓಡಾಡುವಾಗ ಮರಳು ಕಣ್ಣಿಗೆ ತಾಗೀತು ಎಂದು, ತಮ್ಮ ಮೂರನೇ ರೆಪ್ಪೆಯ ಪ್ರಯೋಗವನ್ನು ಮಾಡುತ್ತವಂತೆ. ಮನುಷ್ಯನಿಗೂ ಮೊದಲು ಮೂರನೇ ರೆಪ್ಪೆ ಇತ್ತು ಮತ್ತು ಕಾಲಾಂತರದಲ್ಲಿ ಅದರ ಉಪಯೋಗ ಇಲ್ಲದಾಯಿತು ಎನ್ನುತ್ತಾರೆ ಮಾನವ ಶಾಸ್ತ್ರಜ್ಞರು. ಬಹುಷಃ ಈ ಬದಲಾವಣೆ ಈ ಕಾಲಘಟ್ಟದಲ್ಲೇ ಆಗಿರಬೇಕು.

ವಸಿಷ್ಠರು ಮಿತ್ರಾವರುಣರ ದೇಹದಲ್ಲಿ ಸೇರಿ ಅವರ ರೇತಸ್ಸಿನಲ್ಲಿ ಹೊರಬಿದ್ದರು. ಇಲ್ಲಿಯೂ ನನಗೆ ಯಾವುದೋ ಒಂದು ಜೈವಿಕ ಪ್ರಯೋಗ ನಡೆದಿತ್ತೇನೋ ಎನಿಸುತ್ತದೆ. ಯಾಕೆಂದರೆ, ಭೌತಶಾಸ್ತ್ರದ ಸಿದ್ಧಾಂತವೊಂದರ ಪ್ರಕಾರ ವಸ್ತುವನ್ನು ಶಕ್ತಿಯಾಗಿಯೂ ಶಕ್ತಿಯನ್ನು ವಸ್ತುವಾಗಿಯೂ ಬದಲಾಯಿಸಬಹುದಂತೆ. ಅಂದಿನ ಋಷಿಮುನಿಗಳು ಇದನ್ನೇ ತಮ್ಮ ಭೌತಿಕ ಶರೀರಕ್ಕೂ ಅಳವಡಿಸಿದ್ದಿರಬಹುದು. ಅಥವಾ ಅವರು ಅಂಥಾ ಪ್ರಯೋಗಗಳನ್ನು ಬಳಸಿಯೇ ನೂರಾರು-ಸಾವಿರಾರು ವರ್ಷ ಬದುಕಿದ್ದಿರಬೇಕು. ಶುಕ್ರಾಚಾರ್ಯರು ಸಿದ್ಧಿಸಿಕೊಂಡ ಮೃತ ಸಂಜೀವಿನಿ ವಿದ್ಯೆ ಇದೇ ಇರಬಹುದೇ?

ಇದೆಲ್ಲ ಅಂತಿರಲಿ, ಇಂದಿಗೂ ಮಿಥಿಲಾ ಎನ್ನುವ ಪ್ರದೇಶ ಇಂದಿನ ಬಿಹಾರದ ಭಾಗವಾಗಿ ಇದ್ದರೂ ಪುರಾಣಗಳಿಗೆ ಪುರಾವೆ ಬೇಕು ಎನ್ನುವುದು ಅತಿ ಬುದ್ಧಿವಂತಿಕೆಯೋ ಅಥವಾ ಸತ್ಯವನ್ನು ಒಪ್ಪದೆ ತಾನೊಂದು-ತನ್ನದೊಂದಿಷ್ಟು ಎನ್ನುವ ಮೂರ್ಖತನವೋ

(ವೇನನ ಪ್ರಕರಣವನ್ನು ಬರೆಯುತ್ತಿದ್ದಾಗ, ಈ ಪ್ರಕರಣವೊಂದನ್ನು ಬರೆದೇನು ಎನ್ನುವ ಕಲ್ಪನೆಯೂ ನನಗಿರಲಿಲ್ಲ. ಹಾಗಾಗಿ ಹ್ಯಾಷ್ ಟ್ಯಾಗ್ ಹಾಕಿರಲಿಲ್ಲ. ಈಗ ಅದಕ್ಕಾಗಿ ಹಳೆಯ ಬರಹಗಳ ಕೊಂಡಿ ಕೊಡುತ್ತಿದ್ದೇನೆ. ಲಿಂಕ್ ಕೊಟ್ಟು ತಲೆ ಕೆಡಿಸಿದ್ದಕ್ಕೆ ಕ್ಷಮೆ ಇರಲಿ.)

https://tenkodu.blogspot.com/2018/03/blog-post_8.html

https://tenkodu.blogspot.com/2018/03/blog-post_22.html

https://tenkodu.blogspot.com/2018/03/blog-post_29.html


No comments:

Post a Comment