ಸುಮಾರು ಐದಾರು ವರ್ಷಗಳ ಹಿಂದಿನ ಘಟನೆ. ನಮ್ಮ ಇಂಗ್ಲಿಷ್ ಪ್ರೇಮಿ ಹಾಲ ನಾಯ್ಕ ಒಮ್ಮೆ ನಮ್ಮ ಮನೆಗೆ ಬಂದಿದ್ದ. ನಾನು ಹಿಂದಿನ ದಿನವಷ್ಟೇ ಸಾಗರದಲ್ಲಿ ನಡೆದ ಜ್ವಾಲಾ ಪ್ರತಾಪ ಯಕ್ಷಗಾನ ನೋಡಿ ಬಂದ ಗುಂಗಿನಲ್ಲಿದ್ದೆ.
ಬಂದವನೇ, "ಆಯ್ಪ್ಪಿ" ಅಂದ ಎಂದಿನ ಪ್ರೀತಿಭರಿತ ಧ್ವನಿಯಲ್ಲಿ. ಹಾಲ ನನ್ನ ಹೃದಯಕ್ಕೆ ಹತ್ತಿರದವ. ಹಾಗಾಗಿ ಅವನ ಧ್ವನಿಯಲ್ಲಿದ್ದ ಸಂತೋಷವನ್ನು ಸಹಜವಾಗಿಯೇ ಗುರುತಿಸಿದ್ದೆ.
ಹಾಲ ಮತ್ತೆ ಶುರು ಮಾಡಿದ. "ಆಯ್ಪ್ಪಿ ನಾನೀಗ ಗಾಡ್ ಫಾರ್ದರ್ ಆಗೀನಿ" ಅಂದ. ತಾನು ಅಜ್ಜನಾಗಿದ್ದನ್ನು ಹಾಲ ತನ್ನ ಇಂಗ್ಲಿಷಿನಲ್ಲಿ ಹೇಳಿದ್ದ.
ನನಗೋ ಒಳಗಿಂದೊಳಗೆ ಉಕ್ಕುತ್ತಾ ಇತ್ತು. ಹಾಲ ಏನಾದರೂ ಆಗಲಿ. ಹೊಸತೊಂದು ಇಂಗ್ಲಿಷ್ ಶಬ್ದ ಕೊಟ್ಟ ಎನ್ನುವ ಆನಂದ.
"ಎಂತ ಶಿಶು? ಬಾಣಂತಿ ಆರಾಮಿದಾಳಾ" ಅಂದೆ.
ಆತ ಮತ್ತಷ್ಟು ಹಿಗ್ಗಿ " ಅಪ್ಪಿ ಅವಳಿ ಜವಳಿ ಮಕ್ಕಳು. ಎರಡೂ ಹೆಣ್ಣು. ಹುಯ್ದಿಗಿ ಇನ್ನೂ ರೆಕಾರ್ಡ್ ಆಗ್ಲ, ಹೊಟ್ಟೆ ಕೊಯ್ದಾರೆ" ಅಂದ.
ಅಷ್ಟೊತ್ತಿಗೆ ಅಮ್ಮ "ಹೂಂ. ಮನ್ನೇ ಕನ್ನ ಬಂದಿದ್ದ, ಸಿಸೇರಿಯನ್ನು ಅಂದಿದ್ದ. ಅಂಜೂರ ಲೇಹ್ಯ ಬೇಕು ಅಂದಿದ್ದ, ತಗ ಹಾಲ" ಎಂದು ಒಂದು ಬಾಟಲಿ ಅಂಜೂರದ ಲೇಹ್ಯ ಕೊಟ್ಟಳು.
ಹಾಲ, "ಅಮ ನೀವು ಇದೊಂದು ಮಾಡಿದ್ದು ಒಳ್ಳೆದಾತು. ಔಷಧಿ ತಗಣದು ಉಳತ್ತು" ಎನ್ನುತ್ತಾ ಲೇಹ್ಯಕ್ಕೆ ದುಡ್ಡು ಕೊಟ್ಟ. "ಮೆಡಿಕ್ಷನ್ನು ಹಾಂಗೆ ತಗಬಾರ್ದು ಅಪಿ" ಅಂದ ನನ್ನ ಕಡೆ ತಿರುಗಿ.
ನನಗರ್ಥವಾಗಿತ್ತು ಮೆಡಿಕ್ಷನ್ನು ಮೆಡಿಸಿನ್ನಿನ ಹಾಲೆಂಗ್ಲಿಷಿನ ತದ್ಭವ ಅಂತ.
ಬೆನ್ನಿಗೇ ಹಾಲ ತನ್ನ ಮೊಮ್ಮಕ್ಕಳಿಗೆ ಇಡಲು ಬೇಕಾದ ಹೆಸರು ಕೇಳಿದ.
ಜ್ವಾಲಾ ಪ್ರತಾಪದ ಗುಂಗಿನಲ್ಲಿದ್ದ ನಾನು ಜ್ವಾಲಾ ಜ್ಯೋತಿ ಎಂದು ಹೇಳಿದೆ. ಹಾಲ ಬಹಳ ಖುಷಿ ಪಟ್ಟ.
"ಅಪೀ ಹೆಸರು ಬರ್ಕೊಡಿ. ಈಗ ಮನೆಗೆ ಹೋಗ ಹೊತ್ತಿಗೆ ಮರತೊಕೈತೆ" ಎಂದ. ಬರೆದು ಕೊಟ್ಟೆ.
ನಾನೂ ಬೆಂಗಳೂರು ಕಡೆ ಬಂದೆ. ಇದಾದಮೇಲೆ ಲಾಕ್ ಡೌನ್ ಅದು ಇದು ಅಂತೆಲ್ಲ ಹಾಲನ ಭೇಟಿ ಕಡಿಮೆಯಾಯ್ತು. ಕಂಡರೂ ನನ್ನ ಗಡಿಬಿಡಿಯೋ ಹಾಲನ ಅರ್ಜೆಂಟೋ ಒಟ್ಟಿನಲ್ಲಿ ಆಗುವಂತಾಗಲಿಲ್ಲ. ಮಾತಾಡಿದ್ದು ಕಡಿಮೆಯೇ.
ಮುಂದೊಂದು ದಿನ ಮನೆಯಂಗಳದಲ್ಲಿ ಮಗಳ ಜೊತೆ ಮಾತಾಡುತ್ತಾ ಕುಳಿತಿದ್ದೆ. ಹಾಲನ ಸವಾರಿ ಬಿಜಯಂಗೈದಿತು.
ಹಾಲ ಅದೆಲ್ಲಿಂದ ನಾನು ಬಂದ ಸುದ್ದಿ ಹಿಡಿದನೋ ದೇವರೇ ಬಲ್ಲ. ಕಬ್ಬಿನ ಹಾಲು, ಹೊಸ ಬೆಲ್ಲದ ಒಂದು ಸಾಧಾರಣ ಡಬ್ಬಿ, ಇನ್ನೊಂದು ನೊರೆ ಬೆಲ್ಲದ ಸಣ್ಣ ಡಬ್ಬಿ ತಿನ್ನಲು ಅನುಕೂಲವಾಗುವಂತೆ ಕತ್ತರಿಸಿದ ಕಬ್ಬಿನ ಕಟ್ಟಿನೊಂದಿಗೆ ಬಂದಿದ್ದ.
ಬಂದವನೇ ನನ್ನ ಮಗಳನ್ನೊಮ್ಮೆ ಎತ್ತಿದ್ದ. ಇವಳು ಕೊಸರಿದರೆ ನೊರೆ ಬೆಲ್ಲದ ಡಬ್ಬಿ ಕೊಟ್ಟು ಅವಳನ್ನು ಒಲಿಸಿಕೊಂಡಿದ್ದ. ಬೆಲ್ಲ ನೆಕ್ಕುತ್ತಾ ನನ್ನ ಮಗಳು ಒಳಗೆ ಹೋಗಿ ಸೊಕ್ಕು ಮಾಡುತ್ತಾ ಕುಳಿತಳು.
"ಅಯ್ಪಿ, ಇವತ್ತೇ ಶಣ್ಣಮ್ಮಿ ನೋಡಿದ್ದು ನಾನು. ಅದಕ್ಕೆ ಕೊಡಬೋಕು ಅಂತಲೇ ಹೊತ್ಲೆ ಎದ್ದು ನೊರೆ ಬೆಲ್ಲ ತಂದೆ" ಎಂದ. ಹಾಲ ನಾವು ಸಣ್ಣಕಿದ್ದಾಗಲೂ ಹೀಗೆಯೇ ಇದ್ದ ಬಿಡಿ.
"ಆಯ್ಪ್ಪಿ ಮಗಳ ಹೆಸರೆಂತ ಇಟ್ಟಿರೀ?''
"ಶ್ರೀರಕ್ಷಾ. ವರದಾ ಅಂತಲೂ ಇಟ್ಟಿದೆವಾ" ಅಂದೆ.
"ನಿನ್ನ ಮೊಮ್ಮಕ್ಕಳು ಎಂತ ಮಾಡ್ತಾವಾ? ಶಾಲಿಗೆ ಹೋಗ್ತಾ ಇದ್ದಾರಾ?" ಎಂದೆ.
ಹಾಲನ ಕಣ್ಣಿನಲ್ಲಿ ಒಮ್ಮೆ ನೀರು ಜಿನುಗಿತು. ಅಯ್ಯೋ ಕೇಳಬಾರದ್ದು ಏನು ಕೇಳಿಬಿಟ್ಟೆನಪ್ಪಾ ಎಂದು ನಾನೂ ಒಳಗಿಂದೊಳಗೆ ಕಳವಳಕ್ಕೆ ಬಿದ್ದೆ.
"ಆಯ್ಪ್ಪಿ!! ಆ ಎರಡೂ ಹುಡರಿಗೆ ನೀವೇ ಇಟ್ಟ ಹೆಸರು ಇಟ್ಟಿದ್ದುವು. ಆದರೆ ನಮ್ಮ ಅಳಿಯ ಅದು ಕನ್ನಡ ಭಾಷೆ ಹೆಸರಲ್ಲ ಅಂತ ಜ್ವಾಲುಡುಗಿಗೆ ಉರಿ ಅಂತಿಟ್ಟ ಜ್ಯೋತುಡುಗಿಗೆ ಸೊಡರು ಅಂತಿಟ್ಟ. (ಹಾಲನ ಅಳಿಯ ಜ್ವಾಲೆಗೆ ಉರಿ ಅಂತಲೂ, ಜ್ಯೋತಿಗೆ ಸೊಡರು ಅಂತಲೂ ಹೆದರಿಟ್ಟಿದ್ದ) ಆ ಹೆಸರಾಗೆ ಶಾಲಿಗೂ ಸೇರಿಸಿದ. ಆದರೆ ಆ ಹೆಸರಿಟ್ಗಂಡು ಅವು ಶಾಲೆಗೆ ಹೋಗಲ್ಲ ಎಲ್ಲಾ ನಿಗ್ಯಾಡ್ತಾರೆ ಅಂದುವು. ಅದಕ್ಕೇ ಈಗ ದಿನಾ ಹೆಸರು ಬದಲಾಯಿಸಿ ರಿಕಾಲ್ಡ್ರು ಸರಿ ಮಾದಾಕೆ ಅವರನ್ನ ಕರ್ಕಂಡು ಕೋರ್ಟು ಕಚೇರಿ ಅಲ್ದಾಟ. ಇದೆಲ್ಲಾ ಮಾಡ ವಯಸ್ಸಾ ಹುಡುಗೀರದ್ದು? ಈಗ ಮತ್ತೆ ನೀವಿಟ್ಟ ಹೆಸರೇ ಇಡದಂತೆ. ಒಂದು ಸತಿ ಮಳ್ಳು ಹೆಸರು ಕರೆದ ಮೇಲೆ ಊರಾಗಿದ್ದವ್ವು ಬಿಡ್ತಾರಾ? ನನ್ನ ಮೊಮ್ಮಕ್ಕಳ ಕತೆ ಕಷ್ಟ ಮಾಡಾಕಿದ ನನ್ನಳಿಯ. ಅಷ್ಟೆಲ್ಲಾ ಓದಿ ಒಂದು ಕಾಲೇಜಾಗೆ ಕನ್ನಡ ಪಾಠ ಮಾಡವಾಗಿ ಹಿಂಗಾ ಮಾಡದು? " ಎನ್ನುತ್ತಾ ದುಃಖಿಸಿದ.
ಆ ಹೊತ್ತಿಗೆ ಅಮ್ಮ ಚಹಾ ತಂದಳು. ಅಪ್ಪಾಜಿ ಹಾಲನಿಗೊಂದು ತಂಬಾಕಿನ ಕವಳ ಕೊಟ್ಟರು. ಅವರು ಎಂದಿನ ಧಾಟಿಯಲ್ಲಿ "ಎಲ್ಲಾ ಸಮಾಗ್ತದೆ ಬಿಡ" ಅಂದರು. ಹಾಲ, "ಅಷ್ಟಾದರೆ ಸಾಕು" ಎಂದು ತುಸು ಸಮಾಧಾನ ಪಟ್ಟ.
ಹಾಲ ನಿರಕ್ಷರ ಕುಕ್ಷಿ. ಆತ ತನ್ನ ಅಹಂಕಾರ, ಗರ್ವ ತೃಪ್ತಿಪಡಿಸಲು ಇಂಗ್ಲಿಷ್ ಹೇಳುವ ಭರದಲ್ಲಿ ತಪ್ಪಾಗುವುದು ಸಹಜ. ಆದರೆ ತಿಳಿದೂ ತಿಳಿದೂ ತಪ್ಪೇ ಮಾಡುವ ಬುದ್ಧಿವಂತರು ಅನ್ನಿಸಿಕೊಂಡವರು ನಿಜಕ್ಕೂ ಬುದ್ಧಿವಂತರಾ? ಅಥವಾ ಶತ ದಡ್ಡರಾ?
#ಹಾಲ
✍️ಶಶಾಂಕ ತೆಂಕೋಡು