Friday, May 24, 2019

ಸಮರಸಿಂಹಾಖ್ಯಾನಮು

ತನ್ನ ಟೈಮ್ ಸರಿಯಿಲ್ಲ ಎನ್ನುತ್ತಲೇ ಹಾಸಿಗೆಯಿಂದ ಎದ್ದ ಸಮರಸಿಂಹರು ತಮ್ಮ HMT ವಾಚ್ ನೋಡಿ ಅವಾಕ್ಕಾದರು. ಅದರಲ್ಲಿ ಒಂದೇ ಮುಳ್ಳು ಕಾಣುತ್ತಿತ್ತು. ಛೇ!! ಎನ್ನುತ್ತಾ ಕೋಣೆಯಿಂದ ಹೊರಬಂದರೆ ಮಗ ರೇವೇಂದ್ರವರ್ಮನ ಕಣ್ಣಿನಲ್ಲಿ ಧಾರಾಕಾರ ನೀರು.

ತನ್ನ ಸೋಲಿಗೆ ಈ ಮಗ ಈ ರೀತಿ ಅಳುವುದನ್ನು ಕಂಡು ಸಮರಸಿಂಹರ ಕರುಳು ಕಿತ್ತು ಬಂತು. ಅಳುವ ಮಗನಿಗೆ ತಾನು ಹೆಗಲು ನೀಡಬೇಕೆಂದು ಬರಸೆಳೆದು ಬಿಗಿದಪ್ಪಿದರು. ಆದರೆ ಮಗನ ಹೆಗಲ ಮೇಲಿನ ಟವೆಲ್ಲಿನಿಂದ ನಿಂಬೆ ಹಣ್ಣಿನ ಪರಿಮಳ ಸೂಸುತ್ತಿತ್ತು. ಆಗ ತಿಳಿದದ್ದು, ಜ್ಯೇಷ್ಠನದ್ದು ಕಣ್ಣೀರಲ್ಲ, ಆನಂದಭಾಷ್ಪ ಎಂದು.

ನಿಂಬೆ ಹಣ್ಣಿನ ಪರಿಮಳ ಅಸಹನೀಯವಾಗಿ, ತಲೆತಿರುಗಿ ಕುಸಿದು ಬಿದ್ದರು. ಪಕ್ಕದಲ್ಲಿಯೇ ಇದ್ದ ಕಂಠೀರವನ ಕಡೆ ನೋಡಿದರೆ, ಆ ಪುತ್ರ ಲತೆಯೊಂದರ ಏಟಿನಿಂದ ಕುಸಿದು ಬಿದ್ದು ಕಿಲಕಿಲ ಎನ್ನುವ ಬದಲಾಗಿ ಕೊಸರುತ್ತಿದ್ದ ,  ತನ್ನ ಮಗ ಕೀಳೆಂದ್ರವರ್ಮನನ್ನು ಎತ್ತುವುದಕ್ಕಾಗದೆ ಅಳುತ್ತಿದ್ದ.

ಸಮರಸಿಂಹರು ದೀರ್ಘವಾಗಿ ಉಸಿರೆಳೆದರು. ಎಂದಿನಂತೆ ಬರಬೇಕಿದ್ದ ವಿಕ್ಸ್ ಘಾಟು ಬಡಿಯದ್ದು ನೋಡಿ, ಕಂಠೀರವನ ಕಡೆಯಿಂದ ಸಹಾಯ ಸಾಧ್ಯವಿಲ್ಲ ಎಂದರಿತರು.

ಎದ್ದು ನಿಲ್ಲುವುದಕ್ಕೆ ಸಹಾಯಕ್ಕಾಗಿ ಒಂದು ಕಾಲದ ಮಿತ್ರ ಅಹಿಂದವರ್ಮನ ಕಡೆ ದೈನ್ಯತೆಯ ನೋಟವನ್ನು ಬೀರಿದರು. ಆತ ತನಗೂ ಸಾಧ್ಯವಿಲ್ಲ ಎನ್ನುವಂತೆ ಕೈಯಾಡಿಸಿದ. ಕೈನಲ್ಲಿನ ಐದು ಬೆರಳುಗಳಲ್ಲಿ ನಾಲ್ಕು ಮುರಿದುದನ್ನು ಕಂಡು ಗದ್ಗದಿತರಾಗಿ  ಮತ್ತೆ ಕುಸಿದರು.

No comments:

Post a Comment