Tuesday, February 19, 2019

ದೇಹದ ಭಯೋತ್ಪಾದನೆ

ನಮ್ಮ ಶುಕ್ರ ಮೊನ್ನೆ ಅದೆಲ್ಲೋ ಕೆಲಸಕ್ಕೆ ಹೋದಾಗ ಬಿಟ್ಟಿ ಸಿಕ್ಕಿದೆ ಅಂತ ಕರುಮಾರಲ ಕಾಯಿಯನ್ನು ಸೂಜು ಮೆಣಸಿನ ಜತೆ ಯದ್ವಾ ತದ್ವಾ ತಿಂದ. ಪರಿಣಾಮ ಬ್ಯಾಕ್ ಗೇಟ್ ಓಪನ್. ಅದ್ಯಾವ ಪರಿ ಎಂದರೆ ಶುಕ್ರನಿಗೆ ತನ್ನ ಮೂತ್ರ ನಾಳವೇ ತಿರುಗಿ ಹೋಗಿದೆಯೋ ಎನ್ನುವಷ್ಟು ಅನುಮಾನ ಬಂತು. ಪದೇ ಪದೇ ಬೇಧಿ ಮಾಡಿ ಬಾಧೆಗೊಂಡ ಶುಕ್ರ ನಿತ್ರಾಣನಾದ. ಅದ್ಯಾರೋ ಡಾಕ್ಟರನ್ನು ಕರೆದರು.

ಬಂದ ಡಾಕ್ಟರು, ಶುಕ್ರನಿಗೆ ತಾಕತ್ತಿಗೆ ಎಂದು ಒಂದು ಗ್ಲುಕೋಸ್ ಇಂಜೆಕ್ಷನ್ ಕೊಟ್ಟರು. ಸ್ವಲ್ಪ ಔಷಧಿ ಕೂಡಾ ಕೊಟ್ಟರು. ಮಾತ್ರೆಗಳನ್ನೂ ಕೊಟ್ಟರು. ಯಾವುದಕ್ಕೂ ಇರಲಿ ಎಂದು ಡ್ರಿಪ್ ಕೂಡಾ ಹಾಕಿದರು.

ಇದನ್ನೆಲ್ಲಾ ಪಕ್ಕದಲ್ಲಿ ನೋಡುತ್ತಾ ನಿಂತಿದ್ದ ಗೋಪಾಲನಿಗೆ ಒಂದು ಅದ್ಭುತ ಕುತೂಹಲ ಕೆಣಕಿತು. ಬಾಯಿ ತುರಿಸತೊಡಗಿತು.   ಡಾಕ್ಟರನ್ನು ಕೇಳಿಯೇ ಬಿಟ್ಟ.

"ಹ್ವಾಯ್ ಇದೆಂಥ ಮಾರ್ರೆ. ಬೇಧಿ ಮುಕಳಿ ಇಂದ ಹ್ವಾತಾ ಇತ್ತ್. ಹೊಟ್ಟಿ ಕೆಟ್ಟಿತ್. ಆರೆ ನೀವ್ ಕಂಡ್ರೆ ಬಾಯಿಗೆ ಮಾತ್ರಿ ಔಸ್ಡಿ ಹಾಕತ್ರಿ. ಕೈಗೆ ಇಂಜೆಕ್ಷನ್ ಕೊಟ್ ಈಗ ಅದೆಂತೋ ಹನಿ ಹನಿ ಹಾಕೋ ಬಾಟ್ಲಿ ಏರಸೀರಿ. ಹೊಟ್ಟಿ ಕೆಟ್ ಮುಕಳಿಯಂಗೆ ಹ್ವಾಪ ಭೇದಿಗೆ ಕೈಗೆ ಬಾಯಿಗೆ ಔಷಧಿ ಕೊಟ್ರೆ ತಾಂಗೂದ್ ಹೆಂಗೆ ಮಾರ್ರೆ?"

ತಲೆಬಿಸಿ ಮಾಡಿಕೊಳ್ಳದ ಡಾಕ್ಟರ್ ನಕ್ಕು ಹೊರಟರು. ಜೊತೆಯಲ್ಲಿದ್ದ ಮೇಲ್ ನರ್ಸ್, ಹೊರಬಂದಮೇಲೆ ಕೇಳಿದ. "ಡಾಕ್ಟರೇ, ನೀವು ಯಾಕೆ ಅವನ ಪ್ರಶ್ನೆಗೆ ಉತ್ತರ ಕೊಡಲಿಲ್ಲ?"

ಡಾಕ್ಟರ್ ನಗುತ್ತಾ ಹೇಳಿದರು. "ಅವನಿಗೆ ಗೊತ್ತಿಲ್ಲ. ವಾತಾವರಣ ಕೆಟ್ಟ ಆಹಾರವಿದ್ದಂತೆ. ಬೇಧಿ ಭಯೋತ್ಪಾದನೆಯಂತೆ. ಹೊಟ್ಟೆ ಪಾಕಿಸ್ತಾನದಂತೆ. ಇದೆಲ್ಲಾ ಗೊತ್ತಿದ್ದೂ ಶಾಂತಿ ಎನ್ನುವ ಭ್ರಮೆಯಲ್ಲಿ ದೊಡ್ಡ ದೊಡ್ಡ ಮನುಷ್ಯರೇ ಇದ್ದಾರೆ. ಈತ ನಿರಕ್ಷರಿ. ಏನೋ ಒಂದಿರಲಿ ಎಂದು ಒಂದು ಮಾತಾಡಿದ.ಆತನಿಗೆ ಕಾಲರಾ ಬಗ್ಗೆ ತಿಳಿಸುವುದು ಕಷ್ಟ. ಅದಕ್ಕೆಲ್ಲಾ ಬೆಲೆ ಕೊಟ್ಟರೆ ನಮ್ಮ ಸಮಯ ಹಾಳು."

ಮೇಲ್ ನರ್ಸ್ ಕೂಡಾ ಗೋಣಾಡಿಸಿದ.

No comments:

Post a Comment