Friday, May 24, 2019

ಸಮರಸಿಂಹಾಖ್ಯಾನ-ಪ್ರಜಾಲ್ಲೆಂದ್ರ ಪ್ರವೇಶ

ಕುಸಿದು, ಕವುಚಿ, ಮಗುಚಿ ಬಿದ್ದ ಸಮರಸಿಂಹರು ಕರಟಿ, ಸುರುಟಿ ಮುರುಟಿ ಹೋದ ತಮ್ಮ ಮೂತಿಯನ್ನು ಮತ್ತಷ್ಟು ಕಿವುಚುತ್ತಾ ಹೊರ ಜಗತ್ತಿನೆಡೆಗೆ ದೈನ್ಯದ ನೋಟವನ್ನು ಬೀರಿದರು.

ಅಲ್ಲಿ ನೋಡಿದರೆ, ನರೇಂದ್ರ ಮತ್ತು ಅಮಿತೇಂದ್ರರು ಬಿಟ್ಟ ಅಶ್ವಮೇಧದ ಕುದುರೆಯನ್ನು ಕಟ್ಟುವ ದೊಡ್ಡಪ್ಪನ ಒತ್ತಾಸೆಗೆ ಬೆಂಬಲವಾಗಿ ನಿತ್ತು ಯುದ್ಧದಲ್ಲಿ ಗಾಯವೂ ಆಗದೆ ಉಳಿದ ಪ್ರಜಾಲ್ಲೆಂದ್ರ ಕುಮಾರ ರಥ ಹತ್ತಿ ಮುಂದೆ ಸಾಗುವ ಹವಣಿಕೆಯಲ್ಲಿದ್ದ.

ಆತನ ಮುಖದಲ್ಲಿ ಗೆಲುವಿನ ನಗೆಗೂಡಿ ಕೊಂಕು ನಗೆ ಇತ್ತು. ಆಶ್ಚಮೇಧದ ಕುದುರೆ ಕಟ್ಟಿ ನಿಲ್ಲಿಸಲಾಗದಿದ್ದರೂ ಈ ನಗೆ ಹೇಗೆ ಎನ್ನುವುದು ಸಮರಸಿಂಹರಿಗೆ ತಿಳಿಯದ್ದೇನಲ್ಲ. ತನ್ನಪ್ಪ ರೇವೇಂದ್ರನ ಹಿರಿತನವನ್ನು ಹಿಂದೊತ್ತಿ ತಾನು ಪಟ್ಟವೇರಿದ ಕಂಠೀರವನ ಮಗ ಕೀಳೆಂದ್ರ ಸೋತ ಮೇಲೆ ಯುವರಾಜಾಭಿಷೇಕ ತನಗೇ ಸರಿ ಎನ್ನುವ ನಿಚ್ಚಳ ವಿಶ್ವಾಸದ ನಗೆ ಅದು.

ಇಷ್ಟಕ್ಕೆಲ್ಲಾ ಕಾರಣನಾದ ತಾತನನ್ನೊಮ್ಮೆ ನಿಕೃಷ್ಟಿಯಿಂದ ನೋಡಿ ಆತನ ಮುಖದ ಸುಕ್ಕುಗಳನ್ನೆಣಿಸಬೇಕೆಂದು ಪ್ರಜಾಲ್ಲೆಂದ್ರ ತಾತನ ಕಡೆ ತಿರುಗಿದ.

ಥಟ್ಟನೆ ತಾತನೆಡೆ ಓಡಿದ. "ರಥವೇರಿ ತಾತ. ಪೋಪುದು ನೀವೇ ನಿಶ್ಚಿತ ಎಂದ".

ಆತನ ಈ ನಿರ್ಧಾರವನ್ನು ತಾತ ಒಪ್ಪಿಬಿಟ್ಟರೆ ಎನ್ನುವ ಆತಂಕದಿಂದ ಬಂದ ತನ್ನ ತಾಯಿ ಭುವನಿ ಮತ್ತು ತಂದೆ ರೇವೇಂದ್ರ ಇಬ್ಬರನ್ನೂ ಕಣ್ಣುಸನ್ನೆಯಿಂದ ತಡೆದ. ನುಡಿದ.
"ಹಿರಿಯ ತಾತ ತಾನಿರ್ಪಾಗ ಸಿಂಹಾಸನವ ಏರಿ ಕೂರ್ವುದ ಬಿಸುಟು, ತಾತ ತಾ ಪೋಪುದ ಕಾಂಬುದೇ ಸೊಗಸು ತನಗಬ್ಬೆ. ತಾತನಿರ್ದೋಡೆಮ್ಮ ಸೈನ್ಯ ತಾ ಮುಂದಿನೊಲಿರ್ಪಲು ಸಾಧ್ಯ ನಿನಗೆಂಬೆ. ತಾತ ಪೋಗಲೇರಿ ರಥವಮ್, ಮುಂದೊಮ್ಮೆ ಅಮಿತೇಂದ್ರ ಮೈತ್ರಿ ಸಾಧ್ಯಮ್, ತಾನಂದು ತಾತನಾಶೀರ್ವಾದದಿಂ ಪಟ್ಟ ಏರ್ವೇನೀ ಮಾತು ದಿಟ" ಎಂದು ಅಮ್ಮ ಅಪ್ಪನಿಗೆ ಸಮಾಧಾನ ಮತ್ತು ಸಾಂತ್ವನ ಹೇಳಿದ, ವೀರಾವೇಶದಲ್ಲಿ. ಕುಸಿದು ಬಿದ್ದಿದ್ದ ಸಮರಸಿಂಹರು ಮೊಮ್ಮಗನ ಬಲದ ಮೇಲೆ ಎದ್ದು ಕುಳಿತರು.

ಇತ್ತ ಒಳಮನೆಯಲ್ಲಿ ತಾಯಿ ಭುವನಿಯ ಕಿವಿಯಲ್ಲಿ ಹೇಳಿದ.
"ಮಾತೆ, ತಾನು ಯುದ್ಧಕ್ಕೆ ಪೋಗಿ ಬರುವ ರಭಸದಲ್ಲಿ ರಥದ ಚಕ್ರದ ಕೀಲು ಸಡಿಲವಾಗಿರ್ಪುದು. ತಾತ ತಾನೇರಿ ಪೊದರೆ ಚಾಕಚಕ್ಯದಿಂ, ಮೈತ್ರಿ ಸಾಧ್ಯಮ್. ಅಲ್ಲದಿರೆ, ತಾತಂಗೆ ಸಗ್ಗವಪ್ಪುದು ತನಗದೆ ನಿಜ ಗೆಲುವಿಂಗೆ ಮಾರ್ಗವಪ್ಪುದು ಅಬ್ಬೆ. ನಾ ನಿನಗೆ ನಿಜವೆಂಬೆ." ಎಂದ.

ಮಗನ ಬುದ್ಧಿವಂತಿಕೆಗೆ ಭುವನಿ ಮೆಚ್ಚಿ ತಲೆದೂಗಿದಳು. " ತಾತ ಗೆದ್ದರೆ ಅಮಿತೇಂದ್ರನೊಂದಿಗೆ ಮೈತ್ರಿ ಮಾಡಿಸಿ ಪಟ್ಟ ತನ್ನ ಪುಟ್ಟಗಪ್ಪುದು ಎಂದರಿತ ಈತ ಸಮರ್ಥ ದಿಟ. ಅಲ್ಲದಿರೆ ತಾತನ ಸಾವ ಬಳಸಿ ತಾನು ಅನುಕಂಪದಲೆಯೆರ್ದು ಮುಂದಪ್ಪ ಜಾಣತನ.ಆಹಾ ನನ್ನ ಹೊಟ್ಟೆಯ ಭಾಗ್ಯವೇ" ಎಂದು ಸಂತೋಷಿಸಿದರೆ, ಇತ್ತ ರೇವೇಂದ್ರ ವರ್ಮ ಮಗನಿಗದ್ಯಾವ ಭೂತ ಪ್ರೇತ ಪಿಶಾಚಿಯ ಪೀಡೆಯೋ, ನಿಂಬೆಹಣ್ಣು ಸಾಲದಾಯ್ತು ಎನ್ನುತ್ತಾ ಚಕ್ಕೋತ ಹುಡುಕಿ ಹೊರಟ.

#ಸಮರಸಿಂಹಾಖ್ಯಾನಮು

No comments:

Post a Comment