Tuesday, June 12, 2018

ಸಮ್ಮಿಕ್ಸ್ ಗೌರ್ಮೆಂಟಿಗೆ ಸಲಹೆ


ಬೆಂಗಳೂರಿನ ಬೇಸಿಗೆಯ ಬೇಗೆ ತಾಳಲಾಗಲಿಲ್ಲ, ಊರಿನಲ್ಲಿಯಾದರೂ ತಂಪು ಸಿಕ್ಕಬಹುದು ಎಂದು ಭಾವಿಸಿ ಬಸ್ಸೇರಿ ಊರಿಗೆ ಹೋದೆ. ಊರಿನಲ್ಲೋ ಹಾಳು ಮೊಬೈಲ್ ನೆಟ್ ವರ್ಕ್ ಮನೆಯೊಳಗೆ ಸಿಗುವುದಿಲ್ಲ. ಮೊಬೈಲ್ ನೆಟ್ ವರ್ಕ್ ಸಿಗದಿದ್ದರೆ ಆಗುವ ಚಡಪಡಿಕೆ ಅನುಭವಿಸಿದವನಿಗೇ ಗೊತ್ತು. ಅದೂ ಜಿಯೋ ಸಿಮ್ ಸಿಕ್ಕಿದ ಮೇಲಂತೂ ಕೇಳುವುದೇ ಬೇಡ. ಏನೂ ಮಹತ್ತರವಾಗಿದ್ದು ಇರದಿದ್ದರೂ ಫ಼ೇಸ್ ಬುಕ್ಕಿನಲ್ಲಿ ಇಣುಕಿ ನೋಡಲೇ ಬೇಕು. ಅದಲ್ಲದಿದ್ದರೆ ವಾಟ್ಸಾಪ್ಪಿನಲ್ಲಿ ಯಾವ ಫ಼ಾರ್ ವರ್ಡ್ ಮೆಸೇಜ್ ಇದೆಯೋ ಏನೋ ಎನ್ನುವ ಕುತೂಹಲ. ಯಾರೋ ಹೇಳಿದ್ದು ಸುಳ್ಳಲ್ಲ. ಸ್ಮಾರ್ಟ್ ಫೋನ್ ಇರುವುದೂ ಒಂದೇ ಎಳೆ ಮಕ್ಕಳ ಚಡ್ಡಿಯೂ ಒಂದೇ ಏನೂ ಇರದಿದ್ದರೂ ಅದನ್ನು ತೆಗೆದು ಏನಿದೆಯೋ ಎಂದು ನೋಡಬೇಕು. ಹೀಗೆಯೇ ಏನಿದೆಯೋ ಎಂದು ನೋಡಲು ನಾನು ಮತ್ತೆ ಮನೆಯ ಎದುರಿನ ಏರು ಹತ್ತಿದೆ.

ಬುರುಬುರನೆ ವಾಟ್ಸಾಪ್ಪಿನಲ್ಲಿ ಮೆಸೇಜ್ ಬರುತ್ತಿದ್ದುದಕ್ಕೆ ನನ್ನ ಜಂಗಮ ಗುಂಯ್ ಎನ್ನುತ್ತಾ, ಅಲುಗಾಡಿ ಸುಸ್ತಾಗುತ್ತಿತ್ತು. ನಾನು ಸಮ್ಮಿಶ್ರ ಸರಕಾರದಲ್ಲಿ ಏನಾಯಿತೋ ಎನ್ನುವ ಕುತೂಹಲಕ್ಕೆ ಬಿದ್ದು ಇಂಟರ್ ನೆಟ್ಟಿನಲ್ಲಿ ನ್ಯೂಸ್ ನೋಡುತ್ತಿದ್ದೆ. ಬಂತು ನೋಡಿ ಹಾಲ ನಾಯ್ಕನ ಸವಾರಿ. ಸಮ್ಮಿಶ್ರ ಸರಕಾರ, ಎಲ್ಲಾ ಆಟವಾಡಿಯೂ ಮುಖ್ಯಮಂತ್ರಿ ಪಟ್ಟ ಪಡೆಯದ ಅವನ ಸದಾಕಾಲದ ನಿಷ್ಟೆಯ ಪಕ್ಷ ಕಾಂಗ್ರೆಸ್, ಸಾಲ ಮನ್ನಾ ಮಾಡುತ್ತೇನೆ ಎಂದು ಭರವಸೆ ಕೊಟ್ಟು ಕೈ ಎತ್ತುವಂತೆ ಮಾತಾಡಿದ ಕುಮಾರಣ್ಣ ಇವೆಲ್ಲ ಸೇರಿ ಬಹುಷಃ ಹಾಲನಾಯ್ಕನ ಆತ್ಮವನ್ನೇ ಸುಡುತ್ತಿದ್ದಿರಬೇಕು. ಬೆಂಕಿಯನ್ನು ಕಾರಲು ತನ್ನ ಬಾಯ್ದೆರೆಯಲು ಹವಣಿಸುತ್ತಿದ್ದನೋ ಏನೋ. ನನ್ನ ಹಣೆಬರಹವೋ ಅಥವಾ ಬರಹದ ಸರಕು ಖಾಲಿಯಾದ ಹೊತ್ತಿಗೆ ಅದನ್ನು ತುಂಬಲು ದೈವವೇ ಹೂಡಿದ ಹೂಟವೋ ಗೊತ್ತಿಲ್ಲ. ಹಾಲ ನಾಯ್ಕನ ಕಣ್ಣಿಗೆ ನಾನು ಬಿದ್ದೆ. ನನ್ನ ಕಿವಿಗೆ ಇಂದು ಇನ್ಯಾವ ಶಬ್ದದ ಹೆಣ ಬಿದ್ದೀತೋ, ಬರೆಯಲು ಅದಾವ ಕತೆ ಸಿಕ್ಕೀತೋ ಎಂದು ನನ್ನೊಳಗಿನ ಬರಹಗಾರ ಆಕಳಿಸುತ್ತಾ ಮೈ ಮುರಿದು ಎದ್ದು ಕುಳಿತ. ಕಾಲ ಕಡೆಯಲ್ಲಿ ಅರ್ಜುನ, ತಲೆಯ ಕಡೆಯಲ್ಲಿ ಕೌರವ ಇದ್ದಾಗ ಶ್ರೀಕೃಷ್ಣ ನಿದ್ದೆಯಿಂದ ಎದ್ದಂತೆ.

" ಹೋಯ್ ಅಯ್ಪ್ಪಿ ಅಯ್ರಾಮಾ?! ಬೆಳ್ಗೆ ಬೈಂದ್ರಾ. ಬೆಂಗಳೂರು ಹೆಂಗೈತೆ"

" ಮತ್ತೆ ಹಾಲ ಅರಾಮಾ. ಹೌದ. ಬೆಳ್ಗೆ ಬಂದೆ. ನೀ ಯಾವ ಕಡೆ ಹೋಗಿದ್ಯಾ?"

" ನಾ ಇಲ್ಲೆ ಹೋಗಿದ್ದೆ ಅಯ್ಪಿ. ನೀವೆಂತ ರೈನಿಗೆ ಬಂದ್ರಾ."

ಹಾಲನ ಒಳಗಿನ ಇಂಗ್ಲಿಷ್ ಸುಪಾರಿ ಕಿಲ್ಲರ್ ತನ್ನ ಕೆಲಸ ಶುರು ಮಾಡಿ ಬಿಟ್ಟ. ಆತ ಕೇಳಿದ್ದು ನಾನು ರೈಲಿಗೆ ಬಂದನಾ ಅಂತ ಅನ್ನುವುದು ನನಗೆ ಅರ್ಥವಾಗಿತ್ತು. ಆದರೆ ಅರ್ಥವಾಗದ್ದೆಂದರೆ ಹಾಲನನ್ನು ಭಾಷಾ ಹಂತಕ ಎನ್ನಲೋ ಅಥವಾ ಭಾಷಾ ಕೃಷಿಕ ಎನ್ನಲೋ ಎನ್ನುವುದು. ಯಾಕೆಂದರೆ ರೈಲು ಮತ್ತು ಟ್ರೈನು ಎನ್ನುವ ಎರಡೂ ಶಬ್ದಗಳನ್ನೂ ಬೆರೆಸಿ, ಕಸಿ ಮಾಡಿ ರೈನು ಎಂದು ಮಾಡಿದ್ದನಲ್ಲ. ಇನ್ನೂ ಏನಾದರೂ ಇದೆಯೋ ಎನ್ನುವ ಕುತೂಹಲವೂ ನನ್ನಲ್ಲಿ ಇತ್ತು. ಅದಕ್ಕೇ ಮಾತು ಮುಂದುವರೆಸಿದೆ.

"ಇಲ್ಲಾ ಬಸ್ಸಿಗೆ ಬಂದೆ"

"ಲೆಯ್ಡ್ಜರಿ ಬಯ್ಸ್ಸಿಗಾ" ಅಂದ ಹಾಲ. ಆಫೀಸಿನಲ್ಲಿ ನನ್ನ ತಲೆ ತಿನ್ನುವ ಜೆನರಲ್ ಲೆಡ್ಜರ್ ಹಾಲನ ಬಾಯಿಯಲ್ಲಿ ಜನರಲೈಸ್ ಆಗಿದ್ದಲ್ಲ, ಲಕ್ಸುರಿ ಬಸ್ಸನ್ನು ಆತ ಹಾಗೆ ಕರೆದ ಅಷ್ಟೇ. ನಾನೂ "ಹೂಂ" ಎಂದೆ. ಹಾಲ ಮಾತು ಮುಂದುವರೆಸತೊಡಗಿದ. ನಾನು ಮಿದುಳನ್ನೇ ಟೇಪ್ ರೆಕಾರ್ಡರ್ ಮಾಡಿಕೊಂಡು ಕುಳಿತೆ.

"ಎಂತ ಅಯ್ಪಿ ಹಿಂಗಾದ್ರೆ"

"ಹೆಂಗಾದ್ರಾ?! ಎಂತ?" ಎಂದೆ.

ಹಾಲ ಶುರು ಹಚ್ಚಿದ. " ಅಯ್ಲ್ಲ ಈಗ ಸೊಸೈಟಿಗೆ ಹೋಯ್ಗಿದ್ದೆ. ಸಾಲ ಮನ್ನಾ ಆಗೈತ ಅಂತ ನೋಡಕ್ಕೆ. ಮನ್ನ ಮಾಯ್ಡ್ತ್ನಿ ಅಂಯ್ದಿದ್ರಲ್ಲ ಕುಯ್ಮಾರಣ್ಣ, ಮುಕ್ಮಂತ್ರಿ ಆಯ್ದ್ ಮೇಯ್ಲೆ ಮಯ್ನ ಆಗ್ತೈತಾ ಯುಲ್ಲ ಕಯ್ಟ್ಬೋಕಾ ಕೇಳ್ದೆ. ಮಾಬ್ಲಯ್ಯ ಇನ್ನೂ ಆಲ್ಡ್ರ್ ಬರ್ಲಾ. ಕಯ್ಟ್ಬುಡು. ಯುಲ್ದಿದ್ರೆ ಸಾಲ ಸಿಗಕಲ್ಲ ಅಯ್ನ್ತಾರೆ. ಇದು ಸಮ ಅಲ್ಲ ಅಯ್ಪಿ. ಮಾತು ಕೊಯ್ಟ್ ಮೇಯ್ಲೆ ಇಯ್ಟ್ಕಬೋಕು. ಸಮ್ಮಿಕ್ಸ್ ಗೌರ್ಮೆಂಟ್ ಆಯ್ದ್ರೆ ಎಂತ? ಮುಕ್ಮಂತ್ರಿಗೆ ಪವರ್ ಐತೆ. ಮಾಡ್ಬೋಕು. ಮಾತು ಬತ್ತಾವೆ. ಬ್ಯಾಡ ಅಂತಾರೆ. ಆದ್ರೂ ಎಂತೋ ಒಂದು ಕೈಂಪ್ರೆಸ್ ಮಾಡ್ಕಂಡು ಜನರ ಅಡಿಪಾಯಕ್ಕೆ ಬೆಲೆ ಕೊಟ್ಟು ಸಾಲ ಮನ್ನಾ ಮಾಡ್ಬೋಕು. ನಾವೇನು ದೇಶ ಬುಟ್ಟು ಓಡಿ ಹೋಕೀವಾ ಮಲ್ಯನ ಹಂಗೆ. ಓಡಿ ಹೋಯ್ದ್ರೆ ಬದ್ಕಕ್ಕಾಗ್ತೈತಾ? ನಂಗೊಂದ್ ಇಂಗ್ಲಿಸ್ ಬತೈತೆ, ಬೇರೆ ದೇಸಕ್ಕೆ ಹೋಗ್ಬೈದು ಅಂತಿಟ್ಕಂಡ್ರೂ ಎಲ್ಲರೂ ಹಂಗೇಯ?"

ಅಷ್ಟರಲ್ಲಿ ನನ್ನ ಫೋನ್ ರಿಂಗಾಯಿತು. "ಹಾಲ ಆಪೀಸ್ ಫೋನ್. ಕೊನಿಗೆ ಸಿಗ್ತೇನೆ" ಎಂದೆ.

"ನಾ ಹೋತ್ನಿ. ಮನಿಗೆ ಬಯ್ತ್ನಿ ಕೊನಿಗೆ" ಎಂದು ಹಾಲ ಹೊರಟ.

ಬದುಕಿದೆಯಾ ಬಡ ಜೀವವೇ ಎಂದುಕೊಂಡು ಯಾವಾಗಲೂ ಸಿಟ್ಟು ಬರಿಸುವ ಮಾರ್ಕೆಟಿಂಗ್ ಕಾಲ್ ಮಾಡಿದವರಿಗೆ ಅಂದು ಮಾತ್ರ ಕೃತಜ್ಞತೆ ಸಲ್ಲಿಸಿದೆ, ಮನಸ್ಸಿನಲ್ಲಿ.

ಕಾಂಪ್ರಮೈಸ್ ಅನ್ನು ಕಂಪ್ರೆಸ್ ಆಗಿಸಿ, ಸಮ್ಮಿಶ್ರ ಸರಕಾರವನ್ನು ಹೈಬ್ರಿಡ್ ಸಮ್ಮಿಕ್ಸ್ ಆಗಿಸಿ, ಜನರ ಅಭಿಪ್ರಾಯವನ್ನು ಅಡಿಪಾಯ ಮಾಡಿದ ಹಾಲ ತನಗೆ ಬರುವ ಇಂಗ್ಲೀಷಿನಲ್ಲಿ ಫಾರಿನ್ನಿಗೇ ಹೋಗಬಹುದಾ ಎನ್ನುವುದು ಮಾತ್ರ ಇದೆಲ್ಲದರ ನಡವೆ ಕಟ್ಟ ಕಡೆಗೆ ನನ್ನನ್ನು ಕಾಡುವ ಪ್ರಶ್ನೆಯಾಗಿ ಉಳಿಯಿತು.

No comments:

Post a Comment