Friday, April 28, 2023

ಪಾಕಿಸ್ತಾನ

ತುಮಿ ಕ್ಯಾ ಭಿ ಕರ್ಕು ಸಬ್ಬಿಕೊ ಕತ್ತೆ ತೋ ಉನೋ ಚುಪ್ ಕರ್ಕು ಭೈತ್ತಿ. ನಕ್ಕೋ ನಕ್ಕೋ ಜ್ಯಾದಾ ಗುಸ್ಸಾ ಕರ್ಕು ಸಬ್ಬಿಕೊ ತುಮಿಚ್ ಬುರಾ ಕರ್ಕು ಕತ್ತೆ. ಉನ್ನೋ ಐಸಾಯ್ಚ್. ತುಮಿ  ಅಡ್ಜಸ್ಟ್ ಕರ್ಕು ಜಾನಾ ಸೋ, ಬೆಂಗ್ಳುರ್ ಕೆ ಬಸ್ ಕೆ ಮಾಫಿಕ್.

ಕೆಲವರು ಈ ರೀತಿ ಮಾತಾಡುವುದನ್ನೇ ಉರ್ದು ಅಂತ ಹೇಳುತ್ತಾರೆ. ನಿಜವಾಗಿ ನೋಡಿದರೆ ಅಲ್ಲ. ಉರ್ದು ಒಂದು ಸುಂದರ ಭಾಷೆ.

ಉರ್ದುವಿನ ಸೌಂದರ್ಯ ಸವಿಯ ಬೇಕಾದರೆ ದಿಲೀಪ್ ಕುಮಾರ್, ದೇವ್ ಆನಂದ್, ರಾಜ್ ಕಪೂರ್ ಚಿತ್ರಗಳನ್ನು ನೋಡಬೇಕು.

ಅದಕ್ಕೂ ಚಂದದ ಉರ್ದು ಸಿಗುವುದು ಹಿಂದಿ ಸಿನಿಮಾಗಳ ಕೋರ್ಟ್ ಸೀನ್ ಬಂದಾಗ.

ಅದಾಲತ್, ಮುವಕ್ಕಿಲ್, ಮುಝರಿಮ್, ಜುಲ್ಮ್, ಸಜಾ ಎ ಕೈದ್, ಬಾ ಮುಷಕ್ಕದ್, ಬೆಹಯಾ, ಹಂಸಫರ್, ಹಮ್ರಾಜ್, ಹಂವತನ್, ಹಂದರ್ದ್, ಹಂ ಅಪನಾ, ತಜುರ್ಬಾ, ಮೌಕಾ ಎ ವಾರದಾತ್, ಚಶಂದೀನ್ ಗವಾಹ್, ಅನೇಕ ಶಬ್ದಗಳಿವೆ.

ಇನ್ನೂ ಒಂದು ಸಂಗತಿ ಎಂದರೆ, ಹಿಂದಿ ಭಾಷೆಗಿಂತ ಉರ್ದು ಹಳೆಯದು. ಹಿಂದಿ  ಕಾವ್ಯಮಯವಾದ ಮಜಲನ್ನೂ ಮೀರಿ ಮಿಕ್ಕಿದರೆ ಉರ್ದು ಎನ್ನಬಹುದು.

ಉರ್ದು ಪಾಕಿಸ್ತಾನದ ರಾಷ್ಟ್ರಭಾಷೆ. ಆದರೆ ಅದೇ ಮನೆಮಾತಾಗಿ ಇರುವ ಯಾವ ಪ್ರಾಂತ್ಯವೂ ಪಾಕಿಸ್ತಾನದಲ್ಲಿ ಇಲ್ಲ. 

ಪಂಜಾಬಿನಲ್ಲಿ ಪಂಜಾಬಿ, ವಾಯವ್ಯ ಪ್ರಾಂತ್ಯದಲ್ಲಿ ಪುಷ್ಟೋ, ಬಲೋಚಿಸ್ತಾನದಲ್ಲಿ ಬಲೋಚ್, ಸಿಂಧ್ ಪ್ರಾಂತ್ಯದಲ್ಲಿ ಸಿಂಧಿ ಹೀಗೆ. 

ಹಾಗಾದರೆ, ಉರ್ದು ಪಾಕಿಸ್ತಾನದ ರಾಷ್ಟ್ರ ಭಾಷೆಯಾಗಿದ್ದು ಹೇಗೆ ಅಂತೀರಾ? ಜಿನ್ನಾ ಎನ್ನುವ ಅಪ್ರತಿಮ ರಾಜಕಾರಣಿಯ ತಂತ್ರ ಅದು. ಭಾಷೆಯ ವಿಚಾರವಾಗಿ ಪಾಕಿಸ್ತಾನ ಒಡೆದು ಚೂರಾದರೆ ಎನ್ನುವ ಆತಂಕವೋ ಅಥವಾ ಭಾಷೆಯ ಮೂಲಕ ಪಾಕಿಸ್ತಾನೀ ಪ್ರಜೆಗಳಿಗೆ ಒಂದು ವಿಶೇಷ ಗುರುತು ಸಿಗಬೇಕು ಎನ್ನುವ ಉದ್ದೇಶವೋ ಅಥವಾ ಎರಡೂ ಉದ್ದೇಶಗಳೂ ಸೇರಿಯೋ ಆತ ಉರ್ದು ಭಾಷೆಯನ್ನು ಪಾಕಿಸ್ತಾನದ ರಾಷ್ಟ್ರಭಾಷೆಯಾಗಿಸಿದ.

ಈ ರಾಷ್ಟ್ರಭಾಷೆ ಪಾಕಿಸ್ತಾನದ ಪಾಲಿಗೆ ಒಂದು ರೀತಿಯಲ್ಲಿ ಎರವಲು ತಂದ ಕಾಳು. ಪಾಕಿಸ್ತಾನವೆಂದು ಗುರುತಿಸಲ್ಪಟ್ಟ ಅಂದಿನ ಭೂಭಾಗಗಳಲ್ಲಿ ಎಲ್ಲಿಯೂ ಉರ್ದು ಮಾತಾಡುತ್ತಿರಲಿಲ್ಲ. ಈ ಭಾಷೆಯನ್ನು ಅಲ್ಲಿಗೆ ಕೊಂಡೊಯ್ದು ಕಲಿಸಿದವರು ಅಲ್ಲಿನವರಿಂದ ಮುಹಾಜಿರ್ ಎಂದು ಕೇವಲವಾಗಿ ಕರೆಸಿಕೊಂಡ, ಕರೆಸಿಕೊಳ್ಳುತ್ತಿರುವ ಭಾರತೀಯ ಮುಸಲ್ಮಾನರು.

ಜಿನ್ನಾ ಮಾಡಿದ ಈ ತಪ್ಪಿನಿಂದ ಉರ್ದು ಒಂದು ಜನಾಂಗೀಯ ಭಾಷೆ ಎನ್ನುವ ಹಣೆಪಟ್ಟಿ ಹೊರಬೇಕಾಯಿತು. ವಾಸ್ತವದಲ್ಲಿ ಲಖನೌ ಭಾಗದಲ್ಲಿ ಕರ್ಮಠ ಬ್ರಾಹ್ಮಣರೂ ಉರ್ದು ಮಾತಾಡುವುದು ಒಂದು ಸ್ಟೇಟಸ್ ಎಂದು ಭಾವಿಸುತ್ತಾರೆ. ಎಷ್ಟೋ ಪಂಜಾಬಿನ ಬ್ರಾಹ್ಮಣರಿಗೆ ಉರ್ದು ಉದುರಿದ ನೆಲ್ಲಿಕಾಯಿ ಅಂಗೈನಲ್ಲಿದ್ದಷ್ಟೇ ಸಲೀಸು.

ಆದರೆ, ಉರ್ದು ಪಾಕಿಸ್ತಾನಕ್ಕಿಂತ ಹೆಚ್ಚು ಬೆಳೆದಿದ್ದು ಭಾರತದಲ್ಲಿ. ಹಳೆಯ ಹಿಂದಿ ಸಿನಿಮಾಗಳನ್ನು ಇಷ್ಟ ಪಡುವ ಯಾವನೋ ಉರ್ದುವನ್ನು ಪ್ರೀತಿಸದೆ ಇರಲಾರ. ಸಾಹಿರ್ ಲುಧಿಯಾನವೀ, ಇಂದೀವರ್, ಜಾವೇದ್ ಅಖ್ತರ್, ಸಲೀಂ- ಜಾವೇದ್, ಗುಲ್ಜಾರ್, ಆನಂದ್ ಭಕ್ಷಿ, ಖಾದರ್ ಖಾನ್, ಶೈಲೇಂದ್ರ ಇವರೆಲ್ಲ ದಂಡಿಯಾಗಿ ಉರ್ದು ಶಬ್ದಗಳನ್ನು ಬಳಸಿದವರೇ, ಗೀತೆಗಳಲ್ಲಿ, ಸಂಭಾಷಣೆಗಳಲ್ಲಿ. 

ಇನ್ನೂ ಮಜಾ ಎಂದರೆ, ಗುಲ್ಜಾರ್ ಅವರ ಕಾವ್ಯನಾಮ. ನಿಜವಾದ ಹೆಸರು ಸಂಪೂರ್ಣ್ ಸಿಂಘ್ ಕಾಲ್ರಾ. ಆನಂದ್ ಭಕ್ಷಿ, ಕಾಶ್ಮೀರಿ ಪಂಡಿತ. 

ಭಾರತ ಅಸಹಿಷ್ಣು ಅಂತ ಹೇಳುವವರು ಮತ್ತು ಭಾವಿಸುವವರಿಗೆ ಇಷ್ಟು ಉದಾಹರಣೆ ಸಾಕು. ಇಲ್ಲಿ ಸಹಿಷ್ಣುತೆ ಅಸಹಿಷ್ಣುತೆ ಚರ್ಚಾ ವಿಷಯವೇ ಅಲ್ಲ. ಸೌಂದರ್ಯವನ್ನು ಸವಿದರು ಒಪ್ಪಿದರು ಅಷ್ಟೇ. 
ಸಹಿಸಿಕೊಳ್ಳಬೇಕಾದ್ದು ಹಿಂಸಾತ್ಮಕವಾದ್ದನ್ನೇ ಹೊರತು ಆನಂದದಾಯಕವಾದ್ದನ್ನಲ್ಲ.

ಆದರೆ ಪಾಕಿಸ್ತಾನದ ಗ್ರಹಚಾರ ನೋಡಿ, ಇಷ್ಟು ವರ್ಷಕ್ಕೆ ಒಬ್ಬ ಸಾಹಿರ್ ಲುಧಿಯಾನವೀ, ಇಂದೀವರ್, ಜಾವೇದ್ ಅಖ್ತರ್, ಸಲೀಂ- ಜಾವೇದ್, ಗುಲ್ಜಾರ್, ಆನಂದ್ ಭಕ್ಷಿ, ಖಾದರ್ ಖಾನ್, ಶೈಲೇಂದ್ರ ಅಲ್ಲಿ ಹುಟ್ಟಲಿಲ್ಲ. 

ಪಾಕಿಸ್ತಾನ ನಿಜಕ್ಕೂ ದುರದೃಷ್ಟವಂತ ದೇಶ. ಒಬ್ಬ ಮಹಾ ನಾಯಕನೊ ಅಥವಾ ಒಬ್ಬ ದೇಶಭಕ್ತನೊ ಜನಿಸಲಿಲ್ಲ ಅಲ್ಲಿ. ಭಾರತ ದ್ವೇಷ ಒಂದೇ ತುಂಬಿ ತುಳುಕಿದರ ಪರಿಣಾಮ ಇರಬಹುದೇ? ಹೂಂ ಎನ್ನೋಣವೆಂದರೆ ಅದು ಈಗಿನ ಪರಿಸ್ಥಿತಿ. 

ತನ್ನೊಂದಿಗೆ ತನ್ನ ಒಡಲಾಗಿ ಬಂದ ಇಂದಿನ ಬಾಂಗ್ಲಾದೇಶಿಗರನ್ನು, ಅಂದಿನ ಪೂರ್ವ ಪಾಕಿಸ್ತಾನವನ್ನು ಪರಿಪರಿಯಾಗಿ ಕಾಡಿದರು. ರೋಸಿ ಹೋದ ಅವರು ಬೇರೆ ದೇಶವಾಗಿ ಹೋಗಿ ಉದ್ಧಾರವಾದರು. 

ಪಾಕಿಸ್ತಾನದ ಹುಟ್ಟೇ ಒಂದು ರೀತಿಯಲ್ಲಿ ವಿಚಿತ್ರ. ಮುಸಲ್ಮಾನರ ಹೆಸರು ಹೇಳಿಕೊಂಡು ಇಸ್ಲಾಮ್ ಅನ್ನು ಗೌರವಿಸದ ಕೆಲವು elite ವರ್ಗದ ಜನ ತಮ್ಮ ಅಸ್ಮಿತೆಗೆ ಹುಟ್ಟು ಹಾಕಿದ ದೇಶ ಅದು. ಜಿಯಾ ಉಲ್ ಹಕ್ ಎನ್ನುವ ಸೇನಾ ಮುಖ್ಯಸ್ಥ ತನ್ನ ಉಳಿವಿಗೆ, ಧರ್ಮದ ಕಟ್ಟುಪಾಡುಗಳ ಆಚರಣೆ( ಸೂಕ್ಷ್ಮವಾಗಿ ನೋಡಿ, ಧರ್ಮದ ಆಚರಣೆ ಅಲ್ಲ) ಧಾರ್ಮಿಕ ಮುಖಂಡರ ಬೆಂಬಲ, ತನ್ಮೂಲಕ ದೇಶದ ಪ್ರಜೆಗಳ ಮೇಲೆ ಹಿಡಿತ ಸಾಧಿಸಲು ಹೋದ ಪರಿಣಾಮ ಮುಗ್ಧ ಪ್ರಜೆಗಳು ಅನುಭವಿಸುತ್ತಿದ್ದಾರೆ. ವಾಸ್ತವದಲ್ಲಿ ಪಾಕಿಸ್ತಾನದ ನಾಯಕರು, ಮಿಲಿಟರಿಯವರನ್ನೂ ಸೇರಿ ದೇಶಭಕ್ತಿ ಎನ್ನುವ ಭಾವನೆಯನ್ನೇ ಹೊಂದಿಲ್ಲ. ಕಾರಣ ದೇಶ ಅವರ ಪಾಲಿಗೆ atm ಅಷ್ಟೇ, ಆತ್ಮವಲ್ಲ. ಅವರ ಆತ್ಮ ವಿದೇಶದಲ್ಲಿ ವಿಲಾಸಿ ಜೀವನ, ಅದಕ್ಕೆ ಪಾಕಿಸ್ತಾನದಲ್ಲಿ ಭ್ರಷ್ಟಾಚಾರ ನಿತ್ಯ ನೂತನ.

ಇನ್ನಾದರೂ ಭಾರತ ದ್ವೇಷ ಬಿಟ್ಟು ತಾವು ಬದುಕುವ ದಾರಿ ನೋಡುವುದು ಒಳ್ಳೆಯದು. ಹಿತ್ತಲಿನಲ್ಲಿ ಹಾವು ಸಾಕಿದ್ದ ದೇಶದಲ್ಲಿ ಈಗ ಇಲಿಯನ್ನೇ ತಿಂದು ಬದುಕಬೇಕಾದ ಪರಿಸ್ಥಿತಿ. 

ಧರ್ಮಾಧಾರಿತ ರಾಜಕಾರಣ ಬಿಟ್ಟು ಧರ್ಮಧೋರಣೆಯ ರಾಜಕಾರಣ, ಧರ್ಮ ಎನ್ನುವುದರ ತೋರುಗಾಣಿಕೆಯ ರಾಜಕಾರಣದ ಪರಿಣಾಮ.

ಕೊನೆಯದಾಗಿ ಒಂದು ಮಾತು. ನಾನಿಲ್ಲಿ ಯಾವ ಧರ್ಮವನ್ನೂ ನಿಂದಿಸಿಲ್ಲ. ನಾನದನ್ನು ಮಾಡುವುದೂ ಇಲ್ಲ. ಧರ್ಮ ಎನ್ನುವುದು ಒಳ್ಳೆಯ ಬದುಕಿಗೆ ಬೇಕಾದ ಸರ್ವಹಿತಕ್ಕೆ ಬೇಕಾದ ಸೋಪಾನವಾಗದೆ, ಸ್ವಾರ್ಥದ ಸಾಧನವಾದಾಗ ಏನಾಗುತ್ತದೆ ಎಂದು ಹೇಳಿದ್ದೇನೆ ಅಷ್ಟೇ.

ಮೊದಲನೇ ವಾಕ್ಯಪುಂಜ ಯಾರನ್ನೂ ಅಣಕಿಸುವುದಕ್ಕೋ ಅಥವಾ ನೋಯಿಸುವುದಕ್ಕೋ ಅಲ್ಲ. ಲೇಖನದ ಶುರುವಾತಿಗೆ ತೊಡಗುವಾಗ ಸ್ಫುರಿಸಿದ್ದಷ್ಟೇ.

No comments:

Post a Comment