Thursday, June 3, 2021

ವಾಲಿಪ್ರಕರಣ ಅಧ್ಯಾಯ-9 ವಾಲಿಯಾತ್ರೆ

(ಈತನಕ:ವಾಲಿಯನ್ನು ಒಪ್ಪಿಸಿ ಸುಗ್ರೀವ ರುಮೆಯರಿಗೆ ಕ್ಷಮಾದಾನ ಕೊಡಿಸಬೇಕು ಎಂದುಕೊಂಡಿರುವ ತಾರೆ, ಸುಗ್ರೀವ ಬಂದು ಕಾಲು ಹಿಡಿದರೆ ಕ್ಷಮಿಸಬೇಕು ಇಲ್ಲವಾದರೆ ಶಿಕ್ಷಿಸುತ್ತಲೇ ಇರಬೇಕು ಎನ್ನುವ ಮನಃಸ್ಥಿಯ ವಾಲಿ. ಇತ್ತ ನಡೆದ ಘಟನೆಗಳಿಂದ,, ವಾಲಿಯ ಹಿಂಸೆಯಿಂದ ಜರ್ಝರಿತಳಾಗಿ ದುಃಖಿಸುತ್ತಿರುವ ರುಮೆ. ರಾಮನ ನಿರ್ದೇಶನದಂತೆ ಸಪ್ತ ಜನಾಶ್ರಮದ ಮಾರ್ಗವಾಗಿ ತನ್ನ ಜನ್ಮದಿಂದ ಇಲ್ಲಿಯ ತನಕದ ಜೀವನವನ್ನು ಮೆಲುಕು ಹಾಕುತ್ತಾ ಕಿಷ್ಕಿಂಧೆಯನ್ನು ಪ್ರವೇಶಿಸಿರುವ ಸುಗ್ರೀವ, ವಾಲಿಯ ಶಯನ ಕಕ್ಷೆಯತ್ತ ಸಾಗಿದ್ದಾನೆ ಸುಗ್ರೀವನ ಪಂಥಾಹ್ವಾನವನ್ನು ಸ್ವೀಕರಿಸಿ ಯುದ್ಧಕ್ಕೆ ಹೊರಟ ವಾಲಿಯನ್ನು ತಾರೆ ತಡೆಯುತ್ತಾಳೆ. ರಾಮ ಸುಗ್ರೀವನಿಗೆ ಅಭಯದಾನ ಮಾಡಿದ ವಿಷಯ ತಿಳಿಸುತ್ತಾಳೆ. ರಾಮನ ಹಿರಿಮೆಯನ್ನು ತಿಳಿಸುತ್ತಾಳೆ. ಆಗ ವಾಲಿ ಒಂದೋ ಮೋಕ್ಷ ಇಲ್ಲವೇ ಸುಗ್ರೀವನ ಸಾವು ಎಂದು ತಾರೆಗೆ ಸಾರಿ ಮುಂದುವರೆಯುತ್ತಾನೆ. ಸುಗ್ರೀವನೊಂದಿಗೆ ನಡೆದ ಕೂಟಯುದ್ಧದಲ್ಲಿ ವಾಲಿಯ ಕೈ ಮೇಲಾಗುತ್ತಿದ್ದ ಹೊತ್ತಿನಲ್ಲಿ ಆತನ ಎದೆಯ ಎಡಭಾಗಕ್ಕೆ ಬಾಣವೊಂದು ಪ್ರವೇಶಿಸುತ್ತದೆ. ಆಘಾತಕ್ಕೆ ಕುಸಿದು ಬಿದ್ದ ವಾಲಿಯ ಕಣ್ಣಿಗೆ ಆಕೃತಿಯೊಂದು ಕಾಣಿಸುತ್ತದೆ.ರಾಮನನ್ನು ಕಂಡ ವಾಲಿ ಆತನನ್ನು ಪರಿಪರಿಯಾಗಿ ಜರೆಯುತ್ತಾನೆ. ವಾಲಿಯ ಆಕ್ಷೇಪಗಳಿಗೆಲ್ಲ ರಾಮ ಉತ್ತರಿಸಿ, ವಾಲಿಗೆ ಬದುಕುವಾಸೆ ಇದ್ದರೆ ಹೊಡೆದ ಬಾಣವನ್ನು ಮತ್ತೆ ಹಿಂದೆ ಕರೆಯುವುದಾಗಿ ಹೇಳುತ್ತಾನೆ)

 

ಮೆಲು ದನಿಯಲ್ಲಿ ವಿನಮ್ರನಾಗಿ, "ರಾಮ!!" ಎನ್ನುತ್ತಾ ಮಾತಿಗಾರಂಭಿಸಿದ ವಾಲಿ. "ನಿನ್ನನ್ನು ಪರಿ ಪರಿಯಾಗಿ ನಿಂದಿಸಿ ಕಣ್ಣನ್ನು ಮುಚ್ಚಿ ಕುಳಿತವ ನಾನು. ಬಾಣದ ಏಟಿನ ಆಘಾತದಿಂದಾದ ಆಯಾಸದಿಂದಲೋ ಅಥವಾ ನಿನ್ನ ಮುಖ ನೋಡಬಾರದೆಂಬ ಹಠಕ್ಕೋ ಬಿದ್ದು ಕಣ್ಣು ಮುಚ್ಚಿದ್ದಲ್ಲ. ನಿನ್ನಿಂದ ಹೊರಹೊಮ್ಮುತ್ತಿದ್ದ ವಿಶಿಷ್ಠವಾದ ಪ್ರಭಾವಳಿಯನ್ನು ನೋಡಲಾರದೇ, ಅದರ ಕಾಂತಿಗೆ ಬೆರಗಾಗಿ ಕಣ್ಣುಗಳನ್ನು ಮುಚ್ಚಿದ್ದು ನಾನು. ಆದರೆ, ನಾನು ಕಣ್ಣುಗಳನ್ನು ಮುಚ್ಚಿದಾಗಲೂ ಅದೇ ಅದಮ್ಯ ಪ್ರಭೆ ನನಗೆ ಗೋಚರಿಸುತ್ತಿತ್ತು. ತಡೆಯಲಾಗದೇ ಆಗೊಮ್ಮೆ ಈಗೊಮ್ಮೆ ಮಿಡುಕಿದವ ನಾನು. ಆದರೆ ನಿನ್ನ ಮೃದು ಮಧುರ ವಚನಗಳನ್ನು ಕೇಳುತ್ತ ಹೋದಂತೆ ಪ್ರಭೆಯ ಕಡೆ ಆಕರ್ಷಣೆ ಬೆಳೆಯತೊಡಗಿತ್ತು. ಮಾತುಗಳನ್ನು ನೀನು ಆಡುತ್ತಿದ್ದರೂ, ಅದರಲ್ಲಿ ನನ್ನದೇ ಧ್ವನಿಯನ್ನು ಕೇಳಿದಂತೆ ನನಗನ್ನಿಸುತ್ತಿತ್ತು ರಾಮ. ಅಂದರೆ ನೀನು ಆಡಿದ್ದು ವಾಲಿಯ ಅಂತರಂಗದಲ್ಲಿ ಹುದುಗಿ ಅಹಂಕಾರದಿಂದ ಆಚ್ಛಾದಿಸಲ್ಪಟ್ಟ ನನ್ನದೇ ಅಂತರಂಗದ ಮಾತುಗಳು ಎನ್ನುವುದನ್ನು ತಿಳಿದೆ. ಪ್ರಭೆಯನ್ನು ಕಣ್ಮುಚ್ಚಿದಾಗಲೂ ಕಾಣುತ್ತಿರುವುದಕ್ಕೆ ಕಾರಣ, ಅಂತರಂಗದ ಕಣ್ಣುಗಳು ಹಂತ ಹಂತವಾಗಿ ತೆರೆಯುತ್ತಿರುವುದೇ ಕಾರಣ ಎಂದು ಅರ್ಥವಿಸಿಕೊಂಡೆ. ಹೀಗೆ ಆಂತರ್ಯದ ಬಲ ಹೆಚ್ಚುತ್ತಲೇ ಹೋಯಿತು ನಿನ್ನ ಮಾತುಗಳನ್ನು ಕೇಳಿ. ಈಗ, ನೀನು ನಿನ್ನ ಮಾತುಗಳನ್ನೆಲ್ಲ ಮುಗಿಸಿದಾಗ ಅದೇನೋ ಒಂದು ರೀತಿಯ ದಿವ್ಯಾನುಭವವನ್ನು ಅನುಭವಿಸುತ್ತಿದ್ದೇನೆ. ಯಾವುದೋ ಒಂದು ನವ ಚೈತನ್ಯ ಮೂಡುತ್ತಿದೆ. ಅಂತರಂಗದ ಕಣ್ಣುಗಳು ತೆರೆದ ಮೇಲೆ ಬಾಹ್ಯ ಚಕ್ಷುಗಳಿಂದಲೂ ನಿನ್ನನ್ನು ಇನ್ನಷ್ಟು ನೋಡುವ ಬಯಕೆ ರಾಮ. ಮಾಡುವ ಕಾರ್ಯ ತ್ರಿಕರಣ ಪೂರ್ವಕವಾಗಿರಬೇಕಲ್ಲ. ಮನಸ್ಸಿನಲ್ಲಿ ನಿನ್ನ ಮಾತುಗಳನ್ನು ಪ್ರತಿಧ್ವನಿಸಿಕೊಂಡು ಮನಸ್ಸು ಶುದ್ಧವಾಗಿದೆ. ನಿನ್ನೊಡನೆ ಮಾತಾಡುತ್ತಾ ವಾಕ್ಷುದ್ಧಿಯನ್ನು ಪಡೆಯಬಹುದು, ಅದೇ ರೀತಿಯಲ್ಲಿ ಕಾಯದ ಕಣ್ಣುಗಳಿಂದ ನಿನ್ನನ್ನು ನೋಡುತ್ತಾ ಕಾಯಶುದ್ಧಿಯನ್ನೂ ಮಾಡಿಕೊಳ್ಳುವೆ." 

 

"ಮರ್ತ್ಯರಾಗಿ ನಮ್ಮ ಕರ್ತವ್ಯಗಳನ್ನು ಸದಾಚಾರದಿಂದ, ಸದ್ಭಾವನೆಯಿಂದ, ಸೋಹಮ್ ಭಾವವನ್ನು ತಳೆದು ಸರ್ವಶಕ್ತನಿಗೆ ಸಮರ್ಪಿಸಿ ಬದುಕುವುದೇ ಜೀವನ. ಹರಿಯುವ ನೀರಿಗಿರುವ ಹೆಸರು ಅದು. ಹೇಗೆ ಎಲ್ಲಿಯೋ ಹುಟ್ಟಿ ಎಲ್ಲಿಯೋ ಇರುವ ಸಾಗರವನ್ನು ಸೇರಿ ಮತ್ತೆ ಮೋಡವಾಗಿ ಮಳೆಯ ಹನಿಗಳಾಗಿ ಭೂಮಿಯನ್ನು ಸೇರುತ್ತದೆಯೋ ಅದೇ ರೀತಿ ಮರ್ತ್ಯರ ಬದುಕು. ಆದರೆ, ಜೀವನವನ್ನು ಸಾಗಿಸುವ ಪರಿ ಜೀವನ್ಮುಕ್ತತೆಯ ಕಡೆ ಇರಬೇಕೆಂದು ಆರ್ಷೇಯವಾದ ಶಾಸ್ತ್ರಗಳು-ಸ್ಮೃತಿಗಳು ಸೂತ್ರಗಳು ಹೇಳುತ್ತವೆ. ಶೃತಿಗಳೂ ಇದನ್ನೇ ಹೇಳುತ್ತವೆ. ಆದರೆ ವಾಲಿ ಅದನ್ನೆಲ್ಲವನ್ನೂ ಮರೆತು ಮೆರೆದ. ಇಂದ್ರನ ಮಗ ಎನ್ನುವ ಭಾವ ನನ್ನಲ್ಲಿ ನಾದು ದೊಡ್ಡವ ಎನ್ನುವ ಅಹಂಕಾರವನ್ನು ತಂದಿತು, ಅಹಂಕಾರದಿಂದ ದೊಡ್ದತನವನ್ನು ಮರೆಸಿತು, ಮೆರೆಯುವುದೇ ದೊಡ್ದ ತನ ಎನ್ನುವಂಥಾ ಭಾಸಕ್ಕೆ ನಾನು ಬಿದ್ದೆ."

 

"ಗೋ ಲಾಂಗೂಲ ಪ್ರಭು ಎನ್ನುವ ಅಭಿದಾನ ಕೊಟ್ಟ ಅಹಂಕಾರ ಗೋ ಎಂದೇ ಕರೆಯಲ್ಪಡುವ ಧರ್ಮದ ಕಡೆಗಿನ ಸೆಳೆತವನ್ನೇ ಮುಚ್ಚಿ ಹಾಕಿತಲ್ಲ ರಾಮ!! ಮಾಯೆ ಎಂದರೆ ಇದೇ ಅಲ್ಲವೇ? ಎಲ್ಲಾ ಮರ್ತ್ಯರಂತೆ ನಾನೂ ಮಾಯೆಯ ಸೆಳೆತಕ್ಕೆ ಸಿಕ್ಕಿದೆ. ಬಾಹ್ಯ ಬದುಕಿನಲ್ಲಿ ಯಾರೂ ಏರದ ಎತ್ತರಕ್ಕೇರಿದವ ವಾಲಿ ಆದರೆ ಮಾಯೆಯ ಸೆಳೆತದಿಂದ ಅಂತರಂಗದಲ್ಲಿ ಅಹಂಕಾರವೆಂಬ ಪಾಪದ ಕೂಪಕ್ಕೆ ಬಿದ್ದ. ಸಮುದ್ರ ಮಂಥನದ ಸಂದರ್ಭದಲ್ಲಿ ಶ್ರೀಮನ್ನಾರಯಣ ನನಗೆ ವರ ಕೊಡಲು ತಾನಾಗಿ ಬಂದ. ಅದೆಷ್ಟೋ ಜನ ಜನ್ಮ ಜನ್ಮಾಂತರಗಳ ತಪಸ್ಸಿನಿಂದ ಆತನನ್ನು ಸಾಕ್ಷಾತ್ಕರಿಸಿಕೊಂಡು, ವರ ಕೇಳಿದ್ದಂತೆ. ಆದರೆ ಬಲದ ಮದದಲ್ಲಿ ಮೈ ಮರೆತ ವಾಲಿಗೆ ಸತ್ಯ ಮರೆತು ಹೋಗಿತ್ತು. ಉದ್ಧಟತನದಿಂದ ಮಾರುತ್ತರಿಸಿದ್ದೆ. "ನಾನು ಯಾರಲ್ಲಿಯೂ ಏನನ್ನೂ ಕೇಳಿಕೊಳ್ಳುವವನಲ್ಲ; ನಿನಗೇನಾದರೂ ಬೇಕಾದಲ್ಲಿ ಕೇಳಿಕೊ" ಎಂದು. ಆತ ನನ್ನ ಪ್ರಾಣವನ್ನು ಕೇಳಿದ. ಕೊಡುವುದಕ್ಕೆ ಮುಂದಾದರೆ, ಮುಂದೊಮ್ಮೆ ಪಡೆಯುವುದಾಗಿ ಹೇಳಿ ಹೊರಟ. ಆಗ ನನ್ನ ಪ್ರಾಣವನ್ನು ರಕ್ಷಿಸಿಕೊಳ್ಳಲು ನನ್ನಪ್ಪ ಕನಕ ಕಾಂಚನ ಮಾಲೆಯನ್ನು ಕೊಟ್ಟ. ತೊಟ್ಟೆನಾದರೆ ಎದುರಿದ್ದವನ ಅರ್ಧ ಬಲ ನನಗೆಶ್ರೀಮನ್ನಾರಯಣನೇ ಕೊಟ್ಟ ಪ್ರಾಣ ಅದನ್ನು ಇಂದ್ರಿಯಗಳೊಡನೆ ರಕ್ಷಿಸಿಕೊಳ್ಳಲು, ಸುಮನಸರೊಡೆಯ, ಇಂದ್ರಿಯಾಧಿಪತಿ ಇಂದ್ರ ಕೊಟ್ಟ ಮಾಲೆ. ಇದರ ಅಂತರಾರ್ಥವನ್ನು ಸ್ವಲ್ಪವಾದರೂ ತಿಳಿಯಬೇಕಿತ್ತು ವಾಲಿ. ಆದರೆ ಅಹಂಕಾರ ಪಟ್ಟ. ಶ್ರೀಮನ್ನಾರಯಣ ತನಗೆ ಎರವಾಗಿ ದೇಹದಲ್ಲಿಟ್ಟಿದ್ದಾನೆ ಪ್ರಾಣವನ್ನು. ಧರ್ಮಪಾಲಕ, ಸೃಷ್ಟಿಪಾಲಕನಿಂದ ದತ್ತವಾದ ಪ್ರಾಣ, ಪ್ರಾಣವನ್ನು ರಕ್ಷಿಸುವುದು ಸುಮನಸರ ಒಡೆಯ, ಸುಧರ್ಮ ಸಭೆಯ ಅಧ್ಯಕ್ಷನ ಮಾಲೆ. ಅರ್ಥಾತ್, ಹರಿಯ ಪ್ರಾಣವನ್ನು ಸುಮನಸ್ಸಿನಿಂದ ಇಂದ್ರಿಯಗಳೊಡನೆ ಸಂಯೋಜಿಸಿ ಧರ್ಮಕಾರ್ಯವನ್ನು ಸಾಧಿಸಬೇಕಿತ್ತು. ಆದರೆ ಅದನ್ನು ಮಾಡಲಿಲ್ಲ."

 

"ರುಮೆಯನ್ನು ಗೋಲಭನಿಂದ ರಕ್ಷಿಸಿದಾಗ, ಇದೊಂದು ಧರ್ಮಕಾರ್ಯ, ನನ್ನ ಕರ್ತವ್ಯ ಎಂದಷ್ಟೇ ಭಾವಿಸಬೇಕಿತ್ತು. ಆದರೆ, ಗಂಧರ್ವನೊಬ್ಬನನ್ನು ಹತ್ತಿಕ್ಕಿದೆ ಎನ್ನುವ ಅಹಂಭಾವಕ್ಕೆ ಬಿದ್ದೆ. ರಾವಣ, ನನ್ನ ತಂದೆಯ ವೈರಿ. ಆತ ನನ್ನಲ್ಲಿ ಪರಿ ಪರಿಯಾಗಿ ಬೇಡಿದಾಗ ಆತನ ಮೇಲಿನ ಕರುಣೆಯಿಂದ ಆತನನ್ನು ಬಿಟ್ಟಿದ್ದಲ್ಲ. ಚತುರ್ದಶ ಭುವನ ತಲ್ಲಣನನ್ನೂ ನಾನು ಗಾರುಗೆಡಿಸಿದೆ ಎನ್ನುವ ಅಹಂಭಾವ. ಅವನನ್ನು ಬಿಟ್ಟು ಕಳುಹಿಸಿದರೆ ಮತ್ತೆ ನಾಲ್ಕು ಜನ ನನ್ನನ್ನು ಹೊಗಳುತ್ತಾರೆ ಎನ್ನುವ ಅರ್ಥಹೀನ ಆಸೆ. ಅಲ್ಲವಾದಲ್ಲಿ ಆತ ಸ್ನೇಹ ಹಸ್ತವನ್ನು ಚಾಚಿದಾಗ ನಾನೇಕೆ ಒಪ್ಪಬೇಕಿತ್ತು? ಇಂಥ ವಿಪರೀತ ಬುದ್ಧಿ ತನ್ನ ಪರಾಕಾಷ್ಠೆ ತಲುಪಿದ್ದನ್ನು ನೋಡಿದ ನನ್ನ ಜನ ಅರಿತರು ವಾಲಿಯ ವಿನಾಶ ಕಾಲ ಸಮೀಪಿಸಿದೆ ಎಂದು. ಅದಕ್ಕಾಗಿಯೇ ಸುಗ್ರೀವನ ಮಾತನ್ನು ನಂಬಿ ನಾನು ಸತ್ತೆನೆಂದು ತಿಳಿದಿದ್ದು."

 

"ಲೋಕಕ್ಕೆ ಲೋಕವೇ ನನ್ನ ಬಲವನ್ನು ಕಂಡು ಅಂಜಿತ್ತು-ಅಳುಕಿತ್ತು. ಕಿಷ್ಕಿಂಧೆಯಲ್ಲಿ ಅನೇಕ ಕಪಿಗಳು ನನ್ನನ್ನು ಹೊಗಳುತ್ತಿದ್ದರು. ಎಲ್ಲ ಹೊಗಳಿಕೆ ನನ್ನಲ್ಲಿ ಮದವನ್ನು ಇನ್ನಷ್ಟು ತುಂಬಿದವು ರಾಮ! ಎಷ್ಟರ ಮಟ್ಟಿಗಿನ ಮದ ಎಂದರೆ ಸುಗ್ರೀವ ನಿಷ್ಪ್ರಯೋಜಕ, ಆತ ಕೇವಲ ನನ್ನ ಆಜ್ಞಾಧಾರಕ ಎಂದೆನಿಸುವಷ್ಟು. ಮಾಯಾವಿಯ ಗುಹೆಯ ಬಾಗಿಲಿನಲ್ಲಿ ನಿಂತ ಸುಗ್ರೀವ ಕಾಣದಾದಾಗ, ನನಗೆ ಆತಂಕಕ್ಕಿಂತ ಹೆಚ್ಚು ಅವಮಾನವಾದಂತಾಯಿತು. ನನ್ನದೇ ಸಿಂಹಾಸನದ ಮೇಲೆ ನನ್ನ ಹೆಂಡತಿಯ ಜೊತೆ ಕುಳಿತಿದ್ದನ್ನು ನನ್ನ ಅಹಂಕಾರ ಸಹಿಸಲಿಲ್ಲ, ಹೊಡೆದಟ್ಟಿದೆ ಸುಗ್ರೀವನನ್ನು. ಸೆರೆಯಲ್ಲಿಟ್ಟೆ ರುಮೆಯನ್ನು. ಬೆನ್ನಟ್ಟಿ ಬೆನ್ನಟ್ಟಿ ಹೋಗಿ ಹೊಡೆದೆ ಸುಗ್ರೀವನನ್ನು. ಆದರೆ ಸುಗ್ರೀವ ಎಲ್ಲಿಯೂ ನನ್ನಲ್ಲಿ ಕ್ಷಮೆ ಕೇಳಲಿಲ್ಲ. ಆತನಲ್ಲಿದ್ದ ನಿಜದ ನೇರಕ್ಕೆ ನಡೆವ ಧೃಢತೆ ಇದು ಎನ್ನುವುದಾಗಿ ನಾನು ತಿಳಿಯಲಿಲ್ಲ. ಲೋಕಕ್ಕೆ ಲೋಕವೇ ವಾಲಿಯನ್ನು ಕಂಡು ನಡುಗುವಾಗ, ದಶಾನನನೇ ನನ್ನ ಕಾಲು ಹಿಡಿದಿರುವಾಗ ಸುಗ್ರೀವ ಒಬ್ಬ ಹಿಡಿಯದಿದ್ದರೆ ಅದು ನನಗಾಗುವ ಅವಮಾನ ಎಂದೇ ಭಾವಿಸಿದೆ. ಪರಿಪರಿಯಾಗಿ ರುಮೆ-ಸುಗ್ರೀವರನ್ನು ಹಿಂಸಿಸಿದೆ."

 

"ಯಾವುದರ ಧಾರಣೆಯಿಂದ ಧೀ ಶಕ್ತಿ ಪ್ರಚೋದಿಸಲ್ಪಟ್ಟು ಧೃತಿ ಸತ್ಕಾರ್ಯದೆಡೆಗೆ ಸಾಗುತ್ತದೆಯೋ, ನಿಟ್ಟಿನಲ್ಲಿ ಎದುರಾಗುವ ಅಡಚಣೆಗಳನ್ನು ಎದುರಿಸುವ ಧೈರ್ಯ ಲಭಿಸುತ್ತದೆಯೋ ಅದೇ ಧರ್ಮ. ಧರ್ಮ ಎನ್ನುವುದು ಸರ್ವತ್ರ ವ್ಯಾಪ್ತ. ಮುಂದೆ-ಹಿಂದೆ ಎನ್ನುವ ಬೇಧ ಅದಕ್ಕಿಲ್ಲ. ಅದರ ಮೂರ್ತ ರೂಪವೇ ನೀನು ರಾಮಚಂದ್ರ. ದೇಹವೇ ತಾನೆಂದು ಭ್ರಮಿಸಿ ಎದುರಿನಲ್ಲಿ ತನ್ನನ್ನು ತಾನು ಅತಿಯಾಗಿ ಬಿಂಬಿಸುತ್ತಾ ಸುತ್ತಮುತ್ತಲನ್ನು ಮರೆಯುವುದೇ ಅಹಂಕಾರ. ಅದರ ಪ್ರತೀಕವೇ ನಾನು. " ಯಾರಿಗಿದೆ ವಾಲಿಯ ಎದುರಿಗೆ ಬರಲು ಧೈರ್ಯ?" ಎಂದುಕೊಂಡು ಮೆರೆದೆ. ಅಹಂಕಾರದ ಮರೆಯಲ್ಲಿ ನಿಂತ ಧರ್ಮವನ್ನು ಮರೆತೆ. ಹಾಗೆ ಮರೆಯಿಂದಲೇ ಧರ್ಮ ನನ್ನನ್ನು ಘಾತಿಸಿತು, ನಿನ್ನ ಶರದ ರೂಪದಲ್ಲಿ."

 

"ನೀನು ಹೇಳಿದೆಯಲ್ಲ, ನಿನ್ನ ಶರ ಸಜೀವ ಶರ, ಸಂಕಲ್ಪ ಶರ ಎಂದು. ನಿಜ. ನಿನ್ನ ಶರ ಮನದ ಸಂಕಲ್ಪದಿಂದ ಹೊಡೆಯಲ್ಪಟ್ಟು ಮತ್ತೊಬ್ಬನ ಸಂಕಲ್ಪವನ್ನು ತೊಡೆಯುತ್ತದೆ. ವಾಲಿಯ ಸಂಕಲ್ಪವಲ್ಲವೇ ದೇಹ?! ನಿನ್ನ ಶರ ದೇಹವನ್ನು ಮಾತ್ರವಲ್ಲ ಮನಸ್ಸನ್ನೂ, ಅದರ ಕಾರಕವಾದ ಅಹಂಕಾರವನ್ನೂ ಬೇಧಿಸುತ್ತದೆ. ನೀನು ಕೇವಲ ದೇಹಕ್ಕೆ ಹೊಡೆಯುವುದಿಲ್ಲ ದೇಹಭಾವಕ್ಕೂ ಹೊಡೆದೆ. ಮನಸ್ಸಿನಿಂದ ಹೊಡೆದದ್ದು ಮಾತ್ರವಲ್ಲ, ವಾಲಿಯ ಮನಸ್ಸಿಗೂ ಹೊಡೆದೆ. ಮನಸ್ಸೇ ಇಲ್ಲವಾದ ಮೇಲೆ ಚಿತ್ತದ ಘನ ಆನಂದ ಸ್ವರೂಪದ ನಿರ್ವಿಕಲ್ಪ ಪ್ರಭೆಯ ದರ್ಶನವನ್ನೂ ಮಾಡಿಸಿದೆ, ಆಂತರ್ಯದಲ್ಲೂ ಬಹಿರಂಗದಲ್ಲೂ. ನಿನಗೆಲ್ಲಿಯ ಅಂತರಂಗ ಬಹಿರಂಗ ಬೇಧ. ಅಂತಸ್ಥವಾದ ಭಾವವೇ ನೀನು, ಈಗ ಎದುರಾಗಿ ನಿಂತಿದ್ದೀಯೆ."

 

"ಎಷ್ಟು ದೊಡ್ದತನ ನಿನಗೆ ರಾಮ!! ಅದೆಷ್ಟು ಕರುಣೆ ನಿನಗೆ!! ಆಗ ನಿಂದಿಸಿದಾಗ ಯಾವ ರೀತಿಯ ಭಾವ ನಿನ್ನ ಮುಖದಲ್ಲಿತ್ತೋ ಈಗ ಸ್ತುತಿಸುತ್ತಿರುವಾಗಲೂ ಅದೇ ಭಾವ ನಿನ್ನ ಮುಖದಲ್ಲಿದೆ. ಗಾಂಭೀರ್ಯವೆಂದರೆ ಇದೇ ಅಲ್ಲವೇ?! ದೊಡ್ದವನೆಂದು ಮೆರೆದು ದೊಡ್ಡತನವನ್ನು ಮರೆತ ವಾಲಿಗೆ ಮತ್ತೆ ಬದುಕುವಾಸೆ ಇದ್ದರೆ ಬಾಣವನ್ನು ಹಿಂದೆ ಕರೆಯುತ್ತೇನೆ ಎನ್ನುತ್ತಿದ್ದೀಯೆ. ಆದರೆ ರಾಮ, ನಿನ್ನ ಬಾಣ ತಾಗಿ ಅಂತಸ್ಥವಾದ ಭಾವದ ಪ್ರಭೆಯ ದರ್ಶನವನ್ನು ಅಂತರಂಗ ಬಹಿರಂಗ ಎರಡರಲ್ಲೂ ಅನುಭವಿಸಿ ಆಗಿದೆ. ಜೀವನದ ಪರಮ ಗುರಿಯನ್ನು ಕಂಡಾಗಿದೆ ಮತ್ತೇಕೆ ಘೋರ ಪಾಪದ ಸಂಸಾರ?"

 

"ನಿನ್ನಿಂದ ಅನುಗ್ರಹ ರೂಪವಾಗಿ ಮುಂದಿನ ಬದುಕನ್ನು ಪಡೆದೆನಾದರೆ ಬದುಕು ನನ್ನ ಇಷ್ಟು ದಿನದ ಬದುಕಿಗಿಂತ ಘೋರಭೀಕರವಾಗುತ್ತದೆ ರಾಮಚಂದ್ರ. ನಿನ್ನಿಂದ ಪಡೆದ ಬದುಕನ್ನು ನಿನ್ನ ದಾಸ್ಯದಲ್ಲಿಯೇ ಕಳೆಯುತ್ತೇನೆ ಖಂಡಿತ. ಆದರೆ ಲೋಕದ ಭಾವ ಏನಿದ್ದೀತು? ನೀನು ಅನುಗ್ರಹಿಸಿದ ಬದುಕು ಲೋಕದ ಪಾಲಿಗೆ ಭಿಕ್ಷೆಯಾಗಿ ಕಾಣಿಸೀತು. ವಾಲಿಯ ಭೂತಕಾಲ ಆತನನ್ನು ಬಿಡದಲ್ಲ. ಪ್ರಾರಬ್ಧ ಎಂದರೆ ಅದೇ ಅಲ್ಲವೇ? ವಾಲಿ ನಿಂದೆಗೊಳಗಾಗುತ್ತಾನೆ. ಮೆರೆದವ ತೆರುವ ಪರಿ ನೋಡು ಎನ್ನುತ್ತಾ ಲೋಕದ ಜನ ಆಡಿಕೊಳ್ಳುತ್ತಾರೆ ರಾಮಚಂದ್ರ.

ಈಗ ದಾಸ್ಯಕ್ಕೆ ಒಳಪಟ್ಟಿದ್ದಾನೆ, ಮೂರು ಲೋಕದಲ್ಲೂ ಮೆರೆದವ ಎಂದು ವಾಲಿಯ ಬದುಕು ಪರಿಹಾಸ್ಯಕ್ಕೀಡಾಗುತ್ತದೆ ರಾಮಚಂದ್ರ. ರಾಮನ ಅನುಗ್ರಹವಾದ ಬದುಕು ಲೋಕದ ನಿಂದೆಗೊಳಗಾಗುವುದು ಸಲ್ಲ. ಸತ್ಯ ಧರ್ಮದಿಂದ ಬದುಕುವುದು ಮೂಢ ಅಹಂಕಾರಿಗಳ ಕಣ್ಣಿಗೆ ದೌರ್ಬಲ್ಯವಾಗಿ ಭಾಸವಾಗುತ್ತದೆ. ನಾನದನ್ನು ಮೀರಿದರೂ ಪ್ರಯೋಜನವಿಲ್ಲ. ರಾಮನ ಅನುಗ್ರಹ ಯಾವ ರೀತಿಯಲ್ಲೂ ಪರಿಹಾಸ್ಯಕ್ಕೋ ನಿಂದನೆಗೋ ಒಳಗಾಗಬಾರದು. ಅದಕ್ಕಾಗಿ ನಾನು ಮತ್ತೆ ಬದುಕುವುದಿಲ್ಲ. ತಿಳಿದಿದ್ದೇನೆ ರಾಮ. ಘೋರ ಪಾಪಗಳನ್ನು ಮಾಡಿದ ಕಾಯದಿಂದ ಮೋಕ್ಷ ಲಭಿಸುವುದಿಲ್ಲ. ಆದರೆ, ಮುಂದಾದರೂ ಮೋಕ್ಷ ಸಾಧಿಸುವ ಬದುಕು ಮತ್ತು ಬುದ್ಧಿಯನ್ನು ಅನುಗ್ರಹಿಸು ರಾಮ."

 

"ಮರ್ತ್ಯ ಲೋಕದ ಯಾತ್ರೆಯನ್ನು ಮುಗಿಸುವ ಮುನ್ನ ಇಲ್ಲಿನ ನನ್ನ ಕೆಲವು ಬಾಧ್ಯತೆಗಳನ್ನೂ ಮುಗಿಸಬೇಕಲ್ಲ. ಅಷ್ಟು ಅವಕಾಶ ಕೊಡು. ತಾರೆ, ಇತ್ತ ಬಾ!! ಸುಗ್ರೀವ ನೀನೂ ಬಾ!! ಮಗನೇ ಅಂಗದ ಬಾರಪ್ಪಾ!!" ಎಂದು ತನ್ನವರನ್ನು ಹತ್ತಿರ ಕರೆದ. ತಾರೆಯ ತೊಡೆಯ ಮೇಲೆ ತಲೆಯಿಟ್ಟು ಮಲಗಿದ ವಾಲಿ.

 

"ತಾರೆ, ಹಿಂದೊಮ್ಮೆ ನಾನು ಬದುಕಿಯೂ ಸತ್ತಾಗ ನೀನೊಂದು ದಾರಿಯನ್ನು ಕಂಡುಕೊಂಡಿದ್ದೆ. ಈಗ ನಿಜವಾಗಿ ಸತ್ತಮೇಲೂ ದಾರಿ ನಿನಗೆ ಮುಕ್ತವಾಗಿದೆ. ನೀನು ಆತಂಕಪಡಬೇಡ. ಸುಗ್ರೀವ, ನಾನು ರುಮೆಯನ್ನು ಹಿಂಸಿಸಿದ್ದಕ್ಕಾಗಿ ತಾರೆಯ ಮೇಲೆ ಸಿಟ್ಟನ್ನು ತೀರಿಸಿಕೊಳ್ಳಬೇಡ. ಅಂಗದ, ನಿನಗಿನ್ನು ಸುಗ್ರೀವನೇ ತಂದೆ. ಆತ ಏನಾದರೂ ಬೈದಲ್ಲಿ, ಶಿಕ್ಷಿಸಿದಲ್ಲಿ ಅದು ನಿನ್ನ ಒಳ್ಲೆಯದಕ್ಕೆಂದು ತಿಳಿ. ಸುಗ್ರೀವನಿಗೆ ಎಂದೂ ಎದುರಾಡಬೇಡ. ನಿಷ್ಠೆಯಿಂದಿರು. ಶ್ರೀರಾಮನ ಸೇವೆ ಎಂದು ಭಾವಿಸಿ ಸುಗ್ರೀವನನ್ನು ಸೇವಿಸು. ಸುಗ್ರೀವನ ಮನಸ್ಸನ್ನೆಂದೂ ನೋಯಿಸಬೇಡ. ಸುಗ್ರೀವ, ನನ್ನ ಕಾಯವನ್ನು ರಕ್ಷಿಸಿದ ಕನಕ ಕಾಂಚನ ಮಾಲೆಯನ್ನು ನೀನಿಟ್ಟುಕೋ. ಇದು ಕೊಡುವ ಬಲ ರಾಮನ ಕಾರ್ಯಕ್ಕೆ, ಧರ್ಮ ಕಾರ್ಯಕ್ಕೆ ಎನ್ನುವುದನ್ನು ಅರಿತುಕೋ."

 

"ಶ್ರೀರಾಮಚಂದ್ರ!! ಸುಗ್ರೀವ ಅಂಗದರಿಬ್ಬರೂ ವಾನರರು. ಕಪಿ ಬುದ್ಧಿಯನ್ನು ತೋರಿಯಾರು. ಅವರಿಗೆ ಸರಿಯಾದ ದಾರಿಯನ್ನು ತೋರಿಸು. ಎಷ್ಟೇ ಪ್ರಯತ್ನಿಸಿದರೂ ಮಗ ಅಂಗದನ ಮೋಹ ನನ್ನನ್ನು ಬಿಡುತ್ತಿಲ್ಲ. ನಿನ್ನ ತಮ್ಮಂದಿರಲ್ಲಿ ಅವನೂ ಒಬ್ಬ ಎಂದು ತಿಳಿದು ಅವನನ್ನು ರಕ್ಷಿಸುವ ವಚನ ಕೊಡು"

 

"ವಾಲಿ, ನನಗಿನ್ನು ನಾಲ್ಕು ತಮ್ಮಂದಿರು, ನಾಲ್ಕನೆಯವನೇ ಅಂಗದ" ಎಂದು ರಾಮ ಅಭಯವನ್ನು ಕೊಟ್ಟ.

 

ವಾಲಿಯ ಮುಖದ ಮೇಲೆ ದೇವ ಸದೃಷ ತೇಜಸ್ಸು ಕಂಗೊಳಿಸಿತ್ತಿತ್ತು. ಮಂದಹಾಸ ಮಿನುಗುತ್ತಿತ್ತು. ಅಂಗದನ ಮೇಲಿಟ್ಟ ಕೈ ನಿಧಾನವಾಗಿ ನೆಲವನ್ನು ತಾಗಿತ್ತು. ವೀರ ಸ್ವರ್ಗದತ್ತ ನಡೆಯುತ್ತಿದ್ದ ದೇಹವನ್ನು ತ್ಯಜಿಸಿದ ವಾಲಿ. ಅಂಥ ಮಹಾಪ್ರಾಣವನ್ನು ಹೊತ್ತಿದ್ದ ದೇಹಕ್ಕೆ ಅಂಗದ ಸುಗ್ರೀವರು ದುಃಖಿಸುತ್ತಲೇ ವಂದಿಸಿದರು. ತಾರೆಯ ಅಳು ಮೇರೆ ಮೀರಿತ್ತು. ಹನುಮ ತಾರ ಸುಷೇಣ ಜಾಂಬವ ಗಂಧಮಾದನರು ಸಮಾಧಾನಿಸಿ ವಾಲಿಯ ದೇಹಕ್ಕೊದಗ ಬೇಕಾದ ಸಂಸ್ಕಾರಕ್ಕೆ ಸಿದ್ಧತೆ ಮಾಡಿದರು.

 

(ಮುಗಿಯಿತು)

No comments:

Post a Comment