Monday, February 25, 2019

ಹದ್ದು ಮತ್ತು ಕಾಗೆ

ಮಡಿದ ಸೈನಿಕರ ದೇಹ ಛಿದ್ರ ವಿಚ್ಚಿದ್ರವಾಗಿ ಹರಡಿತ್ತು. ಅದೆಲ್ಲಿಂದಲೋ ಹಾರಿ ಬಂದ ಹದ್ದೊಂದು ಅವರ ದೇಹದ ಒಂದೊಂದೇ ತುಂಡನ್ನು ಕೊಕ್ಕಿನಿಂದ ಕುಕ್ಕಿ ಹೆಕ್ಕಿ ತಿರುಗಿಸಿ ನೋಡಿ ಮತ್ತೆ ನೆಲಕ್ಕೆಸೆಯುತ್ತಿತ್ತು.

ಇದರ ಈ ವರ್ತನೆಯನ್ನು ನೋಡಿದ ಕಾಗೆಯೊಂದು ಕೇಳಿತು.

"ಇದೇನು ನಿನ್ನ ಮಂಗಾಟ"

ಹದ್ದು ಹೇಳಿತು.

"ಇವರದ್ದು ಮರಣವಲ್ಲ.ಬಲಿದಾನ. ಮೋಕ್ಷ ಮಾರ್ಗದತ್ತ ಸಾಗುತ್ತಿರುವ ಇವರ ಕರ್ಮಕ್ಷೇತ್ರವಾದ ಈ ದೇಹವನ್ನು ತಿಂದು ಅವಮಾನಿಸಲಾರೆ. ನಾನು ತಿನ್ನುವುದೇನಿದ್ದರೂ ಅಧರ್ಮ ಮಾರ್ಗದಲ್ಲಿ ನಡೆದು ದುರ್ಮರಣ ಹೊಂದಿದವರ ಮಾಂಸ ಮಾತ್ರ. ಯಾಕೆಂದರೆ ಇಂಥಾ ವೀರಯೋಧರು ಭೂತಾಯಿಯ ಮಡಿಲನ್ನು ಸೇರಿದರೆ ಭೂತಾಯಿಗೆ ಧನ್ಯತೆ. ಅಗ್ನಿಯನ್ನು ಸೇರಿದರೆ ಆತನ ಪಾವಿತ್ರ್ಯ ಹೆಚ್ಚುತ್ತದೆ. ಅದೇ ಅಧರ್ಮಿಗಳು ಭೂಮಿಯ ಒಡಲನ್ನೋ ಅಥವಾ ಅಗ್ನಿಯನ್ನೋ ಸೇರಿದರೆ ಅದು ಮಲಿನವಾದೀತು"

ಕಾಗೆ ಹೇಳಿತು.

"ಧನ್ಯನಾದೆ ಮಿತ್ರ. ವೀರ ಯೋಧರಿಗೆ ನೀನು ನೀಡುವ ಗೌರವ ಕಂಡು ಹೃದಯ ತುಂಬಿ ಬಂತು. ವಿದ್ಯೆ ಇಲ್ಲದವರು ನಿನಗಿಂತ ಕಡೆ ಎನ್ನುವ ಮಾತೊಂದು ಮನುಷ್ಯರಲ್ಲಿ ಇದೆಯಂತೆ. ಆದರೆ, ವಿದ್ಯೆ ಇದ್ದೂ ಇವರ ಛಿದ್ರ ದೇಹದಲ್ಲಿ ಜಾತಿ ಜನಿವಾರ ಹುಡುಕುತ್ತಿರುವವರು ಅತಿ ಹೀನರು."

No comments:

Post a Comment