Tuesday, June 26, 2018

ಗಾಡಿಯ ಲೆವೆಲ್ಲು

ಅಡಿಕೆಯ ಸಾಂಪ್ರದಾಯಿಕ ಪ್ರದೇಶಗಳು ಉಡುಪಿ, ದಕ್ಷಿಣ ಕನ್ನಡ ಚಿಕ್ಕಮಗಳೂರು, ಶಿವಮೊಗ್ಗ ಮತ್ತು ಉತ್ತರ ಕನ್ನಡ ಜಿಲ್ಲೆಗಳು. ಉಡುಪಿ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಹಣ್ಣಾದ ಅಡಿಕೆಯನ್ನು ಒಣಗಿಸಿ ನಂತರ ಅದನ್ನು ಸುಲಿದು ಚಾಲಿ ಮಾಡುತ್ತಾರೆ. ಆದರೆ ಉಳಿದ ಜಿಲ್ಲೆಗಳಲ್ಲಿ ಅಡಿಕೆ ಇನ್ನೂ ಕಾಯಿಯಾಗುತ್ತಿದ್ದಂತೆ ಅಥವಾ ಕಾಯಿಯಾದ ನಂತರ ಕೊಯ್ದು ಅದನ್ನು ಸುಲಿದು ಬೇಯಿಸಿ ನಂತರ ಒಣಗಿಸುತ್ತಾರೆ. ಇದನ್ನು ಕೆಂಪಡಿಕೆ ಎನ್ನುತ್ತಾರೆ. ಕೆಂಪಡಿಕೆಯನ್ನು ಬೇಯಿಸುವಾಗ ಅದರಲ್ಲಿನ ಟ್ಯಾನಿನ್ ಅಂಶ ತೊಗರಿನ ರೂಪದಲ್ಲಿ ಹೊರಗೆ ಬರುತ್ತದೆ. ಈ ತೊಗರನ್ನು ಅಡಿಕ್ಕೆಗೆ ಬಣ್ಣ ಹಾಕಲು, ಮತ್ತೆ ಒಣಗಿಸಿ ಕೃತಕ ಅಡಿಕೆ ಮಾಡಲು ಇನ್ನೂ ಏನೇನಕ್ಕೋ ಬಳಸುತ್ತಾರೆ. ಬಣ್ಣ್ ಹಾಕಲು ಬೇಕಾಗುವ ತೊಗರು ಬಹಳ ಕಡಿಮೆ. ಹಾಗಾಗಿ ಬಹುಪಾಲು ತೊಗರು ಮಿಗುತ್ತದೆ. ಇದನ್ನು ಕೊಂಡೊಯ್ಯಲು ಬರುವವನಿಗೆ ತೊಗರು ಸಾಬು ಎಂದೇ ಹೆಸರು. ಇಲ್ಲಿ ಅಡಿಕೆ ಬೆಳೆಗಾರರು ನಿಜಕ್ಕೂ ಸಂಪ್ರದಾಯ ವಿರೋಧಿಗಳು. ಜಾತ್ಯತೀತರು ಕೂಡ. ಇಲ್ಲವಾದರೆ ತಮ್ಮ ಧರ್ಮದವನಲ್ಲದವನಿಗೆ ತೊಗರು ಮಾರುತ್ತಿರಲಿಲ್ಲ ಬಿಡಿ.

ನಮ್ಮ ಮನೆಗೆ ಎಷ್ಟೇ ಜನ ತೊಗರು ಕೊಳ್ಳಲು ಬಂದರೂ ನಾವು ಮಾರುವುದು ಮಾತ್ರ ಒಬ್ಬನೇ ಸಾಬುವಿಗೆ ಕಾರಣ ಆತ ನಮ್ಮೂರಿನವ ಎನ್ನುವುದು.ಅವನೂ ಹಾಗೆಯೇ. ನಮ್ಮೂರಿನ ಜನ ಎಂದು ನಮ್ಮ ಮನೆಯಲ್ಲಿ ಎಷ್ಟು ಕಡಿಮೆ ತೊಗರಿದ್ದರೂ ಕೊಂಡೊಯ್ಯುತ್ತಾನೆ. ತೊಗರಿಗೆ ನೀರು ಸೇರಿ ನೀರಾಗಿದೆ ಎನ್ನುವ ಅವನ ಆಕ್ಷೇಪ ಸದಾಕಾಲ ಇದ್ದಿದ್ದೇ. ಅದಕ್ಕಾಗಿ ಆತ ಗಂಟೆಗಟ್ಟಲೆ ಚೌಕಾಸಿ ಮಾಡಿ ಕೊನೆಗೆ ಸೋತು ಯಾವುದೋ ಒಂದು ದರಕ್ಕೆ ತೊಗರನ್ನು ಕೊಂಡೊಯ್ಯುತ್ತಾನೆ. ಬಂದಷ್ಟೇ ಬಂತು ಬರಡೆಮ್ಮೆ ಹಾಲು ಅಂತ ನಾವೂ ಮಾರುತ್ತೇವೆ.

ಈ ತೊಗರು ಸಾಬು ಮೊದಲು ಸೈಕಲ್ ಏರಿ ಬರುತ್ತಿದ್ದ. ನಾನು ಬೆಂಗಳೂರಿಗೆ ಬಂದ ಮೇಲೆ ಕೊನೆ ಕೊಯ್ಲಿನ ಸಮಯದಲ್ಲಿ ಅಷ್ಟಾಗಿ ಊರಿಗೆ ಹೋದದ್ದಿಲ್ಲ. ಹೋದಾಗಲೂ ತೊಗರು ಸಾಬುವಿನೆ ಭೇಟಿ ಆದದ್ದಿರಲಿಲ್ಲ. ಬೆಂಗಳೂರಿಗೆ ಬಂದು ಎರಡು ಮೂರು ವರ್ಷಗಳ ನಂತರ ಒಮ್ಮೆ ಯಾವುದೋ ಮದುವೆಗೆಂದು ಊರಿಗೆ ಹೋಗಿದ್ದಾಗ ಸಾಬುವಿನ ಸವಾರಿ ಬಂತು ಈ ಸಾರಿ ಟಿ ವಿ ಎಸ್ ಎಕ್ಸೆಲ್ ಏರಿ ಬಂದಿದ್ದ ಸಾಬು. ಮತ್ತೆ ಮೂರ್ನಲ್ಕು ವರ್ಷಗಳೇ ಬೇಕಾಯ್ತು ಸಾಬುವಿನ ಮುಖದರ್ಶನವಾಗಲು. ಈ ಸಾರಿ ಸಾಬುವಿನ ಕೈನಲ್ಲಿ ಒಂದು ಬೈಕ್ ಇತ್ತು. ಮನೆಯವರಿಗೂ ನನಗೂ ಎಲ್ಲರಿಗೂ ಸಾಬು ಬೈಕ್ ತಂದಿದ್ದು ನೋಡಿ ಬಹಳ ಸಂತೋಷವೇ ಆಗಿತ್ತು. ಸಾಬುವಿಗೆ ಸಂತೋಷದ ಜೊತೆ ಬಿಗುಮಾನ ಮತ್ತೆ ಸ್ವಲ್ಪ, ಮದವೂ ಸೇರಿತ್ತು ಎನಿಸಿತ್ತು ನನಗೆ. ಹೆಚ್ಚಲ್ಲ. ಅವನೂ ಒಂದು ಜನವಾದ ತಾನೇ. ಬಂದರೆ ತಪ್ಪಲ್ಲ.

ಇನ್ನೊಂದು ಸ್ವಲ್ಪ ವರ್ಷ ಕಳೆದ ಮೇಲೆ ಸಾಬು ಒಂದು ಲಗೇಜ್ ಕ್ಯಾರಿಯರ್ ರಿಕ್ಷಾ ಬಾಡಿಗೆಗೆ ತೆಗೆದುಕೊಂಡು ಅದರಲ್ಲಿ ತೊಗರು ವ್ಯಾಪಾರ ಮಾಡುತ್ತಿದ್ದ. ಕೊನೆಗೆ ಅವನೇ ಒಂದು ಲಗೇಜ್ ಕ್ಯಾರಿಯರ್ ರಿಕ್ಷಾ ತೆಗೆದುಕೊಂಡಿದ್ದ. ಈಗೆ ಅವನ ವಹಿವಾಟೂ ಅದರ ವ್ಯಾಪ್ತಿ ಎರಡೂ ತುಸು ಹೆಚ್ಚೇ ಬೆಳೆದಿತ್ತು. ""ತೀರ್ಥಳ್ಳಿಗೆ ತರಕಾರಿ ತಗಂಡು ಹೋಗಿ ಬರಬೋಕಿದ್ರೆ ತೊಗರು ತತ್ನಿ ” ಎನ್ನುತ್ತಿದ್ದ. ನನಗಾಗ ಅನ್ನಿಸಿತ್ತು. ಬಿಸಿನೆಸ್ ಲೈನ್, ಔಟ್ ಲುಕ್ ಮನಿ, ಎಕನಾಮಿಕ್ ಟೈಮ್ಸ್ ಮುಂತಾದ ಪೇಪರಿನಲ್ಲಿ ಈ ಸಾಬು ಬಂದರೂ ಆಶ್ಚರ್ಯವಿಲ್ಲ.ತೊಗರು ವ್ಯಾಪಾರಕ್ಕೆ ಎಫ಼್ ಡಿ ಐ (ವಿದೇಶೀ ನೇರ ಬಂಡವಾಳ ಹೂಡಿಕೆ) ಕುರಿತು ಪರ ವಿರೋಧ ಚರ್ಚೆಗಳಾದರೂ ವಿಶೇಷವಲ್ಲ. ಅಂತೂ ಮಲೆನಾಡು ಮತ್ತು ಅಲ್ಲಿನ ಅಡಿಕೆ ಬೆಳೆಗಾರರ ಬದುಕು ಹಸನಾಗುವುದು ಶತಃಸಿದ್ಧ. ನಾವೆಲ್ಲ ಇಂಟರ್ ನ್ಯಾಷನಲ್ ಪಿಗರ್ ಆದಂತೆಯೇ ಇನ್ನು ಎಂದುಕೊಂಡಿದ್ದೆ ನಾನು.

ಇಷ್ಟೆಲ್ಲ ನಿರೀಕ್ಷೆಗಳು ನಿಜವಾಗಲಿಲ್ಲ. ಆದರೆ ಸಾಬು ಮಾತ್ರ ತನ್ನ ವ್ಯಾಪಾರವನ್ನು ಚೆನ್ನಾಗಿ ಬೆಳೆಸಿಕೊಂಡ. ಮೊನ್ನೆ ಊರಿಗೆ ಹೋಗಿದ್ದಾಗ ಇವ ಬೊಲೆರೋ ತೆಗೆದುಕೊಂಡು ತೊಗರು ವ್ಯಾಪಾರ ನಡೆಸುತ್ತಿದ್ದ. ಜೊತೆಗೇ ಬೆಲ್ಲ ಕಬ್ಬು ಗುಜರಿ ಸಾಮಾನು ಹಳೆ ಪೇಪರ್, ಬಾಳೆಕಾಯಿ ಕೋಕೋ ಮೆಣಸು ಶುಂಠಿ ಎಲ್ಲಾ ವ್ಯಾಪಾರ ನಡೆಸಿದ್ದ ಬಿಡಿ. ಒಟ್ಟು ಇವನೊಬ್ಬ ನಮ್ಮೂರಿನ ಅಜೀಮ್ ಪ್ರೇಮ್ ಜೀ ಆದ ಎಂದುಕೊಂಡೆ ನಾನು.

ಒಂದು ದಿನ ಸಂಜೆ ಮೊಬೈಲ್ ನೆಟ್ ವರ್ಕ್ ಹುಡುಕಿ ಮನೆಯ ಹತ್ತಿರದ ಏರು ಹತ್ತಿ ನಿಂತಿದ್ದಾಗ ಸಾಬು ಅಲ್ಲಿಗೆ ಬಿಜಯಂಗೈದ. ಅದು ಇದು ಮಾತಾಡುತ್ತಾ ನನ್ನೊಳಗಿನ ಹುಳುಕ ಆಡಿಟರ್ ಮತ್ತು ಅಕೌಂಟಂಟ್ ನಿದ್ದೆಯಿಂದೆದ್ದ. ಸಾಬುವಿನಲ್ಲಿ ಅವನ ವಹಿವಾಟು ಲಾಭ ನಷ್ಟ ಎಲ್ಲ ಪ್ರಶ್ನಿಸಿ ಮಾತಾಡುತ್ತಿದ್ದೆ. ಆಗ ಆ ಸಾಬು ಹೇಳ ತೊಡಗಿದ. ""ಅಪೀ ವ್ಯಾಪಾರ ಹೇಳಿ ಮಾಡದು ಅಷ್ಟೆ. ನನ್ನ ಜನ ಅಂತ ಒಪ್ಕಂಡಿದ್ದು ವ್ಯಾಪಾರ ನೋಡಿ ಅಲ್ಲ. ಕೈನಾಗಿನ ಗಾಡಿ ನೋಡಿ.” ಎಂದ.

ನಾನೆಂದೆ.""ಅಲ್ಲ ಸಾಬು ವ್ಯಾಪಾರ ಚನಾಗಿ ಆಗ್ತಿದೆಯಲ್ಲ ನಿಂಗೆ. ಇಲ್ದಿದ್ರೆ ಗಾಡಿ ತಗಳಕ್ಕೆ ದುಡ್ಡು ಎಲ್ಲಿಂದ ಬರ್ತದ್ಯಾ? ವ್ಯಾಪಾರ ಆಗದೇ ಇದ್ರೆ ದುಡ್ಡು ಆಗದಿಲ್ಲಲ್ಲಾ. ಈಗ ನೀನು ಲೆವೆಲ್ಲು ಮಣ್ಣು ಮಸಿ ಅಂದ್ಕಂಡು ಇದ್ರೆ ನಿನ್ನ ವ್ಯಾಪಾರ ಹಾಳಾಗದಿಲ್ಲನ ”

""ವ್ಯಾಪಾರ ಆಗಕ್ಕೂ ಒಂದು ಲೆವೆಲ್ಲು ಇರ್ಬೇಕು ಅಪಿ. ವ್ಯಾಪಾರ ಆದ್ಮೇಲೆ ದುಡ್ಡು ಉಳಸ್ಕಳಕ್ಕೆ, ನಮ್ಮ ಮಾತು ನೆಡಸ್ಕಳಕ್ಕೆ ಸ್ವಲ್ಪ ಲೆವೆಲ್ಲು ತೋರಿಸ್ಲೇ ಬೇಕು. ಇಲ್ದಿದ್ರೆ ಆ ಮೊಯ್ದೀನ್ ನನ್ನ ಎಲ್ಲಾ ವ್ಯಾಪಾರ ಹಾಳು ಮಾಡಿ ಹಾಕ್ತಾನೆ ಅಪಿ. ಅವನ ಹತ್ರ ದುಡ್ಡಿದೆ ಹೆಂಗೂ ಕೊಡ್ತಾನೆ ಅಂತ ಅವಂಗೆ ಕಡ ಕೊಡ್ತಾರೆ. ನಂಗೆ ಕೊಡದಿಲ್ಲ. ನಾನು ಆಟೋ ಇಟ್ಕಂಡಾಗ ಅವ ಜೀಪ್ ತಗಂಡ. ನನ್ನ ವ್ಯಾಪಾರ ಡಲ್ ಹೊಡೆಯಕ್ಕೆ ಹಿಡತ್ತು. ಅದಕ್ಕೆ ನಾನೂ ಸ್ವಲ್ಪ ಸಾಲ ಮಾಡಿ ಜೀಪ್ ತಗಂಡ ಮೇಲೆ ವ್ಯಾಪಾರ ಸುಧಾರಶ್ಚು. ಈಗ ವ್ಯಾಪಾರ ದೊಡ್ದ ಮಾಡಕ್ಕೆ ನಾನು ಒಂದು ಸ್ಕಾರ್ಪಿಯೋ ತಗತ್ನಿ. ಆ ಮೇಲೆ ಇನ್ನೂ ದೊಡ್ಡ ಗಾಡಿ......” ಎಂದ.

ನನಗೂ ಸಾಬು ಹೇಳಿದ್ದು ನಿಜ ಇರಬಹುದು ಎನ್ನಿಸಿತು. ಗಾಡಿ ತಾನೇ ಎಲರಿಗೂ ಕಾಣುವುದು. ಲೆವೆಲ್ ಅದರಿಂದಲೇ ಗೊತ್ತಾಗುವುದು ಸಹಜ.

ಹಾಂ!! ಅಂದಹಾಗೆ ಆ ಸಾಬುವಿನ ಹೆಸರು ಜಮೀರ್ ಅಂತ. ಅವ ತೊಗರು ವ್ಯಾಪರಕ್ಕೂ ಮೊದಲು ಬಸ್ ಡ್ರೈವರ್ ಆಗಿಯೂ ಕೆಲಸ ಮಾಡಿದ್ದ.

ಮೊನ್ನೆ ಮಂತ್ರಿವರೇಣ್ಯರೊಬ್ಬರು ದೊಡ್ದ ಗಾಡಿ ಬೇಕು ಇಲ್ಲಾಂದ್ರೆ ಲೆವೆಲ್ಲು ಗೊತ್ತಾಗಲ್ಲ ಅಂದಾಗ ಇದೆಲ್ಲ ನೆನಪಾಯಿತು. ಹಂಚಿಕೊಂಡೆ.

No comments:

Post a Comment