Thursday, June 9, 2022

ಸ...

ನಾವು ಶಾಲೆಗೆ ಹೋಗುವಾಗ ಒಬ್ಬರು ಮೇಷ್ಟ್ರು ಬರುತ್ತಿದ್ದರು. ಅವರು ಒಮ್ಮೆ ಅವರ ಮಾಜಿ ಸಹೋದ್ಯೋಗಿ ಒಬ್ಬರು ಪಾಠ ಮಾಡುತ್ತಿದ್ದ ಬಗೆಯನ್ನು ಹಂಚಿಕೊಂಡಿದ್ದು ಈಗ ಯಾಕೋ ನೆನಪಾಗ್ತಾ ಇದೆ.

ಆ ಸಹೋದ್ಯೋಗಿಗಳಿಗೆ ಪಾಪ ಶ ಷ ಸ ಮಧ್ಯದ ವ್ಯತ್ಯಾಸವೇ ಗೊತ್ತಿರಲಿಲ್ಲ. ಎಲ್ಲವಕ್ಕೂ ಸ ಎನ್ನುವ ಏಕಾಕ್ಷಾರೀ ಪ್ರಯೋಗ ಮಾಡುತ್ತಿದ್ದರು.

ಶಿವಾಜಿಗೆ ಸಿವಾಜಿ ಎಂದು ಹೇಳಿ ಅದನ್ನು ಮಕ್ಕಳು ಹಾಗೆಯೇ ಬರೆದಿದ್ದರು. ಒಬ್ಬ ತಪ್ಪು ಬರೆದಿದ್ದರೆ ಬಡಿಯಬಹುದಿತ್ತು. ಎಲ್ಲರೂ ಹಾಗೆ ಬರೆದರೆ?

ಇನ್ನೊಮ್ಮೆ ಶಮ್ಮೇಳನ ಅಂತ ಬರೆಸಿದ್ದರು. ಮಗದೊಮ್ಮೆ, ಕ್ಸತ್ರಿಯ ಅಂದಿದ್ದರು. 

ಹೆಡ್ ಮೇಷ್ಟರು ಈ ಮೇಷ್ಟರಿಗೆ ಒಂದು ಉಪಾಯ ಹೇಳಿಕೊಟ್ಟರು. "ನೀವು ಸ ಅಂತಲೇ ಹೇಳೋದು ಅಂತಾದರೆ ಒಂದು ಕೆಲಸ ಮಾಡಿ. ನೀವು ಹೇಳುವುದು ಯಾವ ಸ ಅಂತ ಹೇಳಿ ಸಂಕದ ಸ ವೋ ಸಣ್ಮುಖದ ಸ ವೋ ಸರಸ್ವತಿ ಸ ವೋ ಅಂತ ಹೇಳಿ. ಆಗ ಮಕ್ಕಳಿಗೂ ಸುಲಭ, ನಿಮ್ಮ (ನಮ್ಮ) ಮರ್ಯಾದೆಯೂ ಉಳಿಯುತ್ತದೆ"

ಅಷ್ಟರ ನಂತರ ನೋಟ್ಸ್ ಕೊಡುವಾಗ ಶ ಎನ್ನ ಬೇಕಾದಲ್ಲಿ ಮೇಷ್ಟರು ಸಂಕದ ಸ ಎನ್ನುತ್ತಿದ್ದರು. ಷ ಎನ್ನ ಬೇಕಾದಲ್ಲಿ ಸಣ್ಮುಖದ ಸ ಎನ್ನುತ್ತಿದ್ದರು. ಸ ಎನ್ನಬೇಕಾದಲ್ಲಿ ಸರಸ್ವತಿ ಸ ಎನ್ನುತ್ತಿದ್ದರು.

ಮಕ್ಕಳನ್ನು ಇಂಥ ಗೊಂದಲದಿಂದ ತಪ್ಪಿಸಲು, ಅವರಿಗೆ ಸರಿಯಾದ ಭಾಷೆ ಕಲಿಸಲು, ಜೊತೆಯಲ್ಲಿಯೇ ಭಾಷಾ ಸೌಂದರ್ಯ ತೋರಿಸಲು ಸಂಕರ ಶಂಕರ ಎನ್ನುವ ಪ್ರಯೋಗಗಳನ್ನು ಪುಸ್ತಕದಲ್ಲಿ ಬರೆದಿದ್ದಾರೆ ಅಷ್ಟೇ. ಇಲ್ಲಿ ಆಚಾರ್ಯ ಶಂಕರರಿಗೆ ಯಾವ ಅವಮಾನವೂ ಆಗಿಲ್ಲ.

ಮಜಾ ನೋಡಿ. ಇಲ್ಲಿ ಬ್ರಾಹ್ಮಣರು ಸಿಟ್ಟಾಗಬೇಕಿತ್ತು. ಆದರೆ ಇಂಥ ಚೀಪ್ ರೇಟ್ ಹುಳುಕುತನ ಮಾಡಿದ್ದು ಅದ್ಯಾವುದೋ Gnany ಎಂಬವ. ಇದನ್ನು ನೋಡಿ ತಕ ಥೈ ಎಂದು ಕುಣಿಯುತ್ತಿರುವವ ಎಲ್ಲರ ಕನ್ನಡದ ಬೊಂಬಡಿ ಹೊಡೆಯುವ ಕುಗ್ವೆ.

ವಾಕ್ಯವೊಂದನ್ನು ಸರಿಯಾಗಿ ಓದಲು ಅಥವಾ ಅರ್ಥೈಸಲು ಬಾರದ ಇವರೆಲ್ಲಾ ಪಠ್ಯ ಪುಸ್ತಕ ಪರಿಷ್ಕರಣೆ ಬಗ್ಗೆ ಮಾತಾಡ್ತಾರೆ. ಇದು ಸೋಜಿಗ ಅಲ್ಲ. ಹಾಸ್ಯಾಸ್ಪದ. ಇಂಥವರನ್ನು ಆದಷ್ಟು ಕಡೆಗಣಿಸಿ.
ಓದದೇ ಬರೆಯುವ ಇಂಥವರನ್ನು ಏನು ಮಾಡಬೇಕು ಅಂತ ಸರ್ವಜ್ಞ ತನ್ನ ವಚನದಲ್ಲಿ ಹೇಳಿದ್ದಾನೆ. ಇವರು ಅದನ್ನೂ ಓದಲಿಲ್ಲವೇ?

No comments:

Post a Comment