Thursday, June 20, 2019

ಮಾರಾಂಗು

ಮಾರಾಂಗು ಭಟ್ಟರು- ಇವರ ಬಗೆಗೆ ಹೀಗೆ ಹೇಳಿದರೆ ಮಾತ್ರ ಅವರ ಪರಿಚಯ ಇರುವವರಿಗೆ ಅರ್ಥವಾಗಲು ಸಾಧ್ಯ. ಅವರ ಸಿದ್ಧಿ ಪ್ರಸಿದ್ಧಿ ಎರಡೂ ಆ ಹೆಸರಿನಲ್ಲಿದೆ ಆ ಹೆಸರಿನಿಂದಲೇ ಇದೆ. ಇವರ ನಿಜವಾದ ಹೆಸರು ಮಾಡಳ್ಳಿ ರಾಮಚಂದ್ರ ಭಟ್ಟರು ಅಂತ. ಆದರೆ ಭಟ್ಟರನ್ನು ಶಾಲೆಗೆ ಸೇರಿಸುವಾಗ ಅವರ ಅಪ್ಪ ಒಂದು ತಪ್ಪು ಮಾಡಿ ಬಿಟ್ಟ. ಊರ ಹೆಸರಾದ ಮಾಡಳ್ಳಿಯನ್ನು ಹೆಸರಿನ ಹಿಂದಕ್ಕೂ, ತಮ್ಮ ಹೆಸರಾದ ಗುರುಪಾದ ಎನ್ನುವುದನ್ನು ಹೆಸರಿನ ಮುಂದಕ್ಕೂ ಸೇರಿಸಿಬಿಟ್ಟ. ಇಲ್ಲಾದ ಒಂದು ತಪ್ಪಿನ ಫಲವೋ, ಮಾರಾಂಗುವಿನ ತಾಯಿಯ ಭಾಗ್ಯವೋ ಅಥವಾ ರಾಮಚಂದ್ರನ ಹಣೆಬರಹವೋ ಗೊತ್ತಿಲ್ಲ. ಆತನ ಜೀವನದಲ್ಲಿ ತಪ್ಪಿನ ಮೇಲೆ ತಪ್ಪು ಘಟಿಸುತ್ತಾ, ಇನ್ನು ಕೆಲವು ತಪ್ಪುಗಳನ್ನು ಈ ಮಹಾನುಭಾವನೇ ಮಾಡುತ್ತಾ ಹೋದ. ಅಲ್ಲಿಗೆ ಅವನ ಹೆಸರಿನ ಸಂಕ್ಷಿಪ್ತ ರೂಪ ಅವನ ಪಾಲಿನ ಅನ್ವರ್ಥನಾಮವಾಗಿ ಹೋಯ್ತು. ಈ ಮಾರಾಂಗು ಭಟ್ಟನ ಪ್ರಕರಣ ಆತನ ಮನೆತನದ ಹಿನ್ನೆಲೆ ಹೇಳದಿದ್ದರೆ ಸೊಗಸಲ್ಲ.

ಮುತ್ತಜ್ಜ-ಅಜ್ಜ-ಅಪ್ಪ ಮೂವರೂ ಚೆನ್ನಾಗಿ ಕಾಸು ಮಾಡಿದ್ದರು. ಕಾಸು ಮಾಡಿದ್ದೇನೂ ಪೂರ್ವ ಕರ್ಮಗಳಾದ ಮದುವೆ ಮುಂಜಿ ಹೋಮ ಹವನಗಳಿಂದ ಅಲ್ಲ ಅಥವಾ ಅಪರ ಕರ್ಮದಿಂದಲೂ ಅಲ್ಲ. ಅಸಲಿಗೆ ಮೂವರೂ ಮಂತ್ರ ಕಲಿತವರೂ ಅಲ್ಲ. ಅವರಿವರ ಮನೆಗೆ ಮಾಟ ಮಾಡಿಸಿ, ಅಂಜನ ಹಾಕಿ ಕತೆ ಕಟ್ಟಿ, ಅಥವಾ ಯಾರದ್ದೋ ಮನೆಯ ದೈವ ಮುನಿದಿದೆ ಎಂದು ನಂಬಿಸಿ, ಅವರಿವರಿಂದ ಕಾಸು ಪಡೆದು ಯಾಮಾರಿಸಿಯೇ ದುಡ್ಡು ಮಾಡಿದ್ದು. ಆತನ ಅಜ್ಜಿ ಸತ್ತಾಗ ಅಥವಾ ಅಪ್ಪ ಸತ್ತಾಗ, ಯಾವುದೋ ಬೇಡದ ಮಾಟ ಮಂತ್ರ ಮಾಡಿದ್ದರ ಫಲ ಇದು ಅಂದುಕೊಂಡು ಜನ ಆಡಿಕೊಂಡಿದ್ದರು.

ಅದ್ಯಾವುದೋ ರೀತಿಯಲ್ಲಿ, ವಿಧಿ ಲೀಲೆ ಎನ್ನುವಂತೆ ಅಥವಾ ರಬೀಂದ್ರನಾಥ ಟ್ಯಾಗೋರರ ಭಾಷೆಯಲ್ಲಿ ಹೇಳುವುದಾದರೆ "By a mistake of angel of destiny" ಇವರ ಮನೆತನಕ್ಕೆ ಊರ ದೇವಸ್ಥಾನದ ಯಜಮಾನಿಕೆ ಬಂದುಬಿಟ್ಟಿತ್ತು, ಅದೂ ಆತನ ಮುತ್ತಜ್ಜನ ಕಾಲದಲ್ಲಿ. ಆತನ ಮುತ್ತಜ್ಜ ಒಬ್ಬನೇ ಮನೆತನದ ಗಂಡು ಸಂತಾನವಾದ್ದರಿಂದ ಇದು ಆಗಿದ್ದು ಎಂದು ಊರಲ್ಲಿನ ತಲೆ ಹಣ್ಣಾದವರ ಅಂಬೋಣ.ಊರ ಜನರಿಂದ ಇಂದಲ್ಲ ನಾಳೆ ತನ್ನ ಬುಡಕ್ಕೆ ಬಿಸಿನೀರು ತಾಗೀತು ಎಂದು ಮುಂದಾಲೋಚನೆ ಮಾಡಿದ್ದ ಮಾರಾಂಗು ಭಟ್ಟನ ಅಜ್ಜ ಊರ ಜನರಲ್ಲಿ ತನ್ನ ಬಾಲ ಬಡುಕರನ್ನೆಲ್ಲಾ ಒಟ್ಟಾಗಿಸಿ ಒಂದು ಸಮಿತಿ ಮಾಡಿಕೊಂಡಿದ್ದ

ಆದರೆ ಅದೇಕೋ ಏನೊ, ಮಾರಾಂಗು ಭಟ್ಟನ ತಾಯಿ ಬಂಗಾರಮ್ಮನಿಗೆ ದೇವಸ್ಥಾನದ ಯಜಮಾನಿಕೆಯ ಕಡೆ ಅಂಥಾ ಒಲವಿರಲಿಲ್ಲ. ಹಾಗಾಗಿ ಅದರ ಪೂಜಾ ಕೈಂಕರ್ಯಗಳನ್ನು ನೋಡುತ್ತಿದ್ದ ನರಹರಿ ಭಟ್ಟರು ಯಜಮಾನಿಕೆ ಕೈಗೆತ್ತಿಕೊಂಡಾಗ ಆಕೆ ಸುಮ್ಮನೇ ಇದ್ದಳು. ನರಹರಿ ಭಟ್ಟರ ಯಜಮಾನಿಕೆಯ ಕಾಲದಲ್ಲಿ ದೇವಸ್ಥಾನ ಒಳ್ಳೇ ಪ್ರಚಾರಕ್ಕೆ ಬಂತು. ಸ್ವಯಂ ದೈವ ಭಕ್ತರಾಗಿದ್ದ ನರಹರಿ ಭಟ್ಟರು, ದೇವಸ್ಥಾನದ ಅಷ್ಟ ಬಂಧ, ಜೀರ್ಣೋದ್ಧಾರಗಳನ್ನು ನಡೆಸಿ, ದೇವಸ್ಥಾನದ ಅಭಿವೃದ್ಧಿಯನ್ನೂ ಮಾಡಿಸಿ ದೇವಸ್ಥಾನಕ್ಕೆ ಬರಲು ಜನ ಸಂತೋಷಿಸುವಂತೆ ಮಾಡಿದ್ದರು. ಅಷ್ಟೇ ಅಲ್ಲ, ಊರ ಜನರ ಕಣ್ಣಿನಲ್ಲಿ ಗೌರವಾನ್ವಿತರೊ ಆಗಿದ್ದರು.

ಆದರೆ ಮಾರಾಂಗು ಭಟ್ಟನ ಮನೆತನಕ್ಕೆ ನಿಷ್ಠರಾಗಿದ್ದು ಆ ನಿಷ್ಟೆಯನ್ನೇ ದೈವಭಕ್ತಿ ಎಂದು ಬಿಂಬಿಸಿ, ಆರತಿ ತಟ್ಟೆ ದುಡ್ಡು, ಹುಂಡಿ ದುಡ್ಡು ಮತ್ತಿತರ ಖರ್ಚುಗಳಲ್ಲಿ ನಂಬರ್ ಟು ಲೆಕ್ಕ ತೋರಿಸಿ ಸ್ವಲ್ಪ ಕಾಸು-ಕವಡೆ ಸಂಪಾದಿಸಿದ್ದ ಜನಕ್ಕೀಗ ತಲೆಬಿಸಿ ಹತ್ತಿಕೊಂಡಿತು. ಯಾಕೆಂದರೆ ನರಹರಿ ಭಟ್ಟರು ಅವರನ್ನೆಲ್ಲಾ ಹೊರ ನೋಟಕ್ಕೆ ಚೆನ್ನಾಗಿಯೇ ಇಟ್ಟುಕೊಂಡು, ಜನರೆದುರಿನಲ್ಲಿ ಏನೂ ಹೇಳದೆ, ಅವರ ಕೈಗೆ ಯಾವ ಜವಾಬ್ದಾರಿಯೂ ಸಿಗದ ಹಾಗೆ ಮಾಡಿ ಬಿಟ್ಟಿದ್ದರು. ದೇವಸ್ಥಾನದ ವೈಭೋಗವನ್ನು ಕಂಡು ತಾನು ಅದರ ಯಜಮಾನಿಕೆ ವಹಿಸಿಕೊಳ್ಳದೆ ತಪ್ಪು ಮಾಡಿದೆ ಎಂದು ಕೊರಗುತ್ತಿದ್ದ ಬಂಗಾರಮ್ಮನಿಗೆ ಇವರು ಜೊತೆಯಾದರು. ಎಲ್ಲಾ ಸೇರಿ ಅರ್ಧಂಬರ್ಧ ಮಂತ್ರ ಗೊತ್ತಿದ್ದ ದೇವಯ್ಯ ಭಟ್ಟರನ್ನು ದೇವಸ್ಥಾನದ ಅರ್ಚಕ ಸ್ಥಾನಕ್ಕೆ ತಂದು ಕೂರಿಸಿ, ತಮ್ಮ ಯಜಮಾನಿಕೆ ನಡೆಸಿದ್ದರು.

ಆಮೇಲೆ ಬಿಡಿ. ಭೂರಿ ಭೋಜನ. ಆದರೆ, ದೇವರಿಗೆ ಇದು ಸಮ್ಮತವಿರಲಿಲ್ಲವೇನೋ. ದೇವಯ್ಯ ಭಟ್ಟರಿಗೂ-ಬಂಗಾರಮ್ಮ ಅಂಡ್ ಕಂಪನಿಗೂ ಆಗಿ ಬರಲಿಲ್ಲ. ದೇವಯ್ಯ ಭಟ್ಟರು ಗೇಟ್ ಪಾಸ್ ಪಡೆದರು. ಬಂಗಾರಮ್ಮ ಅಂಡ್ ಕಂಪನಿಯ ಬಗ್ಗೆ ಅರಿವಿದ್ದ ಊರಿನ ಜನ ಎಚ್ಚೆತ್ತು, ಪಕ್ಕದೂರಿನ ಯಜ್ಞ ಭಟ್ಟರನ್ನು ದೇವಸ್ಥಾನದ ಅರ್ಚಕ ವೃತ್ತಿ ಮಾಡಲು ಒಪ್ಪಿಸಿದರು. ದೇವಸ್ಥಾನ ಮತ್ತೆ ತನ್ನ ವೈಭೋಗದತ್ತ ಸಾಗುತ್ತಿತ್ತು. ಆದರೆ, ಅಷ್ಟರಲ್ಲಿ ಯಜ್ಞ ಭಟ್ಟರು ಹಾಸಿಗೆ ಹಿಡಿದರು. ಊರ ಜನಕ್ಕೂ ಐಟಿ ಬಿಟಿ ಕೆಲಸ, ಫಾರಿನ್ನು, ಮತ್ತೆ ಐಷಾರಾಮಿ ಬದುಕು ಮೂರೂ ಬಹಳ ಪ್ರಮುಖವಾಗಿ ಊರ ದೇವಳ ನಗಣ್ಯವಾಗಿಬಿಟ್ಟಿತ್ತು.

ಈಗ ಬಂಗಾರಮ್ಮ ಅಂಡ್ ಗ್ಯಾಂಗ್ ಪೀಲ್ಡಿಗೆ ಎಂಟ್ರಿ ಕೊಟ್ಟಿತು. ಮೊತ್ತ ಮೊದಲನೆಯದಾಗಿ, ಅರ್ಚಕ ಸ್ಥಾನಕ್ಕೆ ನರಹರಿ ಭಟ್ಟರ ಶಿಷ್ಯ, ಮೋಹನ ಭಟ್ಟರನ್ನು ತಂದಿತ್ತು. ಅಷ್ಟೇ ಅಲ್ಲ. ಮೋಹನ ಭಟ್ಟರೇ ಯಜಮಾನಿಕೆ ಮುಂದುವರೆಸಿಕೊಂಡು ಹೋಗುತ್ತಾರೆ. ತನ್ನದೇ ಗ್ಯಾಂಗಿನ ಅನೇಕರು ಅವರ ಜೊತೆಯಲ್ಲಿದ್ದು ಆದಳಿತ ಕೈಂಕರ್ಯಗಳನ್ನು ನೋಡಿಕೊಳ್ಳುತ್ತಾರೆತಾನಾಗಲೀ ತನ್ನ ಮಗನಾಗಲೀ ಈ ಎಲ್ಲ ವ್ಯವಹಾರಗಳಿಂದ ದೂರ ಉಳಿಯುವುದಾಗಿ ಬಂಗಾರಮ್ಮ ಬೊಂಬಡ ಹೊಡೆದಿದ್ದಳು. ಸಾಲದ್ದಕ್ಕೆ ಅವಳ ಗ್ಯಾಂಗ್ ಕೂಡಾ ಇದಕ್ಕೆ ಅಪಾರ ಪ್ರಚಾರ ಕೊಟ್ಟಿತ್ತು.

ಈ ಕಡೆ ಮೋಹನ ಭಟ್ಟರು, ಮಂತ್ರ ಹೇಳುವುದಕ್ಕೆ ಬಿಟ್ಟುಮತ್ಯಾವುದಕ್ಕೂ ಬಾಯಿ ತೆಗೆಯದ ಕಾರಣ, ಅವರು ಗುಮ್ಮಣ್ಣ ಭಟ್ಟರು ಎಂದೇ ಊರಿನಲ್ಲಿ ಖ್ಯಾತರಾದರು. ದೇವಸ್ಥಾನದ ಅದೆಷ್ಟೋ ಸೊತ್ತು ಬಂಗಾರಮ್ಮನ ಕೈವಾಡವಿಲ್ಲದೆ ಖಾಲಿಯಾಗಿತ್ತು, ಅವಳ ಗ್ಯಾಂಗಿನ ಕೆಲವರ ಕೈ ಚಳಕದಲ್ಲಿ. ಗುಮ್ಮಣ್ಣ ಭಟ್ಟರು ಆಗಲೂ ದಿವ್ಯ ಮೌನ ವಹಿಸಿದ್ದರು.ಆದರೆ ಆಗಾಗ, ಮಾರಾಂಗು ದೇವಸ್ಥಾನದ ಕಡೆ ಬರುತ್ತಿದ್ದ. ಅವನ ಭಕ್ತಿ, ತೇಜಸ್ಸು, ಓಜಸ್ಸು, ಇದೆಲ್ಲಾ ಅವನ ಕಡೆಯವರ ಬಾಯಿಯಲ್ಲಿ ಭಾರೀ ಪ್ರಚಾರಕ್ಕೆ ಬಿದ್ದಿತ್ತು.

ಆದರೆ ಈ ಮಾರಾಂಗುವೋ, ಪೆದ್ದರ ಪೆದ್ದನಾಗಿ ಕಾಲ ಕಳೆಯುತ್ತಿದ್ದ. ದೇವಸ್ಥಾನದ ಕೆರೆಯಲ್ಲಿನ ಮೀನುಗಳನ್ನು ಗುತ್ತಿಗೆ ಕೊಟ್ಟರೆ ಹೇಗೆ ಎಂದು ಇವ ಆಲೋಚಿಸಿ ಅದರ ಬಗೆಗೆ ಹಲುಬುತ್ತಿದ್ದರೆ, ಅದರ ರಿಪೇರಿ ಹೆಸರಲ್ಲಿ ಇವನ ಗ್ಯಾಂಗಿನವರು ಚೆನ್ನಾಗಿ ಕಾಸು ಮಾಡಿದ್ದರು. ಬೆನ್ನಿಗೇ ಬಂದಿದ್ದು ಮತ್ತೊಂದು. ಅದ್ಯಾರೋ ನಾನ್ ವೆಜ್ ಸ್ವಲ್ಪ ಕಾಸ್ಟ್ಲಿ ಎಂದರು, ಈ ಪುಣ್ಯಾತ್ಮ "ದೇವಸ್ಥಾನದಲ್ಲೂ ನಾನ್ ವೆಜ್ ಬಡಿಸಿದರೆ ಹೇಗೆ?' ಎಂದಿದ್ದ. ಇಷ್ಟಾಗುತ್ತಾ ಹತ್ತು ವರ್ಷ ಕಳೆದಿತ್ತು. ದೇವಸ್ಥಾನದಲ್ಲಿ ಭಕ್ತರ ದುಡ್ಡು ಹಗಲು ದರೋಡೆಯಾಗಿ ಖಾಲಿಯಾಗುತ್ತಾ ಬಂದಿತ್ತು. ಇದೆಲ್ಲಾ ಸುದ್ದಿ ಗೊತ್ತಾದ ಮೇಲೆ ಭಕ್ತರೂ ಬರುವುದನ್ನು ನಿಲ್ಲಿಸಿದ್ದರು. ಆದರೆ ಕಣ್ಣೆದುರೇ ಹಗಲು ದರೋಡೆ ನಡೆತ್ಯ್ವುದನ್ನು ಸುಮ್ಮನೆ ಸಹಿಸಿಯರಾದರೂ ಹೇಗೆ? ದೊಡ್ಡ ಮಟ್ಟದಲ್ಲಿ ಬಂಗಾರಮ್ಮ ಅಂಡ್ ಕಂಪನಿಗೆ ಏಟು ಹಾಕಲು ಸಿದ್ಧತೆಗಳಾಯ್ತು. ತನ್ನ ಮಗ ಮತ್ತು ತನ್ನ ಬಾಲಬಡುಕರ ಬಗ್ಗೆ ಚೆನ್ನಾಗಿ ಅರಿವಿದ್ದ ಬಂಗಾರಮ್ಮ ಸುಮ್ಮನೆ ಹಿಂದೆ ಸರಿದಳು. ಇಲ್ಲಿಂದ ಮಾರಾಂಗುವಿನ ರಾಂಗು ಮಾಡುವ ಕೈಂಕರ್ಯ ಜೋರಾಗಿಯೇ ಸಾಗಿತ್ತು. ಬಾಲಬಡುಕರಿಗೆ ತಿದ್ದುವ ಕಾಯಕ ಬೆನ್ನಿಗಂಟಿತ್ತು.

ಊರ ಜನ ದೇವಸ್ಥಾನದ ಅರ್ಚಕ ಸ್ಥಾನಕ್ಕೆ ಯಾರಾದೀತು ಎಂದು ಅಷ್ಟಮಂಗಲ ಪ್ರಶ್ನೆ ಇಡಿಸಿದ್ದರು. ಆ ಪ್ರಶ್ನೆಯಲ್ಲಿ ಬಂದ ಉತ್ತರ, ದೇವಸ್ಥಾನದ ಯಜಮಾನಿಕೆ ಮತ್ತು ಅರ್ಚಕತನ ಎರಡೂ ಒಂದೇ ಮನೆತನಕ್ಕೆ ಸೇರಬೇಕಾದ್ದು ಎಂದೂ ಮತ್ತೆ ಅದನ್ನು ತಲತಲಾಂತರದ ಹಿಂದೆ ಪಕ್ಕದೂರಿನ ಯಜ್ಞ ಭಟ್ಟರ ಮನೆತನಕ್ಕೆ ಇತ್ತೆನ್ನುವುದೂ ಗೊತ್ತಾಯಿತು. ಯಜ್ಞ ಭಟ್ಟರ ಮೊಮ್ಮಗನೇ ಆದ ಮಹೇಂದ್ರ, ಕಾಶಿ, ಕಾಂಚಿ, ಉಡುಪಿ ಹೀಗೆ ಅನೇಕ ಕಡೆಗಳಲ್ಲಿ ವೇದಾಭ್ಯಾಸ ಮಾಡಿದ್ದ. ಅವನೇ ದೇವಸ್ಥಾನದ ಅರ್ಚಕವೃತ್ತಿ ಕೈಗೊಂಡ. ದೇವಸ್ಥಾನದಲ್ಲಿ, ನಂಬಿಕಸ್ತರನ್ನು ಇಟ್ಟ. ದೇವಳದ ಗತ ವೈಭವ ಮರುಕಳಿಸುವ ಆಸೆ ಎಲ್ಲರಿಗೂ ಭದ್ರವಾಯಿತು.

ಮಹೇಂದ್ರ ಮಾಡಿದ ಮೊದಲ ಕೆಲಸ ಎಂದರೆ, ದೇವಸ್ಥಾನದಲ್ಲಿ ಬಿಟ್ಟಿ ಕೂಳು ತಿಂದು ಶಲ್ಯ ತಿರುಗಿಸುತ್ತಾ ಹಾರಾಟ ಮಾಡಿಕೊಂಡಿದ್ದ ಎಲ್ಲರಿಗೂ ಕೆಲಸ ಹಚ್ಚಿದ. ಕೆಲಸ ಮಾಡಲು ಸಾಧ್ಯವಿಲ್ಲದವರು ಜಾಗ ಬಿಟ್ಟರು. ಎಲ್ಲೆಲ್ಲೋ ಅಡಮಾನಕ್ಕೆ ಹೋಗಿದ್ದ ದೇವಸ್ಥಾನದ ಆಸ್ತಿಯನ್ನು ಬಿಡಿಸಲು ಮುಂದಾದ. ಆದರೆ ಇಷ್ಟರ ಮಧ್ಯದಲ್ಲಿ, ಒಂದು ಕಾಲದಲ್ಲಿ ದೇವಸ್ಥಾನದ ದುಡ್ಡು ಕದ್ದಿದ್ದ ಕೆಲವರ ಮನೆಯವರು ಬ್ಯಾಂಕಿಗೆ ಡೆಪಾಸಿಟ್ ಮಾಡಲು ಹೋಗಿ ನೋಡಿದರೆ ಕೈನಲ್ಲಿ ಕಳ್ಳನೋಟಿತ್ತು. ದೇವಸ್ಥಾನ್ದ ಕೆರೆಯ ಕೋಡಿಯ ನೀರು ದಿಕ್ಕು ಬದಲಿಸಿ ನೀರಿಲ್ಲದ ಬಡವರ ತೋಟಗಳ ಕಡೆ ಹರಿದಿತ್ತು. ಅವರೂ ಚೆನ್ನಾಗಿ ದೇಣಿಗೆ ಕೊಟ್ಟರು.

ಉರಿದು ಬಿದ್ದಿದ್ದ ಗ್ಯಾಂಗು, ಈಗ ದೇವಸ್ಥಾನದ ಪಕ್ಕದಲ್ಲಿದ್ದ ಜಾಫರ್ ಸಾಬರ ಮನೆಯವರನ್ನು ಎತ್ತಿಕಟ್ಟಲು ಹವಣಿಸಿತು. ಜಾಫರ್ ಸಾಬರು ಒಪ್ಪಲಿಲ್ಲ. ಆದರೆ ಅವರ ಮಕ್ಕಳು ಒಪ್ಪಿದ್ದರು. ಕೀಟಲೆ ಕಾಟ ತಡೆಯಲು ಸಾಧ್ಯವಾಗದಷ್ಟಿತ್ತು. ಅದೇನಾಯ್ತೋ ಏನೋ, ಒಂದು ದಿನ ರಾತ್ರೋ ರಾತ್ರಿ, ಜಾಫರ್ ಸಾಬರ ಮನೆಯ ಕಡೆಯಿಂದ "ಅಯ್ಯಯ್ಯೋ!! ಅಮ್ಮಮ್ಮಾ!!! ನಮ್ದೂ ಇನ್ನು ಇಂಗೆ ಮಾಡಾಕಿಲ್ಲ. ಮಾಫ್ ಮಾಡಿ" ಎನ್ನುವ ಚೀತ್ಕಾರ ಕೇಳಿಸುತ್ತಿತ್ತು. ಯಾರಾದರೂ ವಿಚಾರಿಸಿದರೆ ಜಾಫರ್ ಸಾಬರು," ಸತ್ಯಕ್ಕೆ ಹೇಳಿದ್ರೆ ನಮ್ದೂ ಮರ್ಯಾದೆಗೆ ಇರಾಕಿಲ್ಲ" ಎಂದು ಹೇಳಿ ಕೈ ಮುಗಿಯುತ್ತಿದ್ದರು.

ಇನ್ನು ಈ ಕಡೆ ಮಾರಾಂಗುವಿನ ಹುಚ್ಚಾಟಗಳಿಗೆ ಪಾರವೇ ಇರಲಿಲ್ಲ. ಒಮ್ಮೆ ಹೇಳಿದ್ದ, "ದೇವಸ್ಥಾನದ ತೋಟಕ್ಕೆ ಸಗಣಿ ಗೊಬ್ಬರ ಹಾಕಿ ಫಸಲು ಕಮ್ಮಿ ಆಗ್ತಿದ್ದು. ಸರಕಾರಿ ಗೊಬ್ರ ಹಾಕಕ್ಕು" ಅಂತ. ಪರಿಣಾಮ ಮೊದಲು ಹಾಕಿದ ಸರಕಾರಿ ಗೊಬ್ಬರದ ಲೆಕ್ಕ, ಆಗ ಸಿಕ್ಕಿದ ಫಸಲು ಎರಡರದ್ದೂ ಲೆಕ್ಕ ಹೊರಬಿದ್ದು ಮಾನ ಮರ್ಯಾದೆ ಕಳಕೊಂಡಿದ್ದ. ಇನ್ನೊಮ್ಮೆ ಹೇಳಿದ್ದ "ಮಹೇಂದ್ರ ವಾಲೆ ಆಡ್ತ" ಆಗಿದ್ದಿಷ್ಟೇ. ಓರ್ವ ಹಿರಿಯರು ಊರಿನಲ್ಲಿ ಬಸ್ಸಿಳಿದ ಮರುಕ್ಷಣ ಮಾರಾಂಗು ಕಂಡಿದ್ದ. ಅವನಲ್ಲಿ ಮಹೇಂದ್ರನ ಮನೆಯ ದಾರಿ ಕೇಳಿದ್ದರು. ಇವನೇನೋ ದಾರಿ ಹೇಳಿದ್ದ. ಜೊತೆಗೆ, "ಎಂತಕ್ಕೆ" ಎಂದಿದ್ದ. "ವಾಲೆ ಕೊಡದಿತ್ತು" ಎಂದರು. ಈ ಪುಣ್ಯಾತ್ಮ ಅದನ್ನು ಇಸ್ಪೀಟ್ ವಾಲೆ ಎಂದುಕೊಂಡು ಊರೆಲ್ಲಾ ಹಬ್ಬಿಸಿದ್ದ. ಆದರೆ, ಅದೇ ಹಿರಿಯರು ಊರಿಗೆ ಇನ್ನೊಮ್ಮೆ ಬಂದಾಗ ಸಮಝಾಯಿಷಿ ಕೊಟ್ಟು ಎಲ್ಲಾ ಸುಖಾಂತ್ಯವಾಗಿತ್ತು. ಹೀಗೆ ಮಾರಾಂಗುವಿನ ರಾಂಗು ಮಾಡುವ ಸರಣಿ ಮುಂದುವರೆದಿತ್ತು

ಇಷ್ಟರಲ್ಲಿ ಇವನಿಗೆ ಜೊತೆಯಾದವಳು, ಪದ್ಮಜಾ. ಅವಳ ಮನೆಯವರ ಪ್ರೀತಿಯ ಪದ್ದಿ. ಊರವರ ಬಾಯಲ್ಲಿ ಪೆದ್ದಿ ಅಂತ ಮೊದಲೇ ಖ್ಯಾತಳಾಗಿದ್ದಳು. ಪೆದ್ದಿ ಪೇಟೆ ಸೇರಿ ಹಿಂದಿ-ಇಂಗ್ಲೀಷ್ ಭಾಷೆ ಎಲ್ಲಾ ಕಲಿತಿದ್ದಳು. ನೋಡುವುದಕ್ಕೂ ಮೈ ಕೈ ತುಂಬಿಕೊಂಡು ಬಹಳ ಸುಂದರವಾಗಿದ್ದಳು. ಅವಳ ಸೌಂದರ್ಯಕ್ಕೆ ಮಾರಾಂಗು ಮರುಳಾದನೋ ಅಥವಾ ಅವಳ ಭಾಷೆಗೆ ಬಿದ್ದನೋ ಗೊತ್ತಿಲ್ಲ. ಆದರೆ ಮತ್ತೊಂದು ರಾಂಗು ಮಾಡಿದ್ದ.ಇವರಿಬ್ಬರ ಜೋಡಿ ನೋಡಿ ಅನೇಕರು ಹೇಳಿದ್ದರು. "ಇವೆರಡೂ ಒಟ್ಟಾಗಿದ್ದು ಭಾರಿ ಚನಾಗಾಯ್ದು. ಇಲ್ದಿದ್ರೆ ಇವಂಗೆ ಹಬ್ಬ ಇರ್ಲೆ. ಅವಳಿಗೆ ಮದ್ವೆ ಇರ್ಲೆ". ಈ ಜೋಡಿಯನ್ನು ಎಳೆಯ ಮಕ್ಕಳಂತೂ "ಛೋಟಾ ಭೀಮ್-ಚುಟ್ಕಿ" ಅಂತ ಕರೆದು ಮಜಾ ತೆಗೆದುಕೊಂಡಿದ್ದರು. ಆದರೆ ಮಾರಾಂಗು ಮಹೇಂದ್ರನ ಮರ್ಯಾದೆ ತೆಗೆಯುವ ತನ್ಮೂಲಕ ದೇವಳವನ್ನು ಮತ್ತೆ ತನ್ನ ಕೈಗೆ ತೆಗೆದುಕೊಳ್ಳುವ ಆಸೆ ಈಡೇರದೆ ಚಡಪಡಿಸುತ್ತಿದ್ದ. ಇತ್ತ ಮಹೇಂದ್ರ ದೇವಸ್ಥಾನದ ವಿಮಾನ ಗೋಪುರದ ಕೆಲಸ ಮಾಡಿಸಲು ಮುಂದಾದ.

ಆಗ ಪೆದ್ದಿ ಪ್ರಿಯಕರನಿಗೊಂದು ಉಪಾಯ ಹೇಳಿಕೊಟ್ಟಳು. "ಆವಾಗ ನಿಂಗ ಅದೆಂತದೋ ಗೋಪುರದ ಕೆಲಸ ಮಾಡಸ್ತಿ ಹೇಳಿದ್ರಲ, ಈಗ ಇವ ಹೇಳದು ಅದಕ್ಕಿಂತ ಜಾಸ್ತಿ ಖರ್ಚಾಗ್ತು. ಇದನ್ನೇ ದೊಡ್ಡ ಮಾಡು. " ಎಂದಿದ್ದಳು.

ನಂಬಿದ ಮಾರಾಂಗು ಊರೆಲ್ಲಾ ಚೀರತೊಡಗಿದ್ದ. "ಮಹೇಂದ್ರ ದೇವಸ್ಥಾನದ ವಿಮಾನ ಗೋಪುರದ ಹೆಸರಲ್ಲಿ ದುಡ್ಡು ಹೊಡದ್ದ. ಯಂಗ ಕಮಿಟಿಲಿ ಇದ್ದಾಗ ಲೆಕ್ಕ ಹಾಕಿದ್ದಕ್ಕಿಂತ ಡಬಲ್ ಖರ್ಚಾಗ್ತಾ ಇದ್ದು. ಅಂವ ಆನಂದಾಚಾರಿ ಜೊತಿಗೆ ಸೇರ್ಕಂಡು ಇದೆಲ್ಲ ಮಾಡ್ತಾ ಇದ್ದ" ಆದರೆ ಮಹೇಂದ್ರ ಉತ್ತರಿಸಿದ್ದ. ಖರ್ಚು ಜಾಸ್ತಿ ಆಗಿದ್ದು ಹೌದು. ಎಂತಕ್ಕೆ ಅಂದ್ರೆ ಮುಂಚೆ ಸಿಮೆಂಟ್ ಗೋಪುರ ಮಾಡಿಸ ಯೋಚನೆ ಇತ್ತು. ಈಗ ಮಾಡಿಸದು ಬಂಗಾರದ ಗೋಪುರ" ಜನ ಆತನ ಮೇಲೆ ವಿಶ್ವಾಸ ಇಟ್ಟಿದ್ದರು. ಆನಂದಾಚಾರಿಯೂ ಹೇಳಿದ್ದ. " ನಂಗೆ ಮರದ್ದು ಕಬ್ಬಿಣದ್ದು ಕೆಲಸ ಬತ್ತೇ, ಬಂಗಾರದ್ದು ಆತ್ಲ ಕಾಣಿ"

ಆದರೆ ಮಾರಾಂಗುವಿನ ಬಾಯಿ ಬಂದ್ ಆಗಲೇ ಇಲ್ಲ. ಇದಕ್ಕೆ ಪೆದ್ದಿಯೂ ಚೆನ್ನಾಗಿ ತುಪ್ಪ ಹೊಯ್ದಳು. ಆನು ಇದನ್ನ ಪ್ಯಾಟೆ ಕೋರ್ಟಿಗೆ ಹೋಗಿ ಎಲ್ಲಾ ಸರಿ ಮಾಡ್ಕ ಬತ್ತಿ ನೀ ಹೆದರಡ ಅಂದಳು. ಇವನೂ ಗೋಣಾಡಿಸಿದ್ದ. ಅವನಿಂದ ದುಡ್ಡು ತೆಗೆದುಕೊಂಡ ಪೆದ್ದಿ ಬೆಂಗಳೂರಿಗೆ ಬಂದಳು. ಕೆಲಸದ ಪ್ರಗತಿಯನ್ನು ಮಾರಾಂಗುವಿಗೆ ತಿಳಿಸಿ ಆಗಾಗ ಖರ್ಚಿಗೆ ದುಡ್ಡು ತೆಗೆಯುತ್ತಿದ್ದಳು. ಈ ಪುಣ್ಯಾತ್ಮ ಕೊಡುತ್ತಲೇ ಹೋದ. ಅವಳು ಪಡೆಯುತ್ತಲೇ ಹೋದಳು. ಮಾರಾಂಗು ಊರೆಲ್ಲಾ ಹೇಳಿಕೊಳ್ಳುತ್ತಲೇ ಇದ್ದ, "ಮಹೇಂದ್ರ ಕಳ್ಳ; ಹಸೀ ಕಳ್ಳ".ಇದು ಆತ ಮಾಡಿದ ಮತ್ತೊಂದು ರಾಂಗು-ಅಂದರೆ ತಪ್ಪು

ಮಧ್ಯೆ ಹಿರಿ ಹೆಂಗಸು ರಾಜಮ್ಮ ಮಾರಾಂಗುವನ್ನು ಅಡ್ಡಗಟ್ಟಿ ಕೇಳಿದ್ದಳು. "ಮಹೇಂದ್ರಂಗೆ ಅಷ್ಟೆಲ್ಲಾ ಮಂತ್ರ ಬತ್ತು. ನಿಂಗೆಂತ ಸುಡುಗಾಡು ಗೊತ್ತಿದ್ದು? ಅವನ್ನ ಬೈತ್ಯೇಲ". ಮಾರಾಂಗು ರೊಚ್ಚಿಗೆದ್ದು ಹೇಳ್ತಿ ನೋಡು ರುದ್ರ ಅಂತ ಶುರು ಮಾಡಿದ್ದ-"ಬ್ರಹ್ಮ ಮುರಾರಿ ಸುರಾರ್ಚಿತ ಲಿಂಗಮ್- ನಿರ್ಮಲ ಭಾಸಿತ ಶೋಭಿತ ಲಿಂಗಂ" ರಾಜಮ್ಮಜ್ಜಿ-" ದಡ್ಡ ಮುಂಡೇ ಗಂಡ!! ಅದು ಲಿಂಗಾಷ್ಟಕ " . ಇದು ಆತ ಮಾಡಿದ ಮತ್ತೊಂದು ರಾಂಗು-ಅಂದರೆ ತಪ್ಪು.ಎಂದು ಉಗಿದು ತಿದ್ದಿದ್ದಳು. ಇವನ ಬಾಲಬಡುಕರೆಲ್ಲ, "ಈಶ್ವರಂಗೆ ಸಂಬಂಧ ಪಟ್ಟಿದ್ದು ಅಂದ ಮೇಲಾತು. ಅದು ರುದ್ರಕ್ಕೆ ಸಮ" ಎಂದು ವಾದಿಸಿದ್ದರು.

ಈ ಕಡೆ ದೇವಸ್ಥಾನದ ಕೆಲಸವಾಯಿತು. ಬಂಗಾರದ ಗೋಪುರವೂ ಕಂಗೊಳಿಸಿತು. ಜನರೂ ಸಂತೋಷಿಸಿದ್ದರು. ಒಂದು ವಾರದ ಭರ್ಜರಿ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ಮರುದಿನ, ಪೋಸ್ಟಿನಲ್ಲಿ ಬ್ಯಾಂಕಿನ ಸಾಲ ತೀರಿಸುವ ನೋಟೀಸ್ ಬಂದಿತ್ತು ಬಂಗಾರಮ್ಮನ ಮನೆಗೆ. ಅದರ ಬೆನ್ನಿಗೇ ಪೆದ್ದಿ ಒಂದು ಕಾರಿನಿಂದ ಬಂದು ಇಳಿದಿದ್ದಳು. ಬಂಗಾರಮ್ಮನಿಗೆ ಎಲ್ಲವೂ ತಿಳಿದಿತ್ತು. ಮರ್ಯಾದೆ ಉಳಿಸಿಕೊಳ್ಳಲಿಕ್ಕೆ ಯಾರದ್ದೋ ಮನೆಯಿಂದ ಅವಳ ಗಂಡ ದೇಬಿಕೊಂಡು ಬಂದಿದ್ದ ಕಾಸಿನ ಸರ ಮಾರಿ ಬ್ಯಾಂಕಿನ ಸಾಲ ತೀರಿಸಿದ್ದಳು. ಮಾರಾಂಗುವಿನ ಉತ್ತಮ ಭವಿಷ್ಯಕ್ಕಾಗಿ ಪೆದ್ದಿಯ ಬಳಿ ಮನೆಯ ಮೆಟ್ಟಿಲು ಹತ್ತದಂತೆ ತಾಕೀತು ಮಾಡಿದ್ದಳು.

ಮಹೇಂದ್ರನನ್ನು ಕಳ್ಳ ಕಳ್ಳ ಎಂದು ಕರೆದು ಅದನ್ನು ಸಾಧಿಸ ಹೊರಟಿದ್ದ ಮಾರಾಂಗುವಿಗೆ ಮಾತ್ರ ಪದ್ದಿ ತನ್ನ ಮನೆಯಲ್ಲಿ ಕದ್ದಿದ್ದು ತಿಳಿಯಲಿಲ್ಲ. ಊರವರೆಲ್ಲ ಇವಳು ಪೆದ್ದಿಯೋ ಆತ ಮಹಾ ಪೆದ್ದನೋ ಎನ್ನುವ ಚರ್ಚೆಯಲ್ಲಿ ಬಿಜಿಯಾದರು.ಒಳಗೊಳಗೇ ಆಕೆ ಪೆದ್ದಿಯೋ ಅಥವಾ ಆಕೆಯನ್ನು ಹಾಗೆಂದುಕೊಂಡ ತಾವು ಪೆದ್ದರೋ ಎನ್ನುವ ಸಂಶಯವೂ ಮನೆಮಾಡಿತ್ತು. ಮಾರಾಂಗುವಿನ ಮನೆತನದ ಪರ ವಹಿಸಿದ್ದ ಕಳ್ಳರು, "ಅಬ್ಬಾ ಪೆದ್ದಿಯ ಧೈರ್ಯವೇ?! ತಮ್ಮ ಜೀವಮಾನದಲ್ಲಿ ಮಾಡುವುದು ಬಿಡಿ ಯೊಚಿಸಲೂ ಸಾಧ್ಯವಿಲ್ಲದ್ದನ್ನು ಮಾಡಿದಳಲ್ಲಾ ಘಾಟಿ!! ಎಂದು ಮಾತಾಡಿಕೊಂಡರು. ಮಾರಾಂಗುವಿಗೆ ಆ ಹೆಸರು ಖಾಯಮ್ ಆಗುವುದು ನಿಕ್ಕಿಯಾಗಿತ್ತು.

ಇದೊಂದು ಕಾಲ್ಪನಿಕ ಕತೆಯಷ್ಟೇ.

No comments:

Post a Comment