Thursday, June 21, 2018

ಶರಾವತಿ

ಮುಳುಗಡೆ-ಈಗೀಗ ಈ ಶಬ್ದದ ಪ್ರಯೋಗವಾಗುತ್ತಿರುವುದು ಯಾವುದಾದರೂ ಚೈನ್ ಫ಼ೈನಾನ್ಸ್ ಸ್ಕೀಮ್ ನಡೆಸಿದ್ದವ ನಾಪತ್ತೆಯಾದಾಗ, ಸಾಲ ಪಾವತಿಸದೆ ಪರಾರಿಯಾದಾಗ ಮಾತ್ರ. ಆದರೆ ನಮಗೆ ಅಂದರೆ ಸಾಗರದ ಕಡೆಯವರಿಗೆ ಮುಳುಗಡೆ ಎಂದ ಕೂದಲೇ ನೆನಪಾಗುವುದು ಲಿಂಗನಮಕ್ಕಿ ಅಣೆಕಟ್ಟು, ಅದರಲ್ಲಿ ನೀರು ಪೂರ್ತಿಯಾಗಿ ಬರಿದಾದಾಗ ಕಾಣಿಸುವ ಮಡೆನೂರು ಅಥವಾ ಹಿರೇಭಾಸ್ಕರ ಅಣೆಕಟ್ಟು. ಇದನ್ನು ಕಟ್ಟಿದ್ದು ಶರಾವತಿ ನದಿಗೆ ಅಡ್ಡಲಾಗಿ. ಹೀಗೆಂದರೆ ಬಹುಷಃ ಯಾರಿಗೂ ತಿಳಿಯುವುದಿಲ್ಲ. ಮುಂಗಾರು ಮಳೆಯಲ್ಲಿ ಜೋಗ್ ಫಾಲ್ಸ್ ಇದೆ ನೋಡಿ ಆ ಜೋಗ್ ಫ಼ಾಲ್ಸ್ ಇದೇ ಶರಾವತಿ ನದಿಯಿಂದ ಆಗಿದ್ದು. ಸಿಗಂಧೊರು ಗೊತ್ತಲ್ಲ ಆ ಸಿಗಂಧೂರಿಗೆ ಬೋಟ್ ಹತ್ತಿ ಹೋಗ್ತೀರಲ್ಲ ಅದು ಇದೇ ಶರಾವತಿ ನದಿಯಲ್ಲಿ.

ರಾಮಯಣದ ಕಾಲದಲ್ಲಿ ಸೀತೆಯನ್ನು ಮೋಹಕ್ಕೀಡು ಮಾಡಿದ ಮಾಯಾಮೃಗದ ರೂಪ ತಳೆದ ಕಾಮರೊಪಿ ಮಾರೀಚ. ಮಾರೀಚನ ಮಾಯಾಜಾಲದಲ್ಲಿ ಬಿದ್ದ ಸೀತೆ, ರಾಮ ಎಷ್ಟು ಹೇಳಿದರೂ ಕೇಳದೆ, ಆ ಹೊನ್ನ ಮಿಗ ಬೇಕೆಂದು ಹಠ ಹಿಡಿಯುತ್ತಾಳೆ. ಎಷ್ಟರ ಮಟ್ಟಿಗೆ ಎಂದರೆ, ಸತ್ತ ಜಿಂಕೆಯನ್ನು ಚರ್ಮ ಸುಲಿದು ಕಂಚುಕವಾಗಿಸಿಯಾದರೊ ಸರಿ ತನಗದು ಬೇಕೇ ಬೇಕು ಎನ್ನುತ್ತಾಳೆ. ಮಾಯೆಗೀಡಾದ ಸೀತೆಯನ್ನು ಮಾಯಾಜಾಲದಿಂದ ಬಿಡಿಸಲು ವಿಫಲನಾದ ರಾಘವ ಜಿಂಕೆಯ ಬೆನ್ನಟ್ಟಿ ಸಾಗುತ್ತಾನೆ. ಆ ಜಿಂಕೆ ಮಡಿದ ಸ್ಥಳವೇ ತೀರ್ಥಹಳ್ಳಿಯ ಸಮೀಪದ ಮೃಗವಧೆ. ಹಿಂತಿರ್ಗಿ ಬರುತ್ತಿರುವಾಗ, ಬಾಯಾರಿಕೆಗೆಂದು ರಾಮ ಬಾಣದಿಂದ ತೀರ್ಥವೊಂದನ್ನು ನಿರ್ಮಿಸಿಕೊಳ್ಳುತ್ತಾನೆ. ಆ ತೀರ್ಥವೇ ಅಂಬುತೀರ್ಥ. ಅಲ್ಲಿಯೇ ಹುಟ್ಟುತ್ತದೆ ಈ ಶರಾವತಿ ನದಿ.

ಮುಂದೆ ಸಾಗಿದ ಶರಾವತಿ, ರಾಮಚಂದ್ರಾಪುರ ಸಂಸ್ಥಾನ ಎಂದು ಖ್ಯಾತವಾಗಿರುವ ಕ್ಷೇತ್ರವೊಂದನ್ನು ಹಾಯ್ದು ಸಾಗುತ್ತಾಳೆ. ಚಂದ್ರಮೌಳೀಶ್ವರ-ರಾಜರಾಜೇಶ್ವರಿ-ಶ್ರೀರಾಮಚಂದ್ರ-ಸೀತೆಯರು ಅಲ್ಲಿ, ಶರಾವತಿಯ ದಡದಲ್ಲಿ ನಿಂತು ಪೂಜೆ ಪಡೆದು ನಮ್ಮನ್ನು ಕೃತಾರ್ಥರನ್ನಾಗಿಸುತ್ತಾರೆ. ಅಲ್ಲಿಂದ ಮುಂದೆ ಸಾಗಿದ ಶರಾವತಿ ಹೊಸನಗರವನ್ನು ದಾಟಿ ಮುಂದೆ ಬರುತ್ತಾಳೆ. ಅಲ್ಲಿ ಅವಳಿಗೆ ಹಿಂದೆ ಮಡೆನೂರು-ಹಿರೇಭಾಸ್ಕರ ಎಂಬಲ್ಲಿ ಅಣೆಕಟ್ಟು ಕಟ್ಟಿದ್ದರು. ಶರಾವತಿಯ ಒಡಲು ಬತ್ತಿದಾಗ ಈ ಒಡ್ಡು ಕಾಣುತ್ತದೆ. ಮಡೇನೂರಿನಿಂದ ಕೆಳಗೆ ಲಿಂಗನಮಕ್ಕಿಯಲ್ಲಿ ಮತ್ತೊಂದು ಒಡ್ಡು ಕಟ್ಟಿದಾಗ ಉಂಟಾದ ಹಿನ್ನೀರಿನ ಮೂಲಕವೇ ಸಾಗಿ ಸಿಗಂಧೂರ ದೇವಿಯನ್ನು ಕಾಣಬೇಕು.

ಲಿಂಗನಮಕ್ಕಿಯಲ್ಲಿ ಮತ್ತೆ ಒಡ್ಡಿಗೆ ಸಿಕ್ಕಿ ಜಲಚಕ್ರಗಳನ್ನು ತಿರುಗಿಸಿ ವಿದ್ಯುತ್ ಕೊಡುತ್ತಾಳೆ ಈಕೆ.ಜೋಗದಲ್ಲಿ ರಾಜ ರಾಣಿ ರೋರರ್ ರಾಕೆಟ್ ಎನ್ನುವ ಹೆಸರುಗಳಿಂದ ಧಾರೆಯಾಗಿ ಬಿದ್ದು ಕಣ್ಣಿಗೆ ಮುದ ನೀಡುವ ಶರಾವತಿ, ಅಲ್ಲಿಂದ ಮುಂದೆ ಸಾಗಿ ಜಲಚಕ್ರಗಳನ್ನು ತಿರುಗಿಸಿ, ಅಲ್ಲಿ ವಿದ್ಯುತ್ ಕಾಂತೀಯ ಕ್ಷೇತ್ರಗಳನ್ನು ಪ್ರಚೊದಿಸಿ ಕರೆಂಟನ್ನು ಉತ್ಪಾದಿಸಿ ತಂತಿಯ ಮೂಲಕ ಹರಿಸಲು ಸಹಾಯ ಮಾಡುತ್ತಾಳೆ. ಇಲ್ಲಿಂದ ಮುಂದೆ ಗೇರುಸೊಪ್ಪೆಯಲ್ಲಿ ಸಹ ಶರಾವತಿ ಟೇಲರೇಸ್ ಎನ್ನುವ ಯೋಜನೆಯಲ್ಲಿಯೂ ಇದೇ ಜಲಚಕ್ರಗಳನ್ನು ತಿರುಗಿಸಿ ವಿದ್ಯುತ್ ಜನನಿಯಾಗುತ್ತಾಳೆ. ಅಲ್ಲಿಂದ ಮುಂದೆ ಒಂದು ಕಾಲದ ರೇವು ಪಟ್ಟಣ ಹೊನ್ನಿನ ಆವರಣವೋ ಎನ್ನುವಂತಿರುವ ಹೊನ್ನಾವರದ ನಗರವನ್ನು ಸುತ್ತಾಡಿ ಇಡಗುಂಜಿಯ ಗಣಪನ ತಣಿಸಿ ಸಮುದ್ರರಾಜನ ಆಲಿಂಗನದಲ್ಲಿ ಕರಗುತ್ತಾಳೆ.

ಮಲೆನಾಡು ಕರಾವಳಿಯಲ್ಲಿ ನಲಿಯುತ್ತಾ ನಿಲ್ಲುತ್ತಾ ಬಳುಕುತ್ತಾ ಸಾಗುವ ಶರಾವತಿಯ ದಡದಲ್ಲಿ ನಿತ್ಯ ಹರಿದ್ವರ್ಣದ ಕಾಡುಗಳು. ಪಶ್ಚಿಮ ಘಟ್ಟದ ಗುಡ್ಡಗಳು. ಅಡಿಕೆ ತೋಟ-ಭತ್ತದ ಗದ್ದೆಗಳು. ಚಂಡೆ ಮದ್ದಳೆ ಗಾನ ವಿನೋದಿ ಯಕ್ಷರು- ಅವರ ಅಭಿಮಾನಿಗಳು. ಅಲ್ಲಲ್ಲಿ ರಾತ್ರಿ ರಂಗೇರುವ ರಂಗಸ್ಥಳಗಳು. ತೊರೆಯಾಗಿ, ಎಷ್ಟೋ ಮನೆಗಳನ್ನು ಊರುಗಳನ್ನು ಮುಳುಗಿಸಿದ ನೋವನ್ನು ಹೊತ್ತ ಶರಾವತಿ ಸಾಗುವ ಬಗೆ ಹೀಗೆ. ಅಂಬು ತೀರ್ಥದಲ್ಲಿ ಹುಟ್ಟಿ ಹೊನ್ನಾವರದಲ್ಲಿ ಸಿಂಧೂ ಸಾಗರವನ್ನು ಸೇರುವ ಶರಾವತಿಯ ದಡದಲ್ಲಿ ಆಡಿ ಬೆಳೆದ ಯಕ್ಷ ದೇವತೆಯ ಮುದ್ದಿನ ಮಕ್ಕಳು- ಕೆರೆಮನೆ ಶಿವರಾಮ ಹೆಗಡೆ-ಶಂಭು ಹೆಗಡೆ-ಗಜಾನನ ಹೆಗಡೆ-ಮಹಾಬಲ ಹೆಗಡೆ-ಚಿಟ್ಟಾಣಿ ರಾಮಚಂದ್ರ ಹೆಗಡೆ ಪ್ರಮುಖರು. ತನ್ನ ತಡಿಯಿಂದ ಅನತಿ ದೂರದಲ್ಲೇ ಇರುವ ಶ್ರೀಮಯ ಕಲಾಕೇಂದ್ರದಲ್ಲಿ ಶಂಭು ಹೆಗಡೆಯವರ ಲಾಲಿತ್ಯದ ಕೃಷ್ಣನನ್ನೋ ಅಥವಾ ಅಭಿನಯ ಚತುರ ಚಿಟ್ಟಾಣಿಯವರನ್ನೋ ಮಾತಿನ ಮಲ್ಲ ಮಹಾಬಲರ ಗತ್ತನ್ನೋ ಶರಾವತಿ ಈಗ ಕಾಣುತ್ತಿಲ್ಲ. ಆದರೆ ಅವರೆಲ್ಲ ಶರಾವತಿಯ ಮಕ್ಕಳೇ. ಇನ್ನೂ ಎಷ್ಟೋ ಕಲಾವಿದರಿಗೆ ಶರಾವತಿಯೊಡನೆ ಆಜನ್ಮ ಸಂಬಂಧವಿದೆ. ಧರ್ಮ ಸಿಂಧುವಿನ ರಚನೆಕಾರ ನಾಜಗಾರ ಶಂಭು ಶಾಸ್ತ್ರಿ ಕೂಡಾ ಶರಾವತಿಯ ಕಂದ. ನನಗೆ ಗುರು ಸಮಾನರಾದ ಹಿರಿಯ ಪತ್ರಕರ್ತ ಎಲ್ ಎಸ್ ಶಾಸ್ತ್ರಿ ನಾಜಗಾರ ಕೂಡಾ ಶರಾವತಿಯ ಶಿಶು.

ಇದಿಷ್ಟು ಶರಾವತಿಯ ಹರಿವಿನ ಆಕೆಯ ಮಡಿಲಿನ ಪ್ರದೇಶಗಳ ವಿವರಣೆ, ಸಂಕ್ಶಿಪ್ತವಾಗಿ. ಆದರೆ ಶರಾವತಿಗೆ ಕಟ್ಟಿದ ಒಡ್ಡುಗಳು ನಾಗರೀಕತೆಯನ್ನು ಆಕೆಯ ಒಡಲಿನಲ್ಲಿ ಮುಳುಗಿಸಿಬಿಟ್ಟವು. ಮಡೆನೂರು ಅಣೆಕಟ್ಟು ಕಟ್ಟಿದಾಗ ಮುಳುಗಿದ ಗ್ರಾಮಗಳ ಜನರು, ಈ ಒಡ್ಡು ಎತ್ತರವಾದರೆ ಕಷ್ಟವಾಗುತ್ತದೆ ಎಂದು ಒಡ್ಡಿನ ಕೆಳಗೆ ಹೋಗಿ ವಾಸ ಮಾಡಲು ತೊಡಗಿದರಂತೆ. ಆದರೆ ದುರ್ವಿಧಿ ಅಲ್ಲಿಯೂ ಬೆನ್ನು ಬಿಡಲಿಲ್ಲ. ಮತ್ತೆ ಶರಾವತಿಯನ್ನು ಲಿಂಗನಮಕ್ಕಿಯಲ್ಲಿ ತಡೆದರು. ಮುಳುಗಡೆ ಮತ್ತೆ ಆಯಿತು. ಜನರ ಬದುಕು ನೀರ ಪಾಲಾಯಿತು. ಹುಟ್ಟಿದೂರನ್ನು ಬಿಟ್ಟು ಬದುಕು ಕಟ್ಟಿಕೊಳ್ಳುತ್ತಿದ್ದವರನ್ನು ಮತ್ತೆ ಹೊರಗಟ್ಟಲಾಯಿತು. ಬೆಂಗಳೂರಿಗೆ ಬೆಳಕು ಬೇಕೆಂದು ಸಾವಿರಾರು ಜನರ ಬದುಕು ಅನಿಶ್ಚಿತತೆಯ ಕತ್ತಲಲ್ಲಿ ಕೊಳೆಯತೊಡಗಿತ್ತು. ಸರಕಾರ ಬದಲಿ ಜಮೀನನ್ನೇನೋ ಕೊಟ್ಟಿತು. ಪರಿಹಾರ ಕೂಡಾ ಕೊಟ್ಟಿತು. ಆದರೆ ಆ ಪರಿಹಾರ ಎಷ್ಟೋ ಜನರ ಕೈಗೆ ಸಿಗಲೇ ಇಲ್ಲ. ಮಧ್ಯವರ್ತಿಗಳು-ಹಿತಶತ್ರುಗಳು-ಪೂಟ್ ಲಾಯರಿಗಳು ಆ ದುಡ್ಡಲ್ಲಿ ಕದ್ದಿದ್ದು ಲೆಕ್ಕವಿಲ್ಲ.

ಸಿಗಂಧೂರಿನ ದೇವಿಯ ಮೂಲ ಸ್ಥಾನ ಕೂಡಾ ಹಿನ್ನೀರಿನಲ್ಲಿ ಮುಳುಗಿದೆಯಂತೆ. ನಾಗರೀಕತೆಗಳನ್ನು ಕಟ್ಟುವ ನದಿಗೆ ಅಣೆಕಟ್ಟನ್ನು ಕಟ್ಟಿ ನಾಗರೀಕತೆಯೊಂದರ ಉಸಿರು ಕಟ್ಟಿಸಿ ಕೊಲ್ಲಲಾಯ್ತು ಈ ರೀತಿ. ಹರದೂರಿನ ದುರ್ಗಾಂಬಾ ಎನ್ನುವ ದೇವಿಯ ಮೂರ್ತಿಗೆ ಹದಿನೆಂಟು ಭುಜಗಳಿದ್ದ ಮೂರ್ತಿ ಇತ್ತಂತೆ. ಈಗ ಆ ದೇವಿಗೆ ಶರಾವತಿಯ ಒಡಲೇ ಮನೆ. ಅವಳ ಜುಳು ಜುಳು ನಾದವೇ ಮಂಗಳವಾದ್ಯ. ಇನ್ನೂ ಎಷ್ಟು ಐತಿಹಾಸಿಕ-ಸಾಂಸ್ಕೃತಿಕ ಸತ್ಯಗಳು ಶರಾವತಿಯ ಒಡಲಿನಲ್ಲಿವೆಯೋ ಲೆಕ್ಕವಿಲ್ಲ. ಅದು ಖಂಡಿತಕ್ಕೂ ಅವಳ ತಡಿಯಲ್ಲಿನ ಪ್ರವಾಸಿ ತಾಣಗಳಿಗೆ ಬರುವ ಜನ ಎಸೆಯುವ ಪ್ಲಾಸ್ಟಿಕ್ ಪ್ಲೇಟು-ಬೀರ್ ಬಾಟಲಿಗಳಿಗಿಂತ ಜಾಸ್ತಿ. ಇದೆಲ್ಲದರ ಲೆಕ್ಕ ಅಂದು ಯಾರೂ ಇಡಲಿಲ್ಲ. ಯಾಕೆಂದರೆ ತಂತಿಯಲ್ಲಿ ಹರಿಯುವ ವಿದ್ಯುತ್ ಬೇಕಿತ್ತು. ಅದು ಸಿಕ್ಕಿತ್ತು. ಸಾಕಾಯ್ತು.

ಮುಳುಗಡೆ ಮಹಾತ್ಮೆ ಇಲ್ಲಿಗೇ ಮುಗಿಯಲಿಲ್ಲ. ಆಚೆ ತಡಿಯ ಕರೂರು ಸೀಮೆಯನ್ನು ದ್ವೀಪ ಮಾಡಿಬಿಟ್ಟಿತು. ಬಹುಷಃ ಎಲ್ಲಿಯಾದರೂ ಮಾನವ ನಿರ್ಮಿತ ದ್ವೀಪ ಇದ್ದರೆ ಅದು ಕರೂರು ಸೀಮೆ ಇರಬೇಕು. ಇಂದಿಗೂ ಆ ಪ್ರದೇಶವನ್ನು ಕರೆಯುವುದು "ಹೊಳೆಯಿಂದ ಆಚೆ" ಎಂದೇ. ನೀರಿದ್ದಾಗ ಅತ್ತಿಂದಿತ್ತ ಓಡಾಡುವ ಲಾಂಚ್ ಮಾತ್ರ ಅಲ್ಲಿನ ಸಂಪರ್ಕ ಸಾಧನವಾಯಿತು. ತಮಾಷೆಗೆಂದು ಅಲ್ಲಿನವರು ತಮ್ಮೂರನ್ನು ತಾವೇ ಲಂಕಾಪಟ್ಟಣ ಎಂದು ಕರೆದುಕೊಂಡರು. ನಾಲಿಗೆಯಲ್ಲಿ ವಿನೋದದ ಶಬ್ದ ಬಂದರೂ, ಹೃದಯದಾಳದಲ್ಲಿ ಸರಕಾರದ ರಾಕ್ಷಸೀ ಪ್ರವೃತ್ತಿಯ ಬಲಿಪಶುಗಳು ತಾವು ಎನ್ನುವ ಮೌನ ರೋಧನ ಇತ್ತು ಅದರಲ್ಲಿ. ಒಂದು ಕಡೆ ಮುಳುಗಡೆ ಮಾಡಿದ ಸರಕಾರ, ಮುಳುಗಡೆಯಾದವರ ಪುನರ್ವಸತಿ ಬಗ್ಗೆ ನಿರ್ಲಕ್ಷ್ಯ ತಾಳಿದರೆ ಇನ್ನೊಂದು ಕಡೆ ಕರೂರು ಸೀಮೆಯ ಜನರ ಅವಶ್ಯಕತೆಗಳನ್ನು ಕಡೆಗಣಿಸಿತು. ಮುಳುಗಿದ ನದಿಗೆ ಸೇತುವೆ ಕಟ್ಟುವ ಬಗ್ಗೆ ಯೋಚಿಸಲೇ ಇಲ್ಲ. ಮೊದಲೇ ಸರಕಾರದ ನಿರ್ಲಕ್ಶ್ಯಕ್ಕೆ ಒಳಗಾದ ಬ್ರಾಹ್ಮಣರು-ಅಡಿಕೆ ಬೆಳೆಗಾರರು ಪ್ರತಿಭಟಿಸಿಯಾರಾದರೂ ಇನ್ನೆಷ್ಟು?

ಶರಾವತಿಯಲ್ಲಿ ಹರಿವು ಸಾಕಾಗದಾದಾಗ, ಚಕ್ರಾ ನದಿಗೆ ಅಣೆ ಕಟ್ಟು ಕಟ್ಟಿ ಶರಾವತಿಯೆಡೆಗೆ ತಿರುಗಿಸಿ ವಿದ್ಯುತ್ ದಾಹವನ್ನು ತೀರಿಸಲಾಯಿತು.

ಶರಾವತಿ ಅಚ್ಚುಕಟ್ಟು ಪ್ರದೇಶದ ಕತೆ ಹೀಗಾದರೆ, ಶರಾವತಿ ಜಲಾನಯನ ಪ್ರದೇಶ ಅಂದರೆ ಬಿದ್ದ ಮಳೆಯ ನೀರು ಶರಾವತಿಯೆಡೆಗೆ ಸಾಗುವ ಭೂ ಭಾಗಗಳ ಕತೆ ಇನ್ನೊಂದು ರೀತಿ. ಮೊದಲು ಇಲ್ಲಿದ್ದ ಸಹಜವಾದ ಕಾಡುಗಳನ್ನು ಕಡಿದು ಅಕೇಶಿಯಾ-ಸೂಚೀಪರ್ಣ-ಗಾಳಿ-ಮ್ಯಾಂಜಿಯಮ್ ನೆಡುತೋಪು ಮಾಡಲಾಯ್ತು. ಅಕೇಶಿಯಾ ಎಲೆ ಕೊಳೆಯದೇ ಇಲ್ಲಿನ ಮಣ್ಣು ಸಡಿಲವಾಗಿ ಸವೆದು ನೀರಿನೊಂದಿಗೆ ಶರಾವತಿಯಲ್ಲಿ ಕೆಸರು ತುಂಬಿತು. ಅಕೇಶಿಯಾ ನೆಡುತೋಪಿನಿಂದಾಗಿ ಉಷ್ಣತೆ ಹೆಚ್ಚಿ ಭೂಮಿ ಗಾರಿಹೋಯ್ತು. ತಂಪಿನ ಪ್ರದೇಶವಾಗಿದ್ದ ಮಲೆನಾಡ ಭಾಗಗಳು ಒಣ ಭೂಮಿಯಾಗುತ್ತಾ ಹೋದವು. ಮಳೆ ಕಡಿಮೆಯಾಯಿತು. ಬಿದ್ದ ಮಳೆಯ ನೀರು ಭೂಮಿಯ ಒಳಗೆ ಇಳಿಯಲು ಅಕೇಶಿಯಾ ಬಿಡಲಿಲ್ಲ. ಪರಿಣಾಮ ಈಗ ಅಲ್ಲಿ ಕುಡಿಯುವ ನೀರಿಗೂ ತತ್ವಾರ. ನನ್ನಜ್ಜ ತನ್ನ ಸಂಸಾರವನ್ನು ತೆಂಕೋಡಿಗೆ ತಂದಿದ್ದು ೧೯೪೮ರಲ್ಲಿಯಂತೆ. ಅದಕ್ಕಿಂತಲೂ ಮೊದಲು ಹುಟ್ಟಿದ ನೆಂಟರು ಈ ವರ್ಶ ನಮ್ಮೂರಿನಲ್ಲಿ ಕುಡಿಯುವ ನೀರಿನ ಬರ ಕಂಡು ಹೌ ಹಾರಿ ಹೇಳಿದ್ದಿದೆ " ನಿಮ್ಮ ಊರಲ್ಲಿ ಹುಲಿ ಕೂರ್ತಿತ್ತು. " ಎಂದಿದ್ದು ಕೇಳಿ ನನಗೆ ಆಶ್ಚರ್ಯವಾಗಿತ್ತು. ಮಳೆ ಕಡಿಮೆಯಾಗಿ ಎಷ್ಟು ತೋಟಗಳು ಬರಡೆದ್ದು ಹೋದವೋ ಏನೋ. ಹೈನುಗಾರಿಕೆ ದುಬಾರಿಯಾಯಿತು ಹುಲ್ಲಿಲ್ಲದೆ-ನೀರಿಲ್ಲದೆ.

ಇಷ್ಟೆಲ್ಲಾ ಆಗುತ್ತಿರುವುದನ್ನು ಕೆರೆಗಳಲ್ಲಿ ಕುಸಿಯುತ್ತಿದ್ದ ನೀರಿನ ಮಟ್ಟ ಸಾರಿ ಸಾರಿ ಹೇಳುತ್ತಿದ್ದಾಗ ಎಲ್ಲರ ಕಿವಿಯಲ್ಲಿ ಇಯರ್ ಫೋನ್ ಇದ್ದಿದ್ದರಿಂದ ಯಾರಿಗೂ ಕೇಳಲೇ ಇಲ್ಲ.

ಇಷ್ಟೆಲ್ಲಾ ಭಾನಗಡಿ ಕೆಲಸ ಮಾಡಿದ್ದು ಬಹುಷಃ ಸರಕಾರಕ್ಕೆ ಸಾಕಾಗಲಿಲ್ಲ ಎನಿಸುತ್ತದೆ. ಈಗ ಬೆಂಗಳೂರಿಗೆ ಶರಾವತಿ ನದಿಯ ನೀರನ್ನು ತರುತ್ತಾರಂತೆ. ಎಲ್ಲಿಂದ ತರುತ್ತಾರೋ ಗೊತ್ತಿಲ್ಲ. ಲಿಂಗನಮಕ್ಕಿಯಿಂದಲೇ ತಂದರೆ, ಜೋಗದ ಸಿರಿ ಕರಿಯ ಬಂಡೆಯಷ್ಟೇ ಆದೀತು. ಜೋಗದಿಂದ ತಂದರೆ ಗೇರುಸೊಪ್ಪೆಯ ವಿದ್ಯುದಾಗಾರದಲ್ಲಿ ಜಲಚಕ್ರ ತಿರುಗಿಸುವುದಕ್ಕೆ ಏನು ಮಂತ್ರಿಗಳು ಪೆಡಲ್ ಹೊಡೆಯುತ್ತಾರಾ? ಗೇರುಸೊಪ್ಪೆಯಿಂದ ಮುಂದೆ ನೀರಿಲ್ಲದೇ ಜನರು ಸತ್ತರೂ ತೊಂದರೆಯಿಲ್ಲ, ಬೆಂಗಳೂರಿಗೆ ನೀರು ಬೇಕು. ಅಲ್ಲ ಸ್ವಾಮಿ, ಬೆಂಗಳೂರಿನಲ್ಲಿ ಯಾರಿಗೆ ನೀರು ಕೊಡುತ್ತೀರಿ? ಕೆಲಸಕ್ಕೆಂದು ಬಂದು "ಕನ್ನಡ್ ಗೊತೀಲಾ" ಎಂದು ನುಲಿದು ಪಿಜ್ಜಾ ತಿನ್ನುವ ಹಿಂದೀವಾಲಾಗಳಿಗಾ? ಅವಕ್ಕೆ ಕೆಲಸ ಕೊಟ್ಟ ಸಾಫ್ಟ್ ವೇರ್ ಕಂಪನಿಗಳಿಗಾ? ಈ ದುಡ್ಡಲ್ಲಿ ಶರಾವತಿಯ ತಡದ ಅಥವಾ ತಡಿಗೆ ಸಮೀಪದ ಎಲ್ಲಾ ಪಟ್ಟಣಗಳನ್ನು ಅಭಿವೃದ್ಧಿ ಮಾಡಿದರೆ, ಅಲ್ಲಿ ಸ್ಥಳೀಯರಿಗೆ, ಸ್ಥಳೀಯ ವಸ್ತುಗಳಿಂದ ಮಾದಾಹುದಾದ ಉದ್ಯಮಗಳಿಗೆ ಸಬ್ಸಿಡಿ ಕೊಟ್ಟು, ಮುಳುಗಡೆ ಸಂತ್ರಸ್ತರಿಗೆ ಕೆಲಸ ಕೊಡುವಂತೆ ಪ್ರೇರೇಪಿಸಿದರೆ ಬೆಂಗಳೂರಿಗೆ ನೀರು ಬೇಕಿಲ್ಲ. ಬೆಂಗಳೂರಿನಲ್ಲಿ ವಾಸವಾಗಿರುವ ಶರಾವತಿಯ ತಡದ ಪ್ರದೇಶದ ಜನ ಸಂತೋಷದಿಂದ ಊರಿಗೆ ಬರುತ್ತಾರೆ. ಬಜೆಟ್ಟಿನಲ್ಲಿ ಅದು ಇದು ಮಣ್ಣು ಮಸಿ ಎನ್ನುವ ನಿಮಗೆ ಇದೆಲ್ಲಾ ಯಾಕೆ ತಿಳಿಯುವುದಿಲ್ಲವೋ ಗೊತ್ತಿಲ್ಲ. ನಿಮಗೆ ಹೇಳಬೇಕಾದ ಐ ಅ ಎಸ್ ಗಳಲ್ಲಿ ಹೆಚ್ಚಿನವರು ಕರ್ನಾಟಕ್ ದಲ್ಲಿ ಇದ್ದೂ ಕನ್ನಡ್ ಕಲಿಯದ ಜನರೇ ಆಗಿದ್ದಾರೆ. ನಿಮಗೋ ಜಾತಿ ಹೆಸರಲ್ಲಿ ಮಗುವನ್ನು ಚಿವುಟಿ ಸಮಾನತೆ ಹೆಸರಲ್ಲಿ ತೊಟ್ಟಿಲು ತೂಗಲೇ ಪುರಸೊತ್ತಿಲ್ಲ.

ಇನ್ನು ನಮ್ಮ ರಾಜ್ಯವನ್ನು ರಕ್ಷಿಸುತ್ತೇವೆ ಎಂದು ಹುಟ್ಟಿಕೊಡಿರುವ ಸಂಘಟನೆಗಳಿವೆ ಹಾದಿಗೊಂದು ಬೀದಿಗೋಂದು. ಅವರಿಗೆ ಮಲೆನಾಡ ಸಮಸ್ಯೆ ಸಮಸ್ಯೆಯೇ ಅಲ್ಲ. ಅವರ ರಾಜ್ಯೋತ್ಸವದ ಚಕ ಮಕ ಬೆಳಕಿನ ವ್ಯವಸ್ಥೆಗೆ ಉಪಯೋಗವಾಗುವುದು ಇದೇ ಶರಾವತಿಯಲ್ಲಿ ಜಲಚಕ್ರ ತಿರುಗಿ ಬರುವ ಕರೆಂಟು ಅಂತ ಗೊತ್ತಿಲ್ಲ ಅನಿಸುತ್ತದೆ. ಕನ್ನಡಿಗರ ಕಣ್ಮಣಿ ಡಾ| ರಾಜ್ ಕುಮಾರ್ ಇರೋದ್ರೊಳಕೆ ಒಮ್ಮೆ ನೋಡು ಜೋಗದ ಗುಂಡಿ ಎಂದು ಹಾಡಿದ್ದಕ್ಕೂ ಬೆಲೆ ಇಲ್ಲದೇ ಹೋಯ್ತೇ ಹಾಗಾದರೆ? ಅದಲ್ಲ ಇವರಿಗೆ ಓರಾಟ ಮಾಡಿ ಎಸರು ಮಾಡಬೇಕು ಅಷ್ಟೇ . ಮಲೆನಾಡು ಮತ್ತು ಕರಾವಳಿ ಎಂದಿಗೂ ಕರ್ನಾಟಕದ್ದಲ್ಲವೇ ಅಲ್ಲ. ಅಲ್ಲಿ ಕನ್ನಡ ಪೂರ್ತಿ ಸುಂದರವಾಗಿದೆಯಲ್ಲ. ಹಾಗಾಗಿ ಇವರಿಗೆ ಯಾವುದೇ ಕಿಮ್ಮತ್ತಿಲ್ಲ.

ಇನ್ನು ಕೆಲವರಿದ್ದಾರೆ. ತಮಗೆ ಬುದ್ಧಿ ಇದೆಯೋ ಇಲ್ಲವೋ ಎಂದು ಅನುಮಾನ ಬಂದರೆ, ಉತ್ತರವಾಗಿರಲಿ ಅಂತ ತಮ್ಮನ್ನು ತಾವೇ ಬುದ್ಧಿಜೀವಿ ಎಂದು ಕರೆದುಕೊಳ್ಳುತ್ತಿರುವ ಜನ. ಸಾಹಿತಿಗಳು ಎಂದು ಜನ ಇವರನ್ನು ಗುರುತಿಸಿದ್ದಾರೆ. ಹಿತ ಅಂದರೆ ಒಳ್ಳೆಯದು. ಅದರ ಜೊತೆಗೆ ಅಂದರೆ ಹಿತದ ಸಂಗಡ ಇದ್ದರೆ ಮಾತ್ರ ಸಾಹಿತ್ಯ. -ಹಿತ ಭಾವವಿದ್ದಾಗ ಮಾತ್ರ ಸಾಹಿತ್ಯ. ಆದರೆ ಇವರು ಸ್ವ-ಹಿತ ಭಾವಕ್ಕೆ ಇದ್ದವರು. ಉಳಿದಲ್ಲಿ ಎಲ್ಲಿ ಏನಾದರೂ ನಂದೆಲ್ಲಿಡಲಿ ಅಂತ ಟೌನ್ ಹಾಲಿನಲ್ಲಿ ಬಾಯ್ದೆರೆದು ಬೊಬ್ಬಿರಿವ ಈ ಜನಕ್ಕೆ ಈಗ ಅದೇನಾಗಿದೆಯೋ ಕಾಣೆ. ದಿವ್ಯ ಮೌನ. ಬೀಫ಼್ ಫ಼ೆಸ್ಟಿವಲ್ಲಿನಲ್ಲಿ ತಿಂದ ದನದ ಮಾಂಅದಲ್ಲಿ ಅದ್ಯಾವ ಬ್ರಾಹ್ಮಣರು ಇವರಿಗೆ ಮೂಳೆಯ ತುಂಡು ಸೇರಿಸಿ ಕೊಟ್ಟಿದ್ದರೋ ಏನೋ, ಅದು ಗಂಟಲಲ್ಲಿ ಸಿಲುಕಿ ಇವರ ಉಸಿರು ನಿಲ್ಲಿಸಿ ಬಿಟ್ಟಿದೆ ಪಾಪ. ಜಸ್ಟ್ ಆಸ್ಕಿಂಗ್ ಎನ್ನುವ ನಟ ಭಯಂಕರ ಇದು ಕುಛ್ ಭೀ ಎಂದುಕೊಂಡು ನವ ರಂಧ್ರಗಳನ್ನೂ ಮುಚ್ಚಿಕೊಂಡುಬಿಟ್ಟಿದ್ದಾನೆ. ಬಹು

ಮಾಧ್ಯಮದಲ್ಲಿ ಈ ವಿಚಾರದ ಬಗ್ಗೆ ಬರೆದು ಜನಜಾಗೃತಿ ಮೂಡಿಸಬಲ್ಲ ಅನೇಕ ಪತ್ರಕರ್ತರು ಇದ್ದಾರೆ. ವಿಶ್ವೇಶ್ವರ ಭಟ್ಟರು ನೂರೆಂಟು ಮಾತಾಡುವ ಬದಲು ಇದೊಂದು ವಿಚಾರ ಹೆಚ್ಚಾಗಲಿಕ್ಕಿಲ್ಲ. ಈಗ ಸಂಪಾದಕರಾಗಿರುವ ಮೂರೂರು ವಿನಾಯಕ ಭಟ್ಟರು ಏನೂ ಬರೆಯುತ್ತಿಲ್ಲ. ಎಲ್ಲದಕ್ಕೂ ಉತ್ತರ ಕನ್ನಡ ಎಂದು ಕ್ಯಾತೆ ತೆಗೆಯುವ ಶಶಿಧರ ನಂದಿಕಲ್ ಕೂಡಾ ಇದರ ಬಗ್ಗೆ ವಿರೋಧಿಸಿ ಬರೆದಿದ್ದು ಕಾಣೆ. ಯಾಕೆ ಹೊನ್ನಾವರ ಉತ್ತರ ಕನ್ನಡ ಜಿಲ್ಲೆಯಲ್ಲಿ ಇಲ್ಲವಾ?

ಒಮ್ಮೊಮ್ಮೆ ಅನ್ನಿಸುವುದು ಇದು ರಾಜಕೀಯ ದ್ವೇಷದ ಶಿಶುವಾ ಅಂತ. ಯಾಕೆಂದರೆ ಶಿವಮೊಗ್ಗ ಜಿಲ್ಲೆ ಮತ್ತು ಉತ್ತರ ಕನ್ನಡ ಜಿಲ್ಲೆಗಳು ಕಾಂಗ್ರೆಸನ್ನು ತಿರಸ್ಕರಿಸಿ ತಿಪ್ಪೆಗೆ ಎಸೆದಿದ್ದರೆ ದಳವನ್ನು ಒಳಗೇ ಬಿಟ್ಟುಕೊಂಡಿಲ್ಲ. ಅದಕ್ಕೇ ಸಿಟ್ಟಿಗೆ ಜನರ ಮೇಲೆ ಈ ಪಾಟಿ ದ್ವೇಷವಿರಬಹುದಾ ಅಂತ ಅನುಮಾನ. ನೇತ್ರಾವತಿಯನ್ನು ತಿರುವಿ ದಕ್ಷಿಣ ಕರಾವಳಿಯನ್ನು ಹಾಗೂ ಶರಾವತಿಯನ್ನು ಬರಿದು ಮಾಡಿ ಉತ್ತರ ಕರಾವಳಿಯನ್ನು ಬರಡು ಮಾಡಿ ಅಲ್ಲಿನ ಜಾಗವನ್ನು ತಮ್ಮ ರಿಯಲ್ ಎಸ್ಟೇಟ್ ಉದ್ಯಮಕ್ಕೆ ಬಳಸಿಕೊಳ್ಳುವ ಹುನ್ನಾರವಾ? ಗೊತ್ತಿಲ್ಲ. ಯಾಕೆಂದರೆ ಕಾಂಗ್ರೆಸ್ ತನ್ನ ಲಾಭಕ್ಕಲ್ಲದೆ ಮತ್ತೇನಕ್ಕೂ ಇಲ್ಲ ಎನ್ನುವುದು ಎಲ್ಲರಿಗೂ ತಿಳಿದ ವಿಚಾರ. ಇನ್ನು ದಳದ ಪೊಲಿಟಿಕಲ್ ಗೇಮ್ ಕೂಡಾ ತಿಳಿಯದವರಿಲ್ಲ. ಸಚಿವೆ ಜಯಮಾಲಾ ಶರಾವತಿ ಒಡಲ ದ್ವೀಪದ ಸೊಸೆ. ಅವರಾದರೂ ಹೇಳಬೇಡವೆ ಹಾಗಾದರೆ. ಪಾಪ ಬಿಡಿ. ಅವರಿಗೆ ಲಕ್ಷ್ಮೀ ಹೆಬ್ಬಾಳ್ಕರ್ ಆದಿದ ಮಾತಿನಿಂದ ನೋವಾಗಿರಬಹುದು.

ನೋಟ್ ಬ್ಯಾನ್ ಆದಾಗ ಹುಟ್ಟಿ ಜಿ ಎಸ್ ಟಿ ಬಂದಾಗ ಬೆಳೆದ ಆರ್ಥಿಕ ತಜ್ಞರ ಹಿಂಡು ಎಲ್ಲಿ ಹೋಯ್ತೋ ಏನೋ? ಶರಾವತಿಯ ನೀರನ್ನು ಬೆಂಗಳೂರಿಗೆ ತರಬೇಕೆಂದರೆ, ವಿದ್ಯುತ್ ಉತ್ಪಾದನೆ ಕಡಿಮೆ ಮಾಡಬೇಕು. ವಿದ್ಯುತ್ ಉತ್ಪಾದನೆಗೆ ಪರ್ಯಾಯವಾಗಿ ಖಾಸಗಿ ಮೂಲಗಳಿವೆ ಎನ್ನುವುದು ಸಮರ್ಥನೆಯಾದರೆ, ಶರಾವತಿಯನ್ನು ಪಂಪ್ ಮಾ್ಡ್ಲೂ ಕರೆಂಟ್ ಬೇಕು. ಅಲ್ಲಿಗೆ ಅದೇ ಶರಾವತಿಯ ದಡದ ಗಾದೆ-"ಮಂಗನ್ನ ಓಡಿಸಿದ್ದಕ್ಕೂ ಬಾಳೆಹಣ್ಣು ತಿಂದಿದ್ದಕ್ಕೂ ಸರಿ ಹೋಯ್ತು" ಎನ್ನುವುದು ಅಕ್ಷರಷಃ ಸತ್ಯವಾದಂತೆ. ಇನ್ನು ವಿದ್ಯುತ್ ಉತ್ಪಾದನೆ ಕೈ ಬಿಡುವುದೇ ಆದರೆ, ಶರಾವತಿಯ ನೀರಿನ ಮೇಲೆ ಮೊದಲ ಹಕ್ಕು ಕರೂರು ಸೀಮೆಯದ್ದು. ಅದಾದಮೇಲೆ ಅಲ್ಲಿನ ಜಲಾನಯನ ಪ್ರದೇಶದ್ದು. ಮಲೆನಾಡ ಕೆರೆಗಳನ್ನು ಒಣಗಿಸಿಯಾಯ್ತು, ಅಕೇಶಿಯಾ ನೆಟ್ಟು. ಈಗ ನದಿಯೂ ಇಲ್ಲದಂತಾಗಬೇಕೆ? ಇಷ್ಟೆಲ್ಲ ಒದ್ದಾಡುವ ಬದಲು ಬೆಂಗಳೂರಿನಲ್ಲಿ ಇರುವ ಮತ್ತು ಮುಂದೆ ಬರುವ ಕಂಪನಿಗಳಿಗೆ ಇತರ ಮಹಾನಗರಗಳಾದ ಶಿವಮೊಗ್ಗ, ಚಿಕ್ಕಮಗಳೂರು, ಮಂಗಳೂರುಗಳಲ್ಲಿ ವ್ಯವಹಾರ ನಡೆಸಲು ಹೇಳಬಾರದೇಕೆ? ಅವರು ಮೂಲ ಸೌಕರ್ಯಗಳನ್ನು ಕೇಳುತ್ತಾರೆ ಎನ್ನುವುದು ಸರಕಾರದ ನೆವ ಅಷ್ಟೆ. ಯಾಕೆಂದರೆ ಇಂದು ಬೆಂಗಳೂರಿನಲ್ಲಿ ಇರುವ ಮೂಲ ಸೌಕರ್ಯ ಎಷ್ಟು ಅಂತ ಎಲ್ಲರಿಗೂ ಗೊತ್ತಿದೆ. ದೆಹಲಿ-ನೋಯ್ಡಾ-ಗುರುಗ್ರಾಮ-ಕೋಲ್ಕತ್ತಾ ಇವೆಲ್ಲ ಮಹಾ ಮೂಲಸೌಕರ್ಯ ಹೊಂದಿದ ನಗರಗಳಲ್ಲ. ವಿಮಾನ ನಿಲ್ದಾಣವೊಂದೇ ಅಲ್ಲಿನ ಹೆಗ್ಗಳಿಕೆ ಅಷ್ಟೆ. ರಸ್ತೆಯ ಮೇಲೆ ಗಂಟೆಗಟ್ಟಲೆ ನಿಲ್ಲುವ ಪರಿಸ್ಥಿತಿ ಇದೆ ಅಲ್ಲಿ. ಈ ನಗರಗಳಲ್ಲೂ ಖಾಸಗಿ ಸಹಭಾಗಿತ್ವದಲ್ಲಿ ಸರಕಾರ ವಿಮಾನ ನಿಲ್ದಾಣ ನಿರ್ಮಿಸಬಹುದಲ್ಲ. ಮಾಜಿ ಪ್ರಧಾನಿ ಪ್ರತಿನಿಧಿಸಿದ್ದ ಹಾಸನದಲ್ಲಿ ಮೂಲ ಸೌಕರ್ಯ ಇಲ್ಲ ಎನ್ನಲು ಅದೇ ಪಕ್ಷ ಆಡಳಿತದ ಚುಕ್ಕಾಣಿ ಹಿಡಿದು ಹೇಳುವುದು ಸಲ್ಲ. ಮತ್ತೆ ಒಂದಂತೂ ನಿಜ. ಬೆಂಗಳೂರಿನಲ್ಲಿ ಕೆಲಸದಲ್ಲಿರುವ ಎಷ್ಟೋ ಜನ ಮಲೆನಾಡಿಗರು ಊರಿನಲ್ಲೇ ಕೈ ತುಂಬಾ ಸಂಬಳದ ಕೆಲಸ ಸಿಕ್ಕಿದರೆ ಬರುವುದಕ್ಕೆ ತಯಾರಾಗಿದ್ದಾರೆ. ಅಲ್ಲಿಗೆ ಬೆಂಗಳೂರಿನ ಜನಸಂಖೆ ಕಡಿಮೆಯಾಗಿ ದಟ್ಟಣೆ ಕಡಿಮೆಯಾಗುತ್ತದೆ. ನೀರ ಬೇಡಿಕೆ ನೀಗುತ್ತದೆ.

ನಾವು ಬೆಂಗಳೂರು ಸೇರುವ ಹೊತ್ತಿಗೆ ಇಲ್ಲಿ ಔತ್ತರೇಯರು ಬಂದು ಸೇರಿ ಪಿಜ್ಜಾ ಹಟ್ ಅಲ್ಲಲ್ಲಿ ತಲೆ ಎತ್ತುತ್ತಿತ್ತು. ಈಗಂತೂ ಇದು ನಮ್ಮ ಬೆಂಗಳೂರು ಅಲ್ಲವೆ ಅಲ್ಲ ಎನ್ನಿಸುತ್ತಿದೆ. ಹುಟ್ಟಿದ ಊರನ್ನು ಬಿಟ್ಟು ಬಂದು ಯವುದೋ ಕಾಲವಾಗಿ ಹೋಗಿದೆ. ಅಲ್ಲಿ ನಮಗೆ ನೆಅಪುಗಳು ಮತ್ತು ಎಂದೋ ಒಡೆದು ಹೋದ ಕನಸುಗಳು ಮಾತ್ರ ಸಮಾಧಾನ ಕೊಡುತ್ತವೆ. ನಮ್ಮ ಮುಂದಿನ ಪೀಳಿಗೆಗಾದರೂ ಮಲೆನಾಡ ಜೀವನ ಪೂರ್ತಿ ಸಿಗಲಿ ಎನ್ನುವ ಹಾರೈಕೆ ಮತ್ತು ಭರವಸೆಯಾದರೂ ಆಧಾರಕ್ಕಿದೆ ಈಗ. ಶರಾವತಿಯನ್ನು ತಿರುಗಿಸಿದರೆ ಅದೂ ಇಲ್ಲ. ನಮ್ಮ ಸುಖಜೀವನವನ್ನಂತೂ ಬೆಂಗಳೂರಿಗೆ ಬಂದು ಗುಲಾಮಿತನ ಮಾಡಲು ಬಿಟ್ಟಾಯ್ತು, ನಮ್ಮ ಮನೆಯಂಗಳದ ನೀರಿನ ಹಕ್ಕನ್ನೂ ಬಿಡಬೇಕು ಎನ್ನುವ ಬೇಸರ ಅಷ್ಟೆ.

ಲೇಖನ ಉದ್ದವಾಗಿದೆ. ಆದರೆ ಶರಾವತಿಗೆ ಕಟ್ಟಿದ ಒಡ್ಡಿನಿಂದ ಬದುಕು ಕಳೆದುಕೊಂಡಿರುವ ಜನರ ನಿಟ್ಟುಸಿರಿನಷ್ಟಲ್ಲ. ಓದಲು ಕಷ್ಟವಾಗಿರಬಹುದು ಕ್ಷಮೆ ಇರಲಿ. ಆದರೆ ಓದಲಾದ ಕಷ್ಟ ಶರಾವತಿಯನ್ನು ಕಳೆದುಕೊಳ್ಳಬೇಕೆನ್ನುವ ಆತಂಕದ ಮುಂದೆ ಕಷ್ಟ ಕಡಿಮೆಯೇ ಇದೆ.

No comments:

Post a Comment