Friday, April 24, 2026

ರಿವರ್ ಟರ್ನ್

 






























ಪಟಗುಪ್ಪೆ- ಈ ಹೆಸರು ಈಗೀಗ ಬಹಲೆ ಫ಼ೆಮಸ್ ಆಗಿದೆ. ಇನ್ನೊನ್ದು ಸ್ವಲ್ಪ ದಿನದಲ್ಲಿ ಜನರಿಗೆ ಮರೆತೂ ಹೊಗುತ್ತದೆ. ಆದರೆ ಇದು ಐತಿಹಾಸಿಕವಾಗಿ ಬಹಳ ಮಹತ್ವದ ಸ್ಥಳ. ನಮ್ಮ ಪ್ರಾಂತ್ಯವನ್ನಾಳಿದ ಇಕ್ಕೇರಿಯ ಅರಸರು ತಮ್ಮ ರಾಜಧಾನಿಯನ್ನು ಬಿದನೂರಿಗೆ ಅಂದರೆ ಇಂದಿನ ನಗರಕ್ಕೆ ಸ್ಥಳಾಂತರಿಸಿದ ನಂತರ ಇಲ್ಲಿ ಶರಾವತಿಗೆ ಸೆತುವೆ ಕಟ್ಟಿದ್ದರು. ಕಾಲಾಂತರದಲ್ಲಿ ಕಟ್ಟಿದ ಹಿರೆಭಾಸ್ಕರ ಮತ್ತು ಲಿಂಗನಮಕ್ಕಿ ಅಣೆಕ್ಟ್ಟುಗಳಿಂದ ಈ ಸೇತುವೆ ಮುಳುಗಿ ಹೋಗಿತ್ತು. ಪರಿಣಾಮ, ಸಾಗರ ಪ್ರಾಂತ್ಯದಿಂದ ಹೊಸನಗರಕ್ಕೆ ಪರ್ಯಾಯ ರಸ್ತೆ, ಜನ ಪಟಗುಪ್ಪೆಯ ಕಡೆಯಿಂದ ಓಡಾಡುವುದನ್ನು ಬಿಟ್ಟೆಬಿಟ್ಟರು. ಇತ್ತೀಚೆಗೆ ಇದಕ್ಕೊಂದು ಸೇತುವೆ ನಿರ್ಮಾಣವಾಯಿತು. ಆದರೆ ಈಗ ಸಿಗಂಧೂರು ಸೇತುವೆ ಎನ್ನುವ ಅದ್ಭುತದ ಮುಂದೆ ಈ ಸೇತುವೆ ತನ್ನ ಪ್ರಾಮುಖ್ಯತೆ ಕಳೆದುಕೊಂಡಿದೆ. ಇದು ಸಹಜವೂ ಹೌದು ಸಾಧುವೂ ಹೌದು.

ಊರಿಗೆ ಬಂದ ಮೇಲೆ ಬದಿಗಿಟ್ಟಿದ್ದ ಕ್ಯಾಮರಾ ಹೊತ್ತು ಮೊನ್ನೆ ಈ ಸೇತುವೆ ಕಡೆ ಸಾಗಿದೆ. ಹಕ್ಕಿಗಳೆನೋ ಕಂಡವು. ಕೆಲವು ಫೊಟೋ ಕೂಡಾ ತೆಗೆದೆ. ಇವು ರಿವರ್ ಟರ್ನ್ ಎನ್ನುವ ಹಕ್ಕಿಗಳು. ಇವುಗಳ ಬಗ್ಗೆ ಇನ್ನೂ ಕುತೂಹಲಕ್ಕೆ ಇಂಟರ್ನೆಟ್ಟಿನಲ್ಲಿ ಹುಡುಕಾಡಿದೆ. ಆಗ ಈ ಜಾತಿಯ ಹಕ್ಕಿಗಳ ಬಗ್ಗೆ ಕೆಲವು ವಿಶೇಷ ಸಂಗತಿಗಳು ತಿಳಿದುಬಂದವು. ಈ ಹಕ್ಕಿಗಳ ಏಕೈಕ ಆಹಾರ ಮೀನು. ಶುದ್ಧ ನೀರಿನಲ್ಲೆ ಇವುಗಳ ವಾಸವಂತೆ. ನಮ್ಮೂರಿನಲ್ಲಿ ಹರಿಯುವ ನೀರು ಶುದ್ಧ ಅಂತಾಯ್ತು ಬಿಡಿ!!. ಬರ್ಮಾ ಕಡೆಯಿಂದ ಇವುಗಳು ವಲಸೆ ಬರುತ್ತವಂತೆ. ಭದ್ರಾ ನದೀ ಮಧ್ಯದ ನಡುಗಡ್ಡೆಗಳಲ್ಲಿ ಇವುಗಳ ಸಂತಾನಾಭಿವೃದ್ಧಿ ಚಟುವಟಿಕೆ ಬಗ್ಗೆ ಈ ವರ್ಷ ಓದಿದ್ದೆ. ಹಿಂದೊಮ್ಮೆ ಇವುಗಳನ್ನು ಶರಾವತಿ ಭಾಗದಲ್ಲಿ ನಾನು ನೋಡಿದ್ದೆ ಕೂಡಾ. ಆದರೆ ಯಾಕೊ ನಮ್ಮವರು ಅಷ್ಟಾಗಿ ತಲೆಕೆಡಿಸಿಕೊಂಡಿಲ್ಲ ಅನಿಸುತ್ತದೆ.


ರಿವರ್ ಟರ್ನ್ ಇದೊಂದು ಹಕ್ಕಿಯ ಹೆಸರು. ಟರ್ನ್ ಹೆಸರಿನ ಒಂದು ನದಿ ಕೂಡಾ ಇದೆಯಂತೆ ಯುನೈಟೆಡ್ ಕಿಂಗ್ ಡಮ್ ದೇಶದಲ್ಲಿ. ಆದರೆ ನದಿಯೊಂದು ತಾನು ತಿರುಗುತ್ತಾ ತಿರುವುಗಳನ್ನು ಪಡೆಯುತ್ತಾ ಮಡುವಾಗಿ, ಜಲಪಾತವಾಗಿ ಸಾಗುವುದು ಅದರ ಧರ್ಮ. ಆದರೆ ನಮ್ಮ ಶರಾವತಿಯದ್ದು ಹಾಗಲ್ಲ. ತಾನೇ ಯೋಜನೆಗಳ ಸುಳಿಗೆ ಸಿಕ್ಕಿ ತನ್ನ ಮಕ್ಕಳು ಮಾಡಿದ ತ್ಯಾಗದಿಂದ ಸಂತಸ ಪಡುತ್ತಾ, ತನ್ನ ಸುತ್ತಮುತ್ತಲಿನ ಸಾಮಾಜಿಕ-ಸಾಂಸ್ಕೃತಿಕ ತಿರುವುಗಳಿಗೆ ತಾನೂ ಸಾಕ್ಷಿಯಾಗುತ್ತಾ ನಮ್ಮೆಲ್ಲರ ಮನೆ ಬೆಳಗಿದ ತ್ಯಾಗಮಯಿ ಆಕೆ, ಆಕೆಯ ಒಡಲಿನಲ್ಲಿ ತನ್ನ ಮರಿಗಳು ಹುಟ್ಟಲಿ ಎನ್ನುವ ಬಯಕೆ ಈ ರಿವರ್ ಟರ್ನ್ ಜಾತಿಯ ಹಕ್ಕಿಗಳಿಗೆ ಬಂದಿದ್ದಾದರೂ ಏಕಿರಬಹುದು? ದೀಪದ ಬತ್ತಿಯಂತೆ ತಾನುರಿದು ಎಲ್ಲರಿಗೂ ಬೆಳಕು ಕೊಡುವ ಶ್ರೀರಾಮಚಂದ್ರನ ಬಾಣದಿಂದ ಜನಿಸಿದ ಶರಾವತಿ ನಿಜಕ್ಕೂ ಮಾತಾಮಯಿ ಅಂತಲೊ ಅಥವಾ ಅವಳ ಮಕ್ಕಳಾದ ಚೆನ್ನ ಭೈರಾದೇವಿ ಮತ್ತು ದೊಡ್ದ ಸಂಕಣ್ಣ ನಾಯಕರಂತೆ ಧೀರೋದಾತ್ತರಾಗಿರಲಿ ಅಂತಲೋ ಅಥವಾ ಹೊಸ ತಿರುವುಗಳನ್ನು ಹೊಸ ಸವಾಲುಗಳನ್ನು ಎದುರಿಸುತ್ತಾ ಅವುಗಳೊಂದಿಗೇ ಬದುಕುತ್ತಾ ಸಾಗಿ ಬದುಕನ್ನು ಸುಂದರ ಮಾಡಿಕೊಳ್ಳುತ್ತಿರುವ ಆಕೆಯ ಮಕ್ಕಳೇ ಆದರ್ಶವಾದರಾ? ಶರಾವತಿಯೇ ಹೇಳಬೇಕು.

ಈ ಹಕ್ಕಿಗಳು ನೀರ ಬೇಟೆಯಲ್ಲಿ ನಿಷ್ಣಾತ ಹಕ್ಕಿಗಳು. ಸದಾ ಚಟುವಟಿಕೆಯಲ್ಲಿಯೇ ಇರುತ್ತವೆ. ಫೋಟೊ ತೆಗೆದು ಅದನ್ನು ಆರಿಸುವ ಹೊತ್ತಿಗೆ ಹೈರಾಣಾಗುವ ಚುರುಕು ಇವುಗಳದ್ದು. ನಿಜಕ್ಕೂ ಅದ್ಭುತ. ಸಾಗರೀಕರು ಮತ್ತು ಶರಾವತಿ ಭಾಗದ ಜನರು ಹೆಮ್ಮೆ ಪಡಲು ಈಗಾಗಲೆ ಬಹಳಷ್ಟಿವೆ, ಅವುಗಳಿಗೆ ಗರಿಗಳಂತೆ ಈ ಹಕ್ಕಿಗಳು ಎಂದರೆ ಖಂಡಿತಕ್ಕೂ ಅತಿಶಯೋಕ್ತಿಯಲ್ಲ.

ಹಳದಿ ಬಣ್ಣದ ಕೊಕ್ಕು, ತಲೆಯ ಮೇಲೊಂದು ಕಪ್ಪು ಪಟ್ಟಿ, (ಬಹುಷಃ ನೀರಿಗೆ ಪ್ಲಾಸ್ಟಿಕ್ ಬಾಟಲಿ, ಬೀರ್ ಬಾಟಲಿ ಎಂಬಿತ್ಯಾದಿ ವಸ್ತುಗಳನ್ನು ಎಸೆಯುವವರ ವಿರುದ್ಧ ಧರಿಸಿದ ಕಪ್ಪು ಪಟ್ಟಿ ಇರಬಹುದು). ಇವು ವಲಸಿಗ ಹಕ್ಕಿಗಳು ಅನ್ನುವ ಇಂಟರ್ನೆಟ್, ಇವು ಸಮುದ್ರ ಲಂಘಿಸಲು ಹಿಂಜರಿಯುತ್ತವೆ ಎನ್ನುತ್ತದೆ. ಕೇರಳ ಮತ್ತು ತಮಿಳ್ನಾಡಿನಲ್ಲಿ ಬಹಳ ಇದ್ದರೂ ಶ್ರೀಲಂಕಾದಲ್ಲಿ ಕಾಣಸಿಗುವುದಿಲ್ಲವಂತೆ ಈ ಹಕ್ಕಿ. ಚೀನಾ, ಮಯನ್ಮಾರ್ ಮತ್ತು ಕಾಂಬೋಡಿಯಾ ದೇಶಗಳಲ್ಲಿ ಇವು ಅಪಾಯಕ್ಕೆ ಸಿಲುಕಿವೆಯಂತೆ.

ನದೀ ತಟದ ಮರಳಿನ ದಂಡೆ ಅಥವಾ ಬಂಡೆಗಳಲ್ಲಿ ಗೂಡು ಕಟ್ಟಿ ಮಾರ್ಚ್ ಮತ್ತು ಮೇ ನಡುವೆ ಮೊಟ್ಟೆಯಿಟ್ಟು ಸಂತಾನಾಭಿವೃದ್ಧಿ ಮಾಡುತ್ತವೆಯಂತೆ. ಪಟಗುಪ್ಪೆ-ಹೊಳೆಬಾಗಿಲು-ಹಸಿರುಮಕ್ಕಿಗಳಲ್ಲಿ ಇವುಗಳನ್ನು ನೊಡಬಹುದು. ನೋಡಲಿಕ್ಕೆ ಹೋದವರು ದಯವಿಟ್ಟು ಅಲ್ಲಿ ಬೀರ್ ಬಾಟಲಿ ನೀರಿನ ಬಾಟಲಿ ಪ್ಲಾಸ್ಟಿಕ್ ಲೋಟ, ಚಿಪ್ಸ್ ಪ್ಯಾಕೆಟ್ ಎಸೆದು ನಮ್ಮೂರನ್ನು ಹಾಳು ಮಾಡಬೇಡಿ ಎಂದು ನಿಮ್ಮಲ್ಲಿ ಕಳಕಳಿಯ ವಿನಂತಿ.

Thursday, October 9, 2025

ಶರಾವತಿಯ ಸ್ವಗತ

ನಾನು ಶರಾವತಿ.
ನನ್ನ ಬಗ್ಗೆ ನಾನೇ ಹೇಳಿಕೊಳ್ಳಬೇಕಾದ ದುಸ್ಥಿತಿ ನನಗೆ. ನನ್ನ ಹುಟ್ಟೇ ಒಂದು ರೀತಿಯ ದುಃಖಕರ ಘಟನೆಯ ಆರಂಭದಲ್ಲಿ, ಮೋಸ ವಂಚನೆಯ ಜಾಡಿನಲ್ಲಿ.

ರಾವಣನ ಮಾತು ಕೇಳಿ ರಾಮ ಸೀತೆಯರನ್ನು ಛಲಿಸಲಿಕ್ಕೆ ಮುಂದಾದ ಮಾರೀಚ, ಸಣ್ಣ ಸಣ್ಣ ಕಾಲಿಬೆರಳು ಹೊಂದಿದ ಹೊಮ್ಮಿಗವಾಗಿ ರಾಮ ಸೀತೆಯರ ಕುಟೀರದ ಎದುರು ಧಿಕ್ಕಿಟ ಧಿನ್ನಾಂಗ ತ್ತೊಂ ಎಂದು ಕುಣಿಯುತ್ತಾ ಸೀತೆಗೆ ಮಾಯೆ ಕವಿಸಿದ. ಎಂಥಾ ಮಾಯೆ ಅದು? ಸ್ವಯಂ ಶ್ರೀರಾಮಚಂದ್ರನೇ ಸೀತೆಯನ್ನು ಇದು ಮಾಯೆ ಎಂದು ಒಪ್ಪಿಸುವುದಕ್ಕೆ ವಿಫಲನಾದ. ಮಾರೀಚನನ್ನು ಬೆನ್ನಟ್ಟಿದ. ಶ್ರೀರಾಮಚಂದ್ರನ ಅಂಬಿನಿಂದ ತೀರ್ಥವಾಗಿ ಆ ತೀರ್ಥವೇ ಅಂಬುತೀರ್ಥವಾಯಿತು. ಅಲ್ಲಿಯೇ ನಾನು ಹುಟ್ಟಿದ್ದು. ಬಾಣದಿಂದ ಹುಟ್ಟಿದ್ದಕ್ಕೆ ನಾನು ಶರಾವತಿಯಾದೆ. 
ಅಷ್ಟೇ ಅಲ್ಲ, ಬ್ರಹ್ಮ ಶಾಪಕ್ಕೆ ತುತ್ತಾಗಿ  ವಿಧುಮ ಎನ್ನುವ ವಸು, ಮತ್ತು ಅಲಂಭುಷಾ ಎನ್ನುವ ಅಪ್ಸರೆ ಮನುಷ್ಯರಾಗಿ ಸಹಸ್ರಾನೀಕ ಮತ್ತು ಮೃಗಾವತಿ ಎನ್ನುವ ಹೆಸರಿನಿಂದ ಜನಿಸಿ ಪಡಬಾರದ ಪಡಿಪಾಟಲು ಪಟ್ಟು ತಮ್ಮ ಶಾಪದಿಂದ ಮುಕ್ತರಾಗುವುದಕ್ಕೆ ನನ್ನ ಒಡಲಿನಲ್ಲಿ ಮೀಯಬೇಕಾಯಿತು. ಇದೆಲ್ಲ ನನ್ನ ಹೆಗ್ಗಳಿಕೆ.ನಾನು ಮಲೆನಾಡಿನ ಜೀವನದಿ, ನಾನು ಮಲೆನಾಡಿನ ಜೀವನಾಡಿ ಎನ್ನುವ ಹೆಮ್ಮೆ ನನಗಿತ್ತು. ನನ್ನ ತೀರದಲ್ಲೇ ಯತಿಪರಂಪರೆಯಲ್ಲಿ ಬಂದವರು ನನ್ನೊಡೆಯ ಶ್ರೀರಾಮಚಂದ್ರನನ್ನು ದಿನವೂ ಅರ್ಚಿಸುವುದನ್ನು ನೋಡುವ ಭಾಗ್ಯ ನನ್ನದು. ರಾಮಚಂದ್ರಾಪುರ ಎಂದೇ ಅಲ್ಲವೇ ಆ ಊರಿನ ಖ್ಯಾತಿ ವಿಖ್ಯಾತಿ? ನನ್ನೊಡಲ ನೀರು ನನ್ನೊಡೆಯನಿಗೆ ಅಭಿಷೇಚವಾಗುತ್ತಿರುವುದನ್ನು ಕಂಡು ಹಿಗ್ಗಿದವಳು ಉಬ್ಬಿದವಳು ನಾನು. 

ಕಾಳು ಮೆಣಸಿನ ರಾಣಿ ಎಂದೇ ಪ್ರಸಿದ್ಧಳಾದ ಚೆನ್ನಭೈರಾದೇವಿ ನನ್ನೊಡಲ ಕೂಸು. ಅವಳಿಂದ ನಗಿರೆಯನ್ನು ಕಿತ್ತುಕೊಳ್ಳುವಾಗ ನಡೆದ ಯುದ್ಧ, ನಂತರದಲ್ಲಿ ರಣದುಲ್ಲಾ ಖಾನ್ ಎನ್ನುವ ಪರಮ ಪಾತಕಿ ವೀರ ದೊಡ್ಡ ಸಂಕಣ್ಣ ನಾಯಕ ಕಟ್ಟಿದ ಸಾಮ್ರಾಜ್ಯ ಸೂರೆ ಮಾಡುವಾಗ, ಹೈದರ್ ಅಲಿ ಮತ್ತು ಟಿಪ್ಪು ಎನ್ನುವ ಕ್ರೂರ ಸಾಮ್ರಾಜ್ಯದಾಹಿಗಳ ಹಪಹಪಿಗೆ ನಡೆದ ಯುದ್ಧದಲ್ಲಿ ನನ್ನೆಷ್ಟು ಮಕ್ಕಳನ್ನು ಕಳಕೊಂಡೆನೋ ಏನೋ? ನನ್ನ ಮಕ್ಕಳಾದ ಮಲೆನಾಡಿನ ಜನ ಇಂದಲ್ಲ ನಾಳೆ ಒಳ್ಳೆಯ ಬದುಕು ಕಂಡಾರು ಎನ್ನುವ ಆಸೆಯಲ್ಲಿ  ಒಳ್ಳೆಯ ಕಾಲದ ನಿರೀಕ್ಷೆಯಲ್ಲಿ ನಾನು ಹರಿಯುತ್ತಾ ಮುಂದೆ ಮುಂದೆ ಸಾಗುತ್ತಲೇ ಇದ್ದೆ, ಕಾಲದ ಹರಿವಿನಂತೆಯೇ. ವ್ಯತ್ಯಾಸವೆಂದರೆ ಕಾಲನ ಹರಿವಿಗೆ ನಿರೀಕ್ಷೆಯಿಲ್ಲ, ನನ್ನ ಹರಿವಿನಲ್ಲಿ ನಿರೀಕ್ಷೆಯೂ ಇತ್ತು, ನಿಟ್ಟುಸಿರೂ ಇತ್ತು.

ಕಾಲ ಸಾಗಿತು. ಬದಲಾವಣೆಯ ಸಮಯ ಒದಗಿ ಬಂದಿತ್ತು. ಅಷ್ಟೂ ದಿನ ಕಣ್ಣು ಮನಸ್ಸು ತಣಿಸಿದ್ದೆ ನಾನು ಜಾಗದಲ್ಲಿ ಧಾರೆಯಾಗಿ ಬಿದ್ದು. ಸಮುದ್ರ ಸೇರುವ ಮುನ್ನ ಎಲ್ಲೆಲ್ಲೂ ಚಂಡೆ ಮದ್ದಳೆಯ ರಿಂಗಣ, ರಂಗಸ್ಥಳದಲ್ಲಿ ಯಕ್ಷರ ಧೀಂಗಣ. ಇಷ್ಟೆಲ್ಲಾ ಶ್ರೀಮಂತ ಸಂಸ್ಕೃತಿಯಿದ್ದ ನನಗೆ ಎಲ್ಲೋ ಒಂದು ಕಡೆ ಮದಗರ್ವ ಬಂತೆ? ಜೋಗದಲ್ಲಿ ನನ್ನನ್ನು ನೋಡಿದ ಸರ್ ಎಂ. ವಿ. ವಿದ್ಯುತ್ ಉತ್ಪಾದನೆಗೆ ಮುಂದಾದರು. ಮಲೆನಾಡ ಮೂಲೆಗೆ ರೈಲು ಬಂತು. ಹಿರೇಭಾಸ್ಕರದಲ್ಲಿ ನನ್ನನ್ನು ತಡೆ ಹಿಡಿದರು. ನನ್ನೊಡಲಿನಲ್ಲಿ ಆಡಿದ, ನನ್ನದೇ ದಡವೆಂಬ ತೊಡೆಯಲ್ಲಿ ಬೆಳೆದ ನನ್ನ ಮಕ್ಕಳು ತಮ್ಮ ಆಸ್ತಿ ಪಾಸ್ತಿ ಕಳೆದುಕೊಂಡು ನನ್ನಿಂದ ಮತ್ತೆ ಅವರಲ್ಲೇ ಪರಸ್ಪರ ದೂರಾಗಿ ಸಾಗಿದರು.
ಹೆಮ್ಮೆ ಪಟ್ಟಿದ್ದೆ ನಾನು. ಲೋಕದ ಮನೆ ತುಂಬಿಸುವ ಬೆಳಕು ನೀಡಲು ಎಲ್ಲಾ ಕೊಟ್ಟ ಇಷ್ಟು ಶ್ರೇಷ್ಠ ಮಕ್ಕಳನ್ನು ಹೊಂದಿದ ಉತ್ಕೃಷ್ಟ ನಾಗರೀಕತೆ ನನ್ನದ್ದು ಎಂದು ಹಿಗ್ಗಿದ್ದೆ, ಉಬ್ಬಿದ್ದೆ.
ಮತ್ತೆ ನನ್ನನ್ನು ಇನ್ನಷ್ಟು ಭರಿಸಲು ಲಿಂಗನಮಕ್ಕಿಯಲ್ಲಿ ಒಡ್ಡು ಕಟ್ಟಿದರು.ಒಡಲ ನೀರೆಲ್ಲ ವಿದ್ಯುತ್ತಿಗೆ ಬಳಕೆಯಾಯಿತು. ಆದರೆ ಕರೂರು ಸೀಮೆ ಎನ್ನುವ ಮಾನವ ನಿರ್ಮಿತ ದ್ವೀಪ ಉಂಟಾಯಿತು. ಹನ್ನಾರ ಸೀಮೆ ಭಾಗಶ: ಕರೂರು ಸೀಮೆ ಬಹಳ ಭಾಗ ದ್ವೀಪವಾಗಿಹೋಯ್ತು. ಹೀಗಾಯಿತಲ್ಲಾ ಎನ್ನುವ ದುಃಖ ಪಡಲೊ ಅಥವಾ ಮಾನವ ನಿರ್ಮಿತ ದ್ವೀಪ ಹೊಂದಿದ ನದಿ ನಾನು ಎಂದು ಹೆಮ್ಮೆ ಪಡಲೊ? ಈ ದ್ವಂದ್ವದಲ್ಲೇ ಬಹುಕಾಲ ಕಳೆದವಳು ನಾನು.
ಬಹುಶಃ ವಿಧಿಗೆ ಇಷ್ಟೇ ಸಾಕಾಗಲಿಲ್ಲ. ಚಕ್ರಾ ಅಣೆಕಟ್ಟು ಕಟ್ಟಿದರು. ನನ್ನ ಮಕ್ಕಳು ಮುಳುಗಡೆಯಾಗಿ ಕಣ್ಣೀರಿಡುತ್ತಾ ಬೇರೆ ಕಡೆ ಬದುಕು ಹುಡುಕಿ ಸಾಗಿದರು. ಅವರ ಬಿಸಿಯುಸಿರ ಜೊತೆ ನನ್ನ ನಿಟ್ಟುಸಿರು. ಪರಿಹಾರವಾಗಿ ಬಂದ ಭೂಮಿಯೋ, ಹಣವೋ ಹೊಡೆದು ತಿನ್ನುವುದಕ್ಕೆ ಹೆಣ ಬಿದ್ದಾಗ ನಾಯಿ ನರಿ ಹದ್ದುಗಳು ಮುತ್ತುವಂತೆ ಮುತ್ತಿ ಊರ ದೊಡ್ಡ ಮನುಷ್ಯರೇ ಆ ನನ್ನ ಮಕ್ಕಳ ಬೆನ್ನಿಗಿರಿದರು.
ನಾನು ಅಸಹಾಯಕಿಯಾದೆ. ನನ್ನ ಮಡಿಲಲ್ಲಿ ಮುಳುಗಿ ಹೋದ ದುರ್ಗಿಯೂ ಬಹುಶಃ ದುಃಖಿಸುವುದರಲ್ಲೇ ತನ್ನ ರೌದ್ರ ಶಕ್ತಿಯನ್ನು ಕಳೆದುಕೊಂಡಳು.
ಪಾಲಿಗೆ ಬಂದಿದ್ದು ಪಂಚಾಮೃತ ಎಂದು ಬದುಕುತ್ತಿದ್ದೆ. ನನ್ನ ಮಕ್ಕಳೂ ಕೂಡಾ. ಆದರೆ, ಕರೂರು ಸೀಮೆಯವರ ಪಾಡು ಪಾಪ,  ಯಾರಿಗೂ ಬೇಡ. ಊರಿಗೆಲ್ಲಾ ಬೆಳಕು ಕೊಟ್ಟು ಗಾಢ ಕತ್ತಲೊಳಗೆ ಕುಳಿತಿದ್ದರು. ಏನೋ ಒಟ್ಟಿನಲ್ಲಿ ಈಗ ಸೇತುವೆಯೊಂದು ಕಟ್ಟಿದ್ದಾರೆ ನನ್ನೊಡಲ ಮೇಲೆ. ಅದೊಂದು ಸಮಾಧಾನ. ಅಕೇಶಿಯಾ ನೆಡುತೋಪುಗಳ ಕಾರಣದಿಂದ ನನ್ನ ಹರಿವಿನಲ್ಲಿ ಸಿಕ್ಕ ಕೆಸರಿನ ಲೆಕ್ಕವನ್ನೂ ಮರೆತಿದ್ದೆ. ಸಹಜವಲ್ಲವೇ? ಬಹುಕಾಲ ಉಪವಾಸವಿದ್ದ ಯಾರಿಗೇ ಆದರೂ ಒಂದು ತುತ್ತು ಅನ್ನ ಕಂಡಾಗ ಆನಂದವಾಗುದಿಲ್ಲವೇ? ನನಗೂ ಆಯ್ತು.

ಆದರೆ, ಈಗ ಹರಿಯುವ ನನ್ನ ಒಡಲಿಗೆ ಪಂಪು ಹಚ್ಚಿ ಮತ್ತೊಂದು ಒಡ್ಡುಕಟ್ಟಿ ಮತ್ತೆ ಕರೆಂಟು ತೆಗೆಯುತ್ತಾರಂತೆ. ಬೇಕಿತ್ತೆ ಇದು? ಸರಸ್ವತೀ ನದಿಯಂತೆ ನಾನೂ ಬತ್ತಿ ಬರಡಾಗಿ ಹೋಗಬಾರದಿತ್ತೆ ಎನ್ನಿಸುತ್ತಿದೆ. ಸಧೃಢನೊಬ್ಬನನ್ನು ಅಮಲಿನ ಪದಾರ್ಥ ಕೊಟ್ಟು ನಿಶ್ಚಲನಾಗಿಸಿದಂತೆ ನದಿಯಾದ ನನ್ನ ಹರಿವನ್ನೇ ಹಿಡಿಯುತ್ತಿದ್ದಾರಲ್ಲ. ನನ್ನ ಮಕ್ಕಳೆಂದರೆ ಏಕಿನಿತು ತಾತ್ಸಾರ? ಮುಳುಗುತ್ತಲೆ ಇರಬೇಕಾ ನಾನು ಪೊರೆದು ಪೋಷಿಸಿದ ನಾಗರೀಕತೆ?

ವಿದ್ಯುತ್ ಅವಶ್ಯಕ ನಿಜ. ಆದರೆ ಈ ಪಂಪ್ಡ್ ಸ್ಟೋರೇಜ್ ಮೂರ್ಖತನವೇ ಸರಿ. ನೀರೆತ್ತುವುದಕ್ಕೆ ಬೇಕಾಗುವ ಕರೆಂಟಿಗಿಂತ ಉತ್ಪಾದನೆಯಾಗುವ ಕರೆಂಟು ಕಡಿಮೆ. ಎಂಥಾ ಮೂರ್ಖತನ ಇದು?
ನೀವು ಕಟ್ಟುವ ಒಡ್ಡಿನ ಭಾರವನ್ನು ಭೂಮಿ ತಾಯಿ ತಡೆದುಕೊಂಡಾಳೇ? ಮೊದಲೇ ಭಾರ ಹೊತ್ಯಿದ್ದಾಳೆ ಅವಳು. ತುಸುವೇ ಮೈ ಕೊಡವಿದರೂ ಸಾಕು. ಪಶ್ಚಿಮ ಘಟ್ಟ ಕುಸಿಯುತ್ತದೆ. ಸುನಾಮಿ ಸಾಧ್ಯತೆ ಇದೆ. ಕಾರಣ ಪಕ್ಕದಲ್ಲೇ ಸಮುದ್ರ. ಉತ್ತರ ಕರಾವಳಿಯ ಜನರ ತಲೆಯಮೇಲೆ ಒಂದು ಕಲ್ಲಿನ ಲೋಲಕ ಕಟ್ಟಿ ಹಗ್ಗಕ್ಕೆ ಬೆಂಕಿ ಹಚ್ಚುತ್ತಾ ಇದ್ದೀರಿ. ಜನರಿಗೆ ಪರಿಹಾರ ಕೊಡುತ್ತೇನೆ ಅಂತಾರೆ. ಅವರೇನು ಭಿಕ್ಷುಕರಲ್ಲ. ಸ್ವಾಭಿಮಾನಿಗಳು. ಅನ್ನದಾತರು. ಸಬ್ಸಿಡಿ, ಸ್ಕೀಮುಗಳಲ್ಲಿ ಶರಾವತಿಯ ಜಲಾನಯನ ಪ್ರದೇಶದವರಿಗೆ ದಕ್ಕುವುದು ಸಿಕ್ಕುವುದು ಬಹಳ ಕಡಿಮೆ.ನನಗೆ ಇನ್ನಾದರೂ ಹರಿಯಲು ಬಿಡಿ. ಹರಿಯುವುದು ನದಿಯಾದ ನನ್ನ ಧರ್ಮ. ಧರ್ಮಕ್ಕೆ ಅಡ್ಡಲಾಗುವ ಆತತಾಯಿಗಳಾಗಬೇಡಿ. 

Wednesday, September 25, 2024

ಹೆಸರಿನನುವಾದ

ಸುಮಾರು ಐದಾರು ವರ್ಷಗಳ ಹಿಂದಿನ ಘಟನೆ. ನಮ್ಮ ಇಂಗ್ಲಿಷ್ ಪ್ರೇಮಿ ಹಾಲ ನಾಯ್ಕ ಒಮ್ಮೆ ನಮ್ಮ ಮನೆಗೆ ಬಂದಿದ್ದ. ನಾನು ಹಿಂದಿನ ದಿನವಷ್ಟೇ ಸಾಗರದಲ್ಲಿ ನಡೆದ ಜ್ವಾಲಾ ಪ್ರತಾಪ ಯಕ್ಷಗಾನ ನೋಡಿ ಬಂದ ಗುಂಗಿನಲ್ಲಿದ್ದೆ. 
ಬಂದವನೇ, "ಆಯ್ಪ್ಪಿ" ಅಂದ ಎಂದಿನ ಪ್ರೀತಿಭರಿತ ಧ್ವನಿಯಲ್ಲಿ. ಹಾಲ ನನ್ನ ಹೃದಯಕ್ಕೆ ಹತ್ತಿರದವ. ಹಾಗಾಗಿ ಅವನ ಧ್ವನಿಯಲ್ಲಿದ್ದ ಸಂತೋಷವನ್ನು ಸಹಜವಾಗಿಯೇ ಗುರುತಿಸಿದ್ದೆ.

ಹಾಲ ಮತ್ತೆ ಶುರು ಮಾಡಿದ. "ಆಯ್ಪ್ಪಿ ನಾನೀಗ ಗಾಡ್ ಫಾರ್ದರ್ ಆಗೀನಿ" ಅಂದ. ತಾನು ಅಜ್ಜನಾಗಿದ್ದನ್ನು ಹಾಲ ತನ್ನ ಇಂಗ್ಲಿಷಿನಲ್ಲಿ ಹೇಳಿದ್ದ.
ನನಗೋ ಒಳಗಿಂದೊಳಗೆ ಉಕ್ಕುತ್ತಾ ಇತ್ತು. ಹಾಲ ಏನಾದರೂ ಆಗಲಿ. ಹೊಸತೊಂದು ಇಂಗ್ಲಿಷ್ ಶಬ್ದ ಕೊಟ್ಟ ಎನ್ನುವ ಆನಂದ.
"ಎಂತ ಶಿಶು? ಬಾಣಂತಿ ಆರಾಮಿದಾಳಾ" ಅಂದೆ.
ಆತ ಮತ್ತಷ್ಟು ಹಿಗ್ಗಿ " ಅಪ್ಪಿ ಅವಳಿ ಜವಳಿ ಮಕ್ಕಳು. ಎರಡೂ ಹೆಣ್ಣು. ಹುಯ್ದಿಗಿ ಇನ್ನೂ ರೆಕಾರ್ಡ್ ಆಗ್ಲ, ಹೊಟ್ಟೆ ಕೊಯ್ದಾರೆ" ಅಂದ.
ಅಷ್ಟೊತ್ತಿಗೆ ಅಮ್ಮ "ಹೂಂ. ಮನ್ನೇ ಕನ್ನ ಬಂದಿದ್ದ, ಸಿಸೇರಿಯನ್ನು ಅಂದಿದ್ದ. ಅಂಜೂರ ಲೇಹ್ಯ ಬೇಕು ಅಂದಿದ್ದ, ತಗ ಹಾಲ" ಎಂದು ಒಂದು ಬಾಟಲಿ ಅಂಜೂರದ ಲೇಹ್ಯ ಕೊಟ್ಟಳು.
ಹಾಲ, "ಅಮ ನೀವು ಇದೊಂದು ಮಾಡಿದ್ದು ಒಳ್ಳೆದಾತು. ಔಷಧಿ ತಗಣದು ಉಳತ್ತು" ಎನ್ನುತ್ತಾ ಲೇಹ್ಯಕ್ಕೆ ದುಡ್ಡು ಕೊಟ್ಟ. "ಮೆಡಿಕ್ಷನ್ನು ಹಾಂಗೆ ತಗಬಾರ್ದು ಅಪಿ" ಅಂದ ನನ್ನ ಕಡೆ ತಿರುಗಿ.
ನನಗರ್ಥವಾಗಿತ್ತು ಮೆಡಿಕ್ಷನ್ನು ಮೆಡಿಸಿನ್ನಿನ ಹಾಲೆಂಗ್ಲಿಷಿನ ತದ್ಭವ ಅಂತ. 
ಬೆನ್ನಿಗೇ ಹಾಲ ತನ್ನ ಮೊಮ್ಮಕ್ಕಳಿಗೆ ಇಡಲು ಬೇಕಾದ ಹೆಸರು ಕೇಳಿದ.
ಜ್ವಾಲಾ ಪ್ರತಾಪದ ಗುಂಗಿನಲ್ಲಿದ್ದ ನಾನು ಜ್ವಾಲಾ ಜ್ಯೋತಿ ಎಂದು ಹೇಳಿದೆ. ಹಾಲ ಬಹಳ ಖುಷಿ ಪಟ್ಟ. 
"ಅಪೀ ಹೆಸರು ಬರ್ಕೊಡಿ. ಈಗ ಮನೆಗೆ ಹೋಗ ಹೊತ್ತಿಗೆ ಮರತೊಕೈತೆ" ಎಂದ. ಬರೆದು ಕೊಟ್ಟೆ.

ನಾನೂ ಬೆಂಗಳೂರು ಕಡೆ ಬಂದೆ. ಇದಾದಮೇಲೆ ಲಾಕ್  ಡೌನ್ ಅದು ಇದು ಅಂತೆಲ್ಲ ಹಾಲನ ಭೇಟಿ ಕಡಿಮೆಯಾಯ್ತು. ಕಂಡರೂ ನನ್ನ ಗಡಿಬಿಡಿಯೋ ಹಾಲನ ಅರ್ಜೆಂಟೋ ಒಟ್ಟಿನಲ್ಲಿ ಆಗುವಂತಾಗಲಿಲ್ಲ. ಮಾತಾಡಿದ್ದು ಕಡಿಮೆಯೇ.

ಮುಂದೊಂದು ದಿನ ಮನೆಯಂಗಳದಲ್ಲಿ ಮಗಳ ಜೊತೆ ಮಾತಾಡುತ್ತಾ ಕುಳಿತಿದ್ದೆ. ಹಾಲನ ಸವಾರಿ ಬಿಜಯಂಗೈದಿತು.

ಹಾಲ ಅದೆಲ್ಲಿಂದ ನಾನು ಬಂದ ಸುದ್ದಿ ಹಿಡಿದನೋ ದೇವರೇ ಬಲ್ಲ. ಕಬ್ಬಿನ ಹಾಲು, ಹೊಸ ಬೆಲ್ಲದ ಒಂದು ಸಾಧಾರಣ ಡಬ್ಬಿ, ಇನ್ನೊಂದು ನೊರೆ ಬೆಲ್ಲದ ಸಣ್ಣ ಡಬ್ಬಿ  ತಿನ್ನಲು ಅನುಕೂಲವಾಗುವಂತೆ ಕತ್ತರಿಸಿದ ಕಬ್ಬಿನ ಕಟ್ಟಿನೊಂದಿಗೆ ಬಂದಿದ್ದ.
ಬಂದವನೇ ನನ್ನ ಮಗಳನ್ನೊಮ್ಮೆ ಎತ್ತಿದ್ದ. ಇವಳು ಕೊಸರಿದರೆ ನೊರೆ ಬೆಲ್ಲದ ಡಬ್ಬಿ ಕೊಟ್ಟು ಅವಳನ್ನು ಒಲಿಸಿಕೊಂಡಿದ್ದ. ಬೆಲ್ಲ ನೆಕ್ಕುತ್ತಾ ನನ್ನ ಮಗಳು ಒಳಗೆ ಹೋಗಿ ಸೊಕ್ಕು ಮಾಡುತ್ತಾ ಕುಳಿತಳು.
"ಅಯ್ಪಿ, ಇವತ್ತೇ ಶಣ್ಣಮ್ಮಿ ನೋಡಿದ್ದು ನಾನು. ಅದಕ್ಕೆ ಕೊಡಬೋಕು ಅಂತಲೇ ಹೊತ್ಲೆ ಎದ್ದು ನೊರೆ ಬೆಲ್ಲ ತಂದೆ" ಎಂದ. ಹಾಲ ನಾವು ಸಣ್ಣಕಿದ್ದಾಗಲೂ ಹೀಗೆಯೇ ಇದ್ದ ಬಿಡಿ.

"ಆಯ್ಪ್ಪಿ ಮಗಳ ಹೆಸರೆಂತ ಇಟ್ಟಿರೀ?''

"ಶ್ರೀರಕ್ಷಾ. ವರದಾ ಅಂತಲೂ ಇಟ್ಟಿದೆವಾ" ಅಂದೆ.

"ನಿನ್ನ ಮೊಮ್ಮಕ್ಕಳು ಎಂತ ಮಾಡ್ತಾವಾ? ಶಾಲಿಗೆ ಹೋಗ್ತಾ ಇದ್ದಾರಾ?" ಎಂದೆ.

ಹಾಲನ ಕಣ್ಣಿನಲ್ಲಿ ಒಮ್ಮೆ ನೀರು ಜಿನುಗಿತು. ಅಯ್ಯೋ ಕೇಳಬಾರದ್ದು ಏನು ಕೇಳಿಬಿಟ್ಟೆನಪ್ಪಾ ಎಂದು ನಾನೂ ಒಳಗಿಂದೊಳಗೆ ಕಳವಳಕ್ಕೆ ಬಿದ್ದೆ.

"ಆಯ್ಪ್ಪಿ!! ಆ ಎರಡೂ ಹುಡರಿಗೆ ನೀವೇ ಇಟ್ಟ ಹೆಸರು ಇಟ್ಟಿದ್ದುವು. ಆದರೆ ನಮ್ಮ ಅಳಿಯ ಅದು ಕನ್ನಡ ಭಾಷೆ ಹೆಸರಲ್ಲ ಅಂತ ಜ್ವಾಲುಡುಗಿಗೆ ಉರಿ ಅಂತಿಟ್ಟ ಜ್ಯೋತುಡುಗಿಗೆ ಸೊಡರು ಅಂತಿಟ್ಟ. (ಹಾಲನ ಅಳಿಯ ಜ್ವಾಲೆಗೆ ಉರಿ ಅಂತಲೂ, ಜ್ಯೋತಿಗೆ ಸೊಡರು ಅಂತಲೂ ಹೆದರಿಟ್ಟಿದ್ದ) ಆ ಹೆಸರಾಗೆ ಶಾಲಿಗೂ ಸೇರಿಸಿದ. ಆದರೆ ಆ ಹೆಸರಿಟ್ಗಂಡು ಅವು ಶಾಲೆಗೆ ಹೋಗಲ್ಲ  ಎಲ್ಲಾ ನಿಗ್ಯಾಡ್ತಾರೆ ಅಂದುವು. ಅದಕ್ಕೇ ಈಗ ದಿನಾ ಹೆಸರು ಬದಲಾಯಿಸಿ ರಿಕಾಲ್ಡ್ರು ಸರಿ ಮಾದಾಕೆ ಅವರನ್ನ ಕರ್ಕಂಡು ಕೋರ್ಟು ಕಚೇರಿ ಅಲ್ದಾಟ. ಇದೆಲ್ಲಾ ಮಾಡ ವಯಸ್ಸಾ   ಹುಡುಗೀರದ್ದು? ಈಗ ಮತ್ತೆ ನೀವಿಟ್ಟ ಹೆಸರೇ ಇಡದಂತೆ. ಒಂದು ಸತಿ  ಮಳ್ಳು ಹೆಸರು ಕರೆದ ಮೇಲೆ ಊರಾಗಿದ್ದವ್ವು ಬಿಡ್ತಾರಾ? ನನ್ನ ಮೊಮ್ಮಕ್ಕಳ ಕತೆ ಕಷ್ಟ ಮಾಡಾಕಿದ ನನ್ನಳಿಯ. ಅಷ್ಟೆಲ್ಲಾ ಓದಿ ಒಂದು ಕಾಲೇಜಾಗೆ ಕನ್ನಡ ಪಾಠ ಮಾಡವಾಗಿ ಹಿಂಗಾ ಮಾಡದು? " ಎನ್ನುತ್ತಾ ದುಃಖಿಸಿದ. 

ಆ ಹೊತ್ತಿಗೆ ಅಮ್ಮ ಚಹಾ ತಂದಳು. ಅಪ್ಪಾಜಿ ಹಾಲನಿಗೊಂದು ತಂಬಾಕಿನ ಕವಳ ಕೊಟ್ಟರು. ಅವರು ಎಂದಿನ ಧಾಟಿಯಲ್ಲಿ "ಎಲ್ಲಾ ಸಮಾಗ್ತದೆ ಬಿಡ" ಅಂದರು. ಹಾಲ, "ಅಷ್ಟಾದರೆ ಸಾಕು" ಎಂದು ತುಸು ಸಮಾಧಾನ ಪಟ್ಟ.

ಹಾಲ ನಿರಕ್ಷರ ಕುಕ್ಷಿ. ಆತ ತನ್ನ ಅಹಂಕಾರ, ಗರ್ವ ತೃಪ್ತಿಪಡಿಸಲು ಇಂಗ್ಲಿಷ್ ಹೇಳುವ ಭರದಲ್ಲಿ ತಪ್ಪಾಗುವುದು ಸಹಜ. ಆದರೆ ತಿಳಿದೂ ತಿಳಿದೂ ತಪ್ಪೇ ಮಾಡುವ ಬುದ್ಧಿವಂತರು ಅನ್ನಿಸಿಕೊಂಡವರು ನಿಜಕ್ಕೂ ಬುದ್ಧಿವಂತರಾ? ಅಥವಾ ಶತ ದಡ್ಡರಾ?

#ಹಾಲ

✍️ಶಶಾಂಕ ತೆಂಕೋಡು

Wednesday, July 26, 2023

ಅಮೃತಮತಿ

ಜೈನ ಸಾಹಿತ್ಯದಲ್ಲಿ ಬರುವ ಒಂದು ಕತೆ ಅಮೃತಮತಿಯದ್ದು. ಜನ್ನನ ಯಶೋಧರ ಚರಿತೆಯ ನಾಯಕಿ ಆಕೆ.(ಖಳನಾಯಕಿಯೂ ಹೌದು) ಮಹಾನ್ ಪ್ರೇಮಕಥೆ, ಅಮೃತಮತಿ ಒಬ್ಬ ಆದರ್ಶ ಪ್ರೇಮಿಕೆ ಎಂದೆಲ್ಲ ನವ ಪೀಳಿಗೆಯ ಸಾಹಿತ್ಯ ವಿಮರ್ಶಕರು ಹೇಳುತ್ತಾರೆ. ಅದು ಒತ್ತಟ್ಟಿಗಿರಲಿ.
ಯಶೋಧರ ಎನ್ನುವ ರಾಜನ ಹೆಂಡತಿ ಆಕೆ. ಅರಮನೆಯಲ್ಲಿ ಸಕಲ ವೈಭೋಗ. ಸುಂದರ ಕಾಯದ, ಜೀವಕ್ಕೂ ಹೆಚ್ಚಾಗಿ ಪ್ರೀತಿಸುವ ಗಂಡ . ಸ್ವರ್ಗವೇ ಕಾಲ ಕೆಳಗೆ ಬಿದ್ದ ಅನುಭೂತಿ. 
ಹೀಗಿರುವಾಗ ಒಮ್ಮೆ ಒಬ್ಬ ಗಂಡಸು ಹಾಡು ಹೇಳುವುದುರಾತ್ರಿ ಕಾಲದಲ್ಲಿ ಕೇಳುತ್ತದೆ ಆಕೆಗೆ. ಆ ಸ್ವರ ಮಾಧುರ್ಯಕ್ಕೆ ಮರುಳಾಗಿ ಸ್ವರದ ಜಾಡು ಹಿಡಿದು ಹೋಗುತ್ತಾಳೆ ಅಮೃತಮತಿ. ನೋಡಿದರೆ ಕುದುರೆ ಲಾಯದಲ್ಲಿನ ಆಳು ಹಾಡುತ್ತಿರುತ್ತಾನೆ. ಆತ ನೋಡಲು ಸುಂದರನಲ್ಲ. ಅಷ್ಟಾಂಗಗಳೂ ವಕ್ರವಾದ್ದರಿಂದ ಅಷ್ಟಾವಕ್ರ ಎನ್ನುವ ಹೆಸರು. ಸ್ವರ ಮಾಧುರ್ಯಕ್ಕೆ ಮರುಳಾದ ಅಮೃತಮತಿ ಅವನೊಂದಿಗೆ ಪ್ರೇಮ ಪ್ರಣಾಯಕ್ಕೆ ಇಳಿಯುತ್ತಾಳೆ, ಅವಳನ್ನೇ ಜೀವ ಎಂದು ಭಾವಿಸಿ ಜೀವಿಸುತ್ತಿದ್ದ ರಾಜ ಯಶೋಧರನ ಮೇಲಿನ ಪ್ರೀತಿ ಇಲ್ಲವಾಗುತ್ತದೆ. ಹಾಗಂತ ಆತನ ದೆಸೆಯಿಂದ ಬಂದ ವೈಭೋಗಗಳೊ ಅಥವಾ ರಾಣಿ ಎನ್ನುವ ಪಟ್ಟವೋ ಆಕೆಗೆ ಬೇಡವಾಗುವುದಿಲ್ಲ. ಅಥವಾ ಅಷ್ಟಾವಕ್ರನೊಂದಿಗಿನ ಪ್ರಣಯಕ್ಕೆ ಅನುಕೂಲ ಎಂದು ಇದ್ದಳೋ, ಅಥವಾ ಪ್ರಣಯಕ್ಕೆ ಅಷ್ಟಾವಕ್ರ, ಪ್ರಮೋದಕ್ಕೆ ರಾಣಿ ಪಟ್ಟ ಎಂದಿದ್ದಳೋ? ಸಮಾಜಕ್ಕೆ ಹೆದರಿದ್ದಳೋ? ಗೊತ್ತಿಲ್ಲ.

ಒಮ್ಮೆ ಯಶೋಧರ ಪ್ರಣಯದ ಹೊತ್ತಿನಲ್ಲಿ ಕಮಲದ ಹೂವಿನಿಂದ ಅಮೃತಮತಿಯನ್ನು ಹೊಡೆಯುತ್ತಾನೆ. ಆಕೆ ಸ್ಮೃತಿ ತಪ್ಪುತ್ತಾಳೆ. ಎಷ್ಟೆಂದರೂ ರಾಣಿ, ಕೋಮಲಾಂಗಿ. ಸಹಜ.

ಕೆಲವು ದಿನಗಳ ನಂತರ ಯಶೋಧರ ರಾಣಿಯ ನಡವಳಿಕೆಯನ್ನು ಸೂಕ್ಷ್ಮವಾಗಿ ಗಮನಿಸಿ ಅನುಮಾನಕ್ಕೆ ತೊಡಗುತ್ತಾನೆ. ಆಕೆಯನ್ನು ಹಿಂಬಾಲಿಸಿ ಕುದುರೆ ಲಾಯಕ್ಕೆ ಹೋಗುತ್ತಾನೆ. ಅಲ್ಲಿ ಅಷ್ಟಾವಕ್ರ, ಹಗ್ಗದಲ್ಲಿ ಯಶೋಧರೆಯ ಬೆನ್ನಿಗೆ ಬಾರಿಸುತ್ತಾನೆ, ಅದೂ ಪ್ರಣಯದಲ್ಲಲ್ಲ, ಆಕೆ ತಡವಾಗಿ ಬಂದಳೆಂಬ ಸಿಟ್ಟಿಗೆ.
ಇದನ್ನು ನೋಡಿದ ಯಶೋಧರ ವೈರಾಗ್ಯ ತಳೆದು ಸನ್ಯಾಸಿಯಾಗುತ್ತಾನೆ.

ಅಷ್ಟಾವಕ್ರನದು, ಕ್ರೌರ್ಯವಾ ಪ್ರಣಾಯವಾ ಪ್ರೇಮವಾ ಎನ್ನುವುದು ಸ್ವಲ್ಪ ಹೊತ್ತು ಆಚೆಗಿರಲಿ. ಅಮೃತಮತಿಯದ್ದು ವಾಂಛೆಯೋ, ಕಾಮವೋ, ಪ್ರೇಮವೋ ಅಥವಾ ಮತ್ತೇನೋ ಎನ್ನುವುದೂ ಇಲ್ಲಿ ಬೇಡ. ಯಶೋಧರನೂ ಬೇಡ.

ಕಮಲದ ದಂಟಿನ ಏಟಿಗೆ ಸ್ಮೃತಿ ತಪ್ಪುವ ಅಮೃತಮತಿ, ಹಗ್ಗದೇಟಿಗೆ ಕಣ್ಣೀರೂ ಹಾಕದಿರುವುದು.

ಕೆಲವರು ಈಗ ಆಧುನಿಕ ಅಮೃತಮತಿಯರು. ತಮಗೆ ಬೇಕಾದಲ್ಲಿ ಕೋಮಲತೆ ಸಿಗುತ್ತದೆ, ಅದು ಕುದುರೆಗೆ ಬಾರಿಸುವ ಹಗ್ಗವಾದರೂ ಸರಿ, ಬೇಡವಾದಲ್ಲಿ ಸ್ಮೃತಿ ತಪ್ಪುತ್ತದೆ ಅದು ಕಮಲದ ದಂಟಾದರೂ ಅಷ್ಟೇ. ಸರಳವಾಗಿ ಹೇಳುವುದಾದರೆ ಒಂದು ರೀತಿಯ Obsessive Selections.

ಈ ಆಧುನಿಕ ಸಮಕಾಲೀನ ಅಮೃತಮತಿಯರೂ ಅಷ್ಟೇ. ಮಣಿಪುರದ ವಿಚಾರದಲ್ಲಿ ಜೋರು ಮಾತು. ಆಡಬೇಕಾದ್ದೆ. ಖಂಡಿಸಲೇ ಬೇಕು. ಆದರೆ,ಉಡುಪಿ ಮರೆತೇ ಹೋಗುತ್ತದೆ. ಕಾಶ್ಮೀರ ನೆನಪಾಗುವುದೇ ಇಲ್ಲ. ರೇಪ್ ರಾಜಧಾನಿ ಅಂತ ದೆಹಲಿಗೆ ಹೆಸರು ಬಂದಿದ್ದು ಪಾಪ ಗೊತ್ತೇ ಇಲ್ಲ. ಆಶಿಫಾ ಎನ್ನುವ ಹಸುಳೆಯನ್ನು ರೇಪ್ ಮಾಡಿ ಅದನ್ನು ಬ್ರಾಹ್ಮಣರ ತಲೆಗೆ ಕಟ್ಟಿದ್ದೂ ಮರೆತಿದೆ. 

ಜನ್ನನ ರೂಪಕ ನಿಜಕ್ಕೂ ಚಂದ. ಇಂಥ ಬುದ್ಧಿ ಯಾವತ್ತೂ ಸಾಯುವುದಿಲ್ಲ. ಹಾಗಾಗಿ ಯಶೋಧರನ ರಾಣಿ ಅಮೃತಮತಿ.

Friday, April 28, 2023

ಪಾಕಿಸ್ತಾನ

ತುಮಿ ಕ್ಯಾ ಭಿ ಕರ್ಕು ಸಬ್ಬಿಕೊ ಕತ್ತೆ ತೋ ಉನೋ ಚುಪ್ ಕರ್ಕು ಭೈತ್ತಿ. ನಕ್ಕೋ ನಕ್ಕೋ ಜ್ಯಾದಾ ಗುಸ್ಸಾ ಕರ್ಕು ಸಬ್ಬಿಕೊ ತುಮಿಚ್ ಬುರಾ ಕರ್ಕು ಕತ್ತೆ. ಉನ್ನೋ ಐಸಾಯ್ಚ್. ತುಮಿ  ಅಡ್ಜಸ್ಟ್ ಕರ್ಕು ಜಾನಾ ಸೋ, ಬೆಂಗ್ಳುರ್ ಕೆ ಬಸ್ ಕೆ ಮಾಫಿಕ್.

ಕೆಲವರು ಈ ರೀತಿ ಮಾತಾಡುವುದನ್ನೇ ಉರ್ದು ಅಂತ ಹೇಳುತ್ತಾರೆ. ನಿಜವಾಗಿ ನೋಡಿದರೆ ಅಲ್ಲ. ಉರ್ದು ಒಂದು ಸುಂದರ ಭಾಷೆ.

ಉರ್ದುವಿನ ಸೌಂದರ್ಯ ಸವಿಯ ಬೇಕಾದರೆ ದಿಲೀಪ್ ಕುಮಾರ್, ದೇವ್ ಆನಂದ್, ರಾಜ್ ಕಪೂರ್ ಚಿತ್ರಗಳನ್ನು ನೋಡಬೇಕು.

ಅದಕ್ಕೂ ಚಂದದ ಉರ್ದು ಸಿಗುವುದು ಹಿಂದಿ ಸಿನಿಮಾಗಳ ಕೋರ್ಟ್ ಸೀನ್ ಬಂದಾಗ.

ಅದಾಲತ್, ಮುವಕ್ಕಿಲ್, ಮುಝರಿಮ್, ಜುಲ್ಮ್, ಸಜಾ ಎ ಕೈದ್, ಬಾ ಮುಷಕ್ಕದ್, ಬೆಹಯಾ, ಹಂಸಫರ್, ಹಮ್ರಾಜ್, ಹಂವತನ್, ಹಂದರ್ದ್, ಹಂ ಅಪನಾ, ತಜುರ್ಬಾ, ಮೌಕಾ ಎ ವಾರದಾತ್, ಚಶಂದೀನ್ ಗವಾಹ್, ಅನೇಕ ಶಬ್ದಗಳಿವೆ.

ಇನ್ನೂ ಒಂದು ಸಂಗತಿ ಎಂದರೆ, ಹಿಂದಿ ಭಾಷೆಗಿಂತ ಉರ್ದು ಹಳೆಯದು. ಹಿಂದಿ  ಕಾವ್ಯಮಯವಾದ ಮಜಲನ್ನೂ ಮೀರಿ ಮಿಕ್ಕಿದರೆ ಉರ್ದು ಎನ್ನಬಹುದು.

ಉರ್ದು ಪಾಕಿಸ್ತಾನದ ರಾಷ್ಟ್ರಭಾಷೆ. ಆದರೆ ಅದೇ ಮನೆಮಾತಾಗಿ ಇರುವ ಯಾವ ಪ್ರಾಂತ್ಯವೂ ಪಾಕಿಸ್ತಾನದಲ್ಲಿ ಇಲ್ಲ. 

ಪಂಜಾಬಿನಲ್ಲಿ ಪಂಜಾಬಿ, ವಾಯವ್ಯ ಪ್ರಾಂತ್ಯದಲ್ಲಿ ಪುಷ್ಟೋ, ಬಲೋಚಿಸ್ತಾನದಲ್ಲಿ ಬಲೋಚ್, ಸಿಂಧ್ ಪ್ರಾಂತ್ಯದಲ್ಲಿ ಸಿಂಧಿ ಹೀಗೆ. 

ಹಾಗಾದರೆ, ಉರ್ದು ಪಾಕಿಸ್ತಾನದ ರಾಷ್ಟ್ರ ಭಾಷೆಯಾಗಿದ್ದು ಹೇಗೆ ಅಂತೀರಾ? ಜಿನ್ನಾ ಎನ್ನುವ ಅಪ್ರತಿಮ ರಾಜಕಾರಣಿಯ ತಂತ್ರ ಅದು. ಭಾಷೆಯ ವಿಚಾರವಾಗಿ ಪಾಕಿಸ್ತಾನ ಒಡೆದು ಚೂರಾದರೆ ಎನ್ನುವ ಆತಂಕವೋ ಅಥವಾ ಭಾಷೆಯ ಮೂಲಕ ಪಾಕಿಸ್ತಾನೀ ಪ್ರಜೆಗಳಿಗೆ ಒಂದು ವಿಶೇಷ ಗುರುತು ಸಿಗಬೇಕು ಎನ್ನುವ ಉದ್ದೇಶವೋ ಅಥವಾ ಎರಡೂ ಉದ್ದೇಶಗಳೂ ಸೇರಿಯೋ ಆತ ಉರ್ದು ಭಾಷೆಯನ್ನು ಪಾಕಿಸ್ತಾನದ ರಾಷ್ಟ್ರಭಾಷೆಯಾಗಿಸಿದ.

ಈ ರಾಷ್ಟ್ರಭಾಷೆ ಪಾಕಿಸ್ತಾನದ ಪಾಲಿಗೆ ಒಂದು ರೀತಿಯಲ್ಲಿ ಎರವಲು ತಂದ ಕಾಳು. ಪಾಕಿಸ್ತಾನವೆಂದು ಗುರುತಿಸಲ್ಪಟ್ಟ ಅಂದಿನ ಭೂಭಾಗಗಳಲ್ಲಿ ಎಲ್ಲಿಯೂ ಉರ್ದು ಮಾತಾಡುತ್ತಿರಲಿಲ್ಲ. ಈ ಭಾಷೆಯನ್ನು ಅಲ್ಲಿಗೆ ಕೊಂಡೊಯ್ದು ಕಲಿಸಿದವರು ಅಲ್ಲಿನವರಿಂದ ಮುಹಾಜಿರ್ ಎಂದು ಕೇವಲವಾಗಿ ಕರೆಸಿಕೊಂಡ, ಕರೆಸಿಕೊಳ್ಳುತ್ತಿರುವ ಭಾರತೀಯ ಮುಸಲ್ಮಾನರು.

ಜಿನ್ನಾ ಮಾಡಿದ ಈ ತಪ್ಪಿನಿಂದ ಉರ್ದು ಒಂದು ಜನಾಂಗೀಯ ಭಾಷೆ ಎನ್ನುವ ಹಣೆಪಟ್ಟಿ ಹೊರಬೇಕಾಯಿತು. ವಾಸ್ತವದಲ್ಲಿ ಲಖನೌ ಭಾಗದಲ್ಲಿ ಕರ್ಮಠ ಬ್ರಾಹ್ಮಣರೂ ಉರ್ದು ಮಾತಾಡುವುದು ಒಂದು ಸ್ಟೇಟಸ್ ಎಂದು ಭಾವಿಸುತ್ತಾರೆ. ಎಷ್ಟೋ ಪಂಜಾಬಿನ ಬ್ರಾಹ್ಮಣರಿಗೆ ಉರ್ದು ಉದುರಿದ ನೆಲ್ಲಿಕಾಯಿ ಅಂಗೈನಲ್ಲಿದ್ದಷ್ಟೇ ಸಲೀಸು.

ಆದರೆ, ಉರ್ದು ಪಾಕಿಸ್ತಾನಕ್ಕಿಂತ ಹೆಚ್ಚು ಬೆಳೆದಿದ್ದು ಭಾರತದಲ್ಲಿ. ಹಳೆಯ ಹಿಂದಿ ಸಿನಿಮಾಗಳನ್ನು ಇಷ್ಟ ಪಡುವ ಯಾವನೋ ಉರ್ದುವನ್ನು ಪ್ರೀತಿಸದೆ ಇರಲಾರ. ಸಾಹಿರ್ ಲುಧಿಯಾನವೀ, ಇಂದೀವರ್, ಜಾವೇದ್ ಅಖ್ತರ್, ಸಲೀಂ- ಜಾವೇದ್, ಗುಲ್ಜಾರ್, ಆನಂದ್ ಭಕ್ಷಿ, ಖಾದರ್ ಖಾನ್, ಶೈಲೇಂದ್ರ ಇವರೆಲ್ಲ ದಂಡಿಯಾಗಿ ಉರ್ದು ಶಬ್ದಗಳನ್ನು ಬಳಸಿದವರೇ, ಗೀತೆಗಳಲ್ಲಿ, ಸಂಭಾಷಣೆಗಳಲ್ಲಿ. 

ಇನ್ನೂ ಮಜಾ ಎಂದರೆ, ಗುಲ್ಜಾರ್ ಅವರ ಕಾವ್ಯನಾಮ. ನಿಜವಾದ ಹೆಸರು ಸಂಪೂರ್ಣ್ ಸಿಂಘ್ ಕಾಲ್ರಾ. ಆನಂದ್ ಭಕ್ಷಿ, ಕಾಶ್ಮೀರಿ ಪಂಡಿತ. 

ಭಾರತ ಅಸಹಿಷ್ಣು ಅಂತ ಹೇಳುವವರು ಮತ್ತು ಭಾವಿಸುವವರಿಗೆ ಇಷ್ಟು ಉದಾಹರಣೆ ಸಾಕು. ಇಲ್ಲಿ ಸಹಿಷ್ಣುತೆ ಅಸಹಿಷ್ಣುತೆ ಚರ್ಚಾ ವಿಷಯವೇ ಅಲ್ಲ. ಸೌಂದರ್ಯವನ್ನು ಸವಿದರು ಒಪ್ಪಿದರು ಅಷ್ಟೇ. 
ಸಹಿಸಿಕೊಳ್ಳಬೇಕಾದ್ದು ಹಿಂಸಾತ್ಮಕವಾದ್ದನ್ನೇ ಹೊರತು ಆನಂದದಾಯಕವಾದ್ದನ್ನಲ್ಲ.

ಆದರೆ ಪಾಕಿಸ್ತಾನದ ಗ್ರಹಚಾರ ನೋಡಿ, ಇಷ್ಟು ವರ್ಷಕ್ಕೆ ಒಬ್ಬ ಸಾಹಿರ್ ಲುಧಿಯಾನವೀ, ಇಂದೀವರ್, ಜಾವೇದ್ ಅಖ್ತರ್, ಸಲೀಂ- ಜಾವೇದ್, ಗುಲ್ಜಾರ್, ಆನಂದ್ ಭಕ್ಷಿ, ಖಾದರ್ ಖಾನ್, ಶೈಲೇಂದ್ರ ಅಲ್ಲಿ ಹುಟ್ಟಲಿಲ್ಲ. 

ಪಾಕಿಸ್ತಾನ ನಿಜಕ್ಕೂ ದುರದೃಷ್ಟವಂತ ದೇಶ. ಒಬ್ಬ ಮಹಾ ನಾಯಕನೊ ಅಥವಾ ಒಬ್ಬ ದೇಶಭಕ್ತನೊ ಜನಿಸಲಿಲ್ಲ ಅಲ್ಲಿ. ಭಾರತ ದ್ವೇಷ ಒಂದೇ ತುಂಬಿ ತುಳುಕಿದರ ಪರಿಣಾಮ ಇರಬಹುದೇ? ಹೂಂ ಎನ್ನೋಣವೆಂದರೆ ಅದು ಈಗಿನ ಪರಿಸ್ಥಿತಿ. 

ತನ್ನೊಂದಿಗೆ ತನ್ನ ಒಡಲಾಗಿ ಬಂದ ಇಂದಿನ ಬಾಂಗ್ಲಾದೇಶಿಗರನ್ನು, ಅಂದಿನ ಪೂರ್ವ ಪಾಕಿಸ್ತಾನವನ್ನು ಪರಿಪರಿಯಾಗಿ ಕಾಡಿದರು. ರೋಸಿ ಹೋದ ಅವರು ಬೇರೆ ದೇಶವಾಗಿ ಹೋಗಿ ಉದ್ಧಾರವಾದರು. 

ಪಾಕಿಸ್ತಾನದ ಹುಟ್ಟೇ ಒಂದು ರೀತಿಯಲ್ಲಿ ವಿಚಿತ್ರ. ಮುಸಲ್ಮಾನರ ಹೆಸರು ಹೇಳಿಕೊಂಡು ಇಸ್ಲಾಮ್ ಅನ್ನು ಗೌರವಿಸದ ಕೆಲವು elite ವರ್ಗದ ಜನ ತಮ್ಮ ಅಸ್ಮಿತೆಗೆ ಹುಟ್ಟು ಹಾಕಿದ ದೇಶ ಅದು. ಜಿಯಾ ಉಲ್ ಹಕ್ ಎನ್ನುವ ಸೇನಾ ಮುಖ್ಯಸ್ಥ ತನ್ನ ಉಳಿವಿಗೆ, ಧರ್ಮದ ಕಟ್ಟುಪಾಡುಗಳ ಆಚರಣೆ( ಸೂಕ್ಷ್ಮವಾಗಿ ನೋಡಿ, ಧರ್ಮದ ಆಚರಣೆ ಅಲ್ಲ) ಧಾರ್ಮಿಕ ಮುಖಂಡರ ಬೆಂಬಲ, ತನ್ಮೂಲಕ ದೇಶದ ಪ್ರಜೆಗಳ ಮೇಲೆ ಹಿಡಿತ ಸಾಧಿಸಲು ಹೋದ ಪರಿಣಾಮ ಮುಗ್ಧ ಪ್ರಜೆಗಳು ಅನುಭವಿಸುತ್ತಿದ್ದಾರೆ. ವಾಸ್ತವದಲ್ಲಿ ಪಾಕಿಸ್ತಾನದ ನಾಯಕರು, ಮಿಲಿಟರಿಯವರನ್ನೂ ಸೇರಿ ದೇಶಭಕ್ತಿ ಎನ್ನುವ ಭಾವನೆಯನ್ನೇ ಹೊಂದಿಲ್ಲ. ಕಾರಣ ದೇಶ ಅವರ ಪಾಲಿಗೆ atm ಅಷ್ಟೇ, ಆತ್ಮವಲ್ಲ. ಅವರ ಆತ್ಮ ವಿದೇಶದಲ್ಲಿ ವಿಲಾಸಿ ಜೀವನ, ಅದಕ್ಕೆ ಪಾಕಿಸ್ತಾನದಲ್ಲಿ ಭ್ರಷ್ಟಾಚಾರ ನಿತ್ಯ ನೂತನ.

ಇನ್ನಾದರೂ ಭಾರತ ದ್ವೇಷ ಬಿಟ್ಟು ತಾವು ಬದುಕುವ ದಾರಿ ನೋಡುವುದು ಒಳ್ಳೆಯದು. ಹಿತ್ತಲಿನಲ್ಲಿ ಹಾವು ಸಾಕಿದ್ದ ದೇಶದಲ್ಲಿ ಈಗ ಇಲಿಯನ್ನೇ ತಿಂದು ಬದುಕಬೇಕಾದ ಪರಿಸ್ಥಿತಿ. 

ಧರ್ಮಾಧಾರಿತ ರಾಜಕಾರಣ ಬಿಟ್ಟು ಧರ್ಮಧೋರಣೆಯ ರಾಜಕಾರಣ, ಧರ್ಮ ಎನ್ನುವುದರ ತೋರುಗಾಣಿಕೆಯ ರಾಜಕಾರಣದ ಪರಿಣಾಮ.

ಕೊನೆಯದಾಗಿ ಒಂದು ಮಾತು. ನಾನಿಲ್ಲಿ ಯಾವ ಧರ್ಮವನ್ನೂ ನಿಂದಿಸಿಲ್ಲ. ನಾನದನ್ನು ಮಾಡುವುದೂ ಇಲ್ಲ. ಧರ್ಮ ಎನ್ನುವುದು ಒಳ್ಳೆಯ ಬದುಕಿಗೆ ಬೇಕಾದ ಸರ್ವಹಿತಕ್ಕೆ ಬೇಕಾದ ಸೋಪಾನವಾಗದೆ, ಸ್ವಾರ್ಥದ ಸಾಧನವಾದಾಗ ಏನಾಗುತ್ತದೆ ಎಂದು ಹೇಳಿದ್ದೇನೆ ಅಷ್ಟೇ.

ಮೊದಲನೇ ವಾಕ್ಯಪುಂಜ ಯಾರನ್ನೂ ಅಣಕಿಸುವುದಕ್ಕೋ ಅಥವಾ ನೋಯಿಸುವುದಕ್ಕೋ ಅಲ್ಲ. ಲೇಖನದ ಶುರುವಾತಿಗೆ ತೊಡಗುವಾಗ ಸ್ಫುರಿಸಿದ್ದಷ್ಟೇ.

Friday, April 21, 2023

ಕಾಂಗನ್ಯಾಯ

ನಾರಾಯಣ ದತ್ ತಿವಾರಿ

ಈ ಹೆಸರು ಒಂದು ವಿಶಿಷ್ಠ ಕಾರಣಕ್ಕೆ ಪ್ರಸಿದ್ಧ. ಎರಡು ರಾಜ್ಯಗಳಿಗೆ ಮುಖ್ಯಮಂತ್ರಿಯಾದವರು ಇವರು. ಎರಡು ರಾಜ್ಯಗಳಿಗೆ ಮುಖ್ಯಮಂತ್ರಿಯಾದ ವಿಶೇಷ ದಾಖಲೆ ಇವರದ್ದು.
ಉತ್ತರ ಪ್ರದೇಶ ರಾಜ್ಯಕ್ಕೆ ಮೂರು ಸಲ ಮುಖ್ಯಮಂತ್ರಿಯಾಗಿದ್ದರು. ಕಾಂಗ್ರೆಸ್ ಪಕ್ಷದಿಂದ ಉ.ಪ್ರ ದ ಕೊನೆಯ ಮುಖ್ಯಮಂತ್ರಿ ಕೂಡಾ ಇವರೇ. ಉತ್ತರಾಖಂಡ ರಾಜ್ಯದ ಮೂರನೇ ಮುಖ್ಯಮಂತ್ರಿ. ಆಂಧ್ರ ಪ್ರದೇಶದ ರಾಜ್ಯಪಾಲರಾಗಿದ್ದರು.

ಆದರೆ, ಈ ಮುತ್ಸದ್ದಿಯನ್ನು ಕಾಂಗ್ರೆಸ್ ಹೇಗೆಲ್ಲಾ ನಡೆಸಿಕೊಂಡಿತು ಅಂತ ರವಿ ಬೆಳಗೆರೆ ಬರೆದ ಇಂದಿರೆಯ ಮಗ ಸಂಜಯ ಎನ್ನುವ ಪುಸ್ತಕ ಓದಿ. Subtle ಆಗಿ ಸಣ್ಣದಾಗಿ, ಚೊಕ್ಕದಾಗಿ ರವಿ ಇವರಿಗಾದ ಅವಮಾನ ತಿಳಿಸಿದ್ದಾರೆ.

ಇವರ ಕೊನೆಯ ದಿನಗಳು ದುಃಖದಾಯಕ.
ವಯಕ್ತಿಕ ಜೀವನ ಒಂದು ರೀತಿಯ ದುರಂತ ನಿಜ. ಅದು ಒತ್ತಟ್ಟಿಗಿರಲಿ. ನಾನು ಅದರ ಬಗ್ಗೆ ಆಸಕ್ತನೂ ಅಲ್ಲ.

ತಿವಾರಿ ಮಾತ್ರವಲ್ಲ. ನರಸಿಂಹ ರಾವ್, ವಿದ್ಯಾಚರಣ ಶುಕ್ಲಾ, ಅಜಿತ್ ಜೋಗಿ, ಮಾಧವರಾವ್ ಸಿಂಧಿಯಾ, ಇಂದ್ರ ಕುಮಾರ್ ಗುಜರಾಲ್, ಕಾಮ ರಾಜನ್, ಕೃಷ್ಣ ಮೆನನ್, ಸೀತಾರಾಮ ಕೇಸರಿ, ಪ್ರಿಯರಂಜನ್ ದಾಸ್ ಮುನ್ಷಿ, ಎಸ್. ಎಂ ಕೃಷ್ಣ, ಹೀಗೆ ಕಾಂಗ್ರೆಸ್ ಅವಮಾನಿಸಿದ ಮುತ್ಸದ್ದಿಗಳ ದಂಡೇ ಇದೆ.  
ಅಷ್ಟೇ ಅಲ್ಲ. ವಾಜಪೇಯಿ ಎನ್ನುವ ಅಕಳಂಕ ಚರಿತ್ರನ ಭಾವ ಚಿತ್ರವೂ ಇವರ ಕಣ್ಣಿಗೆ ಮುಳ್ಳಾಗಿತ್ತು. 

ಪ್ರಣಬ್ ಮುಖರ್ಜಿ ಅವರಿಗೆ ಕೂಡ ಕಾಂಗ್ರೆಸ್ ಕಡೆಗಣನೆಯ ಮರ್ಯಾದೆ ಕೊಟ್ಟಿತ್ತು. ಆದರೆ ಕೊನೆಗೆ ಅವರನ್ನು ರಾಷ್ಟ್ರಪತಿ ಸ್ಥಾನಕ್ಕೆ ಕೊಂಡೊಯ್ದು ತನ್ನ ಮರ್ಯಾದೆ ಉಳಿಸಿಕೊಂಡಿತ್ತು.

A.P.J ಅಬ್ದುಲ್ ಕಲಾಂ ಎನ್ನುವ ಮೇಧಾವಿ, ದೂರದೃಷ್ಟಿ ಹೊಂದಿದ ವಿಜ್ಞಾನಿಯೋರ್ವರನ್ನು ರಾಷ್ಟ್ರಪತಿ ಸ್ಥಾನಕ್ಕೆ ಕಾಂಗ್ರೆಸ್ ಅದೇಕೆ ಮರು ಆಯ್ಕೆ ಮಾಡಲಿಲ್ಲ? ಇದು ವೈಜ್ಞಾನಿಕ ಚಿಂತಕರ ಸಮೂಹಕ್ಕೆ ಎಸೆದ ದ್ರೋಹವಲ್ಲವೇ?

ಆದರೆ ಈಗ ಕಾಂಗ್ರೆಸ್ಸಿಗರಿಗೆ ಕೆಲವು ಮಾಜಿ ಬಿಜೆಪಿಗಳ ಮೇಲೆ ಭಾರೀ ಕಾಳಜಿ. ಅವಮಾನವಾಗಿದೆ ಅಂತಾರೆ.
ಅದನ್ನು ಈ ಮಾಜಿ ಬಿಜೆಪಿಗಳು ನಂಬುತ್ತಾರೆ. 

ಕಾಗೋಡು ತಿಮ್ಮಪ್ಪ ಎನ್ನುವ ಅನುಭವಿ ರಾಜಕಾರಣಿಯನ್ನು ಕಾಂಗ್ರೆಸ್ ಹೇಗೆ ನಡೆಸಿಕೊಂಡಿದೆ ಎನ್ನುವುದನ್ನು ನಾವೆಲ್ಲ ನೋಡಿದವರೇ ಸ್ವಾಮಿ. ಅಷ್ಟು ಹಿರಿಯ ನಾಯಕನನ್ನು ಬಿಟ್ಟು ವಲಸಿಗನೊಬ್ಬನನ್ನು ಮುಖ್ಯಮಂತ್ರಿ ಮಾಡಿದ್ದನ್ನು ಜನ ನೋಡಿಲ್ಲವೇ? 
ತಿಮ್ಮಪ್ಪ ಅವರು ಸ್ಪೀಕರ್ ಆದಾಗ ಖಡಕ್ ಮೇಷ್ಟ್ರಾಗಿದ್ದರು ಎನ್ನುವುದನ್ನೂ ನಾವು ನೋಡಿದ್ದೇವೆ.
ಅವರನ್ನು ಮಂತ್ರಿ ಮಾಡಿದ್ದು ಕೊನೆಗೆ ಯಾವಾಗಲೋ ಆಗಿತ್ತು. ಅದೇ ರೀತಿ 2013ರಲ್ಲಿ ಕಾಂಗ್ರೆಸ್ ಗೆದ್ದು ಬಂದ ಕೂಡಲೇ ರೋಷನ್ ಬೇಗ್ ಮತ್ತು ಡಿ.ಕೆ. ಶಿವಕುಮಾರ ಅವರನ್ನು ಮಂತ್ರಿ ಮಾಡಿರಲಿಲ್ಲ. ಕೊನೆಗೆ ಯಾವಾಗಲೋ ಮಾಡಿದ್ದು.

ಇದನ್ನೆಲ್ಲ ಒಬ್ಬ ರಾಜಕೀಯ ವ್ಯಕ್ತಿಯೊ ವಿಶ್ಲೇಷಕನೊ ಅಲ್ಲದ ನಾನೊ ನನ್ನಂಥವನೋ ಹೇಳುತ್ತಿದ್ದಾನೆ. ರಾಜ್ಯ ಬಿಜೆಪಿಗರು ಇದನ್ನೆಲ್ಲಾ ಹೇಳಬೇಕು. ಯಾಕೆ ಹೇಳುತ್ತಿಲ್ಲ ಗೊತ್ತಿಲ್ಲ.

✍️ಶಶಾಂಕ ತೆಂಕೋಡು

Thursday, March 30, 2023

ಒಂದು ವ್ಯಭಿಚಾರಿಣಿಯ ಆರೋಪ

ಒಂದೂರಲ್ಲಿ ಒಬ್ಬಳು ಸೂಳೆ ಇದ್ದಳು. ಆದರೆ ಲೋಕಕ್ಕೆ ಅಂಜಿ ಸೂಳೆಗಾರಿಕೆಯನ್ನು ಗುಟ್ಟಾಗಿ ಮಾಡುತ್ತಿದ್ದಳು. ಅವಳು ವಯಸ್ಸು ಮೀರುತ್ತಿದ್ದರೂ ಮದುವೆಯಾಗದ್ದನ್ನು ನೋಡಿ ಜನ ಅನುಮಾನಿಸ ತೊಡಗಿದರು. ಕೊನೆಗೆ ಯಾವುದೋ ಒಬ್ಬನನ್ನು ಮದುವೆಯಾದಳು. ಎರಡೋ ಮೂರೋ ಸಂತಾನವೂ ಆಯ್ತು.

ತಾನು ಮಹಾ ಗರತಿ ಅಂತ ತೋರಿಸೋದಕ್ಕೆ ಯಾವ್ಯಾವುದೋ ಧರ್ಮಶಾಸ್ತ್ರದ ಪುಸ್ತಕ ಓದಿ ಇತರ ಹೆಂಗಸರನ್ನು ನಿಂದಿಸುತ್ತಿದ್ದಳು. ಅವಳ ಗಂಡ ಇದಕ್ಕೆಲ್ಲ ತಕರಾರು ಮಾಡಲೇ ಇಲ್ಲ. 

ಅವಳ ಆಪ್ತ ಗಿರಾಕಿಗಳಲ್ಲಿ ಊರ ದೊಡ್ಡ ಮನುಷ್ಯರೂ ಕೆಲವರಿದ್ದರು. 

ಇಂತಿಪ್ಪ ಹೊತ್ತಿನಲ್ಲಿ ಊರಿಗೆ ವೈದ್ಯರೊಬ್ಬರು ಬಂದು ನೆಲೆಯಾದರು. ತಮ್ಮ ಕೈಗುಣದಿಂದ ವೈದ್ಯರು ಒಳ್ಳೆ ಹೆಸರೂ ಸಂಪಾದಿಸಿದರು ಊರ ಗಣ್ಯರಲ್ಲಿ ಒಬ್ಬರು ಎಂದೂ ಎನ್ನಿಸಿಕೊಂಡರು.

ಆದರೆ ಸಾತ್ವಿಕರಾಗಿದ್ದ ವೈದ್ಯರು ಒಂದು ದಿನವೂ ಸೂಳೆಯ ಮನೆ ಕಡೆ ಗುಟ್ಟಾಗಿ ಸುಳಿಯಲಿಲ್ಲ. ತನ್ನ ಚೆಲುವಿಗೆ ಇದು ಅವಮಾನ ಎಂದು ಭಾವಿಸಿದ ಆ ಸೂಳೆ ವೈದ್ಯರ ಹೆಂಡತಿಗೆ ವ್ಯಭಿಚಾರಿಣಿಯ ಪಟ್ಟ ಕಟ್ಟಿದಳು.

ವೈದ್ಯರ ಹೆಂಡತಿ ಜೊತೆ ಹಾದರ ಮಾಡಿದ್ದು ತನ್ನ ಗಂಡನೇ ಅಂದಳು. ಪಂಚಾಯ್ತಿಯನ್ನೂ ಸೇರಿಸಿದಳು. ಅವಳ ಗುಟ್ಟಿನ ಗಿರಾಕಿಗಳೇ ಪಂಚರು.

ವೈದ್ಯರು ಇದನ್ನೆಲ್ಲ ಕೇಳಿ ನಗತೊಡಗಿದರು. ಪಂಚರು ಸಿಟ್ಟಾಗಿ ನಕ್ಕಿದ್ದನ್ನು ಆಕ್ಷೇಪಿಸಿದರು.

ವೈದ್ಯರು ಹೇಳಿದ್ದು ಇಷ್ಟೇ. "ಸಮರ್ಥ ಯೌವ್ವನ ಭರಿತ ಪುರುಷ ನಾನಿರುವಾಗ ನನ್ನ ಹೆಂಡತಿ ಆ ನಪುಂಸಕನ ಜೊತೆ ಹಾದರ ಮಾಡಿದ್ದಾಳೆ ಎಂದರೆ ನಗದೆ ಇನ್ನೇನು ಮಾಡಲಿ".

ಈಗ ಎಲ್ಲರಿಗೂ ಪೀಕಲಾಟ. ವೈದ್ಯರು ನಪುಂಸಕ ಎಂದ ಮೇಲೆ ಅದು ಸತ್ಯವೇ. ಅದನ್ನು ಪ್ರಶ್ನಿಸಿದರೆ ಸೂಳೆಯ ಗಂಡನ ಗಂಡಸುತನ ಸಾಬೀತು ಮಾಡಬೇಕು. ಅದು ಸಾಧ್ಯವಿಲ್ಲ. ಹಾಗಂತ ಸುಮ್ಮನಿದ್ದರೆ ಸೂಳೆ ಹಡೆದ ಮಕ್ಕಳು ಯಾರು ಎನ್ನುವ ಪ್ರಶ್ನೆ. ಎಲ್ಲಾದರೂ ತಮ್ಮನ್ನು ತೋರಿಸಿದರೆ ಎನ್ನುವ ಅಳುಕು ಎಲ್ಲಾ ಪಂಚರಿಗೆ. ತನ್ನ ಗುಟ್ಟು ರಟ್ಟಾಗುವ ಆತಂಕ ಸೂಳೆಗೆ.

ಇಷ್ಟು ದಿವಸ ಏನೇನೋ ಪುಂಗಿ ಭಾರತದ ಆಡಳಿತ ವ್ಯವಸ್ಥೆ ಸರಿ ಇಲ್ಲ, ಸಂವಿಧಾನಕ್ಕೆ ಅಪಾಯ ಎಂದೆಲ್ಲ ಏನೇನೋ ಎಂದವರ ಪಾಡು ಕೂಡಾ ಹೀಗೆಯೇ ಆಗಿದೆ.

ಸಂವಿಧಾನಾತ್ಮಕವಾಗಿ, ಶಾಸನಕ್ಕೆ ತಕ್ಕಂತೆ ಸಾಕ್ಷ್ಯಾಧಾರ ಪರಿಶೀಲಿಸಿ ಕೊಟ್ಟ ತೀರ್ಪನ್ನು ಅನುಸರಿಸಿ ಅನರ್ಹತೆಯ ನೋಟೀಸ್ ಕೊಟ್ಟಿದ್ದಾರೆ. ಇಲ್ಲಿ ನೋಟೀಸ್ ಒಂದು ಶಿಷ್ಠಾಚಾರ ಅಷ್ಟೇ. 

ತೀರ್ಪು ಪ್ರಶ್ನಿಸಿದರೆ ನ್ಯಾಯಾಂಗ ನಿಂದನೆ. ಮಾಡಿದ್ದನ್ನು ಸಮರ್ಥಿಸಿದರೆ ಜಾತ್ಯತೀತರು ಜಾತಿ ನಿಂದನೆ ಸಮರ್ಥಿಸಿದ ಹಾಗೆ. ಏನು ಮಾಡೋದು? ಪಾಪ. ಹೀಗಾಗಬಾರದಿತ್ತು.

#Disqualification 
#disqualified

Tuesday, March 28, 2023

ಎಂತ ಹರ್ಕಂತ ಕಾಂತೆ

ಪರಶುರಾಮ ಭಟ್ಟರು- ಹೀಗೆ ಹೇಳಿದರೆ ನಮ್ಮೂರಲ್ಲಿ ಯಾರಿಗೂ ತಿಳಿಯುವುದಿಲ್ಲ. ಒಂದು ಕಾಲದಲ್ಲಿ ಅಂಗಡಿ ಭಟ್ಟರು ಎಂದರೆ ಎಲ್ಲಾರಿಗೂ ಪರಿಚಯ ಸಿಗುತ್ತಿತ್ತು. ಆದರೆ ಈಗ ಅವರಿಗೆ ಬ್ಲೇಡು ಭಟ್ಟರು ಅಂತಲೇ ಕರೆಯುವುದು. ಆಶ್ಚರ್ಯದ ಸಂಗತಿ ಎಂದರೆ ಭಟ್ಟರು ಈ ಹೆಸರನ್ನು ಹೆಮ್ಮೆಯಿಂದ ಸ್ವೀಕರಿಸಿರುವುದು. ಭಟ್ಟರ ಅತೀವ ಹಾಸ್ಯಪ್ರಜ್ಞೆಯೇ ಭಟ್ಟರಿಗೆ ಈ ಹೆಸರನ್ನು ಹೆಮ್ಮೆಯಿಂದ ಸ್ವೀಕರಿಸಲು ಸಾಧ್ಯ ಮಾಡಿರಬೇಕು ಎನ್ನುವುದು ನನ್ನ ಅನಿಸಿಕೆಯಾಗಿತ್ತು. ಆದರೆ ಆ ಹೆಸರು ಬೀಳುವ ಮುನ್ನಿನ ಘಟನೆ ಏನಿದ್ದಿರಬಹುದು ಎನ್ನುವ ಕುತೂಹಲ ನನ್ನ ತಲೆಯೊಳಗೆ ಹೊಕ್ಕು ಹುಳುವಾಗಿ ಹಾವಾಗಿ ಕಾಡತೊಡಗಿತ್ತು. ಭಟ್ಟರಿಗೀಗ ಬಹುಶಃ ತೊಂಭತ್ತರ ಹರೆಯ. ಅವರಲ್ಲಿಯೇ ಕೇಳೋಣ ಅಂತ ನಿಶ್ಚಯಿಸಿ ಒಮ್ಮೆ ಅವರ ಬಳಿಯೇ ಕೇಳಿದೆ. ವಿಶೇಷ ಎಂದರೆ ಈ ಕತೆ ನಮ್ಮ ಶುಕ್ರನ ಕಡೆಗೇ ಹೋಗಿದ್ದು.

ಬ್ಲೇಡು ಭಟ್ಟರೇ ಹೇಳಿದ ಕತೆ ಇದು.

ಘಟ್ಟದ ಕೆಳಗಿನ ಭಟ್ಟರ ಅಪ್ಪಯ್ಯ ಕರೂರು ಸೀಮೆಗೆ ಮನೆಯಳಿಯಾನಾಗಿ ಬಂದರಂತೆ. ಮಾವನ ಮನೆಯ ತೋಟ ಗದ್ದೆ ನೋಡಿಕೊಳ್ಳುತ್ತಾ ಇದ್ದ ಭಟ್ಟರ ಅಪ್ಪಯ್ಯನಿಗೆ ಭಟ್ಟರೊಂದೇ ಮನೆ ಸಂತಾನವಂತೆ. ಭಟ್ಟರ ಬೆನ್ನಿಗೆ ಬಿದ್ದದ್ದೆಲ್ಲಾ  ಎಂಟು ಬೇರೆಯವರ ಮನೆಗೆ ಹುಟ್ಟಿದ್ದಂತೆ. 

ಏನು ಅಂತ ನನಗೂ ಗೊತ್ತಾಗಲಿಲ್ಲ. ಬೊಚ್ಚು ಬಾಯಲ್ಲಿದ್ದ ಕವಳ ತುಪ್ಪಿ ಹೇಳಿದರು ಭಟ್ಟರು. "ಆನೊಬ್ಬನೇ ಗಂಡು. ಉಳಿದಿದ್ದೆಲ್ಲಾ ಹೆಣ್ಣು".

ಮುಂದುವರೆದು ಭಟ್ಟರು ಮತ್ತೆ ಕತೆ ಹೇಳತೊಡಗಿದರು. 
"ಶರಾವತಿ ನದಿಗೆ ಹಿರೇಭಾಸ್ಕರ ಡ್ಯಾಮ್ ಕಟ್ಟಿದಾಗ ಯಂಗಳದ್ದು ಎಲ್ಲಾ ಮುಳುಗಿ ಹೋತು. ಪರಿಹಾರಕ್ಕೆ ಅಂತ ಅಪ್ಪಯ್ಯ ಜಮೀನು ತಗಳದೆ ದುಡ್ಡು ತಗಂಡ. ಅವಂಗೆ 7 ಹೆಣ್ಣು ಮಕ್ಕಳನ್ನು ದಡ ಹತ್ತಿಸದೇ ದೊಡ್ಡ ತಲೆಬಿಸಿಯಾಗಿತ್ತು."

ಕಣ್ಣಂಚಿನಲ್ಲಿ ಜಿನುಗಿದ ನೀರನ್ನು ಒರೆಸಿಕೊಂಡು ಭಟ್ಟರು ಮತ್ತೆ ನಗುತ್ತಾ ಕತೆ ಮುಂದುವರೆಸಿದರು. "ಆಗ ಇಲ್ಲಿ ಯನ್ನ ಚಿಕ್ಕಯ್ಯ ಇದ್ದಿದ್ದ. ಅವ ಶ್ಯಾನುಭೋಗ.ಅದಕ್ಕೇ ಯಂಗ ಈ ಊರಿಗೆ ಬಂದ್ಯ. ದೇವರಂಥಾ ಜನ ಚಿಕ್ಕಯ್ಯ. ಅಪ್ಪಯ್ಯ ಅಮ್ಮನ ಕಷ್ಟ ನೋಡಿ ಯಂಗಕ್ಕೆ ಎರಡೆಕರೆ ಗದ್ದೆ ದರಖಾಸ್ತು ಮಂಜೂರು ಮಾಡಿಸಿ ಕೊಟ್ಟ. ಅವಂಗೆ ಗಂಡು ಮಕ್ಕಳಿರ್ಲೆ. ಅವನ ಒಂದೆಕರೆ ತೋಟ ಹೊಸತಾಗಿತ್ತು. ಜೀವನ ಮಾಡಕ್ಕಲ, ಅದಕ್ಕೇ ಆನು ಮಾಣಿ ಇದ್ದಿದ್ನಲ, ಯನ್ನ ಹತ್ರ ಇದೇ ಊರಾಗೆ ಒಂದು ದಿನಸಿ ಅಂಗಡಿ ಹಾಕಿಸಿ ಕೊಟ್ಟ."

"ಮುಳುಗಡೆ ಪರಿಹಾರ ಪೂರ್ತಿ ತಂಗಿದಿಕ್ಕಳ ಮದುವೆ ಮಾಡಕ್ಕೆ ಸಮಾ ಆತು. ಚಿಕ್ಕಯ್ಯನ ತೋಟದ ಉತ್ಪತ್ತಿ ಅವನ ಮೂರು ಹೆಣ್ಣು ಮಕ್ಕಳ ಮದುವೆಗೆ ಸಮ ಆತು. ಅಂಗಡಿ ದುಡ್ಡಲ್ಲಿ ಜೀವನ ಯಂಗಳದ್ದು."

"ಅಷ್ಟೊತ್ತಿಗೆ ಯಂಗೆ ಓ ಅಲ್ಲಿ ಕೂತಿದ್ದ ನೋಡು, ನಿಂಗಳ ಅಂಬಮ್ಮೊಮ್ಮ ಅವಳನ್ನ ತೋರ್ಶಿದ. ಆನು ಕಟ್ಕಬುಟಿ. ಬಿಡಕ್ಕೆ ಬತ್ತನಾ. ಅಂಥಾ ಚಂದಿದ್ದ ಅವಳು ಆಗ. ಈಗಲೂ ಚಂದವೇ, ಯನ್ನ ಕೈಯಾಗೆ ಹರಿತಲ್ಲೆ ಅಷ್ಟೇ."ಎನ್ನುತ್ತಾ ಮತ್ತೆ ಕವಳ ತುಪ್ಪಿ ಕತೆ ಮುಂದುವರೆಸಿದರು.

"ಹಳ್ಳಿ ಬದಿ ಅಂಗಡಿ ಅಂದರೆ ಕಡದ್ದೆ ವ್ಯವಹಾರ. ನಂಬಿಕೆ ಮೇಲೆ ಎಲ್ಲರೂ ಕೊಡ್ತ. ಆದರೆ ಈ ಶುಕ್ರ ಇದ್ದ ನೋಡು, ಅವ ನಿಂಗೊತ್ತಿದ್ದಲ ಎಂತೋ ಫೇಸ್ ಬುಕ್ಕಾ ಎಂತ ಸುಡುಗಾಡ, ಅದರಾಗೆ ಬರದ್ಯೆಡಲ ಅವನದು ವೇಶದ್ದು ಮತ್ತೆಂತದೋ ಕತೆ ಎಲ್ಲ, ಅವ ಯನ್ನ ಹತ್ರ ಅಂಗಡಿಲಿ ಒಂದು ಮೂರು ಸಾವಿರ ಕಡ ಮಾಡಿದ.ಆನೂ ಕೊಡ್ತ ಮಾಡ್ಕಂಡು ಸುಮ್ಮನಿದ್ದಿ. ಆದರೆ ಇವ ಕಿತಾಪತಿ ಮಾಡದ?"

"ಎಂತ ಮಾಡಿದ ಅಜಾ" ಅಂದೆ ನಾನು.

"ಹೇಳ್ತಾ ತಿರುಗಿದ್ನಡ. ಅಂಗಡಿ ಭಟ್ಟನ ಹತ್ರ ಆರು ಸಾವಿರ ಕಡ ಮಾಡೀದೆ. ಕೊಡೂದಿಲ್ಲ. ಕೇಂಡ್ರೆ ಇತ್ತಲ. ಬಾಂಬಿಯಿಂದ ಜನ ಬತ್ರ್. ಭಟ್ರ್ ಎಂತ ಸಾಂ* ಹರ್ಕಾಂತ್ರ್ ಕಾಂತೆ. ಹಿಂಗೆ ಊರೆಲ್ಲ ಹೇಳ್ತಾ ತಿರುಗಿದ್ನಡ. 

"ಆನೂ ನೋಡ ಅಷ್ಟು ನೋಡಿದಿ. ಇವಂದು ಕಮ್ಮಿ ಆಪ ಲಕ್ಷಣವೇ ಇಲ್ಲೇ. ಬತ್ತ ಎಲ್ಲಿ ಹೋಗ್ತಾ ಅಂತ ಕಾಯ್ತಾ ಇದ್ದಿ. ಅಷ್ಟೊತ್ತಿಗೆ ದೀಪಾವಳಿ ಬಂತು. ಇವನೂ ಬಂದ ಸಾಮಾನು ತಗ ಹೋಗಕ್ಕೆ"

"ಎಲ್ಲಾ ಸಾಮಾನೂ ಕಟ್ಟಿ ಕೊಟ್ಟಿ. ಆಮೇಲೆ ಬ್ಲೇಡ್ ಸುಮ್ನೆ ಕೈಯಾಗೆ ಹಿಡಕಂಡು ದುಡ್ಡು ಕೋಡಾ ಶುಕ್ರ. ಹಳೆದೂ ಎಲ್ಲ ಸೇರಿಸಿ. ಇಲ್ಲದೆ ಹೋದ್ರೆ, ಇಲ್ನೋಡು ಕೈಯಾಗೆ ಎಂತಿದೆ ನೋಡು" ಅಂದಿ.

"ಶುಕ್ರ ಜೋರಾಗಿಬುಡಕ್ಕ. "ಎಂತ *ಟು ಹರ್ಕಂತ್ರಿ ಕಾಂತೆ" ಅನ್ನ ತಂಕ ಮಾತಾಡಿದ. ಆನು ಅವನ್ನ ಅಂಗಡಿ ಒಳಗೆ ದೂಡಿ ಬಾಗಿಲು ಹಾಕಿದಿ. ಬ್ಲೇಡಾಗೆ ಅವನ ಚಡ್ಡಿ ಶಿಗದಿ. ಹೋಗು ತಮಾ ಅಂದಿ"

"ಶುಕ್ರ ಅವಾಗ ಪಕ್ಕಾದ. ಇಷ್ಟು ದಿನ ಹೇಳಿದ್ದು ಹೊರಗೆ ಹೇಳ ಹಾಂಗೆ ಇಲ್ಲೇ. ನಾನು ಬ್ಲೇಡ್ ಹಿಡಕಂಡು ಅವನ್ನ ಒಳಗೆ ಕೂಡಿದ್ದಿ. ಹೊರಗೆ ಕಳಿಸಕ್ಕಿದ್ದರೆ ಅವನ ಚಡ್ಡಿ ಶಿಗದ್ದಿ. ಹಳೆ ಮಾತೇ ಆಡಿರೆ ಯಾರೂ ನಂಬದಿಲ್ಲೆ. ಹೊಸ ಮಾತಾಡಕ್ಕೆ ಧೈರ್ಯ ಇಲ್ಲೆ."

"ಮಕದ ಮೇಲೆ ಟವಲ್ ಹಾಕ್ಯಂಡು ನಿಮ್ಮನೆ ಶಣ್ಣಜ್ಜನ ಹತ್ರ ಹೋಗಿ ದುಡ್ಡು ಇಸ್ಕ ಬಂದು ಕೊಟ್ಟ. ನಿಮ್ಮನೆ ಶಣ್ಣಜ್ಜ ಒಂದಿನ ಎಲ್ಲಾ ಕೂತಾಗ ಎಂತಾತು ಅಂತ ವಿಚಾರ ಕೇಳಿದ. ಆನು ಸತ್ಯ ಇದ್ದಿದ್ದಷ್ಟೂ ಟ ಠ ಡ ಢ ಣ ಹೇಳಿದಿ. ಆಗ ನಿಮ್ಮನೆ ಶಣ್ಣಜ್ಜ, ಓ ಒಳ್ಳೆ ಬ್ಲೇಡ್ ಎಳದ್ದೆ. ಇಲ್ಲದೇ ಇದ್ದರೆ ನಿನ್ನ ದುಡ್ಡು ಮರ್ಯಾದೆ ಎರಡೂ ಗೋವಿಂದ ಆಗ್ತಿತ್ತು ಅಂದ ಅವತ್ತಿಂದ ಆನು ಬ್ಲೇಡ್ ಭಟ್ಟರು ಹೇ ಹೇ ಹೇ." ಹೀಗೆಂದು ಕತೆ ಮುಗಿಸಿದರು ಅಜ್ಜಯ್ಯ.

ಕ್ಷಮೆ ಬಗ್ಗೆ ಕೇಳಿದಾಗ ವೀರಾಧಿವೀರನೊಬ್ಬನನ್ನು ಅಣಕಿಸಿ,ಕೊನೆಗೆ ಕಂಪ್ಲೇಂಟ್ ಎಂದಕೂಡಲೇ ಹೇಂಬೇಡಿಯಂತೆ ಗೋಡೆ ತೊಳೆದು ತಿಕ್ಕಿದವನೊಬ್ಬನ ಕತೆ ಕೇಳಿ ಈ ಘಟನೆ ನೆನಪಾಯಿತು.

#ಶುಕ್ರ

Friday, December 2, 2022

ವರದಾಮೂಲ ಮಹಾಭಾರತದಲ್ಲಿ

ಇನ್ನೂ ಹೆಮ್ಮೆಯ ಸಂಗತಿ ಎಂದರೆ ಗಾಯತ್ರೀ ಕ್ಷೇತ್ರವಾಗಿರುವ ವರದಾಮೂಲ, ಗಾಯತ್ರೀ ಕ್ಷೇತ್ರ ಎಂದೇ ಮಹಾಭಾರತದಲ್ಲಿ ಉಲ್ಲೇಖವಾಗಿರುವುದು.

ಪುಲಸ್ತ್ಯ ಮಹರ್ಷಿಯು ಭೀಷ್ಮನಿಗೆ ತೀರ್ಥಯಾತ್ರೆಯ ಕುರಿತಾಗಿ ಹೇಳಿದ್ದನ್ನು ನಾರದ ಮಹರ್ಷಿಗಳು ಧರ್ಮರಾಯನಿಗೆ ಹೇಳುತ್ತಾರೆ.

ಹೀಗೆ ಹೇಳುವಾಗ ಪಾಂಡ್ಯ ದೇಶದ ಬಗೆಗೆ ತಿಳಿಸುತ್ತಾರೆ.(ಇಂದಿನ ತಮಿಳುನಾಡು). ಪಾಂಡ್ಯ ದೇಶದ ಋಷಭ ಪರ್ವತದ ಬಗೆಗೆ ತಿಳಿಸಿ, ನಂತರ ಕನ್ಯಾತೀರ್ಥ( ಕನ್ಯಾಕುಮಾರಿ) ಕುರಿತಾಗಿ ತಿಳಿಸಿ ನಂತರ ಗೋಕರ್ಣ ಕ್ಷೇತ್ರದ ಬಗೆಗೆ ತಿಳಿಸುತ್ತಾರೆ. ಗೋಕರ್ಣ ಕ್ಷೇತ್ರದ ನಂತರ ವೇಣಾ ನದಿಯ ಬಗೆಗೆ ತಿಳಿಸಿ ನಂತರ ಗೋದಾವರೀ ಕ್ಷೇತ್ರದ ಬಗೆಗೆ ತಿಳಿಸುತ್ತಾರೆ.
ಗೋದಾವರೀ ಕ್ಷೇತ್ರ ಇಂದಿನ ಆಂಧ್ರದಲ್ಲಿದೆ. ವೇಣಾ ನದಿ ಕ್ಷೇತ್ರ ಇಂದಿನ ಮಹಾಬಳೇಶ್ವರ.( ಸಜ್ಜನಗಡದ ಸಮೀಪ.)
ಭೌಗೋಳಿಕವಾಗಿ ನೋಡಿದಾಗ ಇಲ್ಲಿ ಒಂದು ರೀತಿಯ ವೃತ್ತ ಪ್ರಕಾರದಲ್ಲಿ ಕ್ಷೇತ್ರಗಳ ವರ್ಣನೆ ಇದೆ. ಗೋಕರ್ಣ ಮತ್ತು ಮಹಾಬಳೇಶ್ವರ ನಡುವೆ ಇರುವ ಗಾಯತ್ರೀ ಕ್ಷೇತ್ರ ಎಂದರೆ ಅದು ವರದಾಮೂಲವೆ ಸರಿ. ಇದಕ್ಕೆ ಇಂಬಾಗಿ ವರದಾನದಿಯ ವರ್ಣನೆ ಮತ್ತು ವರದಾ ಮತ್ತು ವೇಣಾ (ಕೃಷ್ಣವೇಣಾ) ಸಂಗಮದ ಬಗೆಗೆ ಮಾಹಿತಿ ಇದೆ. ಮಹಾಬಲೇಶ್ವರದಲ್ಲಿಯೇ ಗಾಯತ್ರೀ ನದಿ ಜನಿಸಿದರೂ, ಇಲ್ಲಿ ಹೆಸರಿಸಿರುವುದು ವರದಾನದಿ. ಹಾಗಾಗಿ ಇಂದಿನ ವರದಾಮೂಲವೇ ಗಾಯತ್ರೀ ಕ್ಷೇತ್ರ. (ಗಾಯತ್ರಿ ನದಿ ಮಹಾಬಲೇಶ್ವರ ಆರಭ್ಯದಿಂದಲೂ ಗುಪ್ತಗಾಮಿನಿ ಹಾಗಾಗಿ ಸಂಗಮ ಕ್ಷೇತ್ರದ ಪ್ರಶ್ನೆ ಅಪ್ರಸ್ತುತ). ಇದು ನನ್ನ ಹೆಡ್ಡ ತಲೆಗೆ ಬಂದ ವಿಶ್ಲೇಷಣೆ. ತಳಿದವರು ಚೆನ್ನಾಗಿ ವಿವರಿಸಿ. ತಪ್ಪಿದ್ದರೆ ತಿದ್ದಿಕೊಳ್ಳಲು ಸಹಾಯ ಮಾಡಿ.

Sunday, October 16, 2022

ವರಾಹಾವತಾರ:ಒಂದು ಬೌದ್ಧ ಅಧ್ಯಯನ

 ಬ್ರಾಗಳೆಲ್ಲ ಸೇರಿ ಯಜ್ಞ ಯಾಗ ಮಾಡಿ ಹೊಲಸು ಮಾಡುತ್ತಿದ್ದರು. ಆಗ  ಹೊಲಸು ತೆಗೆಯುವುದಕ್ಕೆ ಮತ್ತು ಬ್ರಾಗಳು ಯಜ್ಞ ಮಾಡುವುದಕ್ಕೆ ಬೇಕಾದ ಮೂಲಿಕೆಗಳನ್ನು ತರಲು ಕಾಡಿಗೆ ಹೋಗದಂತೆ ಮಾಡಲು ಬುದ್ಧನ ಶಿಷ್ಯರಾದ ಕೆಲವು ವಿಜ್ಞಾನಿಗಳು ಜೀನ್ ಮಾಡಿಫಿಕೇಷನ್ ಮುಖಾಂತರ ವರಾಹವನ್ನು ಸೃಷ್ಟಿಸಿದರು. 
ಮೊದಲು ಸೃಷ್ಟಿಸಿದ ವರಾಹ ಕೊರೆ ದಾಡೆಗಳಿಲ್ಲದೆ ಕೇವಲ ಹೊಲಸನ್ನು ತಿನ್ನುತ್ತಿತ್ತು. ಇನ್ನೊಂದು ವರಾಹ ಕೊರೆ ದಾಡೆಗಳನ್ನು ಹೊಂದಿ ಕಾಡನ್ನು ಕಾಯುತ್ತಾ ಗೆಡ್ಡೆ ತಿಂದು ಯಜ್ಞಕ್ಕೆ ತೊಂದರೆ ಮಾಡುತ್ತಿತ್ತು. 
ಕನಕಾಕ್ಷನೆಂಬ ಒಬ್ಬ ಮೂಲನಿವಾಸಿ ಬೌದ್ಧನಿಗೆ ವೈದಿಕರು ಮೋಸದಿಂದ ಸೋಮರಸ ಎನ್ನುವ ಹೆಂಡವನ್ನು ಕುಡಿಸಿ ಮತ್ತನನ್ನಾಗಿ ಮಾಡಿದರು. 
ಆತ ಅಮಲಿನಲ್ಲಿ ಕಾಡಿನಲ್ಲಿ ತಿರುಗುತ್ತಿದ್ದಾಗ ವರಾಹವೊಂದು ಕಿತ್ತಿದ್ದ ಸುವರ್ಣ ಗೆಡ್ಡೆಯನ್ನು ಹಿಡಿದುಕೊಂಡು ಓಡತೊಡಗಿದ. ಸಿಟ್ಟಿಗೆದ್ದ ವರಾಹ ಅವನನ್ನು ದಾಡೆಯಿಂದ ಸಿಗಿದು ಕೊಂಡಿತು.
ಇದೇ ವೈದಿಕರು ಹೇಳುವ ಪುರಾಣದ ಹಿರಣ್ಯಾಕ್ಷನ ಕತೆ. ಆ ಸುವರ್ಣಗಡ್ಡೆಯೇ ವೈದಿಕರ ಭೂದೇವಿ.
ಕಾಲಾಂತರದಲ್ಲಿ ವರಾಹದ ಭಯದಿಂದ ಅದಕ್ಕೆ ವೈದಿಕರೇ ಆಹಾರವನ್ನು ಕೊಡತೊಡಗಿದರು. ಇದರ ಬಗ್ಗೆ ಅವರಲ್ಲಿಯೇ ಭಿನ್ನಾಭಿಪ್ರಾಯ ಬಂದು ವರಾಹವನ್ನು ಅವತಾರ ದೇವರು ಎಂದೆಲ್ಲ ಅಂದರು. 
ಹೀಗೆ ಬೌದ್ಧರ ವೈಜ್ಞಾನಿಕ ಸೃಷ್ಟಿಯನ್ನು ಹೈಜಾಕ್ ಮಾಡಿ ಮೂಲ ನಿವಾಸಿ ಜನರನ್ನು ಶೋಷಿಸಲು ಪುರಾಣವನ್ನು ಸೃಷ್ಟಿಸಿ ಅವತಾರವನ್ನು ಆರೋಪಿಸಲಾಯಿತು. ಮೂಲ ನಿವಾಸಿ ಬೌದ್ಧ ದೊರೆ ಕನಕಾಕ್ಷನೇ ಮುಂದೆ ಹಿರಣ್ಯಾಕ್ಷನೆಂಬ ದೈತ್ಯನೆಂದೂ ಆತ ದುಷ್ಟನೆಂದೂ ಅಪ ಪ್ರಚಾರ ಮಾಡಿದರು ಆರ್ಯ ವೈದಿಕ ಬ್ರಾಗಳು.
...
.
.
....
.
.
.
.
.
.
.
.
.
.
.

..
.
.
.
.
.
.
.

ಮೇಲೆ ಹೇಳಿದ್ದೆಲ್ಲ ಶುದ್ಧ ಸುಳ್ಳು.
ನವಬೌದ್ಧರು ಈ ರೀತಿ ಹೇಳುತ್ತಾರೆ ಅಂತ ತೋರಿಸಿದ್ದು ಅಷ್ಟೇ.😀🙏

Friday, June 17, 2022

ಬ್ರಾಹ್ಮಣ ದ್ವೇಷಿಗಳಿಗೆ....

 “ಬ್ರಾಹ್ಮಣರು ಮೌಢ್ಯ ಬಿತ್ತಿದರು”

“ಬ್ರಾಹ್ಮಣರು ಶೋಷಣೆ ಮಾಡಿದರು”

“ಬ್ರಾಹ್ಮಣರು ದಬ್ಬಾಳಿಕೆ ಮಾಡಿದರು”

“ಬ್ರಾಹ್ಮಣರು ದುಡ್ಡು ಮಾಡಿದರು”

“ಬ್ರಾಹ್ಮಣರು ಪೂಜೆ ಮಾಡಿ ಜ್ಯೋತಿಷ್ಯ ಹೇಳಿ ದುಡ್ಡು ಸಂಪಾದಿಸ್ತಾರೆ”

“ಬ್ರಾಹ್ಮಣರು ಉಳಿದವರನ್ನು ಏಳೊಕೆ ಬಿಟ್ಟಿಲ್ಲ.”

ಹೀಗೆಲ್ಲ ಬ್ರಾಹ್ಮಣರ ಬಗ್ಗೆ ಅಪವಾದಗಳಿವೆ. ಇದನ್ನೆಲ್ಲ ನಾವು ಸಹಿಸಿಕೊಂಡು ಬಂದಿದ್ದೇವೆ. ಮುಂದೆಯೂ ಸಹಿಸಿಕೊಂಡು ನಾವು ನಮ್ಮ ಏಳಿಗೆ ಕಡೆ ಗಮನ ಕೊಟ್ಟು ಅದನ್ನು ಸಾಧಿಸುತ್ತೇವೆ. ಆದರೂ ಬ್ರಾಹ್ಮಣರನ್ನು ಅಸಹಿಷ್ಣುಗಳು ಎನ್ನುತ್ತಾರೆ. ಬಹುಶಃ ಬ್ರಾಹ್ಮಣರಷ್ಟು ಊರು ಬಿಟ್ಟು ಬೇರೆ ಊರು ಸೇರಿರುವವರು ಇನ್ಯಾರೂ ಇಲ್ಲ.

ಒಂದು ಸಣ್ಣ ಉದಾಹರಣೆ. ನಮ್ಮ ಹವ್ಯಕರದ್ದೇ ತೆಗೆದುಕೊಳ್ಳೋಣ. ಕೆಲವರು ನಾವು ಅಹಿಚ್ಛತ್ರದಿಂದ ಬಂದಿದ್ದು ಎನ್ನುತ್ತಾರೆ ಇನ್ನೂ ಕೆಲವರು ನಾವು ಅಸ್ಸಾಮಿನಿಂದ ಬಂದವರು ಎನ್ನುತ್ತಾರೆ. ಆದರೆ, ಇನ್ನೂ ಕೆಲವರು ಹೇಳುವುದು ನಾವು ಕರ್ನಾಟಕದಿಂದ ವಲಸೆ ಹೋಗಿ ಮತ್ತೆ ಇಂದಿನ ಉತ್ತರ ಕನ್ನಡಕ್ಕೆ ತಿರುಗಿ ಬಂದವರು ಎಂದು. ನನಗನ್ನಿಸುವುದು ಈ ವಾದವೇ ಸತ್ಯ ಎಂದು. ಕಾರಣ ಸ್ಕಾಂದ ಪುರಾಣ ಗುರುತಿಸಿರುವ ದ್ರಾವಿಡ ಬ್ರಾಹ್ಮಣರಲ್ಲಿ ನಮ್ಮ ಪಂಗಡವೂ ಒಂದು. ಇದು ಒತ್ತಟ್ಟಿಗಿರಲಿ. ಈಗ ವಲಸೆ ವಿಚಾರದ ಕಡೆ ಬರೋಣ. 

ಕರ್ನಾಟಕದಿಂದ ಉತ್ತರ ಭಾರತದ ಕಡೆ. ಅಲ್ಲಿಂದ ಮತ್ತೆ ಕರ್ನಾಟಕಕ್ಕೆ. ಕರ್ನಾಟಕದಲ್ಲಿಯೂ ಉತ್ತರ ಕನ್ನಡ ಭಾಗದಿಂದ ದಕ್ಷಿಣ ಕನ್ನಡದ ಭಾಗಕ್ಕೆ ಮತ್ತೆ ಅಲ್ಲಿಂದ ಸಾಗರ ಶಿವಮೊಗ್ಗದ ಕಡೆ. ಇತ್ತಿತ್ತಲಾಗಿ ಕೃಷಿಯಲ್ಲಿನ ಸಮಸ್ಯೆಗಳಿಂದ ಮತ್ತು ಸಿಗುತ್ತಿರುವ ವಿಪುಲ ಅವಕಾಶಗಳ ದೆಸೆಯಿಂದ ಬೆಂಗಳೂರು, ಮುಂಬಾಯಿ ಮತ್ತು ಹೊರದೇಶಗಳಿಗೆ.... ಹೀಗಿದೆ ನಮ್ಮ ವಲಸೆಯ ಸರಣಿ.

ಈಗ ಆರಂಭದಲ್ಲಿ ಬರೆದ ವಾಕ್ಯಗಳತ್ತ ಸಾಗೋಣ. ನಾವೇ ಸ್ವಯಂ ನೆಲೆ-ಜೀವನ ಅರಸಿ ವಲಸೆ ಮಾಡುತ್ತಿರುವಾಗ ಅನ್ಯರನ್ನು ಶೋಶಿಸುವ ಸಾಧ್ಯತೆಯಾದರೂ ಎಂಟು ಎಷ್ಟು? ಇದಕ್ಕೆ ನಮ್ಮ ಸಾಮಾನ್ಯ ಅವಗಾಹನೆ ಸಾಕು. 

ಬ್ರಾಹ್ಮಣರು ಪೂಜೆ ಹೆಸರಲ್ಲಿ ಮೋಸ ಮಾಡುತ್ತಾರೆ ಅಂತ ಹೇಳ್ತೀರಲ್ಲಾ, ನೀವು        ನಿಮ್ಮದೇ ದೇವಸ್ಥಾನ ಕಟ್ಟಿಸಿ ಪೂಜೆ ಮಾಡಿ ಸ್ವಾಮಿ ಬೇಡ ಅನ್ನೋರು ಯಾರು?  ಇನ್ನೂ ಜ್ಯೋತಿಷ್ಯ, ಅದು ಮೋಸ ಅಂತಾದರೆ ಅವರ ಹತ್ತಿರ ಹೋಗುವ ಜನರನ್ನು ಜಾಗೃತರನ್ನಾಗಿಸಿ. ಕಡ್ಡಿ ಜ್ಯೋತಿಷ್ಯ, ಬುಡಬುಡಿಕೆ ಜ್ಯೋತಿಷ್ಯ, ಕಣಿ ಹೇಳುವವರು ಬ್ರಾಹ್ಮಣರಲ್ಲ. ಆದರೂ ನೀವು ಜ್ಯೋತಿಷ್ಯದ ಹೆಸರಲ್ಲಿ ಬ್ರಾಹ್ಮಣರು ಮೋಸ ಮಾಡುತ್ತಿದ್ದಾರೆ ಅಂತ ಬೊಬ್ಬೆ ಹೊಡೆಯೋದು ಯಾಕೆ? ಉಳಿದವರೆಲ್ಲ ಟ್ಯೂಬ್ ಲೈಟ್ ಬರ್ನಾಗಿರೋಲೈಟ್ ಅಂತೆಲ್ಲಾ ಹೇಳುವ ಮಹಾನುಭಾವ ಪ್ರಗತಿಪರರಿಗೆ ಇಷ್ಟೂ ವಾಸ್ತವದ ಅವಗಾಹನೆ ಇಲ್ಲವಾಯಿತೇ?

ಇನ್ನು ಬ್ರಾಹ್ಮಣರುನಿಮ್ಮ ಅವಕಾಶಗಳನ್ನು ಕಿತ್ತುಕೊಂಡರು ಅಂತ ಬೊಬ್ಬೆ ಹೊಡೀತೀರಿ. ಹಾಗಾದರೆ, ಪುಲ್ವಾಮಾದಲ್ಲಿ ನಡೆದ ದುರಂತದಲ್ಲಿ ಮಡಿದ ಸೈನಿಕರಲ್ಲಿ ಜಾತಿ ನೋಡಿದ್ದು ? ಇನ್ನೂ ಇರಬಹುದು. ಐ ಎ ಎಸ್ ಇತ್ಯಾದಿ ಪರೀಕ್ಷೆಗಳಲ್ಲಿ ಬ್ರಾಹ್ಮಣರು ಪಾಸ್ ಆಗ್ತಿದ್ದಾರೆ ಇದು ನಿಮ್ಮ ಆಕ್ಷೆಪದ ವಿಷಯವಾದರೆ, ನನ್ನದೊಂದು ಪ್ರಶ್ನೆ, ಬ್ರಾಹ್ಮಣರು ಪರೀಕ್ಷೆಯಲ್ಲಿ ಪಾಸ್ ಆಗಿದ್ದು ತಪ್ಪು ಯಾಕೆ? ಇನ್ನೂ ಅಕ್ರಮ ಇದೆ ಅನ್ನೋದಾದರೆ, ಉಳಿದವರು ಎಷ್ಟೋ ಬ್ರಾಹ್ಮಣರಲ್ಲದವರೂ ಪಾಸ್ ಆಗ್ತಿದ್ದಾರೆ. ಅವರ ಶ್ರಮಕ್ಕೂ ಬೆಲೆ ಇಲ್ಲವೇ? ಆ ಪರೀಕ್ಷೆಗಳಲ್ಲಿ ಕಳೆದ ಎಪ್ಪತ್ತೈದು ವರ್ಷಗಳಿಂದಲೂ ಅಕ್ರಮ ನಡೆಯುತ್ತಿದೆಯಾ? ಬ್ರಾಹ್ಮಣ ವಿರೋಧಿ ಪಕ್ಷಗಳು, ಬ್ರಾಹ್ಮಣ ವಿರೋಧಿ ಸಮಾನತೆಯ ಹರಿಕಾರ ಸಾಮಾಜಿಕ ಕಾರ್ಯಕರ್ತರು, ಪತ್ರಿಕೆಗಳು ಇದ್ದರೂ ಈ ಅಕ್ರಮ ಯಾಕೆ ನಿಲ್ಲುತ್ತಿಲ್ಲ. ಅಕ್ರಮ ತಡೆಯುವುದರ ಕಡೆ ಗಮನ ಹರಿಸುವುದು ಬಿಟ್ಟು ಬ್ರಾಹ್ಮಣ ನಿಂದನೆಯಲ್ಲೇಕೆ ಕಾಲ ಕಳೆಯುತ್ತಿದ್ದೀರಿ? ಸಾಲದ್ದಕ್ಕೆ ಸರಕಾರ ರಚಿಸುವ ಬೀಳಿಸುವಷ್ಟು ಶಕ್ತಿ ಇದೆ ಎನ್ನುವ ಅನೇಕ ಪತ್ರಕರ್ತರು, ಸಾಹಿತಿಗಳು ನಿಮ್ಮಲ್ಲಿದ್ದಾರೆ ಅವರು ದುರ್ಬಲರೇ?

     ಸ್ವಾಮಿ,  ಬ್ರಾಹ್ಮಣರ ಜನಸಂಖ್ಯೆಯೇ ಕಡಿಮೆ. "ಎಷ್ಟು ಪರ್ಸೆಂಟ್ ಐದೀರಾ ನೀವು" ಎಂದು ನಮ್ಮೂರಿನ ನಾಯಕರೊಬ್ಬರು ಕೇಳಿದ್ದರಲ್ಲ. ಅವರಲ್ಲೂ ಹೆಚ್ಚಿನವರು ಅನೇಕ ಖಾಸಗಿ ಕಂಪನಿಗಳಲ್ಲಿ ಕೆಲಸ ಮಾಡುವವರು. ಇನ್ನೂ ಕೆಲವರು ವಕೀಲಿಕೆ, ಡಾಕ್ಟರಿಕೆ, ಚಾರ್ಟರ್ಡ್ ಅಕೌಂಟಂಟ್ ಇತ್ಯಾದಿ ವೃತ್ತಿಪರರು. ಇನ್ನೂ ಕೆಲವರು ಸ್ವಯಂ ಉದ್ಯೋಗ ಮಾಡುವವರು. ಇವರು ನಿಮ್ಮ ಅವಕಾಶ ಹೇಗೆ ಕಿತ್ತುಕೊಂಡರು? ಜ್ಯೋತಿಷ್ಯ ಪೂಜೆ ಮೊದಲಾದ ಮೌಢ್ಯಗಳ ಮಧ್ಯೆ ಇರುವ ಬ್ರಾಹ್ಮಣರಿಗೆ ಇದೆಲ್ಲಾ ಬುದ್ಧಿವಂತಿಕೆ ಹೇಗೆ ಸಾಧ್ಯ?

ಈಗೀಗ ಖಾಸಗಿ ಕಂಪನಿಗಳಿಂದ ವಿಪುಲ ಅವಕಾಶಗಳಿವೆಯಲ್ಲ. ನೀವು ಸರಕಾರಿ ಕೆಲಸವೇ ಬೇಕು ಅಂತ ಬ್ರಾಹ್ಮಣರ ವಂಚನೆಗೆ ಒಳಗಾಗುವ ಬದಲು ಅಲ್ಲಿ ಪ್ರಯತ್ನಿಸಬಹುದಲ್ಲ. ನಿಮಗೆ ಏನು ತೊಂದರೆ?

ಈಗ್ಗೆ ಸುಮಾರು ಇಪ್ಪತ್ತೆರಡು ವರ್ಷಗಳ ಹಿಂದೆ ಸಾಗರದ ಅಂದಿನ ಸುಪ್ರಸಿದ್ಧ ಪತ್ರಿಕೆ ಮಣ್ಣಿನ ವಾಸನೆಯಲ್ಲಿ ಒಂದು ಲೇಖನ ಬಂದಿತ್ತು ಬರೆದವರು ಕ್ರಾಂತಿಕಾರಿ ಚಿಂತನೆಗಳುಳ್ಳ ಸಮಾಜಮುಖಿ ಸಂವೇದನೆಯ ಜಾತ್ಯತೀತ ಪ್ರಗತಿ ಪರರು. ಅವರು ಬರೆದ ಲೇಖನದ ಸಾರಾಂಶ ಹೀಗಿತ್ತು. ತಾವು ಪ್ರತಿನಿಧಿಸುವ ಜಾತಿಯವರ ಉದ್ಯೋಗ ಹೆಂಡ ಕಾಯಿಸುವುದಲ್ಲ; ಆ ಜಾತಿಯವರು ಸೈನಿಕರ ಉದ್ಯೋಗ ಮಾಡುವವರು ಅಂತ. ಇದನ್ನು ಇಲ್ಲಿ ಪ್ರಸ್ತಾಪಿಸಿದ್ದು ಯಾಕೆಂದರೆ, ಹೆಂಡ ಕಾಯಿಸುವುದು ಸ್ಮಾಜಕ್ಕೆ ಹೆಚ್ಚು ಘಾತುಕವೊ ಜ್ಯೋತಿಷ್ಯ ಪೂಜೆದಿ ಕೈಂಕರ್ಯಗಳೋ? ಜಾತ್ಯತೀತ ಪ್ರಗತಿಪರರೇ ಹೆಂಡ ಕಾಯಿಸುವುದು ಒಂದು ಜಾತಿಯ ಕಾಯಕ ಎಂದು ಜಾತೀಯತೆ ಮಾಡಿದ ಮೇಲೂ ಬರೆ ಬ್ರಾಹ್ಮಣರನ್ನು ನಿಂದಿಸುವುದು ಯಾಕೆ? 

ಬ್ರಾಹ್ಮಣರು ದಕ್ಷಿಣೆಗಾಗಿಯೇ ಪೂಜೆ ಮಾಡುತ್ತಾರೆ ಎಂದು ವಾದಿಸುವ ನಿಮ್ಮ ನಿಲುವನ್ನು ತುಸು ಹೊತ್ತು ಸರಿ ಎಂದು ಪರಿಗಣಿಸೋಣ. ಬ್ರಾಹ್ಮಣರು ದಕ್ಷಿಣೆಯ ಆಸೆಗೆ ಪೂಜೆ ಮಾಡಿದರೂ ನಿಮಗೆ ಒಳಿತಾಗಲಿ, ಇನ್ನೂ ಒಂದಿಷ್ಟು ಪೂಜೆ ಹೆಚ್ಚು ಮಾಡಿಸಲಿ ಎಂದೇ ಆಶಿಸುತ್ತಾರೆ. ನಿಮ್ಮ ಒಳಿತನ್ನು ಬಯಸುತ್ತಾರೆ. ಆದರೆ ಹೆಂಡ ಕಾಯಿಸುವವರು? ಜಾತಿ ಯಾವುದಾದರೂ ಇರಲಿ ಒಳ್ಳೆಯದಂತೂ ಅಲ್ಲ. ಕೆಲವು ಊರಿಗಳು ಕಳ್ಳಭಟ್ಟಿಗೆ ಎಷ್ಟು ಹೆಸರುವಾಸಿ ಎಂದರೆ ಯಾವನಾದರೂ ತಲೆ ಬುಡ ಇಲ್ಲದ ಮಾತಾಡಿದರೆ ಕೇಳುವುದಿದೆ, ಆ ಊರಿಗೆ ಹೋಗಿದ್ದೆಯಾ ಅಂತ.

ಬ್ರಾಹ್ಮಣರನ್ನು ನಿಂದಿಸಿದ ಅರ್ಧದಷ್ಟಾದರೂ ಹೆಂಡ ಕಾಯಿಸುವವರಿಗೆ ಬುದ್ಧಿ ಹೇಳಿ. ಸಮಾಜ ಸುಧಾರಿಸುತ್ತದೆ.