Tuesday, June 5, 2018

ಕೆರೆ ರಿಪೇರಿ-2

ಮೇಲೋವರ್ಸೀ ಕೆಲಸ ಸಾಗುತ್ತಿತ್ತು, ಶುಕ್ರನ ಗತ್ತಿನೊಂದಿಗೆ ಗೈರತ್ತಿನೊಂದಿಗೆ. ಎಲ್ಲರೊಂದಿಗೆ ಸಾಗುತ್ತಲೇ ಇತ್ತು ಶುಕ್ರನ ಹರಕು ಬಾಯಿ ಬಡಿವಾರ ಬ್ರೇಕಿಲ್ಲದೆ. ಊರ ಜನರಲ್ಲೂ ಕೆಲವರು ಈಗೀಗ "ಹೋ ಮೇಲೋವರ್ಸಿ.... ಎಂತ ಸಮಾಚಾರ" ಎಂದು ಮಾತಿಗಿಳಿಯುತ್ತಿದ್ದರು.

ಇಷ್ಟು ಸಾಕಾಗುತ್ತಿತ್ತು ಭೂಪನಿಗೆ. " ಅದ್ರ ಕತಿ ಎಂತ ಕೇಂತ್ರಿ. ಬೊಂಬಾಯಾಗೆ ಇದ್ ಬಂದವ ನಾ. ನಂಗೇ ಸಾಕ್ ಸಾಕಾಯ್ತ್. ಅಲ್ಲಿ ಸಮುದ್ರದ ಎದ್ರಿನ ಹೋಟೆಲ್ಲೇ ತಲಿ ಮೇಲೆ ಎದಿ ಮೇಲೆ ಇಟ್ಕಂಡ್ ನಡೆಸ್ದವ. ಆರ್ ಕೆರೆ ರಿಪೇರಿ ಅಂದ್ರ್... ಸಾವಾಸಲ್ಲ ಮಾರ್ರೆ... ಆರೂ ಊರ್ ಕೆಲಸ. ಮಾಡಸ್ತಾ ಇದ್ದರ್ ಊರ್ ಬದಿ ಜನ. ನನ್ ಮೇಲೆ ಇಸ್ವಾಸು ಇಟ್ಕಂಡ್ ಶುಕ್ರ ನೀ ಮೇಲೋವರ್ಸಿ ಆಯ್ಕ್ ಅಂತ ಕೇಂಡ್ರೆ ಬಿಡುಕಾತ್ತ. ಒಪ್ಕಂಡದ್ ಹೌದ್, ಆರ್ ಜನದ ಸಾವಾಸ ಅಲ್ದೆ.... ಕೋಳಿ ಮಾಡ್ರೆ ಒಬ್ಬೊಬ್ಬ ಮೂರ್ ಮೂರ್ ತಿಂಬುದ್... ಅವ್ರ ಹೊಟ್ಟಿಗೆ ಕಿಚ್ ಹಿಡೂಕೆ....ಇನ್ ಕುರಿ ಮಾಡ್ರಂತೂ ಕೇಂಬ್ದೇ ಬ್ಯಾಡ... ಹಸೀದೇ ತಿಂತೋ ಅಂತ ಅನುಮಾನ ಆತ್ತ್. ಇನ್ ಕುಡೂದಾ.... ಅಯ್ಯಬ್ಬೇ.... ಕೆಪ್ಪಿಗೊಡ್ ನೀರ್ ಕುಡೂದಕ್ಕಿಂತ ಬಲ." ಎಂದು ತನ್ನ ಸಮಸ್ಯೆ ಎಲ್ಲಾ ಹೇಳಿ ಹಗುರಾಗಿ ತಾನೊಬ್ಬ ದೊಡ್ಡ ಜನ ಅಂತ ತೋರಿಸಿಕೊಳ್ಳಲು ಸಾಧ್ಯವಾಗಿದ್ದಕ್ಕೆ ಸಂತೋಷಿಸಿದ್ದ.

ಕೆರೆಯ ಹೂಳನ್ನೆಲ್ಲಾ ತೆಗೆದಾಗಿತ್ತು. ಇನ್ನು ಕಟ್ಟೆಯ ಕೆಲಸ ಬಾಕಿ ಇತ್ತು. ಕಟ್ಟೆಗೆ ಜಲ್ಲಿ ಹಾಕಬೇಕು ಎಂದು ಕರಾರು ಇದ್ದ ಗುತ್ತಿಗೆ ಅದಾಗಿತ್ತು. ಜಲ್ಲಿ ತಂದು ಹಾಕಲು ಲಾರಿಗಳ ವ್ಯವಸ್ಥೆಯಾಯಿತು. ಹೆಚ್ಚಿನ ಲಾರಿಗಳು ಊರ ಕಡೆಯ ಜನರದ್ದೇ ಆಗಿತ್ತು. ಇದರ ಮೇಲೋವರ್ಸಿಯ ಕೆಲಸವೂ ಶುಕ್ರನ ತಲೆಗೇ ಬಿತ್ತು. ಶುಕ್ರ ನೆಲದಿಂದ ಒಂದು ನಾಲ್ಕಡಿ ಮೇಲೆ ಹೋದ. ಅಂದರೆ ಏರಿಕೊಂಡ. ಆದರೆ ಹಿಂದಿನ ಸಲ ಏರಿದಷ್ಟಲ್ಲ. ಹಾಗಾಗಿ ಯಾರ ಮೇಲೂ ಏರಲಿಲ್ಲ. ಆದರೆ ಉಬ್ಬಿದ್ದು ಕೊಬ್ಬಿದ್ದು ಎಲ್ಲಾ ಆಗಿತ್ತು. ಹೆಂಡತಿಯ ಬಳಿ ಹೋಗಿ ಹೇಳಿದ್ದ " ನಾ ಇನ್ ಮನೀಗೆಲ್ಲಾ ಬಪ್ಪದ್ ತಡ ಆತ್ತೇನ... ಲಾರಿ ಕೆಲಸ ಎಲ್ಲಾ ಕಾಣ್ಕ್.. ಯಾವ ಲಾರಿ ಬಂದೀತ್... ಯಾವ್ದ್ ಬರ್ಲ ಎಷ್ಟ್ ಜಲ್ಲಿ ತಂದೀತ್... ಎಂತ ಜಲ್ಲಿ ತಂದೀತ್... ಡ್ರೈವರ್ ಹೊಟ್ಟಿಗೆ ತಿಂದೀನಾ ಇಲ್ಯ..ತಿಂದ್ರೆ ಎಂತಾ ತಿಂದೀದಾ ಎಲ್ಲ ಕಾಣ್ಕ್...."

ಇಷ್ಟರ ಮಧ್ಯೆ ಒಂದು ದಿನ ರಾಮಚಂದ್ರ ಬಂದ. ಮೇಸ್ತ್ರಿಗಳನ್ನೆಲ್ಲಾ ಕರೆದು ಶುಕ್ರನ ಕಾರ್ಯ ವೈಖರಿಯ ಬಗೆಗೆ ವಿಚಾರಿಸಿದ. ಎಲ್ಲರಿಗೂ ಅವರವರಿಗೆ ಬೇಕಾದ ವ್ಯವಸ್ಥೆ ಅಷ್ಟಷ್ಟು ಆಗುತ್ತಿತ್ತು. ಹಾಗಾಗಿ ಶುಕ್ರನ ಬಗ್ಗೆ ಒಳ್ಳೆಯ ಮಾತುಗಳೇ ಬಂದವು, ರಾಮಚಂದ್ರ ಬಂದಿದ್ದರಿಂದ ಶುಕ್ರ ಎಂದಿಗಿಂತ ಹೆಚ್ಚು ಉತ್ಸಾಹದಲ್ಲಿದ್ದ. ಒಬ್ಬ ಲಾರಿಯವನಂತೂ ಅಂದೇ ಗ್ರಹಚಾರಕ್ಕೆ ತಡವಾಗಿ ಬಂದ. "ಎಂತ ಗಡ... ಬುದ್ಧಿ ಇತ್ತಾ ನಿಂಗೆ....ಯಜಮಾನ್ರ್ ಬಾಡಿಗೆ ಕೊಡೂದ್ ಎಂತ ಮನಸ್ಸಿಗೆ ಬಂದ ಹೊತ್ತಿಗೆ ಗಾಡಿ ತಪ್ಕಾ ಅಥವಾ ಜಲ್ಲಿ ಹಾಯ್ಕ ಬರ್ಕಾ....ಅದೂ ಎಂತ ಇದ್..... ಅರ್ಧ ಲಾರಿ ಜಲ್ಲಿ ಹಾಯ್ಕ ಬಂದೀದೆ,, ಎಂತ ಕೋಳಿಪಡೆ ಮಾರಾಯ ನಿನ್ನ ಕಟ್ಕಂಡ್ ವಾಲಿ ಕಳೂಕೆ. ಅರ್ಧ ಬಾಡ್ಗಿ ತೆಕ ಹೋಗ್..." ಎಂದು ಅಬ್ಬರಿಸಿದ್ದ. ರಾಮಚಂದ್ರ ನೋಡಿದರೂ ನೋಡದಂತಿದ್ದ. ಇದೆಲ್ಲಾ ಸಹಜ ಅನ್ನಿಸುತ್ತಿತ್ತು. ಮತ್ತೆ ಡ್ರೈವರುಗಳಿಗೆ ಒಂದು ಸ್ವಲ್ಪ ಹೆದರಿಕೆ ಇರಲಿ ಎಂದೂ ಇದ್ದಿರಬಹುದು. ಶುಕ್ರನೆಡೆಗೆ ಒಂದು ಮೆಚ್ಚುಗೆಯ ನಗೆ ಬೀರಿದ.

ಶುಕ್ರನಿಗೆ ಈಗ ಪೂರ್ತಿ ಏರಿ ಹೋಯ್ತು. "ಒಡೇರ್ ಮೆಚ್ಕಂಡ ಮೇಲೆ ನಾವ್ ಬಿಡೂಕಾತ್ತ?!!" ಎಂದು ಮೆರೆಯತೊಡಗಿದ. ಎಲ್ಲರ ಮೇಲೂ ದರ್ಬಾರ್ ಸ್ವಲ್ಪ ಜೋರೇ ಆಯಿತು. ಅಲ್ಲಿದ್ದ ಅನೇಕರಿಗೆ ಇದರ ಪರಿಚಯ ಮೊದಲೇ ಇದ್ದಿದ್ದರಿಂದ ಮತ್ತೆ ಮೇಸ್ತ್ರಿಗಳೂ ಶುಕ್ರನನ್ನು ಎದುರು ಹಾಕಿಕೊಳ್ಳಲು ಬಯಸದೇ ಇದ್ದುದರಿಂದ ಕೂಲಿಗಳೇ ಹೊಂದಿಕೊಂಡರು ಬಿಡಿ. ಅಷ್ಟು ಹೊತ್ತಿಗೆ ಒಬ್ಬ ಡ್ರೈವರ್ ಲಾರಿ ಇಲ್ಲದೆ ಬಂದ. ಮೊದಲೇ ಏರಿಕೊಂಡಿದ್ದ ಶುಕ್ರ ಇವನ ಮೇಲೆ ಮುಗಿಬಿದ್ದ. ಮಾತಾಡಲೇ ಇಲ್ಲ. ಕಪಾಳಕ್ಕೆ ಒಂದು ಬಾರಿಸಿಯೇ ಕೇಳಿದ.

" ಎಂತ ಲಾರಿ ಎಲ್ ಬೆಚ್ಚಿ ಬಂದೆ? ಬಾಡಿಗೆ ಕೊಡೂದಿಲ್ಯಾ ನಿಂಗೆ?"

ಡ್ರೈವರ್ ಹೇಳಿದ "ಶುಕ್ರಣ್ಣ ಆಕ್ಸಿಲ್ ಕಟ್ ಆಗಿದೆ"

ಶುಕ್ರ ಮತ್ತೆರಡು ಬಾರಿಸಿದ. "ಆಕ್ಸಿಲ್ ಕಟ್ ಆರೆ ಲಾರಿ ತಪ್ಪೂಕೆಂತ? ಹೆಕ್ಕ ತಿಂಬನೆ" ಡ್ರೈವರ್ ಮುಖ ಕೆಂಪಾಗಿತ್ತು ಸಿಟ್ಟಿನಿಂದ

ವಿಕೋಪಕ್ಕೆ ಹೋಗುವ ಸೂಚನೆ ಶುಕ್ರನಿಗೆ ಸಿಗದಷ್ಟು ಏರಿ ಹೋಗಿದ್ದ. ರಾಮಚಂದ್ರ ಶುಕ್ರನಿಗೆ ಹೇಳಿದ. "ಶುಕ್ರ ಆಕ್ಸಿಲ್ ಅಂದ್ರೆ ಹಾರಿ ಮಾರಾಯ. ಹಾರಿ ತುಂಡಾರೆ ಲಾರಿ ತಪ್ಪೂಕಾತ್ಲ. ಮತ್ತೊಂದು ಲಾರಿ ತೆಕ ಹೋಗಿ ಎಳೆಸ್ಕ್."

ಆದರೆ ಶುಕ್ರ ತನ್ನ ಅರೆ ಬೆರೆ ಜ್ಞಾನ ಹೊರಬಂದು ಮೇಲೋವರ್ಸೀ ಸ್ಥಾನ ಅದರ ಗೌರವಗಳಿಗೆ ಧಕ್ಕೆಯಾದೀತೆಂದು ಮತ್ತೆರಡು ಬಾರಿಸಿ ಕೇಳಿದ. "ಹೆಕ್ಕ ತಿಂಬನೆ.. ಹಪ್ ಹಿಡ್ದನೆ... ಹಾರಿ ತುಂಡಾಯ್ತ್ ಅಂತ ಹೇಳೂಕೆಂತ ಆತ್ತ? ಕನ್ನಡ ಮಾತಾಡ್ರೆ ಎಂತ ನಾಲಿಗೆ ಸವೆದು ಹ್ವಾತ್ತ ನಿಂಗೆ. ಆಟ ಕಾಣ್ಕ್. ಅವಾಗ ಕನ್ನಡ ಸರಿ ಬತತ್. ಅದ್ ಬಿಟ್ ನಿನ್ನ ಡೌಲಿಗೆ ಕಲ್ ಹಾಕೂಕೆ. ಸಿನಿಮಾ ಕಂಡ್ಕಂಡ್ ಇಂಗ್ಲೀಷ್ ಮಾತಾಡ್ತ. ಬಜ್ಜಕೆ. ಆಟ ಕಾಣ್. ಕನ್ನಡ ಸರೀ ಬತತ್. ನಾ ಬಾಂಬಿಯಂಗೆ ಇದ್ರೂ ಕನ್ನಡ ಮರಿಲ್ಲ. ಇವಂಗೊಂದ್ ಡೌಲ್. ಸುಟ್ ಇಂಗ್ಲಿಷ್. ಬಜ್ಜಕೆ. ಮೇಲೋವರ್ಸೀ ಎದ್ರಿಗೆ ಕನ್ನಡ ಬಿಟ್ ಬೇರೆ ಮಾತಾಡ್ರೆ... ಪಿಚ್ಚರ್ ಬಿಡಸ್ತೆ ಕಾಣ್" ಎಂದ.

ರಾಮಚಂದ್ರ ಮನದಲ್ಲೇ ನಕ್ಕ. ಜೋರಾಗಿ ನಕ್ಕು ಮೇಲೋವರ್ಸೀ ಕೆಲಸ ಬಿಟ್ಟರೆ ಕಷ್ಟ. ಮೊದಲೇ ಇವ ಅತಿಥಿ ಕಲಾವಿದರ ಜಾತಿಯವ ಎಂದು ತನ್ನ ಸೋದರ ಮಾವನಿಂದ ಕೇಳಿ ತಿಳಿದಿದ್ದ ಆತ. ಕೆರೆ ಕೆಲಸ ಮುಗಿಯುವ ಹೊತ್ತಿನಲ್ಲಿ ಹೀಗಾದರೆ ಕಷ್ಟ. ಅದಕ್ಕೇ ಆತ ಡ್ರೈವರ್ಕಡೆ ತಿರುಗಿ ಸನ್ನೆ ಮಾಡಿ ಶುಕ್ರ ಟೈಟ್ ಎಂದು ಹೇಳಿದ.

ಇಂಥಾ ಅಪಸವ್ಯಗಳ ನಡುವೆಯೇ ಕೆರೆ ರಿಪೇರಿ ಗುತ್ತಿಗೆ ಮುಗಿದಿತ್ತು
#ಕೆರೆ_ರಿಪೇರಿ
# ಶುಕ್ರ

No comments:

Post a Comment