Wednesday, July 26, 2023

ಅಮೃತಮತಿ

ಜೈನ ಸಾಹಿತ್ಯದಲ್ಲಿ ಬರುವ ಒಂದು ಕತೆ ಅಮೃತಮತಿಯದ್ದು. ಜನ್ನನ ಯಶೋಧರ ಚರಿತೆಯ ನಾಯಕಿ ಆಕೆ.(ಖಳನಾಯಕಿಯೂ ಹೌದು) ಮಹಾನ್ ಪ್ರೇಮಕಥೆ, ಅಮೃತಮತಿ ಒಬ್ಬ ಆದರ್ಶ ಪ್ರೇಮಿಕೆ ಎಂದೆಲ್ಲ ನವ ಪೀಳಿಗೆಯ ಸಾಹಿತ್ಯ ವಿಮರ್ಶಕರು ಹೇಳುತ್ತಾರೆ. ಅದು ಒತ್ತಟ್ಟಿಗಿರಲಿ.
ಯಶೋಧರ ಎನ್ನುವ ರಾಜನ ಹೆಂಡತಿ ಆಕೆ. ಅರಮನೆಯಲ್ಲಿ ಸಕಲ ವೈಭೋಗ. ಸುಂದರ ಕಾಯದ, ಜೀವಕ್ಕೂ ಹೆಚ್ಚಾಗಿ ಪ್ರೀತಿಸುವ ಗಂಡ . ಸ್ವರ್ಗವೇ ಕಾಲ ಕೆಳಗೆ ಬಿದ್ದ ಅನುಭೂತಿ. 
ಹೀಗಿರುವಾಗ ಒಮ್ಮೆ ಒಬ್ಬ ಗಂಡಸು ಹಾಡು ಹೇಳುವುದುರಾತ್ರಿ ಕಾಲದಲ್ಲಿ ಕೇಳುತ್ತದೆ ಆಕೆಗೆ. ಆ ಸ್ವರ ಮಾಧುರ್ಯಕ್ಕೆ ಮರುಳಾಗಿ ಸ್ವರದ ಜಾಡು ಹಿಡಿದು ಹೋಗುತ್ತಾಳೆ ಅಮೃತಮತಿ. ನೋಡಿದರೆ ಕುದುರೆ ಲಾಯದಲ್ಲಿನ ಆಳು ಹಾಡುತ್ತಿರುತ್ತಾನೆ. ಆತ ನೋಡಲು ಸುಂದರನಲ್ಲ. ಅಷ್ಟಾಂಗಗಳೂ ವಕ್ರವಾದ್ದರಿಂದ ಅಷ್ಟಾವಕ್ರ ಎನ್ನುವ ಹೆಸರು. ಸ್ವರ ಮಾಧುರ್ಯಕ್ಕೆ ಮರುಳಾದ ಅಮೃತಮತಿ ಅವನೊಂದಿಗೆ ಪ್ರೇಮ ಪ್ರಣಾಯಕ್ಕೆ ಇಳಿಯುತ್ತಾಳೆ, ಅವಳನ್ನೇ ಜೀವ ಎಂದು ಭಾವಿಸಿ ಜೀವಿಸುತ್ತಿದ್ದ ರಾಜ ಯಶೋಧರನ ಮೇಲಿನ ಪ್ರೀತಿ ಇಲ್ಲವಾಗುತ್ತದೆ. ಹಾಗಂತ ಆತನ ದೆಸೆಯಿಂದ ಬಂದ ವೈಭೋಗಗಳೊ ಅಥವಾ ರಾಣಿ ಎನ್ನುವ ಪಟ್ಟವೋ ಆಕೆಗೆ ಬೇಡವಾಗುವುದಿಲ್ಲ. ಅಥವಾ ಅಷ್ಟಾವಕ್ರನೊಂದಿಗಿನ ಪ್ರಣಯಕ್ಕೆ ಅನುಕೂಲ ಎಂದು ಇದ್ದಳೋ, ಅಥವಾ ಪ್ರಣಯಕ್ಕೆ ಅಷ್ಟಾವಕ್ರ, ಪ್ರಮೋದಕ್ಕೆ ರಾಣಿ ಪಟ್ಟ ಎಂದಿದ್ದಳೋ? ಸಮಾಜಕ್ಕೆ ಹೆದರಿದ್ದಳೋ? ಗೊತ್ತಿಲ್ಲ.

ಒಮ್ಮೆ ಯಶೋಧರ ಪ್ರಣಯದ ಹೊತ್ತಿನಲ್ಲಿ ಕಮಲದ ಹೂವಿನಿಂದ ಅಮೃತಮತಿಯನ್ನು ಹೊಡೆಯುತ್ತಾನೆ. ಆಕೆ ಸ್ಮೃತಿ ತಪ್ಪುತ್ತಾಳೆ. ಎಷ್ಟೆಂದರೂ ರಾಣಿ, ಕೋಮಲಾಂಗಿ. ಸಹಜ.

ಕೆಲವು ದಿನಗಳ ನಂತರ ಯಶೋಧರ ರಾಣಿಯ ನಡವಳಿಕೆಯನ್ನು ಸೂಕ್ಷ್ಮವಾಗಿ ಗಮನಿಸಿ ಅನುಮಾನಕ್ಕೆ ತೊಡಗುತ್ತಾನೆ. ಆಕೆಯನ್ನು ಹಿಂಬಾಲಿಸಿ ಕುದುರೆ ಲಾಯಕ್ಕೆ ಹೋಗುತ್ತಾನೆ. ಅಲ್ಲಿ ಅಷ್ಟಾವಕ್ರ, ಹಗ್ಗದಲ್ಲಿ ಯಶೋಧರೆಯ ಬೆನ್ನಿಗೆ ಬಾರಿಸುತ್ತಾನೆ, ಅದೂ ಪ್ರಣಯದಲ್ಲಲ್ಲ, ಆಕೆ ತಡವಾಗಿ ಬಂದಳೆಂಬ ಸಿಟ್ಟಿಗೆ.
ಇದನ್ನು ನೋಡಿದ ಯಶೋಧರ ವೈರಾಗ್ಯ ತಳೆದು ಸನ್ಯಾಸಿಯಾಗುತ್ತಾನೆ.

ಅಷ್ಟಾವಕ್ರನದು, ಕ್ರೌರ್ಯವಾ ಪ್ರಣಾಯವಾ ಪ್ರೇಮವಾ ಎನ್ನುವುದು ಸ್ವಲ್ಪ ಹೊತ್ತು ಆಚೆಗಿರಲಿ. ಅಮೃತಮತಿಯದ್ದು ವಾಂಛೆಯೋ, ಕಾಮವೋ, ಪ್ರೇಮವೋ ಅಥವಾ ಮತ್ತೇನೋ ಎನ್ನುವುದೂ ಇಲ್ಲಿ ಬೇಡ. ಯಶೋಧರನೂ ಬೇಡ.

ಕಮಲದ ದಂಟಿನ ಏಟಿಗೆ ಸ್ಮೃತಿ ತಪ್ಪುವ ಅಮೃತಮತಿ, ಹಗ್ಗದೇಟಿಗೆ ಕಣ್ಣೀರೂ ಹಾಕದಿರುವುದು.

ಕೆಲವರು ಈಗ ಆಧುನಿಕ ಅಮೃತಮತಿಯರು. ತಮಗೆ ಬೇಕಾದಲ್ಲಿ ಕೋಮಲತೆ ಸಿಗುತ್ತದೆ, ಅದು ಕುದುರೆಗೆ ಬಾರಿಸುವ ಹಗ್ಗವಾದರೂ ಸರಿ, ಬೇಡವಾದಲ್ಲಿ ಸ್ಮೃತಿ ತಪ್ಪುತ್ತದೆ ಅದು ಕಮಲದ ದಂಟಾದರೂ ಅಷ್ಟೇ. ಸರಳವಾಗಿ ಹೇಳುವುದಾದರೆ ಒಂದು ರೀತಿಯ Obsessive Selections.

ಈ ಆಧುನಿಕ ಸಮಕಾಲೀನ ಅಮೃತಮತಿಯರೂ ಅಷ್ಟೇ. ಮಣಿಪುರದ ವಿಚಾರದಲ್ಲಿ ಜೋರು ಮಾತು. ಆಡಬೇಕಾದ್ದೆ. ಖಂಡಿಸಲೇ ಬೇಕು. ಆದರೆ,ಉಡುಪಿ ಮರೆತೇ ಹೋಗುತ್ತದೆ. ಕಾಶ್ಮೀರ ನೆನಪಾಗುವುದೇ ಇಲ್ಲ. ರೇಪ್ ರಾಜಧಾನಿ ಅಂತ ದೆಹಲಿಗೆ ಹೆಸರು ಬಂದಿದ್ದು ಪಾಪ ಗೊತ್ತೇ ಇಲ್ಲ. ಆಶಿಫಾ ಎನ್ನುವ ಹಸುಳೆಯನ್ನು ರೇಪ್ ಮಾಡಿ ಅದನ್ನು ಬ್ರಾಹ್ಮಣರ ತಲೆಗೆ ಕಟ್ಟಿದ್ದೂ ಮರೆತಿದೆ. 

ಜನ್ನನ ರೂಪಕ ನಿಜಕ್ಕೂ ಚಂದ. ಇಂಥ ಬುದ್ಧಿ ಯಾವತ್ತೂ ಸಾಯುವುದಿಲ್ಲ. ಹಾಗಾಗಿ ಯಶೋಧರನ ರಾಣಿ ಅಮೃತಮತಿ.

No comments:

Post a Comment