ಪಟಗುಪ್ಪೆ- ಈ ಹೆಸರು ಈಗೀಗ ಬಹಲೆ ಫ಼ೆಮಸ್ ಆಗಿದೆ. ಇನ್ನೊನ್ದು ಸ್ವಲ್ಪ ದಿನದಲ್ಲಿ ಜನರಿಗೆ ಮರೆತೂ ಹೊಗುತ್ತದೆ. ಆದರೆ ಇದು ಐತಿಹಾಸಿಕವಾಗಿ ಬಹಳ ಮಹತ್ವದ ಸ್ಥಳ. ನಮ್ಮ ಪ್ರಾಂತ್ಯವನ್ನಾಳಿದ ಇಕ್ಕೇರಿಯ ಅರಸರು ತಮ್ಮ ರಾಜಧಾನಿಯನ್ನು ಬಿದನೂರಿಗೆ ಅಂದರೆ ಇಂದಿನ ನಗರಕ್ಕೆ ಸ್ಥಳಾಂತರಿಸಿದ ನಂತರ ಇಲ್ಲಿ ಶರಾವತಿಗೆ ಸೆತುವೆ ಕಟ್ಟಿದ್ದರು. ಕಾಲಾಂತರದಲ್ಲಿ ಕಟ್ಟಿದ ಹಿರೆಭಾಸ್ಕರ ಮತ್ತು ಲಿಂಗನಮಕ್ಕಿ ಅಣೆಕ್ಟ್ಟುಗಳಿಂದ ಈ ಸೇತುವೆ ಮುಳುಗಿ ಹೋಗಿತ್ತು. ಪರಿಣಾಮ, ಸಾಗರ ಪ್ರಾಂತ್ಯದಿಂದ ಹೊಸನಗರಕ್ಕೆ ಪರ್ಯಾಯ ರಸ್ತೆ, ಜನ ಪಟಗುಪ್ಪೆಯ ಕಡೆಯಿಂದ ಓಡಾಡುವುದನ್ನು ಬಿಟ್ಟೆಬಿಟ್ಟರು. ಇತ್ತೀಚೆಗೆ ಇದಕ್ಕೊಂದು ಸೇತುವೆ ನಿರ್ಮಾಣವಾಯಿತು. ಆದರೆ ಈಗ ಸಿಗಂಧೂರು ಸೇತುವೆ ಎನ್ನುವ ಅದ್ಭುತದ ಮುಂದೆ ಈ ಸೇತುವೆ ತನ್ನ ಪ್ರಾಮುಖ್ಯತೆ ಕಳೆದುಕೊಂಡಿದೆ. ಇದು ಸಹಜವೂ ಹೌದು ಸಾಧುವೂ ಹೌದು.
ಊರಿಗೆ ಬಂದ ಮೇಲೆ ಬದಿಗಿಟ್ಟಿದ್ದ ಕ್ಯಾಮರಾ ಹೊತ್ತು ಮೊನ್ನೆ ಈ ಸೇತುವೆ ಕಡೆ ಸಾಗಿದೆ. ಹಕ್ಕಿಗಳೆನೋ ಕಂಡವು. ಕೆಲವು ಫೊಟೋ ಕೂಡಾ ತೆಗೆದೆ. ಇವು ರಿವರ್ ಟರ್ನ್ ಎನ್ನುವ ಹಕ್ಕಿಗಳು. ಇವುಗಳ ಬಗ್ಗೆ ಇನ್ನೂ ಕುತೂಹಲಕ್ಕೆ ಇಂಟರ್ನೆಟ್ಟಿನಲ್ಲಿ ಹುಡುಕಾಡಿದೆ. ಆಗ ಈ ಜಾತಿಯ ಹಕ್ಕಿಗಳ ಬಗ್ಗೆ ಕೆಲವು ವಿಶೇಷ ಸಂಗತಿಗಳು ತಿಳಿದುಬಂದವು. ಈ ಹಕ್ಕಿಗಳ ಏಕೈಕ ಆಹಾರ ಮೀನು. ಶುದ್ಧ ನೀರಿನಲ್ಲೆ ಇವುಗಳ ವಾಸವಂತೆ. ನಮ್ಮೂರಿನಲ್ಲಿ ಹರಿಯುವ ನೀರು ಶುದ್ಧ ಅಂತಾಯ್ತು ಬಿಡಿ!!. ಬರ್ಮಾ ಕಡೆಯಿಂದ ಇವುಗಳು ವಲಸೆ ಬರುತ್ತವಂತೆ. ಭದ್ರಾ ನದೀ ಮಧ್ಯದ ನಡುಗಡ್ಡೆಗಳಲ್ಲಿ ಇವುಗಳ ಸಂತಾನಾಭಿವೃದ್ಧಿ ಚಟುವಟಿಕೆ ಬಗ್ಗೆ ಈ ವರ್ಷ ಓದಿದ್ದೆ. ಹಿಂದೊಮ್ಮೆ ಇವುಗಳನ್ನು ಶರಾವತಿ ಭಾಗದಲ್ಲಿ ನಾನು ನೋಡಿದ್ದೆ ಕೂಡಾ. ಆದರೆ ಯಾಕೊ ನಮ್ಮವರು ಅಷ್ಟಾಗಿ ತಲೆಕೆಡಿಸಿಕೊಂಡಿಲ್ಲ ಅನಿಸುತ್ತದೆ.
ರಿವರ್ ಟರ್ನ್ ಇದೊಂದು ಹಕ್ಕಿಯ ಹೆಸರು. ಟರ್ನ್ ಹೆಸರಿನ ಒಂದು ನದಿ ಕೂಡಾ ಇದೆಯಂತೆ ಯುನೈಟೆಡ್ ಕಿಂಗ್ ಡಮ್ ದೇಶದಲ್ಲಿ. ಆದರೆ ನದಿಯೊಂದು ತಾನು ತಿರುಗುತ್ತಾ ತಿರುವುಗಳನ್ನು ಪಡೆಯುತ್ತಾ ಮಡುವಾಗಿ, ಜಲಪಾತವಾಗಿ ಸಾಗುವುದು ಅದರ ಧರ್ಮ. ಆದರೆ ನಮ್ಮ ಶರಾವತಿಯದ್ದು ಹಾಗಲ್ಲ. ತಾನೇ ಯೋಜನೆಗಳ ಸುಳಿಗೆ ಸಿಕ್ಕಿ ತನ್ನ ಮಕ್ಕಳು ಮಾಡಿದ ತ್ಯಾಗದಿಂದ ಸಂತಸ ಪಡುತ್ತಾ, ತನ್ನ ಸುತ್ತಮುತ್ತಲಿನ ಸಾಮಾಜಿಕ-ಸಾಂಸ್ಕೃತಿಕ ತಿರುವುಗಳಿಗೆ ತಾನೂ ಸಾಕ್ಷಿಯಾಗುತ್ತಾ ನಮ್ಮೆಲ್ಲರ ಮನೆ ಬೆಳಗಿದ ತ್ಯಾಗಮಯಿ ಆಕೆ, ಆಕೆಯ ಒಡಲಿನಲ್ಲಿ ತನ್ನ ಮರಿಗಳು ಹುಟ್ಟಲಿ ಎನ್ನುವ ಬಯಕೆ ಈ ರಿವರ್ ಟರ್ನ್ ಜಾತಿಯ ಹಕ್ಕಿಗಳಿಗೆ ಬಂದಿದ್ದಾದರೂ ಏಕಿರಬಹುದು? ದೀಪದ ಬತ್ತಿಯಂತೆ ತಾನುರಿದು ಎಲ್ಲರಿಗೂ ಬೆಳಕು ಕೊಡುವ ಶ್ರೀರಾಮಚಂದ್ರನ ಬಾಣದಿಂದ ಜನಿಸಿದ ಶರಾವತಿ ನಿಜಕ್ಕೂ ಮಾತಾಮಯಿ ಅಂತಲೊ ಅಥವಾ ಅವಳ ಮಕ್ಕಳಾದ ಚೆನ್ನ ಭೈರಾದೇವಿ ಮತ್ತು ದೊಡ್ದ ಸಂಕಣ್ಣ ನಾಯಕರಂತೆ ಧೀರೋದಾತ್ತರಾಗಿರಲಿ ಅಂತಲೋ ಅಥವಾ ಹೊಸ ತಿರುವುಗಳನ್ನು ಹೊಸ ಸವಾಲುಗಳನ್ನು ಎದುರಿಸುತ್ತಾ ಅವುಗಳೊಂದಿಗೇ ಬದುಕುತ್ತಾ ಸಾಗಿ ಬದುಕನ್ನು ಸುಂದರ ಮಾಡಿಕೊಳ್ಳುತ್ತಿರುವ ಆಕೆಯ ಮಕ್ಕಳೇ ಆದರ್ಶವಾದರಾ? ಶರಾವತಿಯೇ ಹೇಳಬೇಕು.
ಈ ಹಕ್ಕಿಗಳು ನೀರ ಬೇಟೆಯಲ್ಲಿ ನಿಷ್ಣಾತ ಹಕ್ಕಿಗಳು. ಸದಾ ಚಟುವಟಿಕೆಯಲ್ಲಿಯೇ ಇರುತ್ತವೆ. ಫೋಟೊ ತೆಗೆದು ಅದನ್ನು ಆರಿಸುವ ಹೊತ್ತಿಗೆ ಹೈರಾಣಾಗುವ ಚುರುಕು ಇವುಗಳದ್ದು. ನಿಜಕ್ಕೂ ಅದ್ಭುತ. ಸಾಗರೀಕರು ಮತ್ತು ಶರಾವತಿ ಭಾಗದ ಜನರು ಹೆಮ್ಮೆ ಪಡಲು ಈಗಾಗಲೆ ಬಹಳಷ್ಟಿವೆ, ಅವುಗಳಿಗೆ ಗರಿಗಳಂತೆ ಈ ಹಕ್ಕಿಗಳು ಎಂದರೆ ಖಂಡಿತಕ್ಕೂ ಅತಿಶಯೋಕ್ತಿಯಲ್ಲ.
ಹಳದಿ ಬಣ್ಣದ ಕೊಕ್ಕು, ತಲೆಯ ಮೇಲೊಂದು ಕಪ್ಪು ಪಟ್ಟಿ, (ಬಹುಷಃ ನೀರಿಗೆ ಪ್ಲಾಸ್ಟಿಕ್ ಬಾಟಲಿ, ಬೀರ್ ಬಾಟಲಿ ಎಂಬಿತ್ಯಾದಿ ವಸ್ತುಗಳನ್ನು ಎಸೆಯುವವರ ವಿರುದ್ಧ ಧರಿಸಿದ ಕಪ್ಪು ಪಟ್ಟಿ ಇರಬಹುದು). ಇವು ವಲಸಿಗ ಹಕ್ಕಿಗಳು ಅನ್ನುವ ಇಂಟರ್ನೆಟ್, ಇವು ಸಮುದ್ರ ಲಂಘಿಸಲು ಹಿಂಜರಿಯುತ್ತವೆ ಎನ್ನುತ್ತದೆ. ಕೇರಳ ಮತ್ತು ತಮಿಳ್ನಾಡಿನಲ್ಲಿ ಬಹಳ ಇದ್ದರೂ ಶ್ರೀಲಂಕಾದಲ್ಲಿ ಕಾಣಸಿಗುವುದಿಲ್ಲವಂತೆ ಈ ಹಕ್ಕಿ. ಚೀನಾ, ಮಯನ್ಮಾರ್ ಮತ್ತು ಕಾಂಬೋಡಿಯಾ ದೇಶಗಳಲ್ಲಿ ಇವು ಅಪಾಯಕ್ಕೆ ಸಿಲುಕಿವೆಯಂತೆ.
ನದೀ ತಟದ ಮರಳಿನ ದಂಡೆ ಅಥವಾ ಬಂಡೆಗಳಲ್ಲಿ ಗೂಡು ಕಟ್ಟಿ ಮಾರ್ಚ್ ಮತ್ತು ಮೇ ನಡುವೆ ಮೊಟ್ಟೆಯಿಟ್ಟು ಸಂತಾನಾಭಿವೃದ್ಧಿ ಮಾಡುತ್ತವೆಯಂತೆ. ಪಟಗುಪ್ಪೆ-ಹೊಳೆಬಾಗಿಲು-ಹಸಿರುಮಕ್ಕಿಗಳಲ್ಲಿ ಇವುಗಳನ್ನು ನೊಡಬಹುದು. ನೋಡಲಿಕ್ಕೆ ಹೋದವರು ದಯವಿಟ್ಟು ಅಲ್ಲಿ ಬೀರ್ ಬಾಟಲಿ ನೀರಿನ ಬಾಟಲಿ ಪ್ಲಾಸ್ಟಿಕ್ ಲೋಟ, ಚಿಪ್ಸ್ ಪ್ಯಾಕೆಟ್ ಎಸೆದು ನಮ್ಮೂರನ್ನು ಹಾಳು ಮಾಡಬೇಡಿ ಎಂದು ನಿಮ್ಮಲ್ಲಿ ಕಳಕಳಿಯ ವಿನಂತಿ.




























