Wednesday, May 15, 2019

ಸಾಮಗರು

ಭಗವದ್ಗೀತೆಯಲ್ಲಿ ಶ್ರೀಕೃಷ್ಣ ಪರಮಾತ್ಮ ಹೇಳುತ್ತಾನೆ.ಆತ್ಮೌಪಮ್ಯೇನ ಸರ್ವತ್ರ ಸಮಂ ಪಶ್ಯತಿ ಯೋs ರ್ಜುನ ಸುಖಂ ಯದಿ ವಾ ದುಃಖಂ ಸಃ ಯೋಗಿ ಪರಮೋ ಮತಮ್.

ಈ ವಾಕ್ಯವನ್ನಾತ ವಾಸುದೇವ ಸಾಮಗರನ್ನು ಕುರಿತಾಗಿಯೇ ಹೇಳಿದ್ದೇನೋ ಎನ್ನುವ ಅನುಮಾನ ಬರುತ್ತದೆ. ಇದಕ್ಕೆ ಕಾರಣ ವಾಸುದೇವ ಸಾಮಗರ ಪಾತ್ರ ನಿರ್ವಹಣೆಯ ಪರಿ.ಯಾವುದೇ ಪಾತ್ರವಿರಲಿ, ಅದರಲ್ಲಿ ತಲ್ಲೀನತೆ ಸಾಧಿಸಿ, ಅದರೊಡನೆ ಕೂಡಿ ಅಂದರೆ, ಯೋಗವನ್ನು ಸಾಧಿಸುತ್ತಾರೆ.
ಸಾಮಗರ ಪಾತ್ರ ನಿರ್ವಹಣೆಯ ರೀತಿಯೇ ಅವರನ್ನು ಇತರ ಪಾತ್ರಧಾರಿಗಳಿಗಿಂತ ಭಿನ್ನವಾಗಿಸುತ್ತದೆ. ಯಕ್ಷಗಾನವೂ ಅವರ ಪಾಲಿಗೊಂದು ಯೋಗವೇ ಸರಿ.

ಉದಾಹರಣೆಗೆ ಈಶ್ವರನ ಪಾತ್ರ ಮಾಡಿದಾಗ ಅವರು ಕೇವಲ ಈಶ್ವರನ ವ್ಯಕ್ತಿ ಚಿತ್ರಣ ಕೊಡುವುದಿಲ್ಲ. ಬದಲಾಗಿ ವ್ಯಕ್ತಿತ್ವದ ಅನಾವರಣ ಮಾಡುತ್ತಾರೆ. ಅವರ ಅರ್ಥಗಳನ್ನು ಕೇಳಿದರೆ, ನಮಗೆ ಇಷ್ಟು ದಿನ ಮೂಡದೆ ಇದ್ದ ಪ್ರಶ್ನೆಗಳು ಆ ಕ್ಷಣದಲ್ಲಿ ಮೂಡಿ ಉತ್ತರ ಪಡೆದುಕೊಂಡು ಕೇಳುಗರನ್ನು ಚಕಿತವಾಗಿಸುತ್ತದೆ. ಈಶನಿಗೆ ಕಡೆಯ ದಿಕ್ಕಿನ ಒಡೆತನ ಯಾಕೆ? ಕೈಲಾಸವನ್ನೇ ಆತನ ವಾಸಸ್ಥಾನವನ್ನಾಗಿ ಆರಿಸಿಕೊಂಡಿದ್ದೇಕೆ? ಕೈಲಾಸಕ್ಕೆ ರಜತಾದ್ರಿ ರಜತಪುರ ಎನ್ನುವ ಹೆಸರುಗಳೇಕೆ? ಆತ ವೃಷಭವನ್ನಡರಿದ್ದೇಕೆ ಹೀಗೆ ಅನೇಕ ಏಕೆಗಳನ್ನು ಒಟ್ಟಾಗಿ ಮೂಡಿಸಿ ಅದಕ್ಕೆ ಉತ್ತರ ಕೊಡುತ್ತಾರೆ. ಹಾಗಂತ, ಅವರು ಮನ್ಮಥನ ಪಾತ್ರ ಮಾಡಿದಾಗಲೂ ಕುಸುಮಾವತಿ ಮತ್ತು ರತಿಯ ಮೇಳಗಳ ಬಗ್ಗೆ ಈ ರೀತಿಯ ವ್ಯಾಖ್ಯಾನಗಳನ್ನು ಕೊಡುತ್ತಾರೆ.

ಅವರ ಬಗ್ಗೆ ಮಾತೊಂದಿದೆ. ವಾಸುದೇವ ಸಾಮಗರು ನಮ್ಮನ್ನೊಮ್ಮೆ ಹಿಮಾಲಯದ ತುದಿಗೆ ಕರೆದೊಯ್ದು ನಂತರ ಕೆಳಕ್ಕೆ ಕೆಡವಿ ಮತ್ತೆ ನಂತರ ತಾವು ಹಿಮಾಲಯದ ಎತ್ತರಕ್ಕೆ ಏರುತ್ತಾರೆ. ಆದರೆ ಪ್ರಪಾತದಲ್ಲಿದ್ದ ಪ್ರೇಕ್ಷಕರು ಅಲ್ಲಿಯೇ ಇರುತ್ತಾರೆ ಎಂದು. ನನಗನ್ನಿಸುವುದು ಹಾಗಲ್ಲ. ಅವರು ನಮಗೆ ಒಮ್ಮೆ ಹಿಮಾಲಯ ಸದೃಶ ಪ್ರತಿಭಾ ಚಿತ್ರಣವನ್ನು ಕೊಟ್ಟ ಬೆನ್ನಿನಲ್ಲಿ ಥಟ್ಟನೆ ನಮಗೆ ನಮ್ಮ ಸಾಮರ್ಥ್ಯದ ದರ್ಶನ ಮಾಡಿಸುತ್ತಾರೆ. ನನಗಿದು ಅರ್ಥವಾಗಿದ್ದು ಅವರ ದುರ್ವಾಸನ ಪಾತ್ರವನ್ನು ನೋಡಿದಾಗ.

ರಾಮ ನಿರ್ಯಾಣ ಪ್ರಸಂಗದ ದುರ್ವಾಸನಾಗಿ ಪ್ರವೇಶಿಸಿದ ಸಾಮಗರು ಮೊದಲು ಕೊಟ್ಟ ವ್ಯಾಖ್ಯಾನ ದುರ್ವಾಸ ಶಬ್ದದ ಬಗ್ಗೆ. ಕೆಲವರು ದುರ್ವಾಸನನ್ನು ದೂರ್ವಾಸ ಎಂದು ಕರೆಯುವುದರ ಬಗೆಗೆ ಆಕ್ಷೇಪಿಸುತ್ತಲೇ, ದುರ್ವಾಸನಿಗೆ ಆ ಹೆಸರು ಏಕೆ ಸೂಕ್ತ ಎನ್ನುವುದರ ವಿವರಣೆ ಕೊಟ್ಟರು. ದೇಹ ಎನ್ನುವ ಮಲಿನ ಪದಾರ್ಥವೇ ಬಟ್ಟೆಯಾದ್ದರಿಂದ ಆತ ದುರ್ವಾಸ ಎಂದರು. ನಂತರ ಮಾತು ಹೊರಳಿದ್ದು ಅನಸೂಯೆಯ ಕಡೆ. ಆಗ, ಅನಸೂಯೆಯ ಹೆಸರು ಅನುಸೂಯಾ ಆಗಿದ್ದು ಹೇಗೆ ಎಂದು ಕೂಡಾ ತಿಳಿಸಲು, ವ್ಯಂಗ್ಯ ಭರಿತ ಹಾಸ್ಯದಲ್ಲಿ, ಹರಿದಾಸ ಹರಿಕಥೆ ದಾಸ ಇಬ್ಬರ ನಡುವಿನ ವ್ಯತ್ಯಾಸ ತಿಳಿಸಿದರು. ಯಾವಾತ ಹರಿಯ ಭಕ್ತಿಯಲ್ಲಿ ಕೀರ್ತನೆಯಲ್ಲಿ ಕಳೆದುಹೋಗುತ್ತಾನೋ ಆತ ಹರಿದಾಸ. ಅದಲ್ಲದೆ ಕಥೆಯ ಕೊನೆಯಲ್ಲಿ ಸಿಗುವ ಕಾಸಿನ ಬಗೆಗೆ ಯೋಚಿಸುವವ ಹರಿಕಥೆ ದಾಸ.

ಮುಂದುವರೆದು ರಾಮನ ಬಗ್ಗೆ ವ್ಯಾಖ್ಯಾನ ಮಾಡುತ್ತಾ ಹೋದರು. ರಾಮರಾಜ್ಯ ಎನ್ನುವ ಶಬ್ದವನ್ನು ವ್ಯಾಖ್ಯಾನಿಸುತ್ತಾ "ನಿಮಗೆ ರಂ ಎಂದರೇನು ಗೊತ್ತೇ" ಎಂದರು. ಸಭೆ ಪೂರ್ತಿ ನಗೆ. ಆದರೆ ಇಲ್ಲಿ ಸಾಮಗರು ನಮಗೆ ನಮ್ಮ ತಿಳಿವಳಿಕೆ ಮಟ್ಟವನ್ನು ತಿಳಿಸಿದರು. ರಾಮನಂಥಾ ವ್ಯಕ್ತಿತ್ವದ ಮೂಲವಾದ ರಂ ಧಾತುವಿನ ಬಗೆಗೆ ಹೇಳಿದರೆ, ಮತ್ತೊಂದು ರಂ ಬಗ್ಗೆ ಯೋಚಿಸುವುದು ನಮ್ಮ ತಿಳುವಳಿಕೆಯ ಕೊರತೆಯೇ ಸರಿ.

ಅದೇ ರೀತಿ ತ್ರಿಶಂಕು ಚರಿತ್ರೆಯ ವಿಶ್ವಾಮಿತ್ರನಾಗಿ ದೇವೇಂದ್ರನಲ್ಲಿ ಮಾತುಕತೆ ನಡೆಸುವ ಗಂಭೀರ ವಿಶ್ವಾಮಿತ್ರನಾಗಿ, ತಪಶ್ಚರಣೆ ಮಾಡುವವ ಇರಬೇಕಾದ ರೀತಿಯನ್ನು ಅನನ್ಯವಾಗಿ ವಿವರಿಸಿದ್ದರು.

ವಿಶ್ವಾಮಿತ್ರ ಮೇನಕೆ ಪ್ರಸಂಗದ ಮೇನಕೆಯಾಗಿ, ತಂದೆ ರಾಮದಾಸ ಸಾಮಗರ ವಿಶ್ವಾಮಿತ್ರನೊಡನೆ ನಡೆಸಿದ ಮಾತುಕತೆ ನಾನು ನನ್ನ ಜನ್ಮಕ್ಕೆ ಮರೆಯುವುದಿಲ್ಲ.

ರಂಗಸ್ಥಳದ ಮೇಲೆ ಮಾತು ಹೊರಡದ ಎಷ್ಟೋ ಕಲಾವಿದರನ್ನು ಉತ್ತಮ ಮಾತುಗಾರರಾಗಿಸಿದ್ದಾರೆ  ಸಾಮಗರು.

ಸಾಮಗರು, ತೆಂಕು ಬಡಗಿನ ಸವ್ಯಸಾಚಿ ಮಾತ್ರವಲ್ಲ, ಆಟ ಕೂಟಗಳ ಸವ್ಯಸಾಚಿ ಕೂಡಾ. ಅವರು ಯಕ್ಷಗಾನದ ಹೆಜ್ಜೆಯನ್ನು ಶಾಸ್ತ್ರೀಯವಾಗಿ ಕಲಿತವರಲ್ಲವಂತೆ. ಆದರೆ ರಂಗಸ್ಥಳದ ಮೇಲೆ ಬಂದಾಗ ಕುಣಿತಕ್ಕೆಂದೂ ಮೋಸ ಮಾಡಿದ್ದಿಲ್ಲ. ಮತ್ತೆ ಆ ರೀತಿ ಕಲಿಯುವುದು ಸುಲಭ ಸಾಧ್ಯವೂ ಅಲ್ಲ.

ಅನೇಕ ವರ್ಷಗಳ  ಮೇಳದಲ್ಲಿನ ಕಲಾಸೇವೆಯ ನಂತರ ಸಾಮಗರು ಸಂಯಮಂ ಎನ್ನುವ ಹೆಸರಿನ ತಾಳಮದ್ದಳೆ ಸಂಘಟನೆಯನ್ನು ಪ್ರಾರಂಭಿಸಿ ನಡೆಸುತ್ತಿದ್ದಾರೆ. ತನ್ನ ಸಾಂಪ್ರದಾಯಿಕ ಪ್ರದೇಶಗಳಾಚೆಗೆ ಯಕ್ಷಗಾನವನ್ನು ಕೊಂಡೊಯ್ಯಲು ಅವರು ಈ ಮೂಲಕ ಪ್ರಯತ್ನಿಸಿ ಯಶಸ್ವಿಯೂ ಆಗಿದ್ದಾರೆ.

ವಾಸುದೇವ ಸಾಮಗ ಈ ಹೆಸರಿನಲ್ಲಿನ ಒಂದೊಂದು ಅಕ್ಷರವೂ ಅನ್ವರ್ಥವಾದಂತೆ ನನಗನ್ನಿಸುತ್ತದೆ. ವಸು ಎಂದರೆ ಸಂಪತ್ತು. ವಾಸುದೇವ ಸಾಮಗರಲ್ಲಿ ಜ್ಞಾನ ಸಂಪತ್ತು ಇರುವ ಪರಿಗೆ ಆ ಸಂಪತ್ತಿಗವರು ದೇವನೇ ಸರಿ. ಶ್ರೀಕೃಷ್ಣ ಹೇಳಿದ್ದಾನೆ, ವೇದಗಳಲ್ಲಿ ಆತ ಸಾಮವಂತೆ. ಸಾಮಗರು ಕೃಷ್ಣನ ಪಾತ್ರ ನಿರ್ವಹಿಸುವ ರೀತಿಯೇ ಇದನ್ನು ಸಾರುತ್ತದೆ.

ವಾಸುದೇವ ಸಾಮಗರು ಎಪ್ಪತ್ತು ವರ್ಷಗಳನ್ನು ಕಳೆದಾಯಿತಂತೆ. ಆದರೆ ಅವರ ಲವಲವಿಕೆ ಉತ್ಸಾಹ ಮತ್ತು ಸಾಧನೆಯ ಹಾದಿಯ ಪಯಣ ಅವರನ್ನು ಇನ್ನೂ ಇಪ್ಪತ್ತರ ತರುಣ ಎನ್ನುವಂತೆ ಇಟ್ಟಿದೆ.

ಭಗವಂತ ಸಾಮಗರ ಮುಖೇನ ಇನ್ನಷ್ಟು ಪಾತ್ರಗಳ ಚಿತ್ರಣವನ್ನು ಕೊಡಿಸಿ ನಮ್ಮ ಹಾಗೂ ನಮ್ಮ ಮುಂದಿನ ಪೀಳಿಗೆಯವರಿಗೆ ಪಾತ್ರ  ಪರಂಪರೆ ಹಾಗೂ ಪುರಾಣಗಳ  ಕುರಿತು ಆಸಕ್ತಿ ಮತ್ತು ಅರಿವು ಮೂಡಿಸಲಿ ಎಂದು ಹಾರೈಸೋಣ.


No comments:

Post a Comment