Thursday, June 7, 2018

ರಜಿ-ಇಂದ್ರ-ಪ್ರಹ್ಲಾದ


ಪುರೂರವ ಊರ್ವಶಿಯರ ಮಗ ಆಯು. ಆಯುವಿನ ಮಕ್ಕಳು ರಜಿ, ನಹುಷ, ಕ್ಷತ್ರವೃದ್ಧ, ರಂಭ ಮತ್ತು ಅನೇನಸ. ಇವರಲ್ಲಿ ರಜಿ ಎನ್ನುವವನು ಪರಮ ಧಾರ್ಮಿಕನೂ ಮತ್ತು ಶಕ್ತಿಶಾಲಿಯೂ ಆಗಿದ್ದ. ಈತ ಪ್ರಹ್ಲಾದನ ಸಮಕಾಲೀನನಾಗಿದ್ದ. ಪ್ರಹ್ಲಾದ ಧಾರ್ಮಿಕನಾಗಿದ್ದ ನಿಜ, ಆದರೆ ದೈತ್ಯಕುಲದಲ್ಲಿ ಜನಿಸಿದ್ದರಿಂದ ದಿತಿಯ ಮಕ್ಕಳಿಗೆ ಜ್ಯೇಷ್ಠ ಭಾರ್ಯೆಯ ಮಕ್ಕಳಿಗೆ ದಾಯಭಾಗದಂತೆ ದಕ್ಕಬೇಕಾಗಿದ್ದ ಸ್ವರ್ಗ ಲೋಕದ ಅಧಿಪತ್ಯದ ಮೇಲೆ ತನ್ನ ಕುಲದ ಹಕ್ಕನ್ನು ಸಾಧಿಸುವುದಕ್ಕಾಗಿ ದೇವಗಣದ ಮೇಲೆ ಯುದ್ಧ ಸಾರಿದ್ದ. ಪ್ರಹ್ಲಾದನಂಥಾ ಸಾತ್ವಿಕ ಕೇವಲ ಹಕ್ಕು ಸಾಧಿಸುವುದಕ್ಕೆ ಯುದ್ಧ ಮಾಡಿದ ಎಂದರೆ ಬಹುಷಃ ಬಾಲಿಶವಾದೀತು. ಇಂದ್ರಿಯಗಳ ಪ್ರತೀಕವಾಗಿದ್ದ ಇಂದ್ರ ಸುಧರ್ಮಾಸನದ ಮೇಲೆ ಕುಳಿತು, ಇಂದ್ರಿಯಗಳು ಧರ್ಮಾಧಾರಿತವಾಗಿ ಉಪಯೋಗಿಸಲ್ಪಡಬೇಕು ಎನ್ನುವ ಸಂದೇಶ ಸಾರುವುದು ಬಿಟ್ಟು, ಇಂದ್ರಿಯ ಭೋಗಗಳ ಕಡೆಗೆ ಆಕರ್ಷಿತನಾಗಿದ್ದು ಸಹ್ಯವಾಗದೆ ಆತ ಯುದ್ಧ ಮಾಡಿದ್ದಿರಬೇಕು.

ನಡೆಯಿತು ಯುದ್ಧ. ದೇವ ದೈತ್ಯರಿಬ್ಬರೂ ಬ್ರಹ್ಮನ ಬಳಿ ಹೋದರು. ಆಗ ಬ್ರಹ್ಮ ಹೇಳಿದ, "ಧರ್ಮಾತ್ಮನಾದ ರಜಿ ಯಾರ ಪಕ್ಷವನ್ನಾಂತು ಯುದ್ಧ ಮಾಡುತ್ತಾನೋ ಅವರಿಗೆ ಜಯ ಸಿಗುತ್ತದೆ." ಎಂದ. ಪ್ರಹ್ಲಾದ ತನ್ನ ಪಕ್ಷದವರನ್ನು ರಜಿಯ ಕಡೆ ಕಳುಹಿಸಿದ. ರಜಿ ಒಂದು ನಿಬಂಧನೆಯನ್ನು ಮುಂದಿಟ್ಟ. "ನೀವುಗಳು ನನ್ನನ್ನು ನಿಮ್ಮ ರಾಜನನ್ನಾಗಿ ಸ್ವೀಕರಿಸಿದರೆ ನಿಮ್ಮ ಪಕ್ಷಕ್ಕೆ ಬಂದು ಯುದ್ಧ ಮಾಡುತ್ತೇನೆ" ಎಂದ. ದೈತ್ಯರು ಪ್ರಹ್ಲಾದನೇ ಸದಾಕಾಲ ತಮ್ಮ ಅಧಿಪತಿಯೆಂದೂ ಸರ್ವಥಾ ರಜಿಯನ್ನು ಸ್ಥಾನದಲ್ಲಿ ಅಥವಾ ಪ್ರಹ್ಲಾದನನ್ನು ರಜಿಯ ಸಾಮಂತನನ್ನಾಗಿ ನೋಡುವುದಕ್ಕೆ ಸಾಧ್ಯವಿಲ್ಲವೆಂದೂ ತಿಳಿಸಿದರು. ಆದರೆ ದೇವತೆಗಳು ಇದಕ್ಕೆ ಒಪ್ಪಿದರು.

ನಡೆದ ಯುದ್ಧದಲ್ಲಿ ರಜಿ ದೇವತೆಗಳ ಪಕ್ಷ ವಹಿಸಿದ್ದರಿಂದ ಅವರಿಗೆ ಗೆಲುವಾಯಿತು, ನಂತರ ಇಂದ್ರ ರಜಿಯಲ್ಲಿ, "ಮಹಾನುಭಾವನೇ ನಿನ್ನನ್ನು ನನ್ನ ಪುತ್ರನನ್ನಾಗಿ ಸ್ವೀಕರಿಸು. ಭಯತ್ರಾತನೂ ಆಶ್ರಯದಾತನೂ ಆಗಿದ್ದರಿಂದ ಹೇಗೂ ಪಿತನ ಸಮಾನನೇ ಆಗಿರುವೆ" ಎಂದು ಕೇಳಿದ. ರಜಿ ಒಪ್ಪಿದ. ಕ್ಷಣದಲ್ಲಿ, ಇಂದ್ರ "ನಾನು ನಿನ್ನ ಮಗನಾಗಿದ್ದರಿಂದ ನಿನ್ನ ಆಸ್ತಿಯಲ್ಲಿ ನನಗೂ ನಿನ್ನ ಹೆತ್ತ ಮಕ್ಕಳಷ್ಟೇ ಪಾಲಿದೆ. ನಿನ್ನ ಸ್ವತ್ತುಗಳಲ್ಲಿ ಒಂದಾದ ನಾಕಲೋಕದ ಅಧಿಕಾರವನ್ನು ಬಿಟ್ಟುಕೊಡು" ಎಂದ. ಧರ್ಮಾತ್ಮನಾಗಿದ್ದ ರಜಿ ಒಪ್ಪಿದ.

ರಜಿಯ ನಂತರ ರಜಿಯ ಮಕ್ಕಳು ಸ್ವರ್ಗದ ಮೇಲೆ ತಮ್ಮ ಅಧಿಕಾರವಿದೆ ಎಂದು ಇಂದ್ರನ ಮೇಲೆ ಯುದ್ಧ ಸಾರಿದರು. ವಚನ ಭ್ರಷ್ಟನಾಗಿದ್ದ ಇಂದ್ರ ಪರಾಭವಗೊಂಡ. ನಂತರ ಬೃಹಸ್ಪತಿಯ ಸಹಾಯದಿಂದ ಸ್ವರ್ಗಾಧಿಪತ್ಯವನ್ನು ಮತ್ತೆ ಪಡೆದ. ಆದರೆ ನಂತರ ಬೃಹಸ್ಪತಿಯನ್ನೇ ಕಡೆಗಣಿಸಿದ. ವಿಶ್ವರೂಪನನ್ನು ಗುರುವಾಗಿ ಸ್ವೀಕರಿಸಿದ. ಅವನನ್ನು ಕಾರಣಾಂತರಗಳಿಂದ ಕೊಂದು ಗುರು ಹತ್ಯೆ ಮತ್ತು ಬ್ರಹ್ಮ ಹತ್ಯೆ ಪಾತಕಗಳನ್ನು ಪ್ರಯಾಸ ಪಟ್ಟು ಕಳೆದುಕೊಂಡ. ಆದರೆ ವಿಶ್ವರೂಪನ ತಮ್ಮ ವೃತ್ರಾಸುರನನ್ನು ಕೊಂದು ಮತ್ತೆ ಇಂದ್ರ ಸ್ವರ್ಗಭ್ರಷ್ಟನಾದ. ನಹುಷ ಇಂದ್ರನಾದ. ಆದರೆ ನಿಯತಿ ದೇವಿಯ ಬೇಡಿಕೆಗೆ ಮಣಿದ ನಹುಷ, ಶಿಬಿಕೋತ್ಸವದ ಸಮಯದಲ್ಲಿ ಸಮಾಧಿಭಂಗ ಮಾಡಿಕೊಂಡು ಇಂದ್ರ ಪದವಿಯನ್ನು ತ್ಯಜಿಸಿ, ಪುರಂದರನನ್ನು ಅಲ್ಲಿ ಪುನಃ ಪ್ರತಿಷ್ಠಾಪಿಸಿದ.

ಆದರೆ ಕಡೆಯಲ್ಲಿ ಪ್ರಹ್ಲಾದ ಸೋಲಿನಿಂದ ಪಾಠ ಕಲಿತ. ದಾನಶೀಲನೂ ಪರಮ ಧಾರ್ಮಿಕನೂ ಆದ ಬಲಿಯಂಥ ಮೊಮ್ಮಗನನ್ನು ತಯಾರು ಮಾಡಿದ.

ಈಗಿನ ರಾಜಕೀಯದಲ್ಲಿ ನಡೆಯುವ ರೆಸಾರ್ಟ್ ರಾಜಕಾರಣದಾಟ ಇಂದಿನಿದ್ದಲ್ಲ. ಬಹಳ ಹಳೆಯದ್ದು. ಇದನ್ನು ಪರಿಚಯಿಸಿದ್ದು. ನಂದಮೂರಿ ತಾರಕ ರಾಮರಾವ್. ಪುರಾಣದ ಪಾತ್ರಗಳನ್ನು ಪರಕಾಯ ಪ್ರವೇಶ ಮಾಡಿ ಧರೆಗಿಳಿಸುತ್ತಿದ್ದ ಮಹಾನ್ ನಟ ಅಧ್ಯಾಯಗಳನ್ನೆಲ್ಲಾ ಚನ್ನಾಗಿ ಓದಿದ್ದಿರಬೇಕು. ಅದನ್ನು ಸಿನಿಮಾ ಮಾಡದೆ ತಮ್ಮ ರಾಜಕಾರಣಕ್ಕೆ ಬಳಸಿಕೊಂಡಿರಬೇಕು. ಆದರೆ ಅಂದೆಲ್ಲಾ ರೆಸಾರ್ಟ್ ರಾಜಕಾರಣ ಅಲ್ಲಲ್ಲೇ ಮುಗಿಯುತ್ತಿತ್ತು, ಸಲ ಕರ್ನಾಟಕದ ರಾಜಕೀಯ ಪಡಸಾಲೆಯಲ್ಲಾದ ವಿಪ್ಲವ ವಿಪರ್ಯಾಸ ವಿಡಂಬನೆ ಭರಿತ ಪ್ರಹಸನಗಳು ನಡೆಯುತ್ತಿರಲಿಲ್ಲ.

ತಮ್ಮವನೇ ಅಧಿಕಾರ ಹಿಡಿಯಬೇಕು ಎನ್ನುವ ಸ್ವಾರ್ಥ ಕುತ್ಸಿತ ಮನಃಸ್ಥಿತಿ ಮತ್ತು ಸಂಕುಚಿತ ಬುದ್ಧಿಗಳನ್ನೊಳಗೊಂಡ ಪಕ್ಷ, ತಾವು ತ್ಯಾಗ ಮಾಡಿಯೂ ಜನರಿಗೆ ಒಳ್ಳೆಯದನ್ನು ಮಾಡಬಹುದಾಗಿದ್ದ ಅವಕಾಶ ತಪ್ಪಿಸಿದ ದೈತ್ಯರಿಗೆ ಹತ್ತಿರದ ಹೋಲಿಕೆ. ರಜಿ ರಾಜನಾದರೆ ಧರ್ಮದ ಆಳ್ವಿಕೆ ನಡೆದು ತಮ್ಮ ಗುರುತಾದ ದುಷ್ಟ ಸ್ವಭಾವ ಎಲ್ಲಿ ಬಿದಬೇಕ್ಜಾಗುತ್ತದೋ ಎನ್ನುವ ಅಳುಕಿನಿಂದಲೇ ದೈತ್ಯರು ರಜಿಯ ನಿಬಂಧನೆಗೆ ಒಪ್ಪಲಿಲ್ಲವೇನೋ. ಇಂದ್ರನಿಗೆ ಅಧಿಕಾರ ಹಸ್ತಾಂತರಿಸಿದ ರಜಿ ಭಕ್ತಶ್ರೇಷ್ಠನಾಗಿದ್ದ ಪ್ರಹ್ಲಾದನಿಗೆ ಬಿಟ್ಟುಕೊಡುತ್ತಿರಲಿಲ್ಲವೇ?

ಇನ್ನು ರೆಸಾರ್ಟ್ ರಾಜಕಾರಣ ಮಾಡಿ ಶತಾಯ ಗತಾಯ, ತಮಗೆ ಯೋಗ್ಯತೆ ಇಲ್ಲದಿದ್ದರೂ ಬೇರೆಯವರ ದೌರ್ಬಲ್ಯ ಅಥವಾ ಅವಶ್ಯಕತೆಗಳನ್ನೇ ಹಂಗಾಗಿಸಿ ಅಧಿಕಾರ ಪಡೆದ ಪಕ್ಷ ಯಾಕೋ ದೇವೇಂದ್ರನ ನೆನಪು ತರುತ್ತದೆ. ಅಷ್ಟೆಲ್ಲಾ ನಯವಚನ-ತಂತ್ರಗಾರಿಕೆ ಇಟ್ಟುಕೊಂಡು ಅಧಿಕಾರ ಉಳಿಸಿಕೊಂಡ ಇಂದ್ರ, ಮನೆಯ ಬಾಗಿಲು ಕಾಯಲು ಭಗವಂತನನ್ನೇ ಕರೆಸಿಕೊಂಡ ಬಲಿಯ ಎದುರು ಸಣ್ಣವನಾಗಿ ಹೋದ. ಬಂಡಾಯ, ವರಮದೋನ್ಮತ್ತರೊಂದಿಗೆ ಹೋರಾಡಿ ಸೋತು, ಮತ್ತೆ ಮತ್ತೆ ತ್ರಿಮೂರ್ತಿಗಳಲ್ಲಿ ದೈನ್ಯದಿಂದ ನಿಲ್ಲುವುದು ಸ್ವರ್ಗದ ಅಧಿಪನಾದರೂ ಇಂದ್ರನಿಗೆ ತಪ್ಪಲಿಲ್ಲ.

ಈಗಲೂ ಪಕ್ಷದ ಬಂಡಾಯ ಏಳುತ್ತಿರವ ಸಮಾಧಾನಗೊಂಡ ಶಾಸಕರು, ಮೆರೆದು ಮೂಲೆಗಿಂಪಾಗಿರುವ ಮಂತ್ರಿಗಳನ್ನು ನೋಡಿದರೆ ಅವರೂ ಇಂದ್ರನಂತೆ ಎಲ್ಲವನ್ನೂ ಭೋಗಕ್ಕೆ ಬಳಸಿ ಮೈಮರೆತು ಸೋಲಿನೇಟು ತಾಳಲಾರದೆ ಒದ್ದಾಡಿದ ಇಂದ್ರ ಮತ್ತು ಆತನ ಪಕ್ಷದವರನ್ನೇ ನೆನಪಿಸುತ್ತಾರೆ. ಆದರೆ ಪ್ರಹ್ಲಾದ ತಾನು ಅಧಿಕಾರ ತಪ್ಪಿಸಿಕೊಂಡರೂ ಸಾಧನೆಯಿಂದ ದೊಡ್ದವನಾದ ಬಲಿಯಂಥ ಮೊಮ್ಮಗನನ್ನು ಪಡೆದ. ಎಲ್ಲರಿಗೂ ಬೇಕಾದ್ದನ್ನು ಕೊಡುವ ಭಗವಂತನಿಗೆ ಕೊಡುವಷ್ಟು ದೊಡ್ಡವ ಬಲಿ. ತನ್ನ ಚಿತ್ತವನ್ನೇ ಸಮ್ಪರ್ಪಿಸಿದ, ದಾನದ ರೂಪದಲ್ಲಿ. ವಾಮನನಾಗಿ ಬಂದ ವಿಷ್ಣು, ತ್ರಿವಿಕ್ರಮನಾಗಿ ಬೆಳೆದರೆ ಅದಕ್ಕೆ ಕಾರಣ ಬಲಿ. ಬಲಿಗೆ ಪ್ರಹ್ಲಾದನಂಥಾ ಅಜ್ಜ ಸಿಕ್ಕಿದ್ದರಿಂದ ಇದು ಸಾಧ್ಯವಾಯಿತು.

ನಮ್ಮ ಮನಸ್ಸಿನಲ್ಲೂ ಅಷ್ಟೆ. ಧಾರ್ಮಿಕರಾಗಿ ಇದ್ದ ಬಲಿ ರಜಿ ಇವರೇ ಗೌರವದ ಸ್ಥಾನ ಪಡೆದರು. ಮತ್ಯಾರೂ ಅಲ್ಲ.

No comments:

Post a Comment