Tuesday, March 28, 2023

ಎಂತ ಹರ್ಕಂತ ಕಾಂತೆ

ಪರಶುರಾಮ ಭಟ್ಟರು- ಹೀಗೆ ಹೇಳಿದರೆ ನಮ್ಮೂರಲ್ಲಿ ಯಾರಿಗೂ ತಿಳಿಯುವುದಿಲ್ಲ. ಒಂದು ಕಾಲದಲ್ಲಿ ಅಂಗಡಿ ಭಟ್ಟರು ಎಂದರೆ ಎಲ್ಲಾರಿಗೂ ಪರಿಚಯ ಸಿಗುತ್ತಿತ್ತು. ಆದರೆ ಈಗ ಅವರಿಗೆ ಬ್ಲೇಡು ಭಟ್ಟರು ಅಂತಲೇ ಕರೆಯುವುದು. ಆಶ್ಚರ್ಯದ ಸಂಗತಿ ಎಂದರೆ ಭಟ್ಟರು ಈ ಹೆಸರನ್ನು ಹೆಮ್ಮೆಯಿಂದ ಸ್ವೀಕರಿಸಿರುವುದು. ಭಟ್ಟರ ಅತೀವ ಹಾಸ್ಯಪ್ರಜ್ಞೆಯೇ ಭಟ್ಟರಿಗೆ ಈ ಹೆಸರನ್ನು ಹೆಮ್ಮೆಯಿಂದ ಸ್ವೀಕರಿಸಲು ಸಾಧ್ಯ ಮಾಡಿರಬೇಕು ಎನ್ನುವುದು ನನ್ನ ಅನಿಸಿಕೆಯಾಗಿತ್ತು. ಆದರೆ ಆ ಹೆಸರು ಬೀಳುವ ಮುನ್ನಿನ ಘಟನೆ ಏನಿದ್ದಿರಬಹುದು ಎನ್ನುವ ಕುತೂಹಲ ನನ್ನ ತಲೆಯೊಳಗೆ ಹೊಕ್ಕು ಹುಳುವಾಗಿ ಹಾವಾಗಿ ಕಾಡತೊಡಗಿತ್ತು. ಭಟ್ಟರಿಗೀಗ ಬಹುಶಃ ತೊಂಭತ್ತರ ಹರೆಯ. ಅವರಲ್ಲಿಯೇ ಕೇಳೋಣ ಅಂತ ನಿಶ್ಚಯಿಸಿ ಒಮ್ಮೆ ಅವರ ಬಳಿಯೇ ಕೇಳಿದೆ. ವಿಶೇಷ ಎಂದರೆ ಈ ಕತೆ ನಮ್ಮ ಶುಕ್ರನ ಕಡೆಗೇ ಹೋಗಿದ್ದು.

ಬ್ಲೇಡು ಭಟ್ಟರೇ ಹೇಳಿದ ಕತೆ ಇದು.

ಘಟ್ಟದ ಕೆಳಗಿನ ಭಟ್ಟರ ಅಪ್ಪಯ್ಯ ಕರೂರು ಸೀಮೆಗೆ ಮನೆಯಳಿಯಾನಾಗಿ ಬಂದರಂತೆ. ಮಾವನ ಮನೆಯ ತೋಟ ಗದ್ದೆ ನೋಡಿಕೊಳ್ಳುತ್ತಾ ಇದ್ದ ಭಟ್ಟರ ಅಪ್ಪಯ್ಯನಿಗೆ ಭಟ್ಟರೊಂದೇ ಮನೆ ಸಂತಾನವಂತೆ. ಭಟ್ಟರ ಬೆನ್ನಿಗೆ ಬಿದ್ದದ್ದೆಲ್ಲಾ  ಎಂಟು ಬೇರೆಯವರ ಮನೆಗೆ ಹುಟ್ಟಿದ್ದಂತೆ. 

ಏನು ಅಂತ ನನಗೂ ಗೊತ್ತಾಗಲಿಲ್ಲ. ಬೊಚ್ಚು ಬಾಯಲ್ಲಿದ್ದ ಕವಳ ತುಪ್ಪಿ ಹೇಳಿದರು ಭಟ್ಟರು. "ಆನೊಬ್ಬನೇ ಗಂಡು. ಉಳಿದಿದ್ದೆಲ್ಲಾ ಹೆಣ್ಣು".

ಮುಂದುವರೆದು ಭಟ್ಟರು ಮತ್ತೆ ಕತೆ ಹೇಳತೊಡಗಿದರು. 
"ಶರಾವತಿ ನದಿಗೆ ಹಿರೇಭಾಸ್ಕರ ಡ್ಯಾಮ್ ಕಟ್ಟಿದಾಗ ಯಂಗಳದ್ದು ಎಲ್ಲಾ ಮುಳುಗಿ ಹೋತು. ಪರಿಹಾರಕ್ಕೆ ಅಂತ ಅಪ್ಪಯ್ಯ ಜಮೀನು ತಗಳದೆ ದುಡ್ಡು ತಗಂಡ. ಅವಂಗೆ 7 ಹೆಣ್ಣು ಮಕ್ಕಳನ್ನು ದಡ ಹತ್ತಿಸದೇ ದೊಡ್ಡ ತಲೆಬಿಸಿಯಾಗಿತ್ತು."

ಕಣ್ಣಂಚಿನಲ್ಲಿ ಜಿನುಗಿದ ನೀರನ್ನು ಒರೆಸಿಕೊಂಡು ಭಟ್ಟರು ಮತ್ತೆ ನಗುತ್ತಾ ಕತೆ ಮುಂದುವರೆಸಿದರು. "ಆಗ ಇಲ್ಲಿ ಯನ್ನ ಚಿಕ್ಕಯ್ಯ ಇದ್ದಿದ್ದ. ಅವ ಶ್ಯಾನುಭೋಗ.ಅದಕ್ಕೇ ಯಂಗ ಈ ಊರಿಗೆ ಬಂದ್ಯ. ದೇವರಂಥಾ ಜನ ಚಿಕ್ಕಯ್ಯ. ಅಪ್ಪಯ್ಯ ಅಮ್ಮನ ಕಷ್ಟ ನೋಡಿ ಯಂಗಕ್ಕೆ ಎರಡೆಕರೆ ಗದ್ದೆ ದರಖಾಸ್ತು ಮಂಜೂರು ಮಾಡಿಸಿ ಕೊಟ್ಟ. ಅವಂಗೆ ಗಂಡು ಮಕ್ಕಳಿರ್ಲೆ. ಅವನ ಒಂದೆಕರೆ ತೋಟ ಹೊಸತಾಗಿತ್ತು. ಜೀವನ ಮಾಡಕ್ಕಲ, ಅದಕ್ಕೇ ಆನು ಮಾಣಿ ಇದ್ದಿದ್ನಲ, ಯನ್ನ ಹತ್ರ ಇದೇ ಊರಾಗೆ ಒಂದು ದಿನಸಿ ಅಂಗಡಿ ಹಾಕಿಸಿ ಕೊಟ್ಟ."

"ಮುಳುಗಡೆ ಪರಿಹಾರ ಪೂರ್ತಿ ತಂಗಿದಿಕ್ಕಳ ಮದುವೆ ಮಾಡಕ್ಕೆ ಸಮಾ ಆತು. ಚಿಕ್ಕಯ್ಯನ ತೋಟದ ಉತ್ಪತ್ತಿ ಅವನ ಮೂರು ಹೆಣ್ಣು ಮಕ್ಕಳ ಮದುವೆಗೆ ಸಮ ಆತು. ಅಂಗಡಿ ದುಡ್ಡಲ್ಲಿ ಜೀವನ ಯಂಗಳದ್ದು."

"ಅಷ್ಟೊತ್ತಿಗೆ ಯಂಗೆ ಓ ಅಲ್ಲಿ ಕೂತಿದ್ದ ನೋಡು, ನಿಂಗಳ ಅಂಬಮ್ಮೊಮ್ಮ ಅವಳನ್ನ ತೋರ್ಶಿದ. ಆನು ಕಟ್ಕಬುಟಿ. ಬಿಡಕ್ಕೆ ಬತ್ತನಾ. ಅಂಥಾ ಚಂದಿದ್ದ ಅವಳು ಆಗ. ಈಗಲೂ ಚಂದವೇ, ಯನ್ನ ಕೈಯಾಗೆ ಹರಿತಲ್ಲೆ ಅಷ್ಟೇ."ಎನ್ನುತ್ತಾ ಮತ್ತೆ ಕವಳ ತುಪ್ಪಿ ಕತೆ ಮುಂದುವರೆಸಿದರು.

"ಹಳ್ಳಿ ಬದಿ ಅಂಗಡಿ ಅಂದರೆ ಕಡದ್ದೆ ವ್ಯವಹಾರ. ನಂಬಿಕೆ ಮೇಲೆ ಎಲ್ಲರೂ ಕೊಡ್ತ. ಆದರೆ ಈ ಶುಕ್ರ ಇದ್ದ ನೋಡು, ಅವ ನಿಂಗೊತ್ತಿದ್ದಲ ಎಂತೋ ಫೇಸ್ ಬುಕ್ಕಾ ಎಂತ ಸುಡುಗಾಡ, ಅದರಾಗೆ ಬರದ್ಯೆಡಲ ಅವನದು ವೇಶದ್ದು ಮತ್ತೆಂತದೋ ಕತೆ ಎಲ್ಲ, ಅವ ಯನ್ನ ಹತ್ರ ಅಂಗಡಿಲಿ ಒಂದು ಮೂರು ಸಾವಿರ ಕಡ ಮಾಡಿದ.ಆನೂ ಕೊಡ್ತ ಮಾಡ್ಕಂಡು ಸುಮ್ಮನಿದ್ದಿ. ಆದರೆ ಇವ ಕಿತಾಪತಿ ಮಾಡದ?"

"ಎಂತ ಮಾಡಿದ ಅಜಾ" ಅಂದೆ ನಾನು.

"ಹೇಳ್ತಾ ತಿರುಗಿದ್ನಡ. ಅಂಗಡಿ ಭಟ್ಟನ ಹತ್ರ ಆರು ಸಾವಿರ ಕಡ ಮಾಡೀದೆ. ಕೊಡೂದಿಲ್ಲ. ಕೇಂಡ್ರೆ ಇತ್ತಲ. ಬಾಂಬಿಯಿಂದ ಜನ ಬತ್ರ್. ಭಟ್ರ್ ಎಂತ ಸಾಂ* ಹರ್ಕಾಂತ್ರ್ ಕಾಂತೆ. ಹಿಂಗೆ ಊರೆಲ್ಲ ಹೇಳ್ತಾ ತಿರುಗಿದ್ನಡ. 

"ಆನೂ ನೋಡ ಅಷ್ಟು ನೋಡಿದಿ. ಇವಂದು ಕಮ್ಮಿ ಆಪ ಲಕ್ಷಣವೇ ಇಲ್ಲೇ. ಬತ್ತ ಎಲ್ಲಿ ಹೋಗ್ತಾ ಅಂತ ಕಾಯ್ತಾ ಇದ್ದಿ. ಅಷ್ಟೊತ್ತಿಗೆ ದೀಪಾವಳಿ ಬಂತು. ಇವನೂ ಬಂದ ಸಾಮಾನು ತಗ ಹೋಗಕ್ಕೆ"

"ಎಲ್ಲಾ ಸಾಮಾನೂ ಕಟ್ಟಿ ಕೊಟ್ಟಿ. ಆಮೇಲೆ ಬ್ಲೇಡ್ ಸುಮ್ನೆ ಕೈಯಾಗೆ ಹಿಡಕಂಡು ದುಡ್ಡು ಕೋಡಾ ಶುಕ್ರ. ಹಳೆದೂ ಎಲ್ಲ ಸೇರಿಸಿ. ಇಲ್ಲದೆ ಹೋದ್ರೆ, ಇಲ್ನೋಡು ಕೈಯಾಗೆ ಎಂತಿದೆ ನೋಡು" ಅಂದಿ.

"ಶುಕ್ರ ಜೋರಾಗಿಬುಡಕ್ಕ. "ಎಂತ *ಟು ಹರ್ಕಂತ್ರಿ ಕಾಂತೆ" ಅನ್ನ ತಂಕ ಮಾತಾಡಿದ. ಆನು ಅವನ್ನ ಅಂಗಡಿ ಒಳಗೆ ದೂಡಿ ಬಾಗಿಲು ಹಾಕಿದಿ. ಬ್ಲೇಡಾಗೆ ಅವನ ಚಡ್ಡಿ ಶಿಗದಿ. ಹೋಗು ತಮಾ ಅಂದಿ"

"ಶುಕ್ರ ಅವಾಗ ಪಕ್ಕಾದ. ಇಷ್ಟು ದಿನ ಹೇಳಿದ್ದು ಹೊರಗೆ ಹೇಳ ಹಾಂಗೆ ಇಲ್ಲೇ. ನಾನು ಬ್ಲೇಡ್ ಹಿಡಕಂಡು ಅವನ್ನ ಒಳಗೆ ಕೂಡಿದ್ದಿ. ಹೊರಗೆ ಕಳಿಸಕ್ಕಿದ್ದರೆ ಅವನ ಚಡ್ಡಿ ಶಿಗದ್ದಿ. ಹಳೆ ಮಾತೇ ಆಡಿರೆ ಯಾರೂ ನಂಬದಿಲ್ಲೆ. ಹೊಸ ಮಾತಾಡಕ್ಕೆ ಧೈರ್ಯ ಇಲ್ಲೆ."

"ಮಕದ ಮೇಲೆ ಟವಲ್ ಹಾಕ್ಯಂಡು ನಿಮ್ಮನೆ ಶಣ್ಣಜ್ಜನ ಹತ್ರ ಹೋಗಿ ದುಡ್ಡು ಇಸ್ಕ ಬಂದು ಕೊಟ್ಟ. ನಿಮ್ಮನೆ ಶಣ್ಣಜ್ಜ ಒಂದಿನ ಎಲ್ಲಾ ಕೂತಾಗ ಎಂತಾತು ಅಂತ ವಿಚಾರ ಕೇಳಿದ. ಆನು ಸತ್ಯ ಇದ್ದಿದ್ದಷ್ಟೂ ಟ ಠ ಡ ಢ ಣ ಹೇಳಿದಿ. ಆಗ ನಿಮ್ಮನೆ ಶಣ್ಣಜ್ಜ, ಓ ಒಳ್ಳೆ ಬ್ಲೇಡ್ ಎಳದ್ದೆ. ಇಲ್ಲದೇ ಇದ್ದರೆ ನಿನ್ನ ದುಡ್ಡು ಮರ್ಯಾದೆ ಎರಡೂ ಗೋವಿಂದ ಆಗ್ತಿತ್ತು ಅಂದ ಅವತ್ತಿಂದ ಆನು ಬ್ಲೇಡ್ ಭಟ್ಟರು ಹೇ ಹೇ ಹೇ." ಹೀಗೆಂದು ಕತೆ ಮುಗಿಸಿದರು ಅಜ್ಜಯ್ಯ.

ಕ್ಷಮೆ ಬಗ್ಗೆ ಕೇಳಿದಾಗ ವೀರಾಧಿವೀರನೊಬ್ಬನನ್ನು ಅಣಕಿಸಿ,ಕೊನೆಗೆ ಕಂಪ್ಲೇಂಟ್ ಎಂದಕೂಡಲೇ ಹೇಂಬೇಡಿಯಂತೆ ಗೋಡೆ ತೊಳೆದು ತಿಕ್ಕಿದವನೊಬ್ಬನ ಕತೆ ಕೇಳಿ ಈ ಘಟನೆ ನೆನಪಾಯಿತು.

#ಶುಕ್ರ

No comments:

Post a Comment