Tuesday, June 19, 2018

ಹೆಸರ ಫಜೀತಿ

ಬಾಲ್ಯದಲ್ಲಿ ಓದುತ್ತಿದ್ದ ಚಂಪಕ ಎನ್ನುವ ಪತ್ರಿಕೆಯಲ್ಲಿ ಒಗಟೊಂದು ಬಂದಿತ್ತು "ಅಪ್ಪ ಅಮ್ಮ ನಮಗಾಗಿ ಇಟ್ಟರೂ ಉಪಯೋಗಿಸೋದು ಅವರೇ" ಎನ್ನಮ್ಮ ವ ಒಗಟು ಅದು. ಅದಕ್ಕಿದ್ದ ಉತ್ತರ "ಹೆಸರು". ನಿಜ ನಮ್ಮನ್ನು ಜಗತ್ತು ಗುರುತು ಹಿಡಿಯುವುದು ಈ ಹೆಸರಿನಿಂದಲೇ. ಚಿಕ್ಕ ಮಕ್ಕಳು ತೊದಲ್ನುಡಿಯುತ್ತಾ ತಮ್ಮಅಥವಾ ಬೇರೆಯವರ ಹೆಸರನ್ನು ಹೇಳುವಾಗಿನ ಸೊಗಸು ವರ್ಣಿಸಲು ಸಾಧ್ಯ. ತಮ್ಮ ತೊದಲ್ನುಡಿಯುತ್ತಾ ಕರೆದ ಹೆಸರನ್ನೇ ತಮ್ಮ ಕಾವ್ಯನಾಮವಾಗಿಸಿಕೊಂಡ ಹಿರಿತನ 'ಕೇಫ಼' ಎನ್ನುವ ಲೇಖಕರದ್ದು. ಎಳವೆಯಲ್ಲಂತೂ ದೊಡ್ಡವರ ಹೆಸರು ತಪ್ಪಾಗಿ ಉಚ್ಛಾರವಾದರೂ ಅದೇನೋ ಸುಡುಗಾಡು ತವಕ ಅದನ್ನು ಹೇಳುವುದಕ್ಕೆ. ಮಕ್ಕಳ ಹಿರಿತನದ ಅನುಭೂತಿ ಪಡೆಯುವ ಪ್ರಯತ್ನ ಇದಿದ್ದರೂ ಇರಬಹುದು ಬಿಡಿ. ಎಳವೆಯವರು ಹೆಸರನ್ನು ಹೇಗೆ ಕರೆದರೂ ಚಂದ.

ಹೀಗೆ ಬಾಲ್ಯದಲ್ಲಿ ನಾವು ಪಡೆದ ಗುರುತು ನಮ್ಮ ಹೆಸರು. ಇದನ್ನು ನಾವೇ ಹೇಳಿ ಹಾಳು ಮಾಡಿಕೊಳ್ಳುವುದು ಎಳೆಯ ಪ್ರಾಯದಲ್ಲಿ ಎಲ್ಲರಿಗೂ ಚಂದ ಕಾಣುತ್ತದೆ. ಸ್ವಲ್ಪ ದೊಡ್ಡವರಾದ ಮೇಲೆ, ನಮ್ಮ ಹೆಸರನ್ನು ಬೇರೆ ಏನನ್ನೋ ಹೇಳಿ ಮಜಾ ತೆಗೆದುಕೊಳ್ಳುವ ಹುಡುಗಾಟಿಕೆ ಬರುತ್ತದೆ. ಅಷ್ಟೇ ಅಲ್ಲ. ನಿನ್ನ ಹೆಸರೇನು ಎಂದರೆ "ಹೆಸರುಕಾಳು" ಎಂದು ಉತ್ತರಿಸುವ ಹುಡುಗಾಟಿಕೆ ಭರಿತ ಜಂಭವೂ ನಮ್ಮಲ್ಲಿ ಇರುತ್ತದೆ. ಇನ್ನೂ ದೊಡ್ಡವರಾದ ಮೇಲೆ ಎಲ್ಲರೂ ಹೇಳುವುದು, "ನೀನು ಚನ್ನಾಗಿ ಓದಿ ಅಪ್ಪ ಅಮ್ಮನಿಗೆ ಒಳ್ಳೆ ಹೆಸರು ತರಬೇಕು" ಎನ್ನುವುದು. ಇಷ್ಟೆಲ್ಲಾ ನಡೆಯುವಾಗ ನಮಗೆ ಹದಿ ಹರೆಯ ಬಂದು ನಾವೇ ಹೆಅರು ಮಾಡುವ ಹುಕಿಗೆ ಬೀಳುತ್ತೇವೆ. ಈಗೀಗ ಅಪ್ಪ ಅಮ್ಮನೂ ಇದೇ ಹುಕಿಯಲ್ಲಿದ್ದಾರೆ ಬಿಡಿ. "ತನ್ನ ಮಗ ಅದು" "ತನ್ನ ಮಗಳು ಇದು" ಎನ್ನುವ ಐಡೆಂಟಿಟಿ ಲೋಕದ ಎಲ್ಲಾ ಅಪ್ಪ ಅಮ್ಮನಿಗೂ ಬಹಳ ಪ್ರಿಯ. ಸಮಂಜಸವೂ ಹೌದು ಅದು. ಅದರ ಹಿಂದೆ ಅವರ ಅಪಾರ ಶ್ರಮ ಇರುತ್ತದೆಯಲ್ಲ.

ಇನ್ನು ಹೆಸರು ಮಾಡಲು ನಾವೆಲ್ಲರೂ ಪ್ರಯತ್ನಿಸಿದವರೇ ಬಿಡಿ. ಕೆಲವರು ಅದರಲ್ಲಿ ಯಶಸ್ಸು ಪಡೆದರೆ ಕೆಲವರು ಕುಖ್ಯಾತಿ ಪಡೆದರು. ಕೆಲವರು ಪಡೆಯಲಿಲ್ಲ. ಕೆಲವರು ಇದಕ್ಕಾಗಿ ಸದಾ ಪ್ರಯತ್ನಿಸುತ್ತಲೇ ಇರುತ್ತಾರೆ. ಇನ್ನು ಕೆಲವರು ತಾವು ಮಾಡುವ ಕಾರ್ಯದಲ್ಲಿ ಯಶಸ್ವಿಯಾಗಿ ಹೆಸರು ಪಡೆದರೂ ಅದು ಅವರಿಗೆ ಒಂದು ಐಡೆಂಟಿಟಿಯಾಗುವುದೇ ಇಲ್ಲ. ಅದು ಅವರ ದೊಡ್ಡ ತನ. ಕೆಲವರು ಶತಪ್ರಯತ್ನ ಮಾಡಿದರೂ ಹೆಸರು ಸಂಪಾದಿಸುವುದಕ್ಕೆ ವಿಫಲರಾಗುತ್ತಾರೆ. ಆಗ ಅವರು ದೇವರ ಮೊರೆ ಹೋಗುತ್ತಾರೆ. ಅಂದರೆ, ದೇವಸ್ಥಾನದ ಕಮಿಟಿಗೆ ತಮ್ಮ ಹೆಸರು ನೋಂದಾಯಿಸಿ ಊರೆಲ್ಲಾ "ನಾನು ಆ ದೇವಸ್ಥಾನದ ಮೆಂಬರ್" ಎಂದು ಬಾಯ್ಬಡಿದುಕೊಂಡು ಇರುತ್ತಾರೆ. ಯಾರಾದರೂ ಹುಬ್ಬೇರಿಸಿದರೆ ಎದೆಯುಬ್ಬಿಸಿ ನಡೆಯುತ್ತಾ, ಏನನ್ನೂ ಹೇಳದಿದ್ದರೆ ಮುಖ ಮೈ ಮನಸ್ಸು ಎಲ್ಲವನ್ನೂ ಉರಿಸಿಕೊಂಡು ಅಂಥವನ ಹೆಸರು ಹಾಳು ಮಾಡುತ್ತಾ ಸಾಗುತ್ತಾರೆ.

ಇನ್ನು ಕೆಲವು ಬರೇ ಹೆಸರಿಗೆ ಇರುತ್ತದೆ. ಇಂಗ್ಲೀಷಿನಲ್ಲಿ ಅದನ್ನು "ನೇಮ್ ಸೇಕ್" ಎಂದರೆ, ಹಿಂದಿಯಲ್ಲಿ "ನಾಮ್ ಕೆ ವಾಸ್ತೇ" ಎನ್ನುತ್ತಾರೆ. ಇದನ್ನು ಕೆಲವರು ಹೇಳುವುದು ತರ್ಜುಮೆಯೋ ಅಥವಾ ಅಪಭಂಶವೋ ಎನ್ನುವ ಗೊಂದಲ ಬರುತ್ತದೆ. ಅವರ ಪ್ರತಿಭೆ ಅದು. ಅವರು ಹೇಳುವುದು "ನಾಮಕಾವಸ್ಥೆ" ಅಂತ.

ಹೆಸರು ಅಂದರೆ ನಾಮ ದೇವರಿಗೂ ಬಹಳ ಪ್ರಿಯವಂತೆ. ಅವನ ಹೆಸರುಗಳನ್ನು ಸಾವಿರದೆಂಟೋ, ನೂರೆಂಟೋ ಹನ್ನೆರಡೋ ಸಾಧ್ಯವಾಗದಿದ್ದರೆ ಒಂದೇ ಒಂದು ಸಾರಿ ಕರೆದರೂ ಆತ ಸಂತೋಷಿಸುತ್ತಾನೆ. ನಮಗೂ ದೇವರ ಹೆಸರು ಹೇಳುವ ಸಮಾಧಾನ. ಅಜಮೀಳ ಎನ್ನುವ ಬ್ರಾಹ್ಮಣ ಸಾಯುವ ಕೊನೆಗಾಲದಲ್ಲಿ ತನ್ನ ಕಿರಿ ಮಗ ನಾರಾಯಣನನ್ನು ಕರೆದರೂ ಮಹಾವಿಷ್ಣು ತನ್ನ ದೂತರನ್ನು ಕಳಿಸಿದ್ದನಂತೆ. ದೇವರ ಹೆಸರು ಯಾವ ಕಾಲದಲ್ಲೇ ಯಾವ ರೀತಿಯಲ್ಲೇ ಹೇಳಿದರೂ ಕೃಪೆ ಕೊಡುತ್ತಾನೆ. ವಾಲ್ಮೀಕಿ ರಾಮ ಎನ್ನಲು ಸಾಧ್ಯವಾಗದೆ ಮರಾ ಮರಾ ಎಂದು ಕರೆದೇ ರಾಮನನ್ನು ಸಾಕ್ಷಾತ್ಕರಿಸಿಕೊಂಡು ರಾಮಾಯಣವನ್ನು ಬರೆದ. ಕಲಿಯುಗದಲ್ಲಿ ನಾಮಜಪವೇ ಶ್ರೇಷ್ಠ ಸಾಧನೆಯಂತೆ.

ದೇವರಿಗೇ ಸಂತೋಷ ಕೊಡುವ ಹೆಸರು, ನಮಗೆ ಸಂತೋಷ ಕೊಡದೇ ಇದ್ದೀತೇ? ನಿಜಕ್ಕೂ ಯಾರಾದರೂ ನಮ್ಮ ಹೆಸರನ್ನು ಹೇಳಿದರೆ ನಮಗೆ ಬಹಳ ಸಂತೋಷವಾಗುತ್ತದೆ. ಮತ್ತೆ ನಮಗೇನು ಅವನಂತೆ ಸಾವಿರ ಹೆಸರಿಲ್ಲವಲ್ಲ, ಏನು ಕರೆದರೂ ನನ್ನದೇ ಅಂತ ಭಾವಿಸಿ ಸಂತೋಷಿಸುವುದಕ್ಕೆ. ಆದರೆ, ಕೆಲವೊಮ್ಮೆ ಇರುವ ಒಂದೇ ಹೆಸರನ್ನು, ಸಾಧ್ಯವಿರುವ ರೀತಿಯಲ್ಲೆಲ್ಲಾ ವಿರೂಪ ಮಾಡಿದಾಗ ಆಗುವ ಬೇಸರ ಬಹಳ. ಆಗದೆ ಇದ್ದೀತಾ ಹೇಳಿ ಇರುವುದೊಂದೇ ಭೂಮಿಯಂತೆ ಇರುವುದೇ ಒಂದೇ ಹೆಸರು.

ನನ್ನ ಹೆಸರು ಹಾಳಾಗಿದ್ದು ಯಾವ ದುರ್ಬುದ್ಧಿಯೋ, ಮಾಡಬಾರದ್ದನ್ನು ಮಾಡಿಯೋ ಅಲ್ಲ. ಅದನ್ನು ಹೇಳಲು ಬರೆಯಲು ಬಾರದೆ ಹಾಳಾಗಿದ್ದೇ ಹೆಚ್ಚು. ಶಶಾಂಕ ಎನ್ನುವ ಹೆಸರನ್ನು ಕೆಲವರು ಪ್ರಶಾಂತ ಎಂದೋ ಅಥವಾ ಶಶಾಂತ ಎಂದೋ ತಪ್ಪಾಗಿ ಕೇಳಿ ಹೇಳಿದ್ದಿದೆ ಹಲವು ಬಾರಿ. ಅದೇನು ಬೇಸರ ಕೊಡಲಿಲ್ಲ. ತಮಾಷೆಗೆಂದು ಇಟ್ಟ ಎಷ್ಟೋ ಹೆಸರುಗಳೂ ನನ್ನನ್ನು ಬಾಧಿಸಲಿಲ್ಲ. ಮನೆಯವರ ಬಾಯಲ್ಲಿ 'ಶಂಕಭಟ್ಟ' 'ಶಂಕಣ್ಣ' ಎಂದೆಲ್ಲ ಪ್ರೀತಿಯಿಂದ ಕರೆಯಲ್ಪಟ್ಟ ನನ್ನ ಹೆಸರು ಹಾಳಾದ ಪರಿಗಳೇ ಮಜವಾಗಿವೆ.

ಶಾಲೆಯಲ್ಲಿ '' ಕಾರ ಹೊರಡದ ಮೇಷ್ಟ್ರು ನನ್ನನ್ನು "ಸಸಾಂಕ" ಅಂತ ಕರೆದರೆ "ಎಸ್ಸಾರ್" ಎನ್ನುವ ಹಣೆಬರಹ ನನ್ನದಾಗಿತ್ತು. ಒಂದು ದಿನ ತಲೆಕೆಟ್ಟು, ನನ್ನ ತಪ್ಪು ಹೆಸರಿಗೆ ನಾನ್ಯಾಕೆ ಎಸ್ಸಾರ್ ಎನ್ನಲಿ ಎಂದು "ನೋ ಸಾರ್" ಎಂದರೆ, ರಪ ರಪ ಅಂತ ಏಟು ಬಿದ್ದವು. ಆಮೇಲೆ ಆ ಮೇಷ್ಟರು, ಹುಡುಗರ ಹೆಸರು ಕರೆಯುವುದನ್ನೇ ಬಿಟ್ಟಿದ್ದರು. ನಂಬರ್ ಕರೆಯುತ್ತಿದ್ದರು. ಐಡಿಯಾ ಸೆಲ್ಯುಲರ್ ತನ್ನ ಜಾಹೀರಾತಿಗೆಂದು ಈ ಐಡಿಯಾ ಮಾಡಿತ್ತು ಎಷ್ಟೋ ವರ್ಷಗಳ ನಂತರ.

ಒಮ್ಮೆ ತಮಿಳ್ನಾಡಿಗೆ ಕೆಲಸದ ನಿಮಿತ್ತ ಹೋಗಿದ್ದಾಗ, ಕಂಪನಿಯೇ ಹೋಟೆಲ್ ವ್ಯವಸ್ಥೆ ಮಾಡಿಕೊಟ್ಟಿತ್ತು. ಅಲ್ಲಿ ಹೋದಾಗ ಆತ, ಇಂಗ್ಲೀಷ್ ಮಾತಾಡುವುದಿಲ್ಲ ಎನ್ನುವ ನಂಬಿಕೆ ನನಗೆ ನಿಚ್ಚಳವಾಗಿತ್ತು. ಅದೇನು ತಮಿಳ್ನಾಡಿಗೆ ನನ್ನ ಮೊದಲ ಭೇಟಿಯೂ ಆಗಿರಲಿಲ್ಲ, ಹಾಗಾಗಿ ಖರ್ಚಿಗೆ ಸಾಕಷ್ಟು ತಮಿಳನ್ನು ಕಲಿತಿದ್ದೆ. ಹೋಟೆಲ್ಲಿಗೆ ಹೋದಾಗ ಆತ :. ಡಿ ಪ್ರೂಫ಼್ ಕೊಡಂಗ ಸಾರ್...." ಎಂದು ಹೇಳಿದ. ನಾನು ನನ್ನ ಪ್ಯಾನ್ ಕಾರ್ಡ್ ತೆಗೆದು ಅವನ ಕೈನಲ್ಲಿಟ್ಟೆ. ಆತ ಅದನ್ನು ನೋಡಿ, "ನೇಮ್ ಮಿಸ್ ಮ್ಯಾಚ್ ಇರ್ಕ ಸಾರ್..." ಎಂದ. ನೋಡಿದರೆ ಆ ಭೂಪ ನನ್ನ ಹೆಸರನ್ನು ಶಶಂಕರ್ ಎಂದು ಬರೆದಿದ್ದ. "Shashanka" ಎಂದು ಬರೆದು ನಿಲ್ಲಿಸುವ ಬದಲು ಅದಕ್ಕೊಂದು "r" ಸೇರಿಸಿದ್ದ. ಅವನಿಗೇನೋ ನಂದೆಲ್ಲಿಡಲಿ ಅಂತ ಅನ್ನಿಸಿದರೆ, ಅದನ್ನು ತೆಗೆದು ನನ್ನ ಹೆಸರಿನ ಮುಂದಿಡಬೇಕೇ? ಕೊನೆಗೆ ನನ್ನ ಕಂಪ್ಯೂಟರ್ ತೆಗೆದು, ಹೋಟೆಲ್ ಬುಕ್ ಮಾಡಿದ ಮನುಷ್ಯ ಅವನಿಗೆ ಕಳಿಸಿದ ಮಿಂಚಂಚೆಯನ್ನೇ ತೆಗೆದು ಅವನಿಗೆ ತೋರಿಸಿ ರೂಮ್ ಒಳಗೆ ಹೋಗಿದ್ದೆ.

ಅಲಿ ಬಾಬಾ ಅದೇನೋ "ಖುಲ್ ಜಾ ಸಿಮ್ ಸಿಮ್" ಎಂದು ಒಳಗೆ ಹೋಗಿದ್ದ, ಸುಲಭದಲ್ಲಿ. ಆದರೆ ಅದ್ಯಾವನೋ ಭೂಪ ಮಾಡಿದ ಯಡವಟ್ಟು ಕೆಲಸಕ್ಕೆ ನನಗೆ ಒಟ್ಟು ಒದ್ದಾಟವಾಗಿತ್ತು.

ತಮಿಳುನಾಡಿನಲ್ಲಿ ಇದಕ್ಕಿಂತಲೂ ಭೀಕರವಾಗಿ ಅವರು ನನ್ನ ಹೆಸರನ್ನು ಬದಲಾಯಿಸಿದ್ದರು. ಅದೇನು ಆಡಿಟರ್ ಎನ್ನುವ ಅತಿ ಗೌರವವೋ, ಭಯವೋ, ಸಿಟ್ಟೋ ಸೆಡವೋ ನನಗೆ ಇನ್ನೂ ತಿಳಿಯಲಿಲ್ಲ. ಕೊಡಬೇಕಾದ ಮಾಹಿತಿಗಳನ್ನೆಲ್ಲಾ ಸುಂದರವಾಗಿ ಬರೆದು, ಫ಼ೈಲ್ ಮಾಡಿ ಅದನ್ನೊಂದು ಕವರ್ ಒಳಗೆ ಹಾಕಿ ಕಳಿಸಿದರು. ಆ ಕವರ್ ತಂದವ "ಶಂಕನ್ ಸಾರ್ ಎಂಗೆ ಇರ್ಕ?" ಎಂದು ಕೇಳಿದ್ದ. ಆನಂದ ಕೊಡುವವ ಎನ್ನುವ ಕಾರಣಕ್ಕೆ ಚಂದ್ರನಿಗೆ ಆ ಹೆಸರಂತೆ. ಆ ಚಂದ್ರನ ಹೆಸರನ್ನೇ ನನಗಿಟ್ಟರೂ, ಹೆಸರನ್ನು ತಿನ್ನುವುದಲ್ಲದೇ ಆ ಹೆಸರನ್ನೇ ತಪ್ಪಾಗಿ ಬರೆದು ಅದಕ್ಕಿದ್ದ ಅರ್ಥದ ಸಂಪೂರ್ಣ ವಿರುದ್ಧವಾದ ಅರ್ಥ ಕೊಡುವಂತೆ ಮಡಿಬಿಟ್ಟನಲ್ಲ ಪ್ರಾಣಿ. ಇದಕ್ಕೆ ಸುಮ್ಮನಿದ್ದರೆ, ನನ್ನ ಆಡಿಟರ್ ಉದ್ಯೋಗದ ಮರ್ಯಾದೆ ಪ್ರಶ್ನೆ ಎಂದುಕೊಂಡು ಮತ್ತೆ ಒಂದಿಷ್ಟು ಹುಳುಕು ತೆಗೆದು ವಾಪಸ್ ಕಳಿಸಿದೆ.

ನನ್ನ ಹೆಸರು ಹಾಳು ಮಾಡಿದವನಿಗೆ ಸರೀ ಮಾಡಿದೆ ಎನ್ನುವ ಅಹಂಕಾರದಲ್ಲಿದ್ದೆ. ಯಶಸ್ಸಿನ ಅಮಲಿನಲ್ಲಿದ್ದೆ. ಅಷ್ಟು ಹೊತ್ತಿಗೆ ಎರಗಿತು ಆಪತ್ತು. ಈ ಸಲ ಕವರ್ ತಂದವ ನನ್ನನ್ನು ಮೊದಲೇ ನೋಡಿದ್ದ. ಹಾಗಾಗಿ ಕವರ್ ಅನ್ನು ನೇರವಾಗಿ ನನ್ನ ಕೈಗೆ ಹಸ್ತಾಂತರಿಸಿದ. ನೊಡಿ ನಾನು ಭಾರತೀಯನೋ ಎನ್ನುವುದೇ ನನಗೆ ಅನುಮಾನವಾಗಿಬಿಟ್ಟಿತು. "Shezangan" ಎಂದು ಬರೆದಿದ್ದರೆ ಮತ್ತೇನು ಅನ್ನಿಸಲು ಸಾಧ್ಯ ನೀವೇ ಹೇಳಿ. ಅನ್ನಿಸುವುದಿಲ್ಲವೇ ಇದ್ಯಾವುದೋ ಕೊರಿಯಾ-ಜಪಾನ್-ಥಾಯ್ ಲ್ಯಾಂಡ್-ಚೀನಾ ಇತ್ಯಾದಿ ದೇಶಗಳ ಪ್ರಜೆಯ ಹೆಸರು ಅಂತ. ಅಹಂಕಾರಕ್ಕೆ ಬಿದ್ದ ಪೆಟ್ಟೋ ಅಥವಾ ಮತ್ತೊಂದೋ ನಾನರಿಯೆ. ಒಟ್ಟಿನಲ್ಲಿ ನನ್ನ ಹೆಅರು ಬಲು ಸುಂದರ ಎನ್ನುವ ಮನೋಭಾವ ಮಾತ್ರ ಮತ್ತೆ ಸುಳಿಯಲಿಲ್ಲ.

ಮೊದಲೊಂದು ಕಂಪನಿಯಲ್ಲಿದ್ದಾಗ, ಆಸ್ಟ್ರೇಲಿಯಾದ ಗ್ರಾಹಕನ ಜತೆಗಿನ ವ್ಯವಹಾರವಿತ್ತು. ಅಲ್ಲಿದ್ದವ ಬಾಂಗ್ಲಾದೇಶಿ. ಶಶಾಂಕ ಎಂದಷ್ಟೇ ಕರೆದದ್ದೇ ಇಲ್ಲ ಆ ಮಹಾನುಭಾವ. ಶೊಶೋಂಕ್, ಕಿಂಗ್ ಆಫ಼್ ಬಂಗಭೂಮಿ ಎನ್ನುವುದು ನಿರಯಾಸವಾಗಿ ಸೇರಿಸಿ ನನ್ನನ್ನು ಅಟ್ಟ ಹತ್ತಿಸುತ್ತಿದ್ದ. ಆದರೆ ಇಲ್ಲಿ ಅಟ್ಟದಿಂದ ದೂಡಿ, ಏಣಿಯನ್ನೂ ತೆಗೆದಿಟ್ಟರು ಮತ್ತೆ ಹತ್ತಬಾರದಂತೆ.

ಆದರೆ, ಈ ಹೆಸರು ಈ ದೇಹಕ್ಕೆ ಮಾತ್ರ. ಅದರೊಂದಿಗಿನ ಮನಸ್ಸಿಗೆ ಮಾತ್ರ ಸೀಮಿತ. ಅದನ್ನು ಮೀರಿದ ಆನಂದಮಯ ಕೋಶಸ್ಥಿತವಾದ ನಮ್ಮ ನಿಜ ಅಸ್ತಿತ್ವವಾದ ನಮ್ಮ ಆತ್ಮಕ್ಕಲ್ಲ. ಮುಂದಿನ ಜನ್ಮದಲ್ಲಿ ನನ್ನ ಹೆಸರು ಏನೋ ಯಾರಿಗೆ ಗೊತ್ತು? ಅಶಾಶ್ವತವಾದ ಹೆಸರು ಬದುಕಿನುದ್ದಕ್ಕೂ ಶಾಶ್ವತವಾದ ಪಾಠ ಕಲಿಸಿತು. ಈ ಹೆಸರಿಟ್ಟ ನನ್ನಪ್ಪ ಅಮ್ಮನ ಆಶಯ ಅದೇನಿತ್ತೋ ನಾನು ಎಂದಿಗೂ ಕೇಳಲಿಲ್ಲ. ಆದರೆ ಅವರಿಟ್ಟ ಹೆಸರು ದೊಡ್ದದೊಂದು ಪಾಠ ಕಲಿಸಿದ್ದು ಸುಳ್ಳಲ್ಲ.

No comments:

Post a Comment